‘ವರ್ತಮಾನ ಮತ್ತು ಅಗಣಿತಕಾಲದ ನಡುವೆ…’ ಜೀವನ ಹೇಗಿದೆ ಎನ್ನುವ ಕುರಿತು ಕವಿ ಮೇಗರವಳ್ಳಿ ರಮೇಶ್ ಅವರು ಬರೆದಂತಹ ಕವಿತೆಯಿದು, ಎಲ್ಲರೂ ಓದಿ…
ದಿಗಿಲುಗೊಳಿಸುತ್ತವೆ ಎಲ್ಲವೂ ನಮ್ಮನ್ನು:
ನಾನು ಏನಾಗಿದ್ದೇನೆ, ಮುಂದೆ ಏನಾಗುತ್ತೇನೆ
ಎನ್ನುವುದನ್ನು ಬೇರ್ಪಡಿಸುತ್ತದೆ ಕಾಲ
ಹಾವನ್ನು ಕತ್ತರಿಸುವ ಕುಡುಗೋಲಿನ ಹಾಗೆ.
ಪ್ರಿಯೆ, ನಮ್ಮಿಬ್ಬರ #ಪ್ರೀತಿಯಿಂದಾಚೆ
ನಮ್ಮಿಬ್ಬರ ಹೆಸರುಗಳು ಮೇಲೇಳುತ್ತವೆ
ನನ್ನ ನಿನ್ನ ನಡುವೆ.
ಮುರಿದ ಪ್ರತಿಮೆಗಳನ್ನು ಹೊತ್ತು ನಡೆಯುತ್ತಾರೆ ಜನ.
ಹೊರಗೆ ರಾತ್ರಿ ಉಸಿರಾಡುತ್ತದೆ,
ಮೈಚಾಚಿ ಹರಡಿಕೊಳ್ಳುತ್ತದೆ.
ಅದರ ತುಂಬಾ ಕಪ್ಪು ಎಲೆಗಳು.
ನನ್ನ ದೇಹ ನಿನ್ನ ದೇಹದ ಮೂಲಕ
ನಿನ್ನ ದೇಹ ನನ್ನ ದೇಹದ ಮೂಲಕ
ತಮ್ಮ ದಾರಿ ಕಂಡುಕೊಳ್ಳುತ್ತವೆ.
ಮೈಚಾಚಿ ಮಲಗಿಲ್ಲಿ ಪ್ರಿಯೆ
ಕಡಲಲೆಗಳು ತಂದು ಚೆಲ್ಲುವ ನೊರೆಗಳ ರಾಶಿಯ
ಈ ಕಿನಾರೆಯ ಮರಳಿನ ಮೇಲೆ.
ಅರಿವಿಲ್ಲದೇ ಪರವಶವಾಗಿ ಬಿಡುತ್ತದೆ
ನಮ್ಮ ತುಂಬು ಬದುಕಿಲ್ಲಿ.
ನೀನೂ ರಾತ್ರಿಗೆ ಸೇರಿದವಳೇ, ರಾತ್ರಿ ರಾಣಿ
ಮಲಗು, ಮೈಚಾಚು, ಉಸಿರಾಡು ಮಿಡಿಯುವುದು ಹೃದಯ.
ಒಡೆದ #ನಕ್ಷತ್ರದ ಚೂರುಗಳು ಅದೋ ಅಲ್ಲಿ, ಆಗಸದಲ್ಲಿ
ನಮ್ಮಿಬ್ಬರ ಪ್ರೀತಿಯನ್ನೂ ಮೀರಿ
ರಕ್ತ ಸಂಚಾರ ನಿಲ್ಲುವುದು ಧಮನಿಗಳಲ್ಲಿ
ವರ್ತಮಾನ ಮತ್ತು ಅಗಣಿತಕಾಲದ ನಡುವೆ.
- ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಕವಿಗಳು)
