ಆದಿಯೂ….. ನೆಟ್ ನ ಪಾಠವೂ… ಪುಸ್ತಕ ಪರಿಚಯ



ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾಗಿರುವ ಶ್ರೀ ರವೀಂದ್ರರವರು ‘ಆದಿಯೂ….. ನೆಟ್ ನ ಪಾಠವೂ’ ಕವನದಲ್ಲಿ ಇಂದಿನ ಮಕ್ಕಳು ಬಳಸುವ ಪದಗಳನ್ನು ಬಳಸಿದ್ದಷ್ಟೇ ಅಲ್ಲ, ಮುದ್ರಣವು ದೊಡ್ಡ ಅಕ್ಷರದಲ್ಲಿರುವುದರಿಂದ ಅಜ್ಜಂದಿರು ಕನ್ನಡಕವಿಲ್ಲದೆ ಓದಿ ಮೊಮ್ಮಕ್ಕಳಿಗೆ ಹೇಳಿಕೊಡಬಹುದು ಎನ್ನುತ್ತಾರೆ ಪುಸ್ತಕ ಪರಿಚಯ ಮಾಡಿದ ಲೇಖಕರಾದ ರಘುರಾಂ ಅವರು, ಎಲ್ಲರೂ ತಪ್ಪದೆ ಓದಿ…

ಬೆಕ್ಕೆ, ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ…. ಈ ಹಾಡನ್ನು ಸಣ್ಣವರಾಗಿದ್ದಾಗ ಯಾರಾದರೂ ಕೇಳದೇ ಇರುವವರು ಇದ್ದಾರೆಯೇ? ನಾವೆಲ್ಲ ಅಕ್ಷರ ಕಲಿತಿದ್ದು ಆರು ವರ್ಷಗಳು ಆದ ನಂತರ ಸೇರಿದ ಒಂದನೇಯ ತರಗತಿಯಲ್ಲಿ. ಆದರೂ ಈ ಹಾಡು ಮಾತ್ರ ಬಹುಷಃ ಮೂರು ವರ್ಷದ ಮಕ್ಕಳಿಗೊ ಗೊತ್ತಿರುತ್ತಿತ್ತು. ನಂತರ ಕಲಿತಿದ್ದೆ ಬೊಮ್ಮನಹಳ್ಳಿಯ ಕಿಂದರಜೋಗಿ ಹಾಡು. ಅಮ್ಮನೂ ಎಲ್.ಎಸ್. ದಾಟಿದವರಲ್ಲ. ಆದರೂ ಎಲ್ಲಾ ಮಕ್ಕಳ ಹಾಡುಗಳನ್ನು ಎಲ್ಲರ ಬಾಯಲ್ಲಿ ಬರುವ ಹಾಗೆ ಮಾಡಿದ್ದರು. “ಮನೆಯ ಮೊದಲ ಪಾಠ ಶಾಲೆ, ತಾಯಿ ತಾನೆ ಮೊದಲ ಗುರುವು” ಎಂದು ಆನಾದಿ ಕಾಲದಿಂದ ಎಲ್ಲರೂ ಹೇಳಿಕೊಂಡು ಬಂದಿರುವ ಮಾತು. ಅದು ಅಕ್ಷರಶಃ ಸತ್ಯವಾಗಿತ್ತು. ಅದನ್ನೆಲ್ಲ ಹಾಡಿಕೊಂಡು ಬೆಳದವರು, ಆಮೇಲೆ ಅವರ ಮಕ್ಕಳನ್ನು ಎರಡೂವರೆ ವರ್ಷ ಇರುವಾಗಲೇ ಸಮವಸ್ತ್ರ ಹಾಕಿಸಿ, ಬೆನ್ನ ಮೇಲೆ ಪುಸ್ತಕ, ಬುತ್ತಿಯ ಗಂಟು ತುಂಬಿಸಿ ಶಿಶುಮಂದಿರಗಳಿಗೆ ಕಳುಹಿಸಿದ ನೆನಪು ಇರಬಹುದು! ಅವರೆಲ್ಲಾ ಈಗ ಅವರೆಲ್ಲಾ ದೊಡ್ಡವರಾಗಿ ತಾತಂದಿರಾಗಿದ್ದಾರೆ! ಈಗ ಅವರ ವ್ಯಾಟ್ಸಪ್ ಸ್ಟೇಟಸ್ ನೋಡಿ! ಅವರೆಲ್ಲರೂ ತಮ್ಮ ಮೊಮ್ಮಕ್ಕಳ ಜೊತೆ ಇರುವ ಚಿತ್ರ ಇರುತ್ತದೆ. ಅದರಲ್ಲೇನೊ ವಿಶೇಷ! ಅದು ತಾತಂದಿರು ಮೊಮ್ಮಕ್ಕಳ ಜೊತೆ ಉದ್ಯಾನವನದಲ್ಲೋ ವಿಹಾರ ಹೋಗುವ ಚಿತ್ರವೂ ಅಥವ ಆಡುತ್ತಿರುವ ಆಟದ ಚಿತ್ರವೋ ಆಗಿರುವುದಿಲ್ಲ! ಮೊಮ್ಮಕ್ಕಳು ಮೇಜಿನ ಮೇಲೆ ಇರುವ ಲ್ಯಾಪ್‌ಟಾಪಿನಲ್ಲಿ ಝೂಮ್ ಪಾಠಶಾಲೆಯಲ್ಲಿ ಇರುವ ದೃಶ್ಯ ಕಾಣಸಿಗುತ್ತದೆ. ಮಗುವಿನ ಪಕ್ಕದಲ್ಲಿ ಹಾಜರಾತಿ ಹಾಕುವಾಗ ಟೀಚರ್ ಗೆ ವಿಡಿಯೋ ಹಾಕಿ ಮುಖ ತೋರಿಸುವ ಸೊಸೆ, ನಂತರ ತನ್ನ ರೂಮಿಗೆ ಹೋಗಿ ಮನೆಯಲ್ಲೇ ಕಛೇರಿಯ ಕೆಲಸ ಪ್ರಾರಂಭ ಮಾಡಿದರೆ, ಮಗುವಿನ ಬಳಿ ಇರುವುದೇ ತಾತನ ಕೆಲಸ!

(ಆದಿಯೂ….. ನೆಟ್ ನ ಪಾಠವೂ… ಕವನ ಸಂಕಲನದ ಲೇಖಕರಾದ ಬೆಂಗಳೂರು ಶ್ರೀನಿವಾಸ್ ರಾವ್ ರವೀಂದ್ರ)

ಮನೆಯೇ ಮೊದಲ ಪಾಠ ಶಾಲೆ ಎನ್ನುವ ಮಾತು ಈ ತರಹದಲ್ಲಿ ಜಾರಿಗೆ ಬರುತ್ತದೆ ಎಂದು ಯಾರು ಅಂದು ಕೊಂಡಿರಲಿಲ್ಲ. ಆದರೆ ನೋಡಿ ತಾಯಿಯೇ ಮೊದಲು ಗುರು ಜಾಗದಲ್ಲಿ ಈಗ ಚತುರವಾಣಿ ಬಂದಿದೆ. ಹೊರಗಡೆ ಪ್ರಪಂಚವನ್ನ ತೆರೆದಿರುವ ಮನೆಯ ಕಿಟಕಿ, ಬಾಗಿಲುಗಳ ಮೂಲಕ ನೋಡದೆ, ಲ್ಯಾಪ್‌ಟಾಪಿನ “ವಿಂಡೋಸ್” ಮೂಲಕ ತೋರಿಸುವ ಅನಿವಾರ್ಯತೆ ಬಂದಿದೆ. ಈ ಸಮಯದಲ್ಲಿ ಮಕ್ಕಳ ಮನಸ್ಸನ್ನು ಅರಳಿಸುವ ಮಕ್ಕಳ ಗೀತೆಗಳ ಹೊಸ ಪುಸ್ತಕವೊಂದನ್ನು ಶ್ರೀಯುತ ಬೆಂ.ಶ್ರೀ. ರವೀಂದ್ರ ಹೊರ ತಂದಿದ್ದಾರೆ. ಅದುವೇ ” ಆದಿಯೂ… ನೆಟ್ ಪಾಠವೂ”.

ಮೊದಲ ಪದ್ಯದ ರೇಖಾ ಚಿತ್ರ ನೋಡಿದರೆ ಸಾಕು, ಕವನಗಳ ಆಶಯ ತಿಳಿಯುತ್ತದೆ! ಮರದಲ್ಲಿ ಕನ್ನಡ ಅಕ್ಷರ ಮಾಲೆ ಹೂವು, ಹಣ್ಣಾಗಿ ಬಂದಿವೆ! ಆದರೆ ಈ ಕವನ ಸಂಕಲನದಲ್ಲಿ 70 ರೀತಿಯ ವಿವಿಧ ಹೂವು, ಹಣ್ಣುಗಳು ತುಂಬಿವೆ. ಇದು ಕನ್ನಡ ವರ್ಣ ಮೂಲೆಯಲ್ಲಿ ಇರುವ 49 ಅಕ್ಷರಗಳಿಗಿಂತ ಹೆಚ್ಚು!

ಬೇಸಿಗೆ ರಜದಲ್ಲಿ ಗುಬ್ಬಿ, ಬೆಕ್ಕು, ನಾಯಿಯ ಪ್ರಪಂಚದಲ್ಲಿ ಆಡುವ ಸಣ್ಣ ಮಗು ಆದಿ ನಂತರ ಮುಂಗಾರಿನ ಸವಿ ಅನುಭವಿಸುತ್ತಾನೆ. ಬುದ್ದಿ ಬರಲು ಪ್ರಾರಂಭ ಆಗುವ ಹೊತ್ತಿಗೆ, ಪಂಚತಂತ್ರದ ನೀತಿ ಕಥೆಗಳನ್ನು ಓದುತ್ತಾನೆ. ಸ್ವಲ್ಪ ದೊಡ್ಡವನಾದರೆ ಚೇಷ್ಟೆ ಮಾಡುವ ವಂಡರ್ ಬಂಡಲ್ ಆದ ಆದಿ, ತಾತ ಬರುವುದು ತಡವಾದರೆ ಚಡಪಡಿಸುತ್ತಾನೆ. ಹೋಳಿಯ ಬಣ್ಣದಲ್ಲಿ ಮುಳುಗೇಳುತ್ತಾ, ಕ್ರಿಕೆಟ್ ಆಡುತ್ತಾ, ಅಜ್ಜಿ ಮಾಡಿದ ಚಕ್ಕುಲಿಯ ತಿನ್ನುತ್ತಾ ಇದ್ದ ಆದಿಗೆ ಬೇಸಿಗೆ ರಜೆಯ ಆಟದ ಮಜವೇ ಇರಲಿ, ಹುಟ್ಟು ಹಬ್ಬದ ಸಡಗರ ಸಂಭ್ರಮವೇ ಇರಲಿ ಆದಿಯ ಮನಸ್ಥಿತಿ ಕಷ್ಟವರಿಯವದ, ಕುತೂಹಲದಿಂದ ತುಂಬಿರುವ ಮಕ್ಕಳ ಮನಸ್ಥಿತಿಯ ಕನ್ನಡಿ ಹಿಡಿದ ಹಾಗಿದೆ. ಆದರೆ ಯಾಕಳತಾಕುಂತಿಯಲ್ಲಿ ಹುತಾತ್ಮ ಎಂದರೆ ಎನು ಎಂದು ಅರಿಯದ ಮಗುವೊಂದು ದುಃಖಿಸುವ ದೃಶ್ಯ ಮನಕದಡುತ್ತದೆ. ಅದರ ಜೊತೆಗೆ ಪುಣ್ಯ ಕೋಟಿ ಗೋವನ್ನು ಬದುಕಿಸಿ ತಾನು ಪ್ರಾಣ ಬಿಟ್ಟ ಹುಲಿಯ ಕಂದನು ತನಗೆ ಬೇಟೆಯಾಟವ ಕಲಿಸುವವರು ಯಾರು? ಎಂದು ಕೇಳುವ ಮಾತು ಮನ ತಟ್ಟುವಂತೆ ಅರ್ಬುತನ ಹಾಡಿನಲ್ಲಿ ಕೇಳಿ ಬಂದಿದೆ. ಕೃಷ್ಣಾಷ್ಟಮಿಯಲಿ ಬಗೆ, ಬಗೆಯ ತಿಂಡಿ ತಿನ್ನುವ ಆದಿ, ದಸರಾದ ವೈಭವವನ್ನು ನೋಡುತ್ತಾನೆ, ಪಿತಾಮಹನನ್ನು ನೆನೆಯುತ್ತಾ, ಆವರಿಸಿರುವ ಕೊರೋನ ಕತ್ತಲನ್ನು ಹೊಡೆದೋಡಿಸಲು ಕೊನೆಯದಾಗಿ ದೀಪಾವಳಿಯ ದೀಪ ಹಚ್ಚಿದ್ದಾನೆ.

“ಆದಿಯೂ… ನೆಟ್ ನ ಪಾಠವೂ” ಎಂಬ ತಲೆ ಬರಹ ನೋಡಿದಾಗ ಇದು #ಗಂಡುಮಕ್ಕಳು ಅಂತರ್ಜಾಲದಲ್ಲಿ ಕೇಳುವ ಪಾಠದ ಬವಣೆ ಬಗ್ಗೆ ಮಾತ್ರ ಎಂದು ಕೊಳ್ಳುವ ಸಾಧ್ಯತೆ ಇದೆ. ಬಾಲಕನ ಚಿತ್ರಕೂಡ ಮುಖಪುಟದಲ್ಲಿ ಇದೆ!. ಆದರೆ “ಆದಿ”ಯ ಅರ್ಥ ಇಲ್ಲಿ “ಪ್ರಾರಂಭ” ಮಾತ್ರ. “ಪಾಠ ಶಾಲೆ ನೆಟ್ ನಿಂದ ಪ್ರಾರಂಭ” ಎಂದುಕೊಂಡರೆ, ಗೊಂದಲ ಬಗೆಹರಿಯುತ್ತದೆ. ಮನೆಯಲ್ಲಿ ಅದಿತ್ಯ ಇರಲಿ ಅಥವ ಅದಿತಿಯೇ ಇರಲಿ, ಇಬ್ಬರಿಗೂ ಆಗಬಹುದಾದ ಮಕ್ಕಳ ಕವನಗಳು ಇಲ್ಲಿವೆ!



ಬ್ಯಾಂಕ್ ಉದ್ಯೋಗದಲ್ಲಿ ದೀರ್ಘಕಾಲ ಕೆಲಸ ಮಾಡಿ ನಿವೃತ್ತರಾಗಿರುವ ಶ್ರೀ ರವೀಂದ್ರರವರು ಈ ಮಕ್ಕಳ ಕವನಗಳಲ್ಲಿ ಈಗೀನ ಮಕ್ಕಳು ಬಳಸುವ ಪದಗಳನ್ನು ಉಪಯೋಗಿಸಿರುವುದು ಮಕ್ಕಳನ್ನು ತಲುಪಲು ಬಹುಶಃ ನೆರವಾಗುವುತ್ತದೆ. ಅದರಂತೆ ದೊಡ್ಡ ಅಕ್ಷರಗಳ ಮುದ್ರಣ ಕನ್ನಡಕ ಇಲ್ಲದೇ ಓದಿ ಮೊಮ್ಮಕ್ಕಳಿಗೆ ಹೇಳಿಕೊಡಲು ತಾತಂದಿರಿಗೆ ಅನುಕೂಲವಾಗುತ್ತದೆ! ರೈನ್, ರೈನ್ ಗೋ ಅವೇ……ಹಂಪ್ಟಿ, ಡಂಮ್ಟಿ, ಹ್ಯಾಡ್ ಎ ಗ್ರೇಟ್ ಫಾಲ್,…. ಎಂದು ಈಗೀನ ಮಕ್ಕಳಿಗೆ ಹೇಳಿ ಕೊಡುವುದು ಅಷ್ಟು ಸುಲಭದ ಕೆಲಸ ಅಲ್ಲ. ಮಳೆ ಯಾಕೆ ಹೋಗಬೇಕು? ಹಂಪ್ಟಿ ಯಾಕೆ ಕೆಳಗೆ ಬಿದ್ದ? ಎಂದು ಕೇಳುವ ಮಕ್ಕಳಿಗೆ ಈ ಕವನಗಳು ಒಂದು ಹೊಸ ದಾರಿ ತೋರಿಸುತ್ತಿವೆ. ಈ ದಾರಿಯಲ್ಲಿ ಬಣ್ಣ ಬಣ್ಣದ ಹೂವಿನ .ಗಿಡಗಳು ಮತ್ತು ಫಲವತ್ತಾದ ಹಣ್ಣಿನ ಮರಗಳಿವೆ. ಈ ತೋಟದಲ್ಲಿ ಕೆಲವೊಂದು ಹೂವು ಮನ ಅರಳಿಸಿದರೆ, ಕೆಲವೊಂದು ಹಣ್ಣುಗಳು ಜ್ಞಾನದ ಹಸಿವನ್ನು ತಣಿಸುತ್ತದೆ.

ಶ್ರೀಯುತ ಬೆಂ.ಶ್ರೀ ರವೀಂದ್ರ ರಚಿತ ಮಕ್ಕಳ ಕವಿತೆಗಳು “ಆದಿಯೂ….. ನೆಟ್ ನ ಪಾಠವೂ” ಈ ಕೊರೋನ ಸಂಕಷ್ಟದ ಸಮಯದಲ್ಲಿ ಮನೆಯಲ್ಲಿ ಕೂಡುಹಾಕಿ ಮಕ್ಕಳಿಗೆಲ್ಲಾ #ನೆಟ್_ಪಾಠ ಕೇಳಿ ಎಂದು ಹೇಳುವ ಅಮ್ಮಂದಿರಿಗೆ/ತಾತಂದಿರಿಗೆ ತಾವು ತುಳಿದ ದಾರಿಯಲ್ಲೇ ಈಗೀನ ಮಕ್ಕಳನ್ನು ಕರೆದೊಯ್ಯುಲು ಒಂದು ವರವಾಗಿ ಬಂದಿದೆ!

ಕವಿಗಳಿಗೆ ಧನ್ಯವಾದಗಳೊಂದಿಗೆ.


  • ಎನ್.ವಿ.ರಘುರಾಂ (ನಿವೃತ್ತ ಅಧೀಕ್ಷಕ ಅಭಿಯಂತರ ವಿದ್ಯುತ್, ಬೆಂಗಳೂರು) 

5 2 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW