“ಸುಮಾರು” ಎನಿಸಿಬಿಡುವ ” ಸು‌ ಫ಼್ರಂ ಸೋ..” !

ಒಟ್ಟಾರೆಯಾಗಿ ಯಶಸ್ವಿ‌ಯಾಗಿ ಪ್ರದರ್ಶಿತವಾಗುತ್ತಿರುವ ಸು ಫ಼್ರಂ ಸೋ‌….ಒಮ್ಮೆ‌ ನೋಡಲಡ್ಡಿಯಿಲ್ಲದ ಸಿನಿಮಾ. ಅದರೆ ಒಂದು ಮಾತು. ಯಾವ ನಿರೀಕ್ಷೆಯೂ‌ ಇಲ್ಲದೇ, ಹಾಗೇ ಸುಮ್ಮನೇ ಎಂಜಾಯ್ ಮಾಡಿ ಬನ್ನಿ. ಖುಷಿ ಪಡ್ತೀರಾ… ಹಿರಿಯೂರು ಪ್ರಕಾಶ್ ಅವರ ‘ಸು ಫ಼್ರಂ ಸೋ‌’ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಒಂದು ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಬರೋ ಹೈ ವೋಲ್ಟೇಜ್ ನ ರಿವ್ಯೂ ನೋಡ್ಕೊಂಡು, ಭರಪೂರ ನಿರೀಕ್ಷೆ ಇಟ್ಕೊಂಡು ಸಿನಿಮಾ ನೋಡಿ ಬಂದಾಗ ಬಹಳಷ್ಟು ಸಾರಿ ನಿರಾಶೆ ಆಗೋದೇ ಹೆಚ್ಚು. ಅದರಲ್ಲೂ ಕೆಲ ಸಿನಿಮಾಗಳಿಗೆ ಸಿಕ್ಕ ಓವರ್ ಬಿಲ್ಡಪ್, ಅಲ್ಟಿಮೇಟ್ ಹೈಪ್ ಹಾಗೂ ರಸಭರಿತ ರಗಡ್ ರಿವ್ಯೂಗಳು ಎಲ್ಲರಲ್ಲೂ ಇನ್ನಿಲ್ಲದ ಕಾತರವನ್ನು‌ ಹುಟ್ಟುಹಾಕಿ ಸಿನಿಮಾ ನೋಡದವರನ್ನೂ ನೋಡುವಂತೆ ಪ್ರೇರೇಪಿಸಿ ಥಿಯೇಟರ್ ನತ್ತ ಹೆಜ್ಜೆ ಹಾಕುವಂತೆ ಮಾಡಿಬಿಡುತ್ತವೆ. ಆದರೆ ಈ ಎಲ್ಲಾ ಅದ್ಭುತ ನಿರೀಕ್ಷೆಗಳ ಮಣ ಭಾರವನ್ನು‌ ಹೊತ್ತು ಒಮ್ಮೆ ಅಂತಹ ಸಿನಿಮಾ ನೋಡಿ ಹೊರಬಂದಾಗ ಮನಸಿಗೆ ಖುಷಿಯೇನೋ ಆಗುತ್ತೆ.

ಆದರೆ ಅದೇ ಸಮಯದಲ್ಲಿ ” ಈ‌ ಸಿನಿಮಾಗೇಕೆ ಈ ರೇಂಜಿನ ಓವರ್ ಬಿಲ್ಡಪ್ಪು, ಅತಿಶಯವಾದ ಪಬ್ಲಿಸಿಟಿ ಸಿಕ್ಕಿದ್ದು …. ? ಎನಿಸಿಬಿಡುತ್ತೆ. ಹಾಗೆ ಅನಿಸಲು ಖಂಡಿತವಾಗಿ ‌ಸಿನಿಮಾ‌ ಕಾರಣವಲ್ಲ. ಬದಲಿಗೆ ಸಿನಿಮಾ ನೋಡುವ ಮುನ್ನ‌ ಬೇಡವೆಂದರೂ ಪ್ರೇಕ್ಷಕನ ತಲೆಯೊಳಗಿನ ಎಲ್ಲೋ ಒಂದು ಮೂಲೆಯಲ್ಲಿ ಸಣ್ಣಗೆ , ತಣ್ಣಗೆ ಜಾಗಮಾಡಿಕೊಂಡಿರೋ ಪೂರ್ವ ನಿರ್ಧರಿತ ಅತಿ ನಿರೀಕ್ಷೆಯೆನ್ನುವುದು ಹಾಗನಿಸುವಂತೆ ಮಾಡಿಬಿಡುತ್ತೆ.

ಹೆಚ್ಚುಕಡಿಮೆ ಇದೇ ಸಾಲಿಗೆ ಸೇರಿರೋ ಒಂದು ಸಿನಿಮಾ‌

” ಸು‌ ಫ಼್ರಂ ಸೋ”

ಹೆಸರು ಮತ್ತು ಸಿನಿಮಾ ಪೋಸ್ಟರ್ ನೋಡಿದ ಕೂಡಲೇ ಅವು ಜನರನ್ನು ಚಿತ್ರಮಂದಿರಕ್ಕೆ ಸೆಳೆಯಬಲ್ಲ ಕ್ಯಾಚಿಯಾಗೇನೂ ಇಲ್ಲ. ತಾರಾಗಣದಲ್ಲಿ ತಾಂತ್ರಿಕ ವರ್ಗದಲ್ಲಿ ರಾಜ್ ಬಿ ಶೆಟ್ಟಿ ಬಿಟ್ಟರೆ ಚಂದನವನದಲ್ಲಿ ಹೆಸರು ಮಾಡಿರುವವರ ತಾರಾಬಲವೂ ಇಲ್ಲ. ಫ಼ಾರಿನ್ ಲೊಕೇಷನ್ನು , ಮಿಲಿಯನ್‌ ವ್ಯೂಸ್ ಸಾಂಗ್ಸು, ಪ್ರೀ ಈವೆಂಟ್ ಲಾಂಚು ಇತ್ಯಾದಿಗಳ ಚಮ್ ಚಮ್ ಚಮಕ್ಕೂ ಇಲ್ಲಿಲ್ಲ . ಈ ಎಲ್ಲಾ “ಇಲ್ಲ” ಗಳ ನಡುವೆಯೂ ಈ‌ ಸಿನಿಮಾ‌ ಅದ್ಭುತ ಯಶಸ್ಸನ್ನು ಪಡೆಯುತ್ತಾ ಮುನ್ನಡೆಯುತ್ತಿದೆ ಎಂದರೆ ಆ ಚಿತ್ರದಲ್ಲಿ ಪ್ರೇಕ್ಷಕ ಏನೋ ಒಂದು ಹೊಸತನವನ್ನು ಅಥವಾ ಕೊಟ್ಟ ಕಾಸಿಗೆ ಮೋಸವಿಲ್ಲದ ಮನರಂಜನೆಯನ್ನು ಪಡೆದಿದ್ದಾನೆ ಎಂದರ್ಥ.

ಫೋಟೋ ಕೃಪೆ :google

ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರನ್ನು ಥಿಯೇಟರ್ ಗೆ ಸೆಳೆಯುವ ಶಕ್ತಿಯಿಲ್ಲ ಎಂಬ‌ ಮಾತನ್ನು ಸುಳ್ಳು ಮಾಡಿದ ಭರಪೂರ ಹಾಸ್ಯಭರಿತ ಹಾಗೂ ಸ್ವಲ್ಪಮಟ್ಟಿಗೆ ಹಾರರ್ ಲೇಪಿತ ಮನರಂಜನೆಯ ಮಸಾಲೆ ತುಂಬಿರುವ ಸಾಧಾರಣ ಬಜೆಟ್ ನ‌ ಚಿತ್ರ ಇದು. ಕರಾವಳಿ ಭಾಗದ‌ ವಿಶೇಷ ಶೈಲಿಯ ಸೊಗಸಾದ ಸಂಭಾಷಣೆ, ಪಾತ್ರಗಳನ್ನು ಅತ್ಯಂತ ಸಹಜವಾಗಿ ಕಟ್ಟಿಕೊಟ್ಟಿರುವ ನಿರ್ದೇಶಕರ ನಿರೂಪಣಾ ಕಸುಬುದಾರಿಕೆ, ಎಲ್ಲಾ ಪಾತ್ರಗಳು ಅಭಿನಯಿಸಿದಂತಿರದೇ ನಮ್ಮ ನಿಮ್ಮದೇ ಊರಿನ ಅಕ್ಕ‌ಪಕ್ಕದ ಮನೆಯಲ್ಲಿ‌ ನಡೆಯುವ ಸಾಮಾನ್ಯ ಘಟನೆಗಳಂತೆ ಈ‌ ಸಿನಿಮಾದ ಪ್ರತೀ ಸನ್ನಿವೇಶ ಮತ್ತು ಪಾತ್ರವೂ ಇದ್ದು ನೀವು ಥಿಯೇಟರ್ ನಲ್ಲಿ ಇರುವಷ್ಟು ಹೊತ್ತು ಮನಸಿಗೆ ಆಹ್ಲಾದಕರ ಕಚಗುಳಿ ಇಡುತ್ತಲೇ ಹೋಗುತ್ತದೆ.

ಕರಾವಳಿ ಭಾಗದ ಮರ್ಲೂರು ಎಂಬ ಚಿಕ್ಕ ಗ್ರಾಮದಲ್ಲಿನ ಮೇಸ್ತ್ರಿ ರವಿಯಣ್ಣನೇ ಆ‌ ಸಣ್ಣ ಊರಿನ‌ ಅಘೋಷಿತ ನಾಯಕ. ಊರಲ್ಲಿ ಏನೇ ಮದುವೆ, ತಿಥಿ, ಭಾಷಣ ಇತರೆ ಕಾರ್ಯ -ಸಮಾರಂಭ ನಡೆಯಬೇಕೆಂದರೂ, ಯಾವ ಸಮಸ್ಯೆ ಬಗೆಹರಿಯಬೇಕಾದರೂ ರವಿಯಣ್ಣನದ್ದೇ ಮುಂದಾಳತ್ವ. ಇವರಿಗೆ ಸಾಥ್ ಕೊಡಲು ಹಾಗೂ ನಗಿಸಲು ಕೆಲ ಎಣ್ಣೆಬಾಕ ಶಿಷ್ಯಂದಿರ ದಂಡೇ ಇದೆ. ಈ ಮಧ್ಯೆ ಅಶೋಕ ಎಂಬ‌ ಪೇಂಟರ್ ಯಾವುದೋ ತುಂಟತನದ ಕೆಲಸ ಮಾಡಲು ಹೋಗಿ ಇಬ್ಬರ ಕೈಗೆ ಸಿಕ್ಕಿಬಿದ್ದು ಅಲ್ಲಿಂದ ತಪ್ಪಿಸಿಕೊಳ್ಳಲು ಮೈಮೇಲೆ ದೆವ್ವ ಬಂದವನಂತೆ ನಟಿಸುತ್ತಾನೆ. ಈ ಘಟನೆಯ ಮೂಲಕ ಸುಲೋಚನಾಳ ಕತೆಯ ಅನಾವರಣವಾಗುತ್ತದೆ. ಆನಂತರ ಅದು ಊರಿಗೆಲ್ಲಾ ಹರಡಿ ಅವನು‌ ನಿರ್ವಾಹವಿಲ್ಲದೇ ಮೈಮೇಲೆ ದೆವ್ವ ಬಂದವನಂತೆ‌ ನಟಿಸುತ್ತಾನೆ. ಆನಂತರ ಇವನ ಮೈಮೇಲಿನ‌ ದೆವ್ವ ಬಿಡಿಸಲು ಊರಿಗೆ ಕರುಣಾಕರ ಗುರೂಜಿಯ ಎಂಟ್ರಿಯಾಗಿ ಅಶೋಕನ ದೇಹದಲ್ಲಿ ಬಂದಿರುವುದು ಸೋಮೇಶ್ವರದ ಸುಲೋಚನಾ ಎಂದು ತೀರ್ಮಾನವಾಗುತ್ತದೆ. ಮೈಗಂಟಿರುವ ದೆವ್ವ ಬಿಡಿಸುವ ಹರಸಾಹಸದ ಹಾದಿಯ ತುಂಬಾ ಕರಾವಳಿ ಭಾಷೆಯ ಸೊಗಡಿನ ಕಾಮಿಡಿಯ ಕಲರವ ಪ್ರೇಕ್ಷಕರನ್ನು ನಗೆಯಲೆಯಲ್ಲಿ ತೇಲಿಸುತ್ತದೆ. ಕೊನೆಗೆ ರವಿಯಣ್ಣನ ಎಂಟ್ರಿಯಿಂದಾಗಿ ಕಥೆ ಹಾಸ್ಯದ ಹೊರತಾದ ನವಿರಾದ ಪ್ರೀತಿ, ಕೌತುಕ ಹಾಗೂ ಸ್ತ್ರೀ ಶೋಷಣೆಯ ಮುಖಗಳನ್ನು‌ಅನಾವರಣ ಮಾಡಿಸುತ್ತಾ, ಹಲವು ಗಂಭೀರ ಸಾಮಾಜಿಕ ಸಮಸ್ಯೆಗಳತ್ತ ಹೊರಳಿ ನಿರಾಯಾಸವಾಗಿ ಸಾಗುತ್ತದೆ.

ಅಶೋಕನ‌ ದೇಹದೊಳಕ್ಕೆ ಬಂದು ಸೇರಿದ್ದ ಸುಲೋಚನಾ ಬಿಟ್ಟು ಹೋಗುವಳೇ ಎಂಬ‌ ಕೌತುಕವನ್ನು ತೆರೆಯ ಮೇಲೆ‌ ನೋಡಿ ಆನಂದಿಸಿ. ಹೀಗೆ ಪೂರ್ತಿ ಹಾಸ್ಯ, ಕೊಂಚ ಹಾರರ್ ಹಾಗೂ ಕರಾವಳಿ‌ ಕಲಾವಿದರ ನೈಜ ಹಾವಭಾವಗಳ ಸಮ್ಮಿಶ್ರಣದಿಂದ ಸುಲೋಚನಾ ಫ಼್ರಂ ಸೋಮೇಶ್ವರ ಇತರೆ ಸಿನಿಮಾಗಳಿಗಿಂತ ಭಿನ್ನವಾಗಿ ನೋಡುಗರನ್ನು‌ ಸೆಳೆಯುವಲ್ಲಿ ಸಫ಼ಲವಾಗಿದೆ.

ರವಿಯಣ್ಣನಾಗಿ ಶಮೀಲ್ ಗೌತಮ್ ರದ್ದು ಸಹಜಾಭಿನಯವಾದರೆ , ನಿರ್ದೇಶನದ ಜೊತೆಗೆ ಅಶೋಕನಾಗಿ ನಟಿಸಿರುವ ಜೆ.ಪಿ.ತೂಮಿನಾಡ್ ರ ಶ್ರಮ ಸಾರ್ಥಕವಾಗಿದೆ. ರಾಜ್‌ ಬಿ.ಶೆಟ್ಟಿ ಗುರೂಜಿಯ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಕುಡುಕ ಭಾವನಾಗಿ‌ ಪುಷ್ಪರಾಜ್ ನಿಜಕ್ಕೂ ಅಪ್ಪಟ ಕುಡುಕನಾಗಿ ಮಿಂದೆದ್ದರೆ, ಪ್ರಕಾಶ್‌ ತೂಮಿನಾಡ್, ದೀಪಕ್ ರೈ‌ ಮುಂತಾದವರದ್ದು ನಟನೆ ಎನ್ನುವಂತಿರದೇ ಕಣ್ಣೆದುರೇ ಇರುವ ವ್ಯಕ್ತಿಗಳಂತೆ ಸಹಜತೆಯಿಂದ ನಟಿಸಿದ್ದಾರೆ. ಆದರೆ ಭಾನು ಪಾತ್ರದ ಸಂಧ್ಯಾರ‌ ಅಭಿನಯ ಮಾತ್ರ ಪರಿಪಕ್ವವಾಗಿದೆ. ಹಾಸ್ಯಕ್ಕಾಗಿ ಕುಡುಕರನ್ನು‌-ಕುಡಿತವನ್ನು ಹೈಲೈಟ್ ಮಾಡುವ ಭರದಲ್ಲಿ‌ ಅಶೋಕನಿಗೆ ಒಲಿಯಬಹುದಾಗಿದ್ದ ಸ್ನಿಗ್ಧ ಚೆಲುವೆಯ ಪ್ರೀತಿಯ ಸಿಂಚನದ ಕೆಲ ಸನ್ನಿವೇಶಗಳಿದ್ದಿದ್ದರೆ ಸಿನಿಮಾ ಮತ್ತಷ್ಟು ಕಲರ್ ಫ಼ುಲ್ಲಾಗಿರುತ್ತಿತ್ತೇನೋ‌! ನವಿರು ಪ್ರೀತಿಯ ಕೊರತೆಯೇ ಈ ಸಿನಿಮಾದ ಕೊರತೆಯೂ‌ ಹೌದು.

ಫೋಟೋ ಕೃಪೆ :google

ಸಿನಿಮಾದ ಹೈಲೈಟ್ ಎಂದರೆ ಸುಮೇದ್ ರ ಸಂಗೀತ ಮತ್ತು ಹಾಡುಗಳು. ಕರಾವಳಿಯ ಬದುಕಿನ ಸೊಬಗನ್ನು‌ ಸೆರೆ‌ ಹಿಡಿದಿರುವ ಛಾಯಾಗ್ರಹಣಕ್ಕೆ‌ ಫ಼ುಲ್‌ಮಾರ್ಕ್ಸ್. ಜೊತೆಗೆ ಚಿತ್ರದ ಗೆಲುವಿನ‌ ಸಿಂಹಪಾಲು ಹಾಸ್ಯಭರಿತ ಮತ್ತು ‌ಚುರುಕಾದ ಸಂಭಾಷಣೆಗೆ ಸಲ್ಲಬೇಕು.

ಒಟ್ಟಾರೆಯಾಗಿ ಯಶಸ್ವಿ‌ಯಾಗಿ ಪ್ರದರ್ಶಿತವಾಗುತ್ತಿರುವ ಸು ಫ಼್ರಂ ಸೋ‌. ಒಮ್ಮೆ‌ ನೋಡಲಡ್ಡಿಯಿಲ್ಲದ ಸಿನಿಮಾ. ಅದರೆ ಒಂದು ಮಾತು.ಯಾವ ನಿರೀಕ್ಷೆಯೂ‌ ಇಲ್ಲದೇ, ಹಾಗೇ ಸುಮ್ಮನೇ ಎಂಜಾಯ್ ಮಾಡಿ ಬನ್ನಿ. ಖುಷಿ ಪಡ್ತೀರ.

* ಮರೆಯುವ ಮುನ್ನ‌*

ಸದಭಿರುಚಿಯ, ನವಿರಾದ ಹಾಸ್ಯದ, ಸ್ತ್ರೀ‌ ಪ್ರಾಧಾನ್ಯತೆ ಇರುವ ಅಥವಾ ಹೊಸ ಅಲೆಯ ಸಿನಿಮಾಗಳನ್ನು ಕನ್ನಡಿಗರು ಎಂದೂ ಕೈ ಬಿಟ್ಟಿಲ್ಲ. ಕನ್ನಡಿಗರಿಗೆ ಸಿನಿಮಾದ ಕಂಟೆಂಟ್ ಮುಖ್ಯವೇ ಹೊರತು ಪಾನ್‌ಇಂಡಿಯಾ ಇಮೇಜು‌ ಇರುವ, ನಾಲ್ಕು‌ ವರ್ಷಕ್ಕೆ‌ ಒಂದು‌ ಸಿನಿಮಾ‌ ಮಾಡುವ ದುಬಾರಿ ಸ್ಟಾರ್ ಗಳ ಹೀರೋಯಿಸಮ್ಮುಗಳಲ್ಲ.

ಬಹುಶಃ ಸು‌ಫ಼್ರಂ ಸೋ ಚಿತ್ರ ಮಲೆಯಾಳಂ ನ‌ ಸಿನಿಮಾ‌ ಸೂತ್ರದಿಂದ ಪ್ರಭಾವಿತವಾಗಿದೆ ಅನಿಸುತ್ತದೆ . ಅಂದರೆ ಕಡಿಮೆ‌ ಬಜೆಟ್, ಸೂಪರ್ ಸ್ಟಾರ್ ಗಳಿಲ್ಲದ ನಟರು , ಸಹಜಾಭಿನಯಕ್ಕೆ ಒತ್ತು , ಪ್ರಾಕ್ಟಿಕಲ್ ಆಗಿರೋ ಕೌತುಕವನ್ನುಳಿಸಿಕೊಳ್ಳುವ ಕಥೆಗಳು, ಸರಳ ನಿರೂಪಣೆ, ಸಿಂಪಲ್‌ ಕಾಸ್ಟ್ಯೂಂಸ್, ಹಾಗೂ ಸುಂದರ ಪರಿಸರದಲ್ಲಿನ‌ ಚಿತ್ರೀಕರಣ ಇವು ಮಲೆಯಾಳಂ ಸಿನಿಮಾಗಳ ಹೈಲೈಟ್ಸ್.‌ ಅದೇ ಸೂತ್ರದ ಹಾದಿಯಲ್ಲಿ ಈಗ ಸು ಫ಼್ರಂ‌ ಸೋ ಕೂಡಾ ಸಾಗಿ ಗೆದ್ದಿದೆ.

ಈ‌ ಸಿನಿಮಾದ ಗೆಲುವು ಮತ್ತಷ್ಟು ಇಂತಹ ಆಕರ್ಷಕ, ಕೌತುಕ ಕಂಟೆಂಟ್ ಇರುವ ಸಿನಿಮಾಗಳ‌ ನಿರ್ಮಾಣಕ್ಕೆ ಪ್ರೇರೇಪಣೆಯಾಗಲಿ.‌ ಇಂತಹ ಸಿನಿಮಾಗಳ ಸಂಖ್ಯೆ ಹೆಚ್ಚಾದಾಗ ಸ್ಟಾರ್ ನಟರ ಪಿತ್ಥ ಕಡಿಮೆಯಾಗಿ ನಮ್ಮಲ್ಲಿನ‌ ಇತರೆ ಕ್ರಿಯಾಶೀಲ ಕಲಾವಿದರಿಗೂ ಹೆಚ್ಚೆಚ್ಚು ಅವಕಾಶಗಳು ದೊರೆತು‌ ಗಂಧದ ಗುಡಿಯ ಕಾಲದ ಕಂಪು ಮತ್ತೊಮ್ಮೆ ನಾಡೆಲ್ಲಾ ಹರಡಬಹುದೇನೋ.!

ಪ್ರೀತಿಯಿಂದ….


  • ಹಿರಿಯೂರು ಪ್ರಕಾಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW