‘ಪಯಣಿಗ’ ಕವನ – ಎ.ಎನ್.ರಮೇಶ್. ಗುಬ್ಬಿ

“ಇದು ಜೀವನ ಪಯಣದ ಕವಿತೆ. ಜೀವದ ನಡಿಗೆಯ ಭಾವಗೀತೆ. ಅನುದಿನವೂ ಅನಿರೀಕ್ಷಿತ, ಆಕಸ್ಮಿಕಗಳ ನಡುವೆ ಆಶ್ಚರ್ಯಚಕಿತರಾಗಿ ನಡೆಯುವ, ಅನುಕ್ಷಣವೂ ನಶ್ವರ, ಅನಿಶ್ಚತೆಗಳ ನಡುವೆ ಅನಿವಾರ್ಯವಾಗಿ ನಡೆಯಲೇಬೇಕಾದ ಬದುಕಿನ ಪಯಣವಿದು. ಹುಟ್ಟಿನಿಂದ ಸಾವಿನವರೆಗೆ ನಿಲ್ಲದೆ ಸಾಗುವ ಈ ನಡಿಗೆಯಲ್ಲಿ ಏನೆಲ್ಲ ಬಂಧ-ಬಂಧನಗಳು.? ಎಷ್ಟೆಲ್ಲ ರಿಂಗಣ-ತಲ್ಲಣಗಳು?. ಹಾದಿ, ಗಮ್ಯ, ಗುರಿ ಏನೊಂದು ನಮ್ಮ ಅಂಕೆಯಲ್ಲಿಲ್ಲದೆ ನಡೆಯುತ್ತಲೇ ಇರುವ ಪಯಣಿಗರು ನಾವು. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಅಮ್ಮನ ಮಡಿಲಿಂದ ಮೆಲ್ಲಜಾರಿ ಧರೆಗಿಳಿದು
ನೆಲವ ಮೀಟಿ ಮೀಟಿ ಕೈಕಾಲುಗಳ ಬಡಿದು
ಮೊದಲ ಬಾರಿ ತೆವಳಲಾರಂಭಿಸಿದ ಮೇಲೆ
ಬುವಿಯ ಬಾಳಪಯಣ ಆರಂಭವಾದದ್ದು.!

ಮುಂದೆ ಅಂಬೆಗಾಲನಿಡುತ ಮುಂದೆ ಸಾಗಿದೆ
ನಂತರ ಮೆಲ್ಲನೆದ್ದು ಜೋಲಿ ಹೊಡೆದು ನಿಂದು
ಪುಟ್ಟ ಪುಟ್ಟ ಹೆಜ್ಜೆಯಿಡುತ ಹಾಗೆ ಎಡವಿ ತಡವಿ
ನಡಿಗೆ ಕಲಿತು ಹಾದಿ ಅರಿತು ಮುಂದೆ ನಡೆದೆ.!

ಹೊಸ್ತಿಲದಾಟಿ ಬೀದಿಗೆ ಬಂದೊಡನೆ ಸಂಭ್ರಮ
ಗೆಳೆಯ ಗೆಳತಿ ಬಂಧು ಬಳಗ ಹೆಜ್ಜೆ ಕಲೆತು
ಗೆಜ್ಜೆ ಬೆರೆತು ಪಯಣದ ಹೊಸತು ಸರಿಗಮ
ಬಂಧ ಬೆಸುಗೆ ಕೂಡಿ ನಡೆದಿರೆ ಹಾದಿ ಸುಗಮ.!

ನಲಿವ ನಡಿಗೆ ಸ್ತಬ್ದವಾದದ್ದು ಅಂದೆ ಮೊದಲು
ಬದುಕು ಬೆಚ್ಚಿದ್ದು ಹೆಜ್ಜೆಗಳಿಗೆ ಕ್ಷಣ ಗರಬಡಿದದ್ದು
ಜೊತೆಯ ಗೆಳೆಯ ಅರ್ಧಕ್ಕೆ ನಡೆಯ ನಿಲ್ಲಿಸಿದಾಗ
ಬಾಳಪಯಣ ಶಾಶ್ವತವಲ್ಲವೆಂದು ಅರಿವಾದಾಗ.!

ಮುಂದೆ ಮತ್ತೆ ಮತ್ತೆ ಬೆಚ್ಚಿತು ಬಿಕ್ಕುತಿತ್ತು ನಡಿಗೆ
ತಂಗಿ ಅಮ್ಮ ಅಪ್ಪ ಗುರು ಗೆಳೆಯ ಬಂಧುಬಳಗ
ಒಬ್ಬೊಬ್ಬರಾಗಿ ಪಯಣದಿಂದ ಕಳಚಿಕೊಂಡಾಗ
ಕಾಲ ಒಬೊಬ್ಬರನೆ ಹಾಗೆ ಕಸಿದು ಕೊಳ್ಳುವಾಗ.!

ಹೆತ್ತವರು ಹೊತ್ತವರು ಅಡಿಗಡಿಗೆ ಒಡನಿದ್ದವರು
ಎಲ್ಲರ ಕಳೆದುಕೊಂಡರು ನನ್ನ ಪಯಣ ಸಾಗಿದೆ
ಸಂತೆಯ ನೆನಪುಗಳು ಕಾಡುತಿರಲು ಕನವರಿಸಿ
ನೀರವ ಮೌನದಲಿ ನಾನೊಬ್ಬ ನಡೆಯುತ್ತಿದ್ದೇನೆ.!

ಈಗ ಹೆಜ್ಜೆಹೆಜ್ಜೆಗೂ ಒಂದು ಪ್ರಶ್ನೆ ಪೀಡಿಸುತಿದೆ
ಸಹ ಪಯಣಿಗರ ಕಂಬನಿಯಿಟ್ಟು ಹೆಗಲುಕೊಟ್ಟು
ಬೀಳ್ಕೊಡಿಗೆ ಕೊಟ್ಟ ನಾನು ಅದೃಷ್ಟವಂತನಾ.?
ಸಕಲರ ಕಳೆದುಕೊಂಡು ಕಡೆಗೆ ಕಣ್ಣೀರಿಡುವವರೂ
ಗತಿಯಿಲ್ಲದೆ ಒಬ್ಬಂಟಿಯಾಗಿ ಗತಿಸುವ ನತದೃಷ್ಟನಾ.?


  • ಎ.ಎನ್.ರಮೇಶ್. ಗುಬ್ಬಿ  (ಲೇಖಕರು, ಕವಿಗಳು), ಕೈಗಾ

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW