ಸಮಯ ಸಾಧಕರು.!ಕವನ – ಎ.ಎನ್.ರಮೇಶ್. ಗುಬ್ಬಿ

“ಇದು ಪ್ರಸ್ತುತ ಜಗದ ಪರಿಸ್ಥಿತಿಯ ಕವಿತೆ. ಪ್ರಸಕ್ತ ಬಹುಪಾಲು ಜನರ ಮನಸ್ಥಿತಿಯ ಭಾವಗೀತೆ. ಯಾರನ್ನೂ, ಏನನ್ನೂ ಪ್ರತಿಭಟಿಸದೆ, ಕಣ್ಣೆದುರಿನ ಅನ್ಯಾಯ-ಅಕ್ರಮ ಎಲ್ಲಕೂ ರಾಜಿಯಾಗುತ ತಾವು ಸುಖವಾಗಿ, ಎಲ್ಲರಿಂದ ಸಮ್ಮಾನಿತರಾಗಿದ್ದರೆ ಸಾಕು ಎನ್ನುವ ಜೀವನ. ಸಮಯ ಸಾಧಕತೆಯೇ ಬದುಕಿನ ಸಾಧನ. ಸುತ್ತಲೂ ಇಂತಹವರೇ ಹೆಚ್ಚು, ಇವರೇ ಸಕಲರಿಗೂ ಅಚ್ಚುಮೆಚ್ಚು. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಅವನೆಷ್ಟು ಮಹಾ ಧಗಾಕೋರನಾದರೇನು?
ಕಂಡಕಂಡವರ ವಂಚಿಸುತ ಮೆರೆದಿದ್ದರೇನು?
ಅವನ ಮೋಸಗಳ ಪಟ್ಟಿ ನನಗೇಕೆ ಬೇಕು?
ನನಗವನಿಂದ ನಿತ್ಯ ಆದಾಯವಾದರೆ ಸಾಕು.!

ಇವನೆಷ್ಟು ಕಡುದುಷ್ಟ ಪಾಪಿಯಾದರೇನು.?
ಸಿಕ್ಕ ಸಿಕ್ಕವರ ಸಿಗಿಯುತ ಬಗೆದಿದ್ದರೇನು.?
ಇವನ ಪಾಪಗಳ ಪ್ರವರ ನನಗೇಕೆ ಬೇಕು.?
ನನಗಿವನಿಂದ ಸದಾ ಲಾಭವಾದರೆ ಸಾಕು.!

ಮಾಡಿವರ ಪಾಪ ವೃಥಾ ಆಡುವವರಿಗಂತೆ
ನಮಗೇಕೆ ಬೇಕು ಅವರಿವರ ಕರ್ಮದ ಚಿಂತೆ?
ಕಣ್ಣೆದುರು ಕಂಡರು ಸುಮ್ಮನಿರುವುದೇ ಲೇಸು
ನುಡಿದು ಕಟ್ಟಿಕೊಳ್ಳಬಾರದು ಯಾರ ಮುನಿಸು!

ನೋಡಿಯೂ ನೋಡದಂತಿರಬೇಕು ದಿನವು
ಕೇಳಿಯೂ ಕೇಳದಂತಿರಬೇಕು ಪ್ರತಿಕ್ಷಣವು
ಹೊಡೆದವನಿಗೂ ಭೇಷ್ ಎಂದೆನ್ನುತಿರಬೇಕು
ಹೊಡೆಸಿಕೊಂಡವನಿಗೂ ಅಯ್ಯೋ ಅನ್ನಬೇಕು!

ಅಲ್ಲೂ ತಲೆಯಾಡಿಸಿ ಇಲ್ಲೂ ಗೋಣಾಡಿಸಿ
ಎಲ್ಲ ಕಡೆಯೂ ಸಂಭಾಳಿಸುತಿರಬೇಕು ಬಂಧ.!
ಅವರನ್ನೂ ಓಲೈಸಿ, ಇವರನ್ನೂ ಮೇಲೇರಿಸಿ
ಸಕಲರೊಂದಿಗೆ ಉಳಿಸಿಕೊಳ್ಳಬೇಕು ಸಂಬಂಧ.!

ನಾನು ಮತ್ತು ನನ್ನಂತವರು ಇರುವುದೇ ಹೀಗೆ
ಯಾರನ್ನೆಂದೂ ಎದುರು ಹಾಕಿಕೊಳ್ಳದ ಹಾಗೆ
ಯಾರಿಂದೇನು ಬೇಕಾಗಬಹುದೋ ನಾಳೆಗಳಿಗೆ?
ಯಾರು ಉಪಯೋಗವೋ ಆ ವೇಳೆ ಘಳಿಗೆಗೆ.?

ಎಂದಿಗು ದೂರ ಮಾಡಿಕೊಳ್ಳಬಾರದು ಜನಾನ
ಸಹಿಸಿ ಸುಖವಾಗಿಸಿಕೊಳ್ಳಬೇಕು ನಮ್ಮ ಜೀವನ
ಕಾರ್ಯವಾಸಿ ಕತ್ತೆಕಾಲು ನಮ್ಮೀ ಜಾಯಮಾನ
ನಮ್ಮಂತಹವರಿಗೇ ಇಂದು ಒಳ್ಳೆಯ ಜಮಾನ.!


  • ಎ.ಎನ್.ರಮೇಶ್.ಗುಬ್ಬಿ – ಲೇಖಕರು, ಕವಿಗಳು, ಕೈಗಾ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading