ಸರ್.ಸಿ.ವಿ.ರಾಮನ್ ಅವರ ಪರಿಣಾಮದ ಆವಿಷ್ಕಾಕರವನ್ನು ಗೌರವಿಸಲು ಭಾರತ ಸರ್ಕಾರವು 1986ರಲ್ಲಿ ಫೆಬ್ರವರಿ 28ನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ವೆಂದು ಗೊತ್ತುಪಡಿಸಿತು. ಆ ಹಿನ್ನೆಲೆಯಲ್ಲಿ ಪ್ರತಿವರ್ಷ ಭಾರತದಾದ್ಯಂತ ಫೆಬ್ರವರಿ 28 ರಂದು ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಕುರಿತು ಶಿಕ್ಷಕರಾದ ಆರ್.ಬಿ.ಗುರುಬಸವರಾಜ ಅವರು ವಿಜ್ಞಾನ ಲೋಕದ ಅಂಕಣದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಇಂದು ರಾಷ್ಟ್ರೀಯ ವಿಜ್ಞಾನ ದಿನ. ಸರ್.ಸಿ.ವಿ.ರಾಮನ್ ಅವರ ಬೆಳಕಿನ ಪರಿಣಾಮದ ದಿನ. ಅಂದರೆ ಬೆಳಕು ಪಾರದರ್ಶಕ ವಸ್ತುವಿನ ಮೂಲಕ ಹಾದುಹೋದಾಗ ಬೆಳಕಿನ ತರಂಗಾಂತರದಲ್ಲಿನ ಬದಲಾವಣೆ ಸಂಭವಿಸುತ್ತದೆ ಎಂಬ ಸತ್ಯವನ್ನು ಜಗತ್ತಿನ ತಿಳಿಸಿದ ದಿನ. ಅದಕ್ಕಾಗಿ ಏಷ್ಯಾದ ವಿಜ್ಞಾನಿಯೊಬ್ಬ, ಅದರಲ್ಲೂ ಭಾರತೀಯ ವಿಜ್ಞಾನಿಯೊಬ್ಬ ಮೊಟ್ಟ ಮೊದಲ ಬಾರಿಗೆ ನೊಬೆಲ್ ಪುರಸ್ಕಾರ ಸ್ವೀಕರಿಸಿದ ದಿನ. ರಾಮನ್ ಅವರ ‘ಬೆಳಕಿನ ಪರಿಣಾಮ’ದ ಸಂಶೋಧನೆಗಾಗಿ 1930ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಸರ್.ಸಿ.ವಿ. ರಾಮನ್ ಪರಿಣಾಮದ ಆವಿಷ್ಕಾಕರವನ್ನು ಗೌರವಿಸಲು ಭಾರತ ಸರ್ಕಾರವು 1986ರಲ್ಲಿ ಫೆಬ್ರವರಿ 28 ನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ವೆಂದು ಗೊತ್ತುಪಡಿಸಿತು. ಆ ಹಿನ್ನೆಲೆಯಲ್ಲಿ ಪ್ರತಿವರ್ಷ ಭಾರತದಾದ್ಯಂತ ಫೆಬ್ರವರಿ 28 ರಂದು ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.
ಭಾರತದ ಅಭಿವೃದ್ಧಿಗೆ ರಾಮನ್ ಬೆಳಕಿನ ಪರಿಣಾಮವು ಮಹತ್ವದ ಸಂಶೋಧನೆಯಾಗಿದೆ. ಇದು ಕೇವಲ ವಿಜ್ಞಾನ, ತಂತ್ರಜ್ಞಾನ, ಔಷಧಗಳು ಮಾತ್ರವಲ್ಲದೇ ಕಲೆ ಮತ್ತು ಸಾಂಸ್ಕøತಿಕ ಇತರ ವಸ್ತುಗಳ ಅಧ್ಯಯನದಲ್ಲಿ ಅನೇಕ ಅನ್ವಯಿಕೆಗಳನ್ನು ಹೊಂದಿದೆ. ರಾಮನ್ ಸರಳವಾದ ಪ್ರಯೋಗದ ಮೂಲಕ ಬೆಳಕಿನ ಹರಿವು ದ್ರವದ ಮೂಲಕ ಹಾದುಹೋದಾಗ, ದ್ರವದಿಂದ ಚದುರಿದ ಬೆಳಕಿನ ಒಂದು ಭಾಗವು ವಿಭಿನ್ನ ಬಣ್ಣವನ್ನು ಹೊಂದಿರುತ್ತದೆ ಎಂದು ಕಂಡುಹಿಡಿದನು. ಈ ಆವಿಷ್ಕಾಕರವು ವೈಜ್ಞಾನಿಕ ಸಮುದಾಯದಲ್ಲಿ ಕ್ರಾಂತಿಕಾರಿ ಎಂದು ಗುರುತಿಸಲ್ಪಟ್ಟಿತು. ಸಂಶೋಧನೆಯ ಘೋಷಣೆಯ ನಂತರದ ಮೊದಲ ಏಳು ವರ್ಷಗಳಲ್ಲಿ ಜಗತ್ತಿನ 700 ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಈ ವಿಷಯದ ಕುರಿತ ಪ್ರಬಂಧಗಳು, ಬರಹಗಳು ಪ್ರಕಟವಾಗಿದ್ದವು ಎಂದರೆ ಸಂಶೋಧನೆಯ ಪರಿಣಾಮ ಎಷ್ಟಿತೆಂಬುದು ತಿಳಿಯುತ್ತದೆ. ಇಂತಹ ಸಂಶೋಧನೆಯ ಮಹತ್ವ ಎಲ್ಲೆಡೆ ಹರಡಲಿ ಮತ್ತು ಇನ್ನಷ್ಟು ಹೊಸ ಹೊಸ ಸಂಶೋಧನೆಗಳು ಇದರ ಪಟ್ಟಿಗೆ ಸೇರಲಿ ಎಂಬ ಸದುದ್ದೇಶದಿಂದ ವಿಜ್ಞಾನ ದಿನವನ್ನು ಆಚರಿಸಲು ತೀರ್ಮಾನಿಸಿದ್ದು ಸರಿಯಾಗಿಯೇ ಇದೆ.

ಫೋಟೋ ಕೃಪೆ : google
ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆಯ ಮೂಲ ಉದ್ದೇಶವೆಂದರೆ ವಿಜ್ಞಾನದ ಪ್ರಾಮುಖ್ಯತೆ ಮತ್ತು ಅದರ ಅನ್ವಯದ ಸಂದೇಶವನ್ನು ಜನರಲ್ಲಿ ಹರಡುವುದು. ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತಿ ವರ್ಷ ಭಾರತದ ಪ್ರಮುಖ ವಿಜ್ಞಾನ ಉತ್ಸವಗಳಲ್ಲಿ ಒಂದಾಗಿ ಆಚರಿಸಲಾಗುತ್ತದೆ. ಇದರ ಇನ್ನಿತರೇ ಉದ್ದೇಶಗಳು ಹೀಗಿವೆ. ಜನರ ದೈನಂದಿನ ಜೀವನದಲ್ಲಿ ವೈಜ್ಞಾನಿಕ ಅನ್ವಯಿಕೆಗಳ ಮಹತ್ವದ ಬಗ್ಗೆ ಸಂದೇಶವನ್ನು ವ್ಯಾಪಕವಾಗಿ ಹರಡುವುದು. ಮಾನವರ ಕಲ್ಯಾಣಕ್ಕಾಗಿ ವಿಜ್ಞಾನ ಕ್ಷೇತ್ರದಲ್ಲಿನ ಎಲ್ಲಾ ಚಟುವಟಿಕೆಗಳು, ಪ್ರಯತ್ನಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸುವುದು. ದೇಶದ ಎಲ್ಲಾ ಸಮಸ್ಯೆಗಳನ್ನು ಚರ್ಚಿಸುವುದು ಮತ್ತು ವಿಜ್ಞಾನದ ಅಭಿವೃದ್ಧಿಗಾಗಿ ಹೊಸ ತಂತ್ರಜ್ಞಾನಗಳನ್ನು ಕಾರ್ಯಗತಗೊಳಿಸುವುದು. ದೇಶದ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು. ಜನರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವುದು. ಹೀಗೆ ವಿವಿಧ ಉದ್ದೇಶಗಳ ಈಡೇರಿಕೆಗಾಗಿ ಈ ದಿನವನ್ನು ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.
ವಿಜ್ಞಾನ ದಿನದ ಉದ್ದೇಶ ಸಾಧನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಚಾರ ಗೋಷ್ಟಿಗಳು, ಚರ್ಚೆ-ಸಂವಾದಗಳು, ರಸಪ್ರಶ್ನೆ ಸ್ಪರ್ಧೆಗಳು, ಉಪನ್ಯಾಸಗಳು
ನಡೆಯುತ್ತವೆ. ವಿವಿಧ ವಿಷಯಗಳು ಮತ್ತು ಪರಿಕಲ್ಪನೆಗಳನ್ನು ಆಧರಿಸಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಲಾಗುತ್ತದೆ. ರಾಷ್ಟ್ರೀಯ ಮತ್ತು ರಾಜ್ಯ ವಿಜ್ಞಾನ ಸಂಸ್ಥೆಗಳು ತಮ್ಮ ಇತ್ತೀಚಿನ ಸಂಶೋಧನೆಗಳನ್ನು ಪ್ರದರ್ಶಿಸುತ್ತಾರೆ. ಸಾರ್ವಜನಿಕ ಭಾಷಣಗಳು, ರೇಡಿಯೋ-ಟಿವಿ ಟಾಕ್ ಶೋಗಳು, ವಿಜ್ಞಾನ ಚಲನಚಿತ್ರಗಳ ಪ್ರದರ್ಶನಗಳು, ರಾತ್ರಿ ಆಕಾಶದ ವೀಕ್ಷಣೆ, ವಿಜ್ಞಾನದ ಹೊಸ ಹೊಸ ಯೋಜನೆಗಳು ಮತ್ತು ಸಂಶೋಧನಾ ಪ್ರದರ್ಶನಗಳು, ವಿಜ್ಞಾನ ಮಾದರಿ ಪ್ರದರ್ಶನಗಳು ಮತ್ತು ಇನ್ನೂ ಅನೇಕ ಚಟುವಟಿಕೆಗಳು ನಡೆಯುತ್ತವೆ.
ಇಷ್ಟು ಮಾಡಿದರೆ ವಿಜ್ಞಾನ ದಿನಾಚರಣೆ ಯಶಸ್ವಿಯಾಗುವುದೇ ಎಂಬ ಪ್ರಶ್ನೆ ಬರುತ್ತದೆ. ಇಲ್ಲ. ಇದರ ಜೊತೆಗೆ ಬಹು ಮುಖ್ಯವಾಗಿ ದೇಶದ ಜನರಲ್ಲಿ ವಿಜ್ಞಾನದ ಅರಿವು ಮೂಡಿಸುವುದು ಅಗತ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮೂಲ ವಿಜ್ಞಾನ ಮರೆಯಾಗಿ ಅನ್ವಯಿಕ ವಿಜ್ಞಾನ ಎಲ್ಲಡೆ ರಾರಾಜಿಸುತ್ತಿದೆ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಯಾವುದೇ ಮಹತ್ವದ ಮೂಲ ವಿಜ್ಞಾನದ ಸಂಶೋಧನೆಗಳು ನಡೆಯುತ್ತಿಲ್ಲ. ಕಾರಣವೇನೆಂದರೆ ಇಂದಿನ ವಿಜ್ಞಾನ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ಸಂಶೋಧಕರು ಮೂಲ ವಿಜ್ಞಾನವನ್ನು ಕಡೆಗಣಿಸಿದ್ದಾರೆ. ಒಂದು ವೇಳೆ ಸಂಶೋಧಕರು ಮೂಲ ವಿಜ್ಞಾನಕ್ಕೆ ಹೆಚ್ಚು ಮಹತ್ವ ನೀಡಿದ್ದೇ ಆದರೆ ರಾಮನ್ ಅವರಂತಹ, ಜಗದೀಶಚಂದ್ರ ಬೋಸ್ ಅವರಂತಹ ಮಹತ್ವದ ಸಂಶೋಧನೆಗಳು ಮುನ್ನಲೆಗೆ ಬರುತ್ತಿದ್ದವು.

ಫೋಟೋ ಕೃಪೆ : google
ಇದನ್ನು ಗಮನಿಸಿದರೆ ಇತ್ತೀಚಿಗೆ ಸಂಶೋಧನೆಗಳು ನಡೆಯುತ್ತಿಲ್ಲವೇ? ಎಂಬ ಮತ್ತೊಂದು ಪ್ರಶ್ನೆ ಎದುರಾಗುತ್ತದೆ. ಸಂಶೋಧನೆಗಳು ನಡೆಯುತ್ತಿವೆ. ಆದರೆ ಆಳವಾದ ಅಧ್ಯಯನದ ಸಂಶೋಧನೆಗಳು ನಡೆಯುತ್ತಿಲ್ಲ. ಎಲ್ಲವೂ ಮೇಲ್ಪದರದ ಸಂಶೋಧನೆಗಳಾಗುತ್ತಿವೆ. ಸಂಶೋಧನೆಗಳು ಸೀಮಿತ ಚೌಕಟ್ಟನ್ನು ಹೊಂದಿವೆ. ಹಿಂದಿನ ಸಂಶೋಧನೆಗಳಂತೆ ವಿಭಿನ್ನ ವ್ಯಾಪ್ತಿಯು ಇಲ್ಲವಾಗಿದೆ. ಇತ್ತೀಚಿನ ಸಂಶೋಧಕರಲ್ಲಿ ಆಳವಾದ ಅಧ್ಯಯನ ಹಾಗೂ ಬದ್ದತೆಯ ಕೊರತೆ ಎದ್ದು ಕಾಣುತ್ತದೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ವಿಜ್ಞಾನ ದಿನವು ಅರ್ಥಪೂರ್ಣವಾಗಬೇಕಾದರೆ ಕೆಲವು ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಶಾಲೆಗಳಲ್ಲಿ ವಿಜ್ಞಾನವನ್ನು ಒಂದು ವಿಷಯವನ್ನಾಗಿ ಕಲಿಸದೇ, ಅದು ನಮ್ಮ ಬದುಕಿನ ಹಾಗೂ ಭವಿಷ್ಯದ ಭಾಗ ಎಂದು ಕಲಿಸುವಂತಾಗಬೇಕು. ಅಂದರೆ ಪ್ರೌಢಶಾಲಾ ಹಂತದಿಂದಲೇ ಮಕ್ಕಳಿಗೆ ವಿಜ್ಞಾನ ಸಂಶೋಧನೆಯ ಆಸಕ್ತಿಯನ್ನು ಬೆಳೆಸಬೇಕಾಗಿದೆ. ಅದಕ್ಕಾಗಿ ಎಲ್ಲಾ ಪ್ರೌಢಶಾಲೆಗಳಲ್ಲಿ ಸುಸಜ್ಜಿತವಾಗಿ ಕಾರ್ಯನಿರ್ವಹಿಸುವ ವಿಜ್ಞಾನ ಪ್ರಯೋಗ ಶಾಲೆಗಳು ಬೇಕಾಗಿವೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಸಣ್ಣ ಸಣ್ಣ ಪ್ರಯೋಗಗಳನ್ನು ಸಂಶೋಧನೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಪಠ್ಯದ ಭಾಗವಾಗಿ ಚರ್ಚೆ, ಸಂವಾದ, ಗೋಷ್ಟಿಗಳಲ್ಲಿ ಭಾಗವಹಿಸುವ ಪಠ್ಯಕ್ರಮದ ಅಗತ್ಯವಿದೆ. ವಿಜ್ಞಾನ ವಿಷಯವನ್ನು ಕೇವಲ ತಾತ್ವಿಕ ಪರೀಕ್ಷೆಗೆ ಸೀಮಿತಗೊಳಿಸದೇ, ಪ್ರಾಯೋಗಿಕ ಪರೀಕ್ಷೆಗೂ ಅವಕಾಶ ಮಾಡಿಕೊಡಬೇಕಾಗಿದೆ. ನಗರ ಪ್ರದೇಶದ ಮಕ್ಕಳಿಗೆ ದೊರೆಯುವ ವೈಜ್ಞಾನಿಕ ಚಟುವಟಿಕೆಗಳು ಗ್ರಾಮೀಣ ಮಕ್ಕಳಿಗೂ ದೊರೆಯುವಂತಾಗಬೇಕಿದೆ. ವಿಜ್ಞಾನ ದಿನ ಕೇವಲ ಫೆಬ್ರವರಿ 28ಕ್ಕೆ ಮಾತ್ರ ಸೀಮಿತವಾಗದೇ ವರ್ಷವಿಡೀ ವಿವಿಧ ಚಟುವಟಿಕೆಗಳ ಮೂಲಕ ವಿಜ್ಞಾನವನ್ನು ಕಲಿಯುವ, ಅದನ್ನು ಬದುಕಿನ ಭಾಗವನ್ನಾಗಿಸುವ ಪ್ರಕ್ರಿಯೆ ನಡೆದರೆ ಭವಿಷ್ಯದಲ್ಲಿ ಭಾರತದ ವಿಜ್ಞಾನಿಗಳ ಸಂಖ್ಯೆ ಇಮ್ಮಡಿಯಾಗುತ್ತದೆ. ಅಲ್ಲವೇ?
- ಆರ್.ಬಿ.ಗುರುಬಸವರಾಜ – ಶಿಕ್ಷಕರು, ಹವ್ಯಾಸ ಬರಹಗಾರರು
