`ಪುಸ್ತಕ ಮಂಥನ’ ಗುಂಪು ಒಂದು ತಿಂಗಳ ಮುಂಚೆಯೇ ಪುಸ್ತಕವನ್ನು ಖರೀದಿಸಿ, ಎಲ್ಲಾ ಸದಸ್ಯರೂ ಹಂಚಿಕೊಳ್ಳುತ್ತಾರೆ.ಆಮೇಲೆ ಪುಸ್ತಕದ ಲೇಖಕರನ್ನು ಕರೆಯಿಸಿ ಚರ್ಚಿಸುತ್ತಾರೆ. ಪುಸ್ತಕ ಮಂಥನ ಗುಂಪು ಇರುವುದು ರಾಮನಗರದಲ್ಲಿ. ಈ ಗುಂಪಿನಲ್ಲಿ ಅಧ್ಯಾಪಕರಿದ್ದಾರೆ, ಇಂಜಿನಿಯರ್‌ಗಳಿದ್ದಾರೆ, ಪೊಲೀಸರಿದ್ದಾರೆ, ವಕೀಲರಿದ್ದಾರೆ,ಅವರು ಏನೇ ಇರಲಿ, ಅವರ ಆಸಕ್ತಿ ಕೇವಲ ಪುಸ್ತಕ ಮಾತ್ರ. ಇನ್ನಷ್ಟು ವಿಷಯಗಳನ್ನು ಕಾದಂಬರಿಕಾರ ಶಶಿಧರ ಹಾಲಾಡಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಒಂದು ದಿನ ಫೇಸ್‌ಬುಕ್‌ನಲ್ಲಿ ಒಬ್ಬರು ನನ್ನ ಫೋನ್ ನಂಬರ್ ಕೇಳಿದರು. “ನಿಮ್ಮ ಬಳಿ ಮಾತನಾಡಬೇಕು” ಎಂಬ ಮನವಿ. ಸಾಮಾನ್ಯವಾಗಿ ಫೇಸ್‌ಬುಕ್‌ನಲ್ಲಿ ಇಂತಹ ಮನವಿಗಳು ಬರುವುದು ಕಡಿಮೆ. `ಯಾವ ವಿಚಾರ?’ ಎಂದು ಕೇಳಿದೆ. `ನಿಮ್ಮ ಅಬ್ಬೆ ಕಾದಂಬರಿಯ ಬಗ್ಗೆ ‘ ಎಂದರು. ನಂಬರ್ ಕಳಿಸಿದೆ.
ನಾಲ್ಕಾರು ದಿನಗಳಲ್ಲಿ ಅವರಿಂದ ಫೋನ್ ಬಂತು. ರಾಮನಗರದಲ್ಲಿರುವ `ಪುಸ್ತಕ ಮಂಥನ’ ಎಂಬ ಗುಂಪಿನ ಧನಂಜಯ ಎಂಬುವವರು ಮಾತನಾಡಿದರು. “ನಿಮ್ಮ ಅಬ್ಬೆ ಕಾದಂಬರಿಯ ಕುರಿತು ನಾವು ಒಂದು ವಿಚಾರ ಮಂಥನ ನಡೆಸಲಿದ್ದೇವೆ!… ನಮ್ಮ ಪುಸ್ತಕ ಮಂಥನ ಗುಂಪು, ರಾಮನಗರದ್ದು’ ಎಂದರು. ನನಗೆ ಅಚ್ಚರಿ, ವಿಸ್ಮಯ, ಸಂತಸ ಎಲ್ಲವೂ ಆಯಿತು. ಪರಿಚಯ ಇಲ್ಲದ ಒಬ್ಬರು ಪುಸ್ತಕ ಮಂಥನ ನಡೆಸುತ್ತಿದ್ದೇವೆ ಎಂದಾಗ ಖುಷಿ ಆಗದೇ ಇರುತ್ತದೆಯೆ!
`ಪುಸ್ತಕ ಮಂಥನ’ ಗುಂಪಿನ ಚಟುವಟಿಕೆಗಳನ್ನು ಸಂಕ್ಷಿಪ್ತವಾಗಿ ಧನಂಜಯ ಹೇಳಿದರು. ಕಳೆದ ೬೫ ತಿಂಗಳುಗಳಿಂದ, ಪ್ರತಿ ತಿಂಗಳೂ ಒಂದು ಕನ್ನಡ ಪುಸ್ತಕದ ಕುರಿತು ಅವರ ಗುಂಪು ಚರ್ಚಿಸುತ್ತದೆ, ಮಂಥನ ನಡೆಸುತ್ತದೆ. (ಕರೋನಾ ಕಾಲದಲ್ಲಿ ದಿನಾಂಕಗಳು ಏರುಪೇರಾಗಿದ್ದವಂತೆ). ಪುಸ್ತಕ ಮಂಥನ ಗುಂಪಿಗೆ ಸೇರಲು ಬೇಕಾದ ಒಂದೇ ಅರ್ಹತೆ ಎಂದರೆ, ಪುಸ್ತಕ ಖರೀದಿಸಿ ಓದುವ ಹವ್ಯಾಸ! ಇದರಲ್ಲಿ ಅಧ್ಯಾಪಕರಿದ್ದಾರೆ, ಇಂಜಿನಿಯರ್‌ಗಳಿದ್ದಾರೆ, ಪೊಲೀಸರಿದ್ದಾರೆ, ವಕೀಲರಿದ್ದಾರೆ : ಅವರು ಯಾರೇ ಆಗಿರಲಿ, ಅಲ್ಲಿ ಮುಖ್ಯವಾಗಿರುವುದು ಪುಸ್ತಕ ಮಾತ್ರ.
ಅಂದರೆ, ಒಂದು ತಿಂಗಳ ಮುಂಚೆಯೇ ಪುಸ್ತಕವನ್ನು ಖರೀದಿಸಿ, ಎಲ್ಲಾ ಸದಸ್ಯರೂ ಹಂಚಿಕೊಳ್ಳುತ್ತಾರೆ. ಒಂದು ತಿಂಗಳ ಕಾಲ ಅದನ್ನು ಓದಿ, ಸಾಮಾನ್ಯವಾಗಿ ರಾಮನಗರ ಸುತ್ತಮುತ್ತಲಿನ ಯಾವುದಾದರೂ ಹಳ್ಳಿಯಲ್ಲಿ ಒಂದು ಭಾನುವಾರ ಸೇರಿ, ಆ ಪುಸ್ತಕವನ್ನು ಚರ್ಚೆಗೆ ಒಳಪಡಿಸುತ್ತಾರೆ. ಒಟ್ಟು ಸದಸ್ಯರ ಸಂಖ್ಯೆ ಸುಮಾರು ೫೦ ಮೀರಿದ್ದರೂ, ಪ್ರತಿ ತಿಂಗಳ ಮಂಥನಕ್ಕೆ ಸರಾಸರಿ ಇಪ್ಪತ್ತರಿಂದ ಮೂವತ್ತು ಜನ ಸೇರುತ್ತಾರೆ; ಈ ತಿಂಗಳು ಮಂಥನಕ್ಕೆ ಕಾರಣಾಂತರದಿಂದ ಬರಲಾಗದೇ ಇದ್ದವರು, ಮುಂದಿನ ತಿಂಗಳು ಬರುವ ಸಾಧ್ಯತೆ ಅಧಿಕ.
`ನನ್ನ ಕಾದಂಬರಿ `ಅಬ್ಬೆ’ ನಿಮ್ಮ ಗಮನ ಸೆಳೆಯಲು ಕಾರಣವೇನು?’ ಎಂದು ಕುತೂಹಲದಿಂದ ಧನಂಜಯ ಅವರನ್ನು ಕೇಳಿದೆ. ಅಬ್ಬೆ ಕಾದಂಬರಿಯಲ್ಲಿ ಪರಿಸರದ ಕುರಿತು, ಪ್ರಾಣಿ, ಪಕ್ಷಿ, ಕೀಟಗಳು ಕುರಿತು, ಬಯಲುಸೀಮೆಯ ಕಾಡಿನ ಕುರಿತು ಬರೆಯಲಾಗಿದೆ ಎಂದು ಅವರ ಗೆಳೆಯ ಶಂಕರ್ ಹೇಳಿದ್ದರಿಂದ, ಈ ಕಾದಂಬರಿಯನ್ನು ಆಯ್ದುಕೊಂಡರಂತೆ. ಜನವರಿ ೨೨ರಂದು `ಪುಸ್ತಕ ಮಂಥನ’ ಎಂದು ದಿನಾಂಕ ನಿಗದಿಯಾಗುತ್ತಿದ್ದಂತೆ, ಅವರ ಒಬ್ಬರು ಸದಸ್ಯರು ಬೆಂಗಳೂರಿನ ಅಂಕಿತ ಪುಸ್ತಕ ಮಳಿಗೆಗೆ ಡಿಸೆಂಬರ್‌ನಲ್ಲೇ ಹೋಗಿ, ಅಬ್ಬೆ ಕಾದಂಬರಿಯ ಸುಮಾರು ೨೫ ಪ್ರತಿಗಳನ್ನು ಖರೀದಿಸಿ, ಹಿಂದಿನ ತಿಂಗಳ ಮಂಥನದ ಸಮಯದಲ್ಲಿ ಎಲ್ಲರಿಗೂ ಹಂಚಿದರು.
ಬಿಡದಿ ಕೆರೆಯ ಹಿನ್ನೀರಿನ ಬಳಿ, ತೆಂಗು ಮತ್ತು ಹುಣಿಸೇ ಮರಗಳ ನೆರಳಿನಲ್ಲಿ ಬೆಳಗ್ಗೆಯೇ ಆರಂಭವಾದ `ಪುಸ್ತಕ ಮಂಥನ’ಕ್ಕೆ ನಾನು ಸೇರಿಕೊಂಡಾಗ ಮಧ್ಯಾಹ್ನ ೧ ಗಂಟೆಯಾಗಿತ್ತು. `ಬನ್ನಿ ಸಾರ್, ಲೇಖರೊಂದಿಗೆ ಮಾತುಕತೆ ನಡೆಸೋಣ’ ಎಂದು ತಕ್ಷಣ ವೃತ್ತಾಕಾರವಾಗಿ ಕುಳಿತು, ನನ್ನ ಕಾದಂಬರಿ `ಅಬ್ಬೆ’ಯ ಕುರಿತು ತಮ್ಮ ತಮ್ಮ ವಿಚಾರಗಳನ್ನು ವ್ಯಕ್ತಪಡಿಸತೊಡಗಿದರು. ಅಲ್ಲಿ ಬರುವ ತುಕಾರಾಂ ನಿಜಕ್ಕೂ ಇದ್ದನೇ, ಈ ಕಾದಂಬರಿಯ ಹಂದರದಲ್ಲಿ ಕಾಲ್ಪನಿಕ ಎಷ್ಟು, ವಾಸ್ತವ ಎಷ್ಟು, ಪೆಂಗೊಲಿನ್ ಈಗಲೂ ಕಳ್ಳಸಾಗಾಣಿಕೆ ಆಗುತ್ತಿದೆಯೆ, ಅಬ್ಬೆ ಜೇಡದ ನಂಬಿಕೆ ಈಗಲೂ ಇದೆಯೆ ಮೊದಲಾದ ಪ್ರಶ್ನೆಗಳನ್ನು ಕೇಳಿದರು. ಕೆಲವರ ಪ್ರಶ್ನೆಗಳನ್ನು ಕೇಳಿಸಿಕೊಂಡಾಗ, ಅವರು ಅದೆಷ್ಟು ವಿವರವಾಗಿ, ತಾಳ್ಮೆಯಿಂದ `ಅಬ್ಬೆ’ ಕಾದಂಬರಿ ಓದಿದ್ದಾರೆ ಎಂಬ ಅಚ್ಚರಿಯೂ ಆಯಿತು.
ಮಂಥನದಲ್ಲಿ ಪಾಲ್ಗೊಂಡ ನಾಗೇಶ್ ಅವರ ಪ್ರತಿಕ್ರಿಯೆ ವಿಶಿಷ್ಟ : “ಅಬ್ಬೆ ಕಾದಂಬರಿಯಲ್ಲಿ ಬರುವ ಕ್ರಿಕೆಟ್ ಆಡುವ ಸನ್ನಿವೇಶ ಮತ್ತು, ಬಸ್ ನಿಲ್ಲಿಸಿ ಕ್ರಿಕೆಟ್ ತಂಡದವರು ಕಥಾನಾಯಕನನ್ನು ಅಭಿನಂದಿಸುವ ಘಟನೆಯು ನನ್ನ ಜೀವನದಲ್ಲಿ ನಡೆದಿದೆ. ನನ್ನ ನಿಜಜೀವನದ ಸನ್ನಿವೇಶವನ್ನು ನಿಮ್ಮ `ಅಬ್ಬೆ’ ಕಾದಂಬರಿಯಲ್ಲಿ ಓದಿ ವಿಸ್ಮಿತನಾದೆ” ಎಂದರು. ಇನ್ನೊಬ್ಬ ಸದಸ್ಯರು ತಮ್ಮ ಊರಿನ `ರಕ್ಷಿತಾರಣ್ಯ’ವೂ ಇಂದು, `ಅಬ್ಬೆ’ ಕಾದಂಬರಿಯಲ್ಲಿ ಬರುವ ರಕ್ಷಿತಾರಣ್ಯದ ರೀತಿಯೇ ಮರಗಿಡಗಳನ್ನು ಕಳೆದುಕೊಂಡು ಬರಡಾಗಿದೆ ಎಂದು ಹೋಲಿಸಿಕೊಂಡರು. ಬಯಲು ಸೀಮೆಯಲ್ಲೂ ಪರಿಸರ ಇದೆ, ಅಲ್ಲೂ ಜೀವಿಗಳಿವೆ, ಅವುಗಳನ್ನು ರಕ್ಷಿಸುವ ಅಗತ್ಯ ಖಂಡಿತಾ ಇದೆ ಎಂಬ ಭಾವವನ್ನು ಬಹಳ ಜನ ಹಂಚಿಕೊಂಡರು. ಅವರಿಗೆ ಈ ಭಾವನೆ ಮೂಡಲ ಮುಖ್ಯ ಕಾರಣ, `ಅಬ್ಬೆ’ ಕಾದಂಬರಿಯಲ್ಲಿ ವ್ಯಾಪಕವಾಗಿ ಚಿತ್ರಣಗೊಂಡಿರುವ ಬಯಲು ಸೀಮೆಯ ಕಾಡುಗಳು, ಹಿರೆಕಲ್ಲು ಗುಡ್ಡದ ವನ್ಯ ಪ್ರದೇಶ, ಚಿಪ್ಪುಹಂದಿಯಂತಹ ಅಮಾಯಕ ಪ್ರಾಣಿಗಳ ಅಸಹಾಯಕತೆ.
ಪುಸ್ತಕ ಮಂಥನ ಮುಗಿದ ನಂತರ, ಮಧ್ಯಾಹ್ನದ ಊಟವನ್ನು ಆ ಬಳಗದ ಸದಸ್ಯರ ಜತೆಯಲ್ಲೇ ಮಾಡಿದೆ. ಹಗಲಿಡೀ ನನ್ನ ಕಾದಂಬರಿಯನ್ನು ಅವರು ಚರ್ಚಿಸಿದ ಪರಿಯು ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿತು ಎಂದರೆ ಅತಿಶಯೋಕ್ತಿ ಎನಿಸಬಹುದು. ನನಗೆ ಒಟ್ಟೂ ಅಪರಿಚಿತರಾಗಿದ್ದ ಆ ಗುಂಪಿನ ಸದಸ್ಯರು ನನ್ನ ಕಾದಂಬರಿಯನ್ನು ಆಯ್ಕೆ ಮಾಡಿದ ಪರಿಯು, ಅವರ ಸಾಹಿತ್ಯಾಭಿಮಾನವನ್ನು ತೋರಿಸುತ್ತದೆ, ಪುಸ್ತಕ ಖರೀದಿಸಿ ಓದುವ ಅವರ ಸಂಸ್ಕೃತಿಯ ಪ್ರತೀಕವಾಗಿ ಎದ್ದುಕಾಣುತ್ತದೆ. `ಪುಸ್ತಕ ಮಂಥನ’ದ ಸದಸ್ಯರು ಈಗ ನನ್ನ ಗೆಳೆಯರಾಗಿದ್ದಾರೆ. ಇಂತಹ ಪುಸ್ತಕ ಮಂಥನ ಗುಂಪುಗಳು ನಮ್ಮ ರಾಜ್ಯದ ಪ್ರತಿ ತಾಲೂಕಿನಲ್ಲೂ (ಸಾಧ್ಯವಾದರ ಹಳ್ಳಿ ಹಳ್ಳಿಗಳಲ್ಲೂ) ರೂಪುಗೊಳ್ಳಲಿ ಎಂಬುದೇ ನನ್ನ ಆಶಯ.
- ಶಶಿಧರ ಹಾಲಾಡಿ – ಕಾದಂಬರಿಕಾರರು, ಕತೆಗಾರರು, ಪತ್ರಕರ್ತರು