ಕವಿಯತ್ರಿ ಲಾವಣ್ಯ ಪ್ರಭಾ ಅವರ ‘ಸ್ಪರ್ಶ ಶಿಲೆ’ ಕವನ ಸಂಕಲನದ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ಬರೆದಿರುವ ಒಂದು ಪರಿಚಯವನ್ನು ತಪ್ಪದೆ ಮುಂದೆ ಓದಿ….
ಪುಸ್ತಕ : ಸ್ಪರ್ಶ ಶಿಲೆ
ಕವಿಯತ್ರಿ : ಕೆ ಎಸ್ ಲಾವಣ್ಯ ಪ್ರಭಾ
ಪ್ರಕಾರ :ಕವನ
ಪ್ರಕಾಶನ : ಕವಿತಾ ಪ್ರಕಾಶನ,ಮೈಸೂರು
ಬೆಲೆ : ೭೦/
ಒಂದು ಕಿರುಟಿಪ್ಪಣಿ: ಒಂಬತ್ತು ವರ್ಷಗಳ ನಂತರ ತಮ್ಮ ನಾಲ್ಕನೇ ಕವನಸಂಕಲನ ಸ್ಪರ್ಶ ಶಿಲೆಯನ್ನು ಪ್ರಕಟಿಸಿದ ಲಾವಣ್ಯ ಪ್ರಭಾ ಅವರ ಕಾವ್ಯದಲ್ಲಿ ಆದ ಪಲ್ಲಟಗಳನ್ನು ಸೆರೆಹಿಡಿಯುವಲ್ಲಿ ಸಫಲವಾಗಿದೆ.
ಸಂಕಲನದ ಶೀರ್ಷಿಕೆ ಯೆ ಸೂಚಿಸುವಂತೆ ಕಾವ್ಯ ಕರ್ಮವೆಂದರೆ ಅದೊಂದು ಸ್ಪರ್ಶಶಿಲೆಯ ಕಾಯಕ. ಅದರ ಕಾಯಕವೇ ಜಡವಾದದ್ದನ್ನು ಚಲನಶೀಲಗೊಳಿಸುವುದು. ಅದನ್ನು ಇಲ್ಲಿನ ಕವನವೊಂದರ ಮೂಲಕ ಸ್ಪಷ್ಟವಾಗಿ ಗ್ರಹಿಸಬಹುದು.ಕವನದ ಹೆಸರು ಬುದ್ಧ ಪೂರ್ಣಿಮೆಯಂದು. ಅದರಲ್ಲಿ ಬುದ್ಧನ ಶಿಲೆಯನ್ನು ನೋಡಲು ಹೋದ ಕವಿಗೆ ಮುಟ್ಟಾದ ಯಶೋಧರಳ ನೆನಪಾಗುತ್ತದೆ. ಶಿಲೆಯನ್ನು ಮುಟ್ಟಿ ನೋಡಲು ಕಾವಲುಗಾರನ ‘ ಹಾಗೆಲ್ಲ ಮುಟ್ಟುವ ಹಾಗಿಲ್ಲ’ ಎಂಬ ಎಚ್ಚರಿಕೆಯ ದನಿ ತಡೆಯುತ್ತದೆ. ಆಗ ಬುದ್ಧ ತನ್ನ ಎಂದಿನ ನಸುನಗೆಯನ್ನು ಬೀರುತ್ತಾನೆ. ಕಾವಲುಗಾರ ಕೊಟ್ಟ ಎಚ್ಚರಿಕೆ ಕವಿಗೆ ಹೊರತು ಬುದ್ಧನಿಗಲ್ಲ. ಅಥವಾ ಕವಿತೆಗೂ ಅಲ್ಲ. ಆದ್ದರಿಂದಲೆ ಯಶೋಧರಳ ಮುಟ್ಟು ಅವನಲ್ಲಿ ನಸುನಗೆಯನ್ನು ಮೂಡಿಸಲು ಸಫಲವಾಗುತ್ತದೆ.
ಜಡವಾದ ಶಿಲೆಯಲ್ಲಿ ಸಂವೇದನೆ ಮೂಡಿಸಬಲ್ಲ , ಆ ಮೂಲಕ ಜೀವಂತಗೊಳಿಸಬಲ್ಲ ಮಾಂತ್ರಿಕ ಶಕ್ತಿ ಇರುವುದು ಕವಿಯ ಸಜೀವ ಭಾಷೆಗೆ ಮಾತ್ರ. ಅದಕ್ಕೆ ನಿದರ್ಶನ ಲಾವಣ್ಯ ಪ್ರಭಾ ಅವರ ಈ ಯಶಸ್ವಿ ಕವನ. ಅದರ ಸಶಕ್ತ ಕೊನೆಯ ಸಾಲುಗಳು: ”
ಸಂಸ್ಕೃತದ ಮಂದಸ್ಮಿತವನ್ನು ಕನ್ನಡದ ಮುಗುಳ್ನಗೆಯಾಗಿಸುವ ಮೂಲಕ ಅಲ್ಲಿ ಕೂಡ ಚಲನವನ್ನು ಸಾಧಿಸಿದ್ದಾರೆ. ಬುದ್ಧನ ಪೂರ್ಣಿಮೆಯಂದರೆ ಅವನ ಮುಗುಳ್ನಗೆಯೆ ಅಲ್ಲವೇ. ಅದಕ್ಕೆ ಕಾರಣವಾಗುವುದು’ ಯಶೋಧರೆಯ ಮುಟ್ಟು ‘ ಎಂಬುದು ಈ ಕವನದ ವೈಶಿಷ್ಟ್ಯ .
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.