ಗಾಂಧಿವಾದಿ ಅಂತ ಹೆಸರುವಾಸಿಯಾಗಿದ್ದ ಕರಬಸ್ಸಪ್ಪನವರು ಕೊಲೆ ಮಾಡುತ್ತಾರಾ? ಅದು ಧೃವನಿಗೆ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿತು. ಅವರೆ ಕೊಂದರು ಅಂತ ಮಲ್ಲಪ್ಪ ಗೌಡರಿಗೆ ಹೇಗೆ ಗೊತ್ತಾಯಿತು.? ತಪ್ಪದೆ ಆ ರಾತ್ರಿ ಏನು ನಡೆಯಿತು ವಿಕಾಸ್. ಫ್. ಮಡಿವಾಳರ ಅವರ ಕತೆಯನ್ನು ಮುಂದೆ ಓದಿ…
ಧೃವ ಒಳಗಡೆ ಹೋಗುತ್ತಾ ಇದ್ದಂತೆ,
“ಇಲ್ಲಿಗೆ ಬರಾಕ ಏನು ತೊಂದ್ರೆ ಅಗ್ಲಿಲ್ಲೆನ್ರಿ” 55 ವರ್ಷದ ವ್ಯಕ್ತಿ ಕೇಳಿದ.
“ಏನೂ ತೊಂದರೆ ಆಗ್ಲಿಲ್ಲ ಆದ್ರ ತಾವ್ಯಾರು ಅಂತ ಗೊತ್ತಾಗಲಿಲ್ಲ” ಧೃವ ಉತ್ತರಿಸಿದ.
“ಅಯ್ಯೊ ನನ್ನ ಪರಿಚಯ ಮಾಡ್ಕೊಳೋದು ಮರೆತೆ ಹೋಗಿತ್ತು ನೋಡ್ರಿ. ನನ್ನ ಹೆಸರು ಮಲ್ಲಪ್ಪ ಗೌಡ ಹಂಚಿನಮನಿ. ನಾನು ಸಿದ್ದುನ ದೊಡ್ಡಪ್ಪ. ನಮ್ಮ ಊರು ಕಾರಡಗಿ. ನಮ್ದು ಕೂಡು ಕುಟುಂಬ ಜಮೀನ್ದಾರ್ ವಂಶ. ಬೇಸಾಯನ ನಮ್ ಜೀವ್ನ”.
“ಕಾರಡಗಿ ಅಂದ್ರೆ ಸವಣೂರ ಕಡೆ ಬರುತ್ತೆ ಅಲ್ವಾ ” ಧೃವ ಪ್ರಶ್ನಿಸಿದ.
“ಹೌದ್ರಿ ಕಾರಡಗಿ ಸವಣೂರಿಂದ ನಾಲ್ಕೈದು ಮೈಲಿ ದೂರದಲ್ಲಿದೆ. ಹೆಚ್ಚಾನು ಹೆಚ್ಚು ಮುಸಲ್ಮಾನರು ಜಾಸ್ತಿ ಅದಾರ. ನಮ್ ಮಂದಿದು ಹನ್ನೆರಡು ಹದಿನಾಲ್ಕು ಮನಿಗಳು ಅದಾವ್ರಿ” ಸಿದ್ದು ಉತ್ತರಿಸಿದ.
ಫೋಟೋ ಕೃಪೆ : UNSPLASH
“ನನ್ನಿಂದ ಏನಾಗ್ಬೇಕಿತ್ತು ” ಧೃವ ಕೇಳಿದ.
“ಏನಂತ ಹೇಳಿ ಸಾಹೇಬ್ರ. ನಮ್ಮ ಹತ್ರ ನೂರಾರು ಎಕರೆ ಆಸ್ತಿ ಇದೆ. ಆದ್ರ ನೆಮ್ಮದಿ ನೆ ಇಲ್ಲಾ ನೋಡ್ರಿ. ನಮ್ಮ ನೆಮ್ಮದಿನ ಕಿತ್ಕೊಂಡು ಬಿಟ್ಟ ಆ ರಾಕ್ಷಸ. ನಮ್ ಜೀವನಾನ ನರಕ ಮಾಡ್ಬಿಟ್ಟ. ನೀವ ನಮಗ ನ್ಯಾಯ ಕೊಡಿಸ್ಬೇಕು ” ಎನ್ನುತ್ತಾ ಮಲ್ಲಪ್ಪ ಗೌಡ ಧೃವನ ಕೈ ಹಿಡಿದ.
“ಯಾಕೆ ಏನಾಯಿತು ” ಧೃವ ಕೇಳಿದ.
“ನಮ್ಮ ಅಣ್ಣನ ಹೆಸ್ರು ಆದರ್ಶ ಗೌಡ. ಮಲ್ಲಪ್ಪ ಗೌಡರ ಒಬ್ಬನೇ ಮಗ. ತುಂಬಾ ಒಳ್ಳೆ ಮನುಷ್ಯ. ಯಾರ್ ಜೊತೆನೂ ದ್ವೇಷ ಇರಲಿಲ್ಲ, ಎಲ್ಲರ ಜೊತೆ ಸಲುಗೆಯಿಂದ ಮಾತಾಡ್ತಾ ಇದ್ದ. ಊರಾಗ ಒಂದ್ ಕಿರಾಣಿ ಅಂಗಡಿ ಇಟ್ಟಿದ್ದ. ಜನರ ಸಂಪರ್ಕ ಚಲೋ ಇದ್ದಿದ್ದಕ್ಕ ಗ್ರಾಮ ಪಂಚಾಯತಿ ಮೆಂಬರ್ ಕೂಡ ಆಗಿದ್ದ. ಜೀವನಾ ಚಲೋನ ನಡೀತಾ ಇತ್ತು. ಆದ್ರ ನಮ್ಮಣ್ಣನ ಕೊಂದು ಬಿಟ್ರು ” ಸಿದ್ದು ಹೇಳಿದ.
“ಯಾರು ಕೊಂದ್ರು”…
“ಕರಬಸ್ಸಪ್ಪ ಹುರಕಡ್ಲಿ ” ಮಲ್ಲಪ್ಪಗೌಡ ಉತ್ತರಿಸಿದ.
“ಯಾರು ಎಂಎಲ್ಎ ಕರಬಸ್ಸಪ್ಪನವರಾ ” ಧೃವನಿಗೆ ಅವರ ಹೆಸರು ಕೇಳಿ ಆಶ್ಚರ್ಯವಾಯಿತು.
“ಹೌದ್ರಿ ” ಎಲ್ಲರು ಉತ್ತರಿಸಿದರು.
“ಯಾಕ್ ಸಾಯಿಸಿದ್ರು. ಅವ್ರ್ ಹಂಗ ಇಲ್ಲಾ. ಕರೆ ಹೇಳ್ರಿ ಏನಾಗೆತಿ ” ಧೃವ ಕೇಳಿದ.
ಫೋಟೋ ಕೃಪೆ : BBC
“ಮಗನ್ನ ಕಳಕೊಂಡ ಜೀವ ಯಾಕ್ ಸುಳ್ಳು ಹೇಳ್ತೇತಿ. ಹೇಳ್ಬೇಕು ಅಂದ್ರ ಕರಬಸ್ಸಪ್ಪ ನಮ್ಮ ಜಾತಿಯವನ. ನನ್ನ ಮಗಾ ಅವ್ನಿದ್ದ ಪಕ್ಷದಲ್ಲೇ ಇದ್ದ. ನನ್ನ ಮಗನಿಗೆ ಕರಬಸ್ಸಪ್ಪ ಅಂದ್ರ ಪಂಚಪ್ರಾಣ. ಎಲೆಕ್ಷನ್ ಇದ್ದಾಗ ಅವ್ರನ್ನ ಬಿಟ್ಟು ಕದಲುತ್ತಾ ಇರಲಿಲ್ಲ. ಕರಬಸ್ಸಪ್ಪನ ನನ್ನ ಮಗನ್ನ ಪಂಚಾಯತಿ ಮೆಂಬರ್ ಮಾಡಿಸಿದ್ದು. ಅದೇನಾಯ್ತೋ ಗೊತ್ತಿಲ್ಲ ಒಮ್ಮೆ ಆದರ್ಶ ಮನಿ ಬಿಟ್ಟವ ಬಾಳ ದಿನ ಬರಲೆ ಇಲ್ಲಾ. ಒಮ್ಮೆ ಬಂದು ಹುಬ್ಬಳ್ಳಿಗೆ ಹೋಗಿ ಬರ್ತೆನಿ ಅಂತ ಹೇಳಿ ಹೋದಾವ ಹೆಣ ಆಗಿ ಮನಿಗೆ ಬಂದ. ನಮ್ಮನ್ನೆಲ್ಲ ಬಿಟ್ಟು ಹೋಗಿಬಿಟ್ಟ ” ಎನ್ನುತ್ತಾ ಮಲ್ಲಪ್ಪಗೌಡರು ಅಳತೊಡಗಿದರು. ಉಳಿದವರು ಅವರನ್ನ ಸಮಾಧಾನ ಪಡಿಸಿದರು. ದೃವ ಮೌನವಾಗಿದ್ದ.
“ನೋಡ್ರಿ ಸಾಹೇಬ್ರ ನೀವ ನಮಗ ನ್ಯಾಯ ಕೊಡಿಸ್ಬೇಕು. ನಮ್ಮ ಅತ್ತಿಗೆ ವಿಧವೆ ಆದ್ಲು. ಅವ್ರ್ ಮಗು ತಬ್ಬಲಿ ಆಯ್ತು. ನಮ್ಮ ದೊಡ್ಡವ್ವ ಆದರ್ಶ ಸತ್ತ ಸುದ್ದಿ ಕೇಳಿ ಹಾಸಿಗೆ ಹಿಡಿದವರು ಮೇಲೆ ಏಳಲೇ ಇಲ್ಲಾ. ನೀವ ನಮಗ ದಾರಿ ತೋರಿಸ್ಬೇಕು ” ಅಂತ ಸಿದ್ದು ಹೇಳಿದ.
“ಹೌದು ಇದೆಲ್ಲ ಯಾವಾಗ ಆಯ್ತು ” ಧೃವ ಕೇಳಿದ
“ಹಿಂದಿನ ವರ್ಷ ಫೆಬ್ರವರಿ ತಿಂಗಳದಾಗ ಆಯ್ತು. ನಮ್ಮ ಅಣ್ಣ ಸಾಯೋವಾಗ ನಮ್ ಅತ್ತಿಗೆ ಹೊಟ್ಟೇಲಿ ಇದ್ದಳು. ಕೊನೆಗೂ ನಮ್ಮ ಅಣ್ಣ ಮಗನ್ನ ಮುಖ ನೋಡಾಕ ಆಗ್ಲಿಲ್ಲ ” ಸಿದ್ದು ಉತ್ತರಿಸಿದ.
“ನೀವು ಪೊಲೀಸ್ ಕಂಪ್ಲೇಂಟ್ ಕೊಡ್ಲಿಲ್ವಾ ” ಧೃವ ಕೇಳಿದ.
“ಸವಣೂರು ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟೇವ್ರಿ. ಆದ್ರೆ ಕಾಣದ ಕೈಗಳು ನನ್ನ ಮಗಾ ಆಕ್ಸಿಡೆಂಟ್ ಅಲ್ಲಿ ಸತ್ತು ಹೋದ ಅಂತ ಸಾಭಿತು ಪಡಿಸಿದ್ವು. ಅವ್ರ್ ವಿರುದ್ಧ ನಿಲ್ಲೋಕೆ ನಮ್ ಕಡೆ ಆಗಲಿಲ್ಲ.” ಮಲ್ಲಪ್ಪಗೌಡ ತಮ್ಮ ನಿಸಹಾಯಕತೆಯನ್ನ ತೋರಿಸಿದ್ರು.ದೃವನಿಗೆ ಅವರ ಸ್ಥಿತಿ ನೋಡಿ ಕನಿಕರ ಬಂತು.
“ಸರಿ ನೀವು ಹೇಳೋದು ಸತ್ಯ ಇದ್ರೆ ನಾನು ನಿಮಗೆ ನ್ಯಾಯ ಕೊಡಿಸ್ತೇನಿ. ನಿಮ್ಮ ಹತ್ತಿರ ಸಾಕ್ಷಿ ಏನಾದ್ರು ಇದಿಯಾ”.
“ಸಾಕ್ಷಿ ಏನೂ ಇಲ್ಲ ಆದ್ರ ನಮ್ ಅಣ್ಣ ಒಂದಿಷ್ಟು ಫೈಲ್ಗಳನ್ನ ಮನೆಯಲ್ಲಿ ಮುಚ್ಚಿಟ್ಟಿದ್ದ. ಮೊನ್ನೆ ಮೊನ್ನೆ ಮನಿ ಸ್ವಚ್ಚ ಮಾಡೋವಾಗ ನಮ್ ಕೈಗೆ ಸಿಕ್ಕಿತು” ಅಂತ ಮೂಲೆಯಲ್ಲಿಟ್ಟಿದ್ದ ಫೈಲನ್ನು ಸಿದ್ದು ತಂದು ಕೊಟ್ಟ.
ಧೃವ ಟಾರ್ಚ್ ಹಿಡಿದು ಫೈಲನ್ನು ನೋಡತೊಡಗಿದ.
“ಸರಿ ನೀವು ಏನೂ ಚಿಂತಿ ಮಾಡ್ಬೇಡ್ರಿ. ನನ್ನ ಕಡೆಯಿಂದ ಏನೂ ಸಾಧ್ಯವಾಗುತ್ತೋ ಅದನ್ನ ಮಾಡ್ತೇನಿ. ನೀವು ದೈರ್ಯದಿಂದ ಇರ್ಬೇಕು ಇಲ್ಲ ಅಂದ್ರೆ ಏನೂ ಮಾಡೋಕೆ ಬರಲ್ಲ. ನಾನಿನ್ನು ಹೋರಡುತ್ತೇನೆ ಏನಾದ್ರು ತೊಂದ್ರೆ ಆದ್ರೆ ನಂಗ್ ಕರೆ ಮಾಡ್ರಿ ” ಅಂತ ಹೇಳಿದ.
ಧೃವನ ಮಾತು ಕೇಳಿ ಮಲ್ಲಪ್ಪನಿಗೆ ಸಮಾಧಾನವಾಯ್ತು.
“ನಿಮ್ಮನ್ನ ನಂಭಿದೇವಿ ಸಾಹೇಬ್ರ. ನೀವ್ ದಾರಿ ತೋರಿಸ್ಬೇಕು ” ಎನ್ನುತ್ತಾ ಕೈ ಮುಗಿದ.
“ಸರಿ ನಾನೇನಾದ್ರೂ ಮಾಡ್ತೇನಿ. ನೀವು ಧೈರ್ಯದಿಂದಿರಿ ” ಎನ್ನುತ್ತಾ ಧೃವ ಬೈಕ್ ಹತ್ತಿದ.
ಬೈಕು ಕಾಡು ದಾಟಿ ನಾಡಿನ ಕಡೆ ಹೊರಟಿತು. ಮಳೆಯ ಅಬ್ಬರ ಜೋರಾಗಿತ್ತು. ಧೃವನ ಕಣ್ಣಲ್ಲಿ ವಿಧವೆ ಹೆಣ್ಣು ಮತ್ತು ತಬ್ಬಲಿ ಮಗುವಿನ ಆಕೃತಿ ಕುಕ್ಕುತ್ತಿತ್ತು.
ಗಾಂಧಿವಾದಿ ಅಂತ ಹೆಸರುವಾಸಿಯಾಗಿದ್ದ ಕರಬಸ್ಸಪ್ಪನವರು ಇಂತಹ ಕೃತ್ಯ ಮಾಡುತ್ತಾರಾ? ಕರಬಸ್ಸಪ್ಪ ಆದರ್ಶ ಒಂದೆ ಪಕ್ಷದಲ್ಲಿ ಇದ್ದವರು. ಅದರಲ್ಲೂ ಕರಬಸ್ಸಪ್ಪನವರೇ ಆದರ್ಶನಿಗೆ ಪಂಚಾಯತಿ ಎಲೆಕ್ಷನ್ನಲ್ಲಿ ಸಹಾಯ ಮಾಡಿದ್ದರು. ಅಂತವರು ಯಾಕೆ ಕೊಲ್ಲುತ್ತಾರೆ?. ಅವರೆ ಕೊಂದರು ಅಂತ ಮಲ್ಲಪ್ಪ ಗೌಡರಿಗೆ ಹೇಗೆ ಗೊತ್ತಾಯಿತು.?
ನನ್ನ ಹತ್ತಿರ ಈ ವಿಷಯವನ್ನು ಫೋನಿನಲ್ಲೇ ಮಾತಾಡಬಹುದಾಗಿತ್ತು. ಮತ್ತೆ ಯಾಕೆ ಕಾಡಿಗೆ ಕರೆಸಿಕೊಂಡರು? ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಧೃವ ಹುಬ್ಬಳ್ಳಿ ಕಡೆಗೆ ಸಾಗಿದ.
- ವಿಕಾಸ್. ಫ್. ಮಡಿವಾಳರ