ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ‘ಯುಗಾದಿ’ ಕವನ ಸಂಕಲನದ ಕುರಿತು ಕೆ.ಆರ್.ಮಂಗಳಗೌರಮ್ಮ ಅವರು ಬರೆದಿರುವ ಪರಿಚಯವನ್ನು ತಪ್ಪದೆ ಓದಿ…
ಈ ಪುಸ್ತಕದ ಮುಖಪುಟ ಯುಗಾದಿ ಶೀಷಿ೯ಕೆಗೆ ಅನ್ವಥ೯ವಾಗಿ ಮೂಡಿಬಂದಿದೆ. ತಳಿರು, ತೋರಣ ಯುಗಾದಿಯನ್ನು ನೆನಪಿಸಿದರೆ, ಹೆಂಗೆಳೆಯರ ಚಿತ್ರ ಹಬ್ಬದ ಸಂಭ್ರಮವನ್ನು ಎತ್ತಿ ತೋರುತ್ತಿದೆ.
ಪುಸ್ತಕ : ಯುಗಾದಿ
ಕವಿ: ಶ್ರೀ ಚನ್ನಕೇಶವ ಜಿ ಲಾಳನಕಟ್ಟೆ
ಪುಟಗಳು: 88
ದರ: ರೂ.110/-
ಪ್ರಕಾಶಕರು : ಗುರು ಪ್ರಕಾಶನ, ಲಾಳನಕಟ್ಟೆ
ಮುನ್ನುಡಿಯನ್ನು ಬರೆದಿರುವ ಕಾಸರಗೋಡಿನ ಶ್ರೀ ರಾಧಾಕೃಷ್ಣ ಕೆ ಉಳಿಯತ್ತಡ್ಕರವರು ಹೇಳುವ “ಹೊಸತನ್ನು ಹುಡುಕುವದರಲ್ಲಿ ಕವಿ ಉತ್ಸುಕರಾಗಿದ್ದಾರೆ. ಶಬ್ದ, ಲಯಗಳನ್ನು ಬಳಸುವ ಕ್ರಿಯೆ, ರೂಪಕ, ಪ್ರತಿಮೆಗಳನ್ನು ಅಳವಡಿಸುವ ಕಲೆ ಅವರಿಗೆ ಸಹಜವಾಗಿಯೇ ಸಿದ್ಧಿಸಿದೆ” ಎಂಬುದು ಅಕ್ಷರಷಃ ಸತ್ಯವಾದ ಮಾತು. ಅಷ್ಟೇ ಅಲ್ಲ, ಸಿದ್ಧಿಸಿದ ಕಲೆಯನ್ನು ಕಾಯ೯ರೂಪಕ್ಕೆ ತರುವಲ್ಲಿನ ಅವರ ಶ್ರಮ, ಅದಕ್ಕಾಗಿ ಅವರು ವಿನಿಯೋಗಿಸುವ ಸಮಯ, ಶ್ರದ್ಧೆ ಅವರನ್ನು ಹತ್ತಿರದಿಂದ ಬಲ್ಲವರಿಗೆ ತಿಳಿಯದ್ದೇನಲ್ಲ.
ಹೊನ್ನುಡಿಯನ್ನು ಬರೆದಿರುವ ಕಾವ್ಯಕಲ್ಪವಲ್ಲಿ ಕಾವ್ಯನಾಮದ, ಶ್ರೀಮತಿ ವಿಜಯ ಪದ್ಮಶಾಲಿ ಮೇಡಂರವರು ” ಸಾಹಿತ್ಯ ಸರಸ್ವತಿ ಕೈಹಿಡಿದಳೆಂದರೆ ಪೂವ೯ ಜನ್ಮದ ಸುಕೃತವೇ ಸರಿ, ಅಂತಹವರ ಪಾಲಿಗೆ ಸೇರುವ ಕವಿ ಚನ್ನಕೇಶವ”, “ಒಬ್ಬ ವಿಧೇಯ ವಿದ್ಯಾಥಿ೯ಯಂತೆ ಹಿರಿ ಕಿರಿಯರೆಲ್ಲರಿಗೂ ಗೌರವ ಕೊಡುತ್ತಾ ಅವರಿಂದ ಸಲಹೆ ಹಾಗೂ ಮಾಗ೯ದಶ೯ನಗಳನ್ನು ಪಡೆದು ಅದನ್ನು ತಮ್ಮ ಬರವಣಿಗೆಯಲ್ಲಿ ಅಳವಡಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಔನ್ನತ್ಯಕ್ಕೇರುತ್ತಿರುವ ಸಾಹಿತ್ಯ ಕುಸುಮ ಇವರೆಂದರೆ ತಪ್ಪಾಗಲಾರದು. ಅವರು ಬೆಳೆಯುತ್ತಿರುವ ಪರಿ ನಿಜಕ್ಕೂ ಸೋಜಿಗ!” ಎನ್ನುತ್ತಾರೆ.
ಹೌದು ಕೇಶವರಿಗೆ ಸರಸ್ವತಿ ಚೆನ್ನಾಗಿ ಒಲಿದಿದ್ದಾಳೆ ಅಷ್ಟೇ ಅಲ್ಲ, ಅವರ ಕವನಗಳಲ್ಲಿ ಆಕೆ ನಾಟ್ಯದೇವಿಯಾಗುತ್ತಾಳೆ.
ಬೆನ್ನುಡಿ ಬರೆದಿರುವ ಶ್ರೀಮತಿ ವಿಜಯ ಲಕ್ಷ್ಮಿ ಎಸ್ ರವರು, “ಇವರ ಕವನಗಳೆಲ್ಲಾ ವೈವಿಧ್ಯತೆಯಿಂದ ಕೂಡಿದ್ದು ಅನುಭವಾಮೃತದಿಂದ ಮೂಡಿದ್ದು, ಸುಲಿದ ಬಾಳೆಯ ಹಣ್ಣನ್ನು ಜೇನಿನಲ್ಲಿ ಅದ್ದಿದಂತೆ” ಎಂದು ಕೇಶವರ ಕವನಗಳ ಸಾರವನ್ನು ಕೆಲವೇ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ.
ಒಟ್ಟು 70 ವಿವಿಧ ವಿಷಯಗಳನ್ನೊಳಗೊಂಡ ಕವನಗಳನ್ನು ಹೊತ್ತ ಈ ಸಂಕಲನದ ಮೊದಲ ಕವನವೇ “ಯುಗಾದಿ”
1. ಯುಗಾದಿ
ಯುಗಾದಿಯಂದು ಮನೆಯಲ್ಲಿ ರಂಗೋಲಿಯಿಂದ ಮೊದಲ್ಗೊಂಡು ನಡೆವ ಎಲ್ಲಾ ಸಂಭ್ರಮಗಳ ಹೂರಣವನ್ನು ಈ ಕವಿತೆಯಲ್ಲಿ ಅಡಗಿಸಿದ್ದಾರೆ. ಸೊಗಸಾದ ಕವನವಿದು.
27. ನನ್ನ ದೇಶ
ಈ ಕವನದಲ್ಲಿ ನಮ್ಮ ದೇಶದ ಎಲ್ಲಾ ಮಹತ್ವ ವಿಷಯಗಳನ್ನು ಅಡಕಮಾಡಿದ್ದಾರೆ ಕವಿ.
ಧಮ೯ದ ಮಾತಿದೆ, ಧ್ವಜದ ಮಾತಿದೆ, ಸೈನಿಕರ ಮಾತಿದೆ. ಇಷ್ಟೇ ಅಲ್ಲದೆ ದೇಶದ ಬೆನ್ನೆಲುಬು ರೈತರ ವಿಷಯವೂ ಇದೆ.
ಓದುವಾಗಲೇ ತಾನೇ ತಾನಾಗಿ, ಹಾಡಿನ ರೂಪದಲ್ಲಿ ಮನ ಗುನುಗಲಾರಂಭಿಸಿದರೆ ಅತಿಶಯೋಕ್ತಿಯೇನಲ್ಲ.
(ಯುಗಾದಿ ಕವನ ಸಂಕಲನಕಾರ ಚನ್ನಕೇಶವ ಜಿ ಲಾಳನಕಟ್ಟೆ)
26. ಬಾಳಪಥ
ಆಹಾ, ಬಾಳಿನಲ್ಲಿ ಹೇಗಿರಬೇಕು, ಜೀವನವನ್ನು ಹೇಗೆ ನಡೆಸಬೇಕೆಂಬ ಜೀವನ ಪಾಠವನ್ನು ಕೇವಲ 16 ಸಾಲುಗಳಲ್ಲೇ ಅಡಗಿಸಿಟ್ಟಿದ್ದಾರೆ.
15. ದಿನಕರ
ನಮಗೆ ಬೆಳಗಾಯಿತೆಂದು ತಿಳಿದು ನಾವು ಏಳಬೇಕಾದರೆ ಸೂಯ೯ ತನ್ನ ಕಾಯಕವನ್ನು ಮರೆಯದೆ, ಪೂವ೯ದಲಿ ಹುಟ್ಟಲೇಬೇಕು. ದಿನಕರನ ಕೆಲಸ ಬರೀ ಇಷ್ಟೆಯೇ? ಉಹೂ, ಇಷ್ಟೇ ಅಲ್ಲ, ಹಲವಾರು ಕಾಯ೯ಗಳು ಆತನ ದಿನಚರಿಯಲ್ಲಿದೆ ಎಂದು ತಮ್ಮ ಈ ಸರಳ ಸುಂದರ ಕವನದ ಮೂಲಕ ಕವಿ ಚನ್ನಕೇಶವರವರು ದಿನಕರನ ಸ್ಥುತಿಸಿದ್ದಾರೆ.
22. ಮಾತು
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ನಾಣ್ಣುಡಿ ನಮ್ಮ ಹಿರಿಯರ ಕಾಲದಿಂದಲೂ ಇದೆ.
ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ವಚನವೂ ಇದೆ.
ಅದೇ ಸಾಲಿಗೆ ಸೇರಿಸಬಹುದಾದ ಕವನ “ಮಾತು”.
ಮಾತು ಹೇಗಿರಬೇಕು, ಎಷ್ಟಿರಬೇಕು ಎಂದು ಹೇಳುವುದರ ಜೊತೆ, ಕೆಡುಕನ್ನಾಡುವವರ ಮಾತಿಗೆ ನಮ್ಮ ಪ್ರತ್ಯುತ್ತರ ಹೇಗಿರಬೇಕು ಎಂಬ ಬುದ್ಧಿಮಾತನ್ನೂ ಹೇಳುವ ಚಂದದ ಕವನವಿದು.
70. ಯುಗಾದಿ ಚೆಲುವು
ಈ ಸಂಕಲನದ ಕೊನೆಯ ಕವನವೂ ಸಹ ಯುಗಾದಿಯ ಬಗ್ಗೆಯೇ ಇದ್ದು ಕವನ ಸಂಕಲನದ ಶೀಷಿ೯ಕೆಯನ್ನು ಮತ್ತಷ್ಟು ಅಥ೯ಪೂಣ೯ವಾಗಿಸಿದೆ.
ಮೊದಲ ಕವನದಲ್ಲಿ ಮನೆಯಲ್ಲಿನ ಸಂಭ್ರಮ ತುಂಬಿ ತುಳುಕಿದರೆ, ಕೊನೆಯ ಈ ಕವನದಲ್ಲಿ ಯುಗಾದಿ ಸಮಯದಲ್ಲಿ ಪ್ರಕೃತಿಯಲ್ಲಿರುವ ಸಂಭ್ರಮಾಚರಣೆಯನ್ನು ಮನಮುಟ್ಟುವಂತೆ ಪದಗಳಲ್ಲಿ ಹಿಡಿದಿಡಲಾಗಿದೆ.
ಅಷ್ಟೂ ಕವನಗಳೂ ಸಹ ವೈವಿಧ್ಯ ವಿಷಯಗಳಿಂದ, ಆಕಷ೯ಣೀಯ ಶೀಷಿ೯ಕೆಗಳಿಂದ ಕೂಗಿ ಮನ ಸೆಳೆಯುವದರಲ್ಲಿ ಎರಡನೆ ಮಾತೇ ಇಲ್ಲ. ಎಲ್ಲವೂ ಸಹ ರಾಗಬದ್ಧವಾಗಿ ಹಾಡಲು ಯೋಗ್ಯವಾದ ಹಾಡುಗಳು.
ಕೇಶವ, ನಿಮ್ಮ ಎಲ್ಲ ಕವನಗಳೂ ಪುಸ್ತಕದಲ್ಲಿ ನೆಲೆಗೊಳ್ಳಲೆಂಬ ಹಾರೈಕೆಯೊಂದಿಗೆ…….
- ಕೆ.ಆರ್.ಮಂಗಳಗೌರಮ್ಮ