‘ಸು’ ಕಾದಂಬರಿ ಸುತ್ತ – ಟಿ. ಆರ್. ಅನಂತರಾಮು



ಡಾ. ಪ್ರಸನ್ನ ಸಂತೆಕಡೂರು ಅವರ ‘ಸು’ ವಿಜ್ಞಾನ ಮತ್ತು ಸಾಹಿತ್ಯದ ಸಮರಸ ಈ ಕಿರು ಕಾದಂಬರಿಯಾಗಿದೆ, ಈ ಕಾದಂಬರಿ ಕುರಿತು ಖ್ಯಾತ ಲೇಖಕರಾದ ಟಿ. ಆರ್. ಅನಂತರಾಮು ತಮ್ಮ ಅನಿಸಿಕೆಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…

ಪುಸ್ತಕ : ಸು
ಲೇಖಕರು : ಡಾ. ಪ್ರಸನ್ನ ಸಂತೆಕಡೂರು
ವಿಭಾಗ : ಕಾದಂಬರಿ
ಬೆಲೆ :  75 ರೂ
ಪ್ರಕಾಶಕರು : ಸಂವಹನ, 12/1ಎ ಈವ್ನಿಂಗ್ ಬಜಾರ್ ಹಿಂಭಾಗ
ಶಿವರಾಮಪೇಟೆ, ಮೈಸೂರು

ಎಂಬತ್ತು ಪುಟಗಳ ಈ ಕಿರು ಕಾದಂಬರಿಯಲ್ಲಿ ವೈಜ್ಞಾನಿಕ ವಸ್ತು ಎಷ್ಟಿರಬೇಕು, ಅದನ್ನು ಪೋಷಿಸುವ ಪಾತ್ರಗಳನ್ನು ಎಷ್ಟು ಬೆಳೆಸಬೇಕು ಎಂಬ ಪೂರ್ವ ಪ್ರಜ್ಞೆಯಿಂದಲೇ ಡಾ. ಪ್ರಸನ್ನ ಸಂತೆಕಡೂರು ಅವರು `ಸು’ ಕಾದಂಬರಿಯನ್ನು ರಚಿಸಿದ್ದಾರೆ.

(‘ಸು’ ಕಾದಂಬರಿಕಾರ ಡಾ. ಪ್ರಸನ್ನ ಸಂತೆಕಡೂರು)

ಒಂದಕ್ಷರದ ಸು ಎನ್ನುವುದೇ ವಿಸ್ಮಯ ಹುಟ್ಟಿಸುತ್ತದೆ. ಆತ ಚೀನ ಮೂಲಕ ಕ್ಯಾನ್ಸರ್ ಸಂಶೋಧಕ-ಕಾಲ್ಪನಿಕ ವ್ಯಕ್ತಿಯಲ್ಲ, ಕಾದಂಬರಿಕಾರರ ನಿಜವಾದ ಒಡನಾಡಿ. ಅಮೆರಿಕದ ರಿಚ್ಮಂಡ್ ವಿಶ್ವವಿದ್ಯಾಲಯದಲ್ಲಿ ಇಬ್ಬರೂ ಒಟ್ಟಿಗೇ ಸಂಶೋಧನೆ ಮಾಡಿದವರು. ಇಲ್ಲಿ ಸು ಮತ್ತು ಇನ್ನೊಂದು ಪಾತ್ರ ಪ್ರಕಾಶ. ಇವರ ಸಂಶೋಧನೆಯ ವಸ್ತು ಕೂಡ ಕ್ಯಾನ್ಸರ್ ಕುರಿತದ್ದೇ.ಸು ನ ಮೊದಲ ಹೆಂಡತಿ ಮಿಯಾನ್ ಗರ್ಭಕಂಠದ ಕ್ಯಾನ್ಸರ್ ನಿಂದ ಸಾಯುತ್ತಾಳೆ. ಟಿಬೆಟ್ ನ ನೋಸೋಮ್ ಎಂಬುವಳನ್ನು ಪ್ರೀತಿಸಿ ಮದುವೆಯಾಗುವ ಮೊದಲೇ ಕರುಳಿನ ಕ್ಯಾನ್ಸರ್ ಗೆ ಬಲಿಯಾಗುತ್ತಾಳೆ. ಶಿವಮೊಗ್ಗದ ಪ್ರಕಾಶ್ ಸು ಜೊತೆಗೂಡಿ ಕ್ಯಾನ್ಸರ್ ಕೋಶ ಕುರಿತು ಇನ್ನಷ್ಟು ಗಂಭೀರವಾಗಿ ಶೋಧನೆಗೆ ತೊಡಗುತ್ತಾರೆ. ಇಲ್ಲಿ ಒಂದು ನೈಜ ಸಂಗತಿಯನ್ನು ಕಾದಂಬರಿಕಾರರು ಬಳಸಿಕೊಂಡಿದ್ದಾರೆ. ಅದು ಹೆನ್ರಿಯೆಟ್ರಾ ಲ್ಯಾಕ್ಸ್ ಎಂಬಾಕೆಯ ಕ್ಯಾನ್ಸರ್ ಕೋಶಗಳ ಅಧ್ಯಯನ. ಅವನ್ನು ಈಗಲೂ ಹೇಲಾಲೈನ್ ಎಂಬ ಹೆಸರಿನಲ್ಲಿ ಸಂಶೋಧನೆ ಮುಂದುವರಿದಿದೆ.

ಸು ಈ ಕುರಿತು ಎಷ್ಟು ದೀರ್ಘ ಸಂಶೋಧನೆಯಲ್ಲಿ ತೊಡಗಿರುತ್ತಾನೆಂದರೆ ಮೈಕ್ರೋಸ್ಕೋಪಿನಿಂದಲೇ ಆಕೆ ಎದ್ದು ಬಂದಂತೆ ಹೆದರುತ್ತಾನೆ. ಪ್ರಸನ್ನ ಮತ್ತು ಸು ಕೊನೆಗೆ ಆಕೆಯ ಸಮಾಧಿಯನ್ನೂ ಹುಡುಕಿಕೊಂಡು ಹೋಗುತ್ತಾರೆ. ಇಲ್ಲೆಲ್ಲ ಒತ್ತು ಬೀಳುವುದು ವೈದ್ಯಕೀಯ ವಿಜ್ಞಾನದ ಕಡೆಗೇ. ವಿಚಿತ್ರವೆಂದರೆ ಪ್ರಕಾಶ್ ನ ತಂದೆ ಕೂಡ ಲಿವರ್ ಕ್ಯಾನ್ಸರ್ ನಿಂದಲೇ ಸಾಯುತ್ತಾರೆ. ಅಂತಿಮವಾಗಿ ಸೂ ಕೂಡ ಲಿವರ್ ಕ್ಯಾನ್ಸರ್ ನಿಂದಲೇ ಸಾಯುವ ಪ್ರಸಂಗವನ್ನು ಸೃಷ್ಟಿಸಿದ್ದಾರೆ. ಹೀಗೆ ಮಾಡುವಾಗ ವಿಪರೀತ ಕಡಲೆಕಾಯಿ ತಿನ್ನುವ ಚಟವಿದ್ದ ಸು ಗೆ ಕಡಲಬೀಜದಿಂದಲೇ ಶಿಲೀಂಧ್ರದಿಂದ ಹೊರಬಂದ ವಿಷವಸ್ತುವೊಂದು ತನಗೆ ಕ್ಯಾನ್ಸರ್ ಉಂಟುಮಾಡಿದೆ ಎಂಬ ಸಂಶೋಧನೆಯನ್ನು ಮಾಡುತ್ತಾನೆ, ಸಾಯುವಾಗ ಭೀಕರವಾಗಿ ನರಳುತ್ತಾನೆ. ಒಂದಲ್ಲ ಹತ್ತು ಭ್ರಮೆಗಳು ಅವನನ್ನು ಕಾಡುತ್ತವೆ.
ಇಂತಹ ಗಹನ ವಿಷಯವನ್ನು ಆಯ್ದುಕೊಂಡಾಗ, ಜೊತೆಜೊತೆಗೆ ಕಾದಂಬರಿಕಾರರು ಕ್ಯಾನ್ಸರ್ ಹೇಗೆ ಹರಡುತ್ತದೆ ಎಂಬುದರ ವಿವರಣೆ ಎಂಥವರನ್ನಾದರೂ ಎದೆಗುಂದುವಂತೆ ಮಾಡುತ್ದತದೆ. ಜೊತೆಗೆ ಒಂದೇ ಸಾಲಿನಲ್ಲಿ ಅನೇಕ ಪ್ರಸಿದ್ಧರ ಕುರಿತು ಉಲ್ಲೇಖ ಕೊಡುವುದು ಅವರ ವ್ಯಾಪಕ ಓದಿನ ದ್ಯೋತಕ. ಇಲ್ಲಿ ಕಾಳಿದಾಸ, ಕಾರ್ಲ್ ಮಾರ್ಕ್ಸ್, ಕುವೆಂಪು, ದಲೈಲಾಮಾ, ಅಷ್ಟೇ ಏಕೆ ದಿ ಲಾಸ್ಟ್ ಲೆಕ್ಚರ್ ಬರೆದ ಆಂಡಿ ಪಾಷ್ ಸಂಗತವಾಗಿ ಕಾಣಿಸಿಕೊಳ್ಳುತ್ತಾರೆ. ಜಗವನ್ನೇ ಗೆಲ್ಲಲು ಹೋದ ಅಲೆಕ್ಸಾಂಡರ್ ಗೆ ಎರಡು ಕಣ್ಣುಗಳ ಬಣ್ಣವೂ ಬೇರೆ ಬೇರೆಯಾಗಿತ್ತಂತೆ-ಒಂದು ಹಸುರು, ಒಂದು ನೀಲಿ. ಕಡಲೆಕಾಯಿ ಗಿಡದ ಹೂವಿನ ಪರಾಗಸ್ಪರ್ಶ ಭೂಮಿಯ ಮೇಲಾದರೆ ಕಾಯಿ ನೆಲದೊಳಗೆ ಹೇಗೆ ಬಿಡುತ್ತದೆ ಎಂಬ ಕುತೂಹಲಕ್ಕೂ ಇಲ್ಲಿ ವೈಜ್ಞಾನಿಕ ಉತ್ತರವಿದೆ.

ಸು | Bookbrahma

ಅಲ್ಲಲ್ಲೇ ಬುದ್ಧನ ಬದುಕಿನ ಚಿಂತನೆಗಳನ್ನು ಕಾದಂಬರಿಯಲ್ಲಿ ಪೋಣಿಸಿದ್ದಾರೆ. ಸು ಕೊನೆಯುಸಿರೆಳೆಯುವ ಮೊದಲು ತನ್ನ ಜೀವಕೋಶಗಳು ಮುಂದಿನ ತಲೆಮಾರಿಗೆ ಸಂಶೋಧನೆಗೆ ಸಿಕ್ಕಬೇಕೆಂದು ಹಂಬಲಿಸುತ್ತಾನೆ. ನಿಸ್ಸಂಶಯವಾಗಿ ಒಬ್ಬ ಸಂಶೋಧಕ ಮಾತ್ರ ಈ ಬಗೆಯ ಚಿತ್ರಣ ನೀಡಲು ಸಾಧ್ಯ. ಕೊನೆಗೆ ಪ್ರಕಾಶ್ ಮರಳಿ ಭಾರತಕ್ಕೆ ಬರುವಾಗ ತನ್ನ ಕನಸಿನಲ್ಲೂ ಏಡಿಗಳು ಮುತ್ತುವ ಹಾಗೆ ಕಲ್ಪಿಸಿಕೊಳ್ಳುತ್ತಾನೆ. ಏಡಿಯಿಂದಲೇ ತಾನೇ ಕ್ಯಾನ್ಸರ್ ಗೆ ಏಡಿಗಂತಿ ಎಂದು ಹೆಸರು ಬಂದಿರುವುದು.



ವಿಜ್ಞಾನ ಮತ್ತು ಸಾಹಿತ್ಯದ ಸಮರಸ ಈ ಕಿರು ಕಾದಂಬರಿ ಎನ್ನಬಹುದು. ಇದನ್ನು ಓದಿದ ನಂತರ ನನಗೆ, ಕ್ಯಾನ್ಸರ್ ಕುರಿತು ಸಿದ್ದಾರ್ಥ ಮುಖರ್ಜಿ ಅವರು ಬರೆದಿರುವ `ದಿ ಎಂಪರರ್ ಆಫ್ ಆಲ್ ದಿ ಮೆಲಡೀಸ್’ ಎಂಬ ಪುಸ್ತಕ ಓದಬೇಕೆಂಬ ಕುತೂಹಲ ಹೆಚ್ಚಾಗಿದೆ. ಒಂದು ಒಳ್ಳೆಯ ಕಾದಂಬರಿ ಈ ಬಗೆಯ ಪ್ರೇರಣೆ ಕೊಡಬೇಕು. `ಸು’ ಆ ಕೆಲಸ ಮಾಡುತ್ತದೆ.


  • ಟಿ. ಆರ್. ಅನಂತರಾಮು (ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading