ಕಾವ್ಯದ ಬೆರಗನ್ನು ತೋರಿಸುವ ‘ಸಂತೆಯೊಳಗಿನ ಏಕಾಂತ’

ಕವನ ಸಂಕಲನ, ಕಲಾವಿದೆ, ಸಂಘಟಕಿ ಹಾಗೂ ಕವಯತ್ರಿ ಪೂರ್ಣಿಮಾ ಸುರೇಶ್ ಅವರ ‘ಸಂತೆಯೊಳಗಿನ ಏಕಾಂತ’ ಕೃತಿಯ ಕುರಿತು ದತ್ತಾತ್ರೇಯ ಹೆಗಡೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ : ‘ಸಂತೆಯೊಳಗಿನ ಏಕಾಂತ’
ಲೇಖಕಿ : ಪೂರ್ಣಿಮಾ ಸುರೇಶ್

ಈ ಕೃತಿಯಲ್ಲಿನ ಕವಿತೆಗಳಲ್ಲಿ ಅರ್ಥಕ್ಕಿಂತ ಅನುಭೂತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಪುರುಷ ಸಮಾಜದ ವಿರುದ್ಧ ಪ್ರಬಲವಾಗಿ ದ್ವನಿ ಎತ್ತಿರುವುದು ಕಂಡುಬರುತ್ತದೆ. ಹೆಣ್ಣಿಗೆ ಪುರುಷ ಬೇಕು ನಿಜ, ಆದರೆ ಅವನು ಪತಿಯಾಗಿ ಅಧಿಕಾರ ಕೇಂದ್ರದಲ್ಲಿರುವುದಕ್ಕಿಂತ ಸಖನಾಗಿ ಸಮಾನ ನೆಲೆಯಲ್ಲಿ ಪ್ರೀತಿಸಬೇಕೆಂಬ ಹಂಬಲವಿದ್ದಂತಿದೆ. ವ್ಯವಸ್ಥೆಯ ನೋವನ್ನು ಕೆಲವು ಕವನಗಳಲ್ಲಿ ಚಿತ್ರಿಸಿದ್ದಾರೆ. ಸಂಭಾಷಣೆಯಂತಹ, ಅಂತರ್‌ಸಂವಾದದಂತಹ ಸಾಕಷ್ಟು ಕವನಗಳು ಇಲ್ಲಿ ಪ್ರವಹಿಸಿವೆ.

ಕವಿತೆಗಳ ರಚನಾ ವಿನ್ಯಾಸದಲ್ಲಿ ದೃಶ್ಯವತ್ತಾದ ಚಿತ್ರ ಹಾಗೂ ಅರ್ಥವತ್ತಾದ ಲಯ ಕಂಡುಬರುತ್ತದೆ. ಕನ್ನಡ ಪರಂಪರೆಯ ಕಾವ್ಯ ಸತ್ವ ಗುಣವೂ ಇಲ್ಲಿದೆ ಕವಿತೆಗಳಲ್ಲಿ ಹೊರನೋಟಕ್ಕೆ ಅರ್ಥವಾಗುವಂತಹವು ಕೆಲವಿದ್ದರೆ, ಇನ್ನೂ ಕೆಲವು ಮೂರನೆಯ ಕಣ್ಣಿನಿಂದ ಕಂಡು ಅರ್ಥ ಮಾಡಿಕೊಳ್ಳುವ ಕಿಂಡಿಗಳಿವೆ. ಜೊತೆಗೆ ಬೆರಗಿದೆ, ರೊಮ್ಯಾಂಟಿಕತೆಯಿದೆ, ಮಾಗಿದ ಹಣ್ಣಿನ ಸಿಹಿಪದರವಿದೆ, ತಿರುಳೂ ಇದೆ. ಕವಿತೆ ಓದಿದಾಗ ಇದು ಅರ್ಥವಾಗುತ್ತದೆ. ಪ್ರಸ್ತುತ ಕವನ ಸಂಕಲನದಲ್ಲಿ ೩೮ ಕವನಗಳಿವೆ. ಇವುಗಳಲ್ಲಿ ಕೆಲವು ಕಾವ್ಯ ಜಗತ್ತಿನ ಪ್ರಧಾನವಾದ ಬೆರಗನ್ನು ತೋರಿಸಿದರೆ ಮತ್ತೆ ಕೆಲವು ಹುಡುಕಾಟವನ್ನು ಇನ್ನೂ ಕೆಲವು ಕವಿತಾ ರಚನೆಯ ಪ್ರಕ್ರಿಯೆಯ ವಿಶಾಲವನ್ನು ಕಟ್ಟಿಕೊಡುವ ಕವನಗಳಾಗಿವೆ.

‘ ಅಟ್ಟದ ಕಿಂಡಿ’ ಕವನದಲ್ಲಿ ಬದುಕನ್ನು ಅರ್ಥ ಮಾಡಿಕೊಳ್ಳಲು ಅಟ್ಟದ ಕಿಂಡಿ ಬೇಕು. ಅಟ್ಟದ ಕಿಂಡಿಯೆಂದರೆ ಒಳಗಣ್ಣಿನ ನೋಟ ಎನ್ನುವ ಅರ್ಥದಲ್ಲಿ ಈ ಕವನವನ್ನು ರಚಿಸಿದ್ದಾರೆ. ಅಟ್ಟದ ಕತ್ತಲಿಗೆ ಒತ್ತಿಕೊಂಡ/ ಕಿಟಕಿಗೆ/ ಮಾತ್ರವೇ/ ಕಣ್ಬೆಳಕು ಹೊಳಪಿಸುವ/ ಕಸಿಯುವ/ ಮರಳಿಸುವ/ ಜಾದು ತಿಳಿದಿದೆ/ ನಿಮ್ಮಲ್ಲೂ ಅಟ್ಟವಿದ್ದರೆ/ ಅಲ್ಲಿಯೂ ಕಿಂಡಿಯಿರುತ್ತದೆ/ ಇಣುಕಿ ನೋಡಿ/ ಎಂದು ಹೇಳುತ್ತಾರೆ. ಬದುಕನ್ನು ಅರ್ಥ ಮಾಡಿಕೊಳ್ಳಲು ಮತ್ತು ಬದುಕಿನಾಚೆಗಿನ ನಿಗೂಢಗಳನ್ನು ಶೋಧಿಸಲು ಬದುಕಿನಲ್ಲಿ ಸಂತಸವನ್ನು ಕಾಣಲು ಹಾಗೂ ಹಾಡನ್ನು ಪಾಡಾಗಿಸಲು ಈ ಒಳಗಣ್ಣಿನ ಕಿಂಡಿಯ ದರ್ಶನ ಅಗತ್ಯ ಎನ್ನುವುದನ್ನು ನಿರೂಪಿಸಿದ್ದಾರೆ.

‘ಮುಖಾಮುಖಿ’ ಯಲ್ಲಿ ಯೋಚನೆಯನ್ನು ಹಾವಿಗೆ ಹೋಲಿಸಿದ್ದಾರೆ. ಯೋಚನೆ ಹಾವಿನಂತೆಯೇ ಬುಸುಗುಟ್ಟುವುದು, ಆಶ್ವಾಸನೆ ಕೊಡುವುದು, ಹಠ ಹಿಡಿಯುವುದು, ವಿಚಾರಕ್ಕೆ ನಾಂದಿ ಹಾಡುವುದು, ಎಲ್ಲಿಂದಲೋ ಬಂದು ಕಾಡುವುದನ್ನು ಮಾಡುತ್ತದೆ ಎನ್ನುವುದನ್ನು ಸುಂದರ ಉಪಮೆ ಮೂಲಕ ವಿವರಿಸಿದ್ದಾರೆ. ಎಲ್ಲಿಂದಲೂ ಎದ್ದು ಬರಬಹುದು/ ತರೆಗೆಲೆಯ ಮರೆಯಿಂದ/ ಬೇಲಿಯ ಸೆರೆಯಿಂದ/ ಗದ್ದೆಯ ಬದುವಿಂದ/ ದಟ್ಟ ಪೊದೆಯಿಂದ/ ಎದ್ದು/ ಹರಿದಾಡಿ ಸುಳಿದಾಡಿ/ ಸರಸರ ಹೆಡೆ ಬಿಚ್ಚಿದರೆ/ ಎಂದು ವಿವರಿಸುತ್ತಾರೆ.

‘ಅಂಗಳದಲ್ಲೊಂದು ನಾಗಮಂಡಲ ನಾಟಕ’ ಕವನ ಮನಸ್ಸಿನ ಒಳಕೋಣೆಯಲ್ಲಿ ಕುಳಿತ ವಿವಿಧ ಭಾವನೆಗಳನ್ನು ಉದ್ದೀಪಿಸುವ ಕವನ ಇದಾಗಿದೆ. ಇಲ್ಲಿ ಹಾವು ಮತ್ತು ನಾಯಿಯನ್ನು ಪ್ರತಿಮೆಯಾಗಿ ಬಳಸಿದ್ದಾರೆ. ‘ಅಮ್ಮ ಬ್ರಹ್ಮ’ ಎಂಬ ಕವನದಲ್ಲಿ ಅರ್ಥಕ್ಕಿಂತ ಹೆಚ್ಚಾಗಿ ಅನುಭೂತಿ ಇರುವುದನ್ನು ಕಾಣಬಹುದು. ನನಗೂ ಗೊತ್ತಿದೆ/ ಹೊರಗಾದವಳು/ ಒಳಗಿರುವ ಮೂರ್ತಿ ಪ್ರಕಟವಾಗಿಸದವಳು/ ಇವರಿಗೆಲ್ಲ ಹೇಗೆ ಅರ್ಥವಾಗಬೇಕು ಹೇಳು/ಒಳಗಿರುವವನು ಬ್ರಹ್ಮ/ ಗುಪ್ತಗಾಮಿ/ ಪಾಯಸ ಉಂಡು/ ಮುಟ್ಟಾದವಳು ಎನ್ನುವರು/ ಇದರ ಮೂಲಕ ಮುಟ್ಟಾದವಳನ್ನು ನಿರಾಕರಿಸುವವರಿಗೆ ಹುಟ್ಟಿಸುವ ಅವಕಾಶವಿರುವುದನ್ನು ಇಲ್ಲಿ ಮನಗಾಣಿಸಿದ್ದಾರೆ. ಜೊತೆಗೆ ಕಟ್ಟುವಿಕೆಯ ಚಟುವಟಿಕೆ ಶುರುವಾಗುವುದೇ ಇಲ್ಲಿಂದ ಎನ್ನುತ್ತಾರೆ.

‘ದೇವ ಕವಿತೆಯಾಗು’ ಎಂಬಲ್ಲಿ ಕವಿತೆ ಎಂಬುದು ಕತ್ತಲಿನ ಅಂಚಿನಲ್ಲಿ ಬೆದರಿಸುವ ಅಕರಾಳ, ವಿಕಾರಾಳ ಆಕೃತಿಗಳಿಂದ ಬದುಕನ್ನು ಕರೆಯುವ ಸಾಧನವಾಗಿದೆ. ಬದುಕಿನ ಎಲ್ಲಾ ಸಂಕಟಗಳ ನಡುವೆ ಗಾಳಿ ಹೊತ್ತು ತರುವ ಸುಗಂಧದಂತೆ ಸ್ಪರ್ಶಿಸಿ ಸುಖ ನೀಡುತ್ತದೆ ಎನ್ನುತ್ತಾ ಈ ಕತ್ತಲೆಗೊಂದು ಕವಿತೆ ನೀಡು ದೇವರೇ/ ಬೆಳಕು ಸರಿಸದಿರು ಸಖನೇ/ ಕತ್ತಲ ಕರಗಿಸುವ ಕವಿತೆ ಕರುಣಿಸು/ ಎನ್ನುತ್ತಾರೆ. ಬದುಕಿನ ಕತ್ತಲೆ ಕರಗಿಸುವುದು ಬೆಳಕು. ಶಬ್ದ ಸೋಪಾನದ ಮೂಲಕ ದೈವ ಸಾಕ್ಷಾತ್ಕಾರಕ್ಕೆ ದಾರಿಯೂ ಆಗು ಎನ್ನುವುದನ್ನು ವಿವರಿಸುತ್ತಾ, ಕವಿತೆಯಾಗು ದೇವ, ಕವಿತೆಯಾಗು ಎಂದು ಪ್ರಾರ್ಥಿಸುತ್ತಾರೆ.

‘ದೋಸೆಯ ಆತ್ಮಕಥೆ’ ಕವನದಲ್ಲಿ ಹೆಣ್ಣಿನ ಆತ್ಮಕಥೆಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ದೋಸೆ ಆರ್ಡರ್ ಮಾಡಿದರೆ ಆನ್‌ಲೈನಲ್ಲಿ ತರಿಸಿಕೊಳ್ಳಬಹುದು. ಆದರೆ ದೋಸೆ ಹಿಂದೆ ಶತಮಾನದ ಕಥೆ ಇದೆ. ಅಡುಗೆ ಮನೆಯ ಹೆಣ್ಣಿನ ಅನುಸಂಧಾನದ ಅನಾವರಣವಿದೆ. ಆಧುನಿಕ ಜಗತ್ತಿನಲ್ಲಿ ಬಯಸಿದ್ದ್ದೆಲ್ಲ ಬೆರಳ ತುದಿಯಲ್ಲಿ ಸಿಗುತ್ತಿದೆ. ಆದರೆ ಅದು ನೀಡಬಹುದಾದ ಸಂತೋಷದಿಂದ ನಾವು ವಂಚಿತರಾಗಿದ್ದೇವೆ ಎನ್ನುವುದನ್ನು ಸೂಕ್ಷ್ಮವಾಗಿ ಇಲ್ಲಿ ವಿವರಿಸಿದ್ದಾರೆ. ಸರಕು ಸಂಸ್ಕೃತಿ ಸೃಷ್ಟಿಸಿರುವ ಯಾಂತ್ರಿಕ ಬದುಕಿನ ನಿರರ್ಥಕಥೆಯನ್ನು ದಿನನಿತ್ಯದ ನಮ್ಮ ಬದುಕಿನಲ್ಲಿ ಕಾಣಬಹುದು. ಇದರಿಂದ ಸೃಜನಶೀಲತೆ ಎನ್ನುವುದು ಕಣ್ಮರೆಯಾಗಿರುವುದನ್ನು ನಮ್ಮ ಅನುಭವಕ್ಕೆ ಇಲ್ಲಿ ತಂದುಕೊಡುತ್ತಾರೆ. ದೋಸೆ ಹೊಯ್ದ ಪರಿಮಳ/ ರುಚಿ ನಿಮಗೆ ಗೊತ್ತು/ ಆದರೆ ದೋಸೆ ಲೋಕದ/ ಕುಸುರಿ/ ಬೇಯುವ ಕಾಯುವ/ ಮಾಗುವ ಹಸಿವೆಗೆ/ ಇಳಿಯುವ ರೂಪಾಂತರ/ ನಿಮಗೆ ತಿಳಿದಿದೆಯೇ/ ಜೀವಾತ್ಮ/ ಬನ್ನಿ ಅಡುಗೆ ಮನೆಗೆ/ ಎಂದು ಕರೆಯುತ್ತಾರೆ

ಕೃತಿಯ ಶೀರ್ಷಿಕೆಯಾಗಿರುವ ‘ಸಂತೆಯೊಳಗಿನ ಏಕಾಂತ’ ಇದು ಬದುಕಿನ ವಿರೋಧಾಭಾಸಗಳನ್ನು ಹೇಳುವ ಕವನ. ಸಂಬಂಧ ಎನ್ನುವುದು ಗಡಿಯಾರದ ಮುಳ್ಳಿನಂತೆ. ಒಂದನ್ನೊಂದು ಪರಸ್ಪರ ಕ್ಷಣಮಾತ್ರ ಸಂಧಿಸುತ್ತವೆ. ಸುತ್ತುತ್ತಲೇ ಇರುವ ಮುಳ್ಳುಗಳ ಭೇಟಿ ಅತ್ಯಂತ ಕ್ಷಣಿಕವಾದದು. ಆ ಕ್ಷಣ ಶಾಶ್ವತವಾಗಬೇಕು ಎಂದು ಹಂಬಲಿಸುತ್ತಾರೆ ಕವಯತ್ರಿ. ಎರಡು ಮುಳ್ಳುಗಳು ಒಂದಕ್ಕೊಂದು/ ಆತುಕೊಂಡು/ ಕ್ಷಣ ಒಂದಾದಂತೆ/ ಬೆಳಕಿನ ಬಿಂದುಗಳು ಸೇರಿದಂತೆ/ ಅದು ಯಾಕೆ ಹಾಗೆ ಇರಬಾರದು/ ಎಂದು ಪ್ರಶ್ನಿಸುತ್ತಾರೆ. ಜೊತೆಗೆ ಕ್ಷಣಿಕವಾದ ಸಂಬಂಧವನ್ನು ಸ್ಥಿರವಾಗಿಸಿಕೊಳ್ಳುವ ಈ ಪ್ರಯತ್ನ ಒಳ್ಳೆಯದು. ಚಲಿಸುವ ಮುಳ್ಳುಗಳು ಪರಸ್ಪರ ಸಂಧಿಸಿದಾಗ ಅದು ಶಾಶ್ವತವಾಗಿ ಅಲ್ಲಿಯೇ ನಿಂತರೆ ಕೆಟ್ಟು ಹೋದ ಸ್ಥಿತಿ ಎದುರಾಗುತ್ತದೆ. ಅಂದರೆ ಅದು ಅಳಿವಿನ ಸ್ಥಿತಿ. ಕೆಡುವುದಂದರೆ ಒಂದಾಗುವುದೇ? ನಾಶವಾಗುವುದೆಂದರೆ ಲೀನವಾಗುವುದೇ ಎನ್ನುವ ಮೂಲಕ ಮನೋಹರವಾಗಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯ ಅತ್ಯುತ್ತಮ ಕವನಗಳಲ್ಲಿ ಇದು ಪ್ರಮುಖವಾದುದು. ‘ಕಶೀರದಲ್ಲಿ ಕಬೀರ’ ಎನ್ನುವುದು ಒಂದು ಆಧ್ಯಾತ್ಮಿಕ ಕವಿತೆ. ಆನಂದಮಯವಾದ ಈ ಜಗತ್ತಿನಲ್ಲಿ ದೇವರ ದಯೆ ಮಾತ್ರವಲ್ಲ ಸಾಕ್ಷಾತ್ಕಾರಕ್ಕೂ ಹಾದಿ ಇದೆ ಎನ್ನುವುದು ಹೇಳುತ್ತಾರೆ. ಕಶೀರ ಒಂದು ಭೂಭಾಗವಾದರೂ ಅದು ತಾಯಿ ಭಾರತೀಯ ಮುಕುಟ, ಬೆರಗಾಗಿನಾಚೆಯ ಶಿಖರ, ಬೆರಗಿನಲಿ ಅಲೆಅಲೆದು ಶರಣಾಗಿದೆ ಆತ್ಮ, ತಾದಾತ್ಮ್ಯ ಎಂದು ವರ್ಣಿಸುತ್ತಾರೆ.

ಪ್ರಸವ ಮಾಯೆ, ಮೊಗ್ಗು ಕುಸುಮಿಸುವ ಹಾದಿ, ಮಣ್ಣ ಪ್ರೇಮ ಎದೆಯೊಳಗಿರಿಸಿ, ಹೂವ ಬಿಡಿಸಬೇಕು, ಟವೆಲ್ ಮೊದಲಾದ ಕವನಗಳು ಸಹ ಸುಂದರವಾಗಿವೆ. ಈ ಸಂಕಲನದಲ್ಲಿ ಹೇಳಲೇಬೇಕಾದ ಇನ್ನೊಂದು ವಿಶೇಷತೆ ಎಂದರೆ ಮಕ್ಕಳ ಕವಿತೆ ಸೇರಿಸಿರುವುದು. ಅದು ‘ಮಕ್ಕಳ ಹಾಡು’ ಕವನ. ಒಂದು ಊರಿನ ಕಥೆಯನ್ನು ಇದರಲ್ಲಿ ಹೇಳಿದ್ದಾರೆ. ಅದನ್ನು ಮಲೆನಾಡಿನ ಹಳ್ಳಿ ಎಂದು ಹೇಳಬಹುದು. ಹಸಿರು, ಗಿಡ,ಮರ, ಬಳ್ಳಿ, ಹಕ್ಕಿಗಳ ಗೂಡು, ಅವುಗಳ ಚಿಲಿಪಿಲಿ, ಬಣ್ಣದ ಚಿಟ್ಟೆ, ಜೇನ್ನೋಣ, ಮರಗಳು ಬಿಡುವ ಫಸಲು, ಇದರ ಮಧ್ಯೆ ಮನುಷ್ಯ ಮನೆ ಕಟ್ಟುವುದು, ಆ ಮನೆಗೆ ಬೇಲಿ ಹಾಕುವುದು, ಹೀಗೆ ಊರು ಬೆಳೆದು ಮರಗಳ ಹನನ ನಡೆದು, ಹಕ್ಕಿಗಳು ನಿರ್ನಾಮವಾಗುವುದು, ಬಿಸಿಲ ಧಗೆ ಹೆಚ್ಚುವುದು. ಒಟ್ಟಿನಲ್ಲಿ, ಪರಿಸರ ಬೆಳೆಸುವ ಸಂದೇಶವನ್ನು ಇದರಲ್ಲಿ ಕಟ್ಟಿಕೊಟ್ಟಿದ್ದಾರೆ.

ಹೀಗೆ, ಕೃತಿಯಲ್ಲಿನ ಎಲ್ಲ ಕವಿತೆಗಳು ಆಪ್ತವಾಗಿವೆ. ಒಳಬಾಳಿನ ಸೂಕ್ಷ್ಮ ಇಲ್ಲಿ ಅಭಿವ್ಯಕ್ತಿಗೊಂಡಿದೆ. ಕವಯತ್ರಿಯ ಭಾಷಾ ವೈವಿಧ್ಯ ಮತ್ತು ಭಾಷಾ ಸಂಪತ್ತನ್ನು ಇಲ್ಲಿ ಕಾಣಬಹುದು. ಇಲ್ಲಿನ ಕವಿತೆಗಳು ಓದುಗನನ್ನು ಸೆರೆಹಿಡಿಯುತ್ತವೆ.


  • ದತ್ತಾತ್ರೇಯ ಹೆಗಡೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW