ಈ ವರ್ಷದ ಮೊದಲ ತಿರುಗಾಟ ಶುರುವಾಗಿದ್ದು ಕಳೆದ ರವಿವಾರ. ರಮಣೀಯ ನಿಸರ್ಗ ಮಡಿಲಿನ ದೈವಿ ನೆಲೆಗೆ ಹೊರಡಬೇಕೆಂದು ಹಲವು ಸ್ಥಳಗಳ ಬಗ್ಗೆ ಹುಡುಕಾಟದಲ್ಲಿದ್ದಾಗ ದಕ್ಕಿದ್ದು ಕಣವಿಶಿದ್ಗೇರಿ ಅಥವಾ “ಕಣವಿ ಸಿದ್ದನಗಿರಿ” ಎಂಬ ತಾಣ. ಹಾವೆರಿ ಜಿಲ್ಲೇಯ, ರಟ್ಟಿಹಳ್ಳಿ ತಾಲೂಕಿನ ಪ್ರದೇಶ.- ಡಾ.ಪ್ರಕಾಶ ಬಾರ್ಕಿ.ತಪ್ಪದೆ ಓದಿ ಲೇಖಕರ ಕಣವಿ ಸಿದ್ದನಗಿರಿಯಲ್ಲಿನ ತಿರುಗಾಟದ ಕುರಿತು ಬರೆದ ಲೇಖನ.
ರವಿವಾರದ ರಜೆಗೆ ನಾಲ್ಕು ಜನ ತಯಾರಾಗಿ ದಾಂಗುಡಿಯಿಟ್ಟಿದ್ದು “ಕಣವಿಶಿದ್ಗೇರಿ” ಕಡೆಗೆ. ಎರಡು ಬೈಕ್’ಗಳು ಹುಡುಕಾಟದ ಕಂಗಳೊಂದಿಗೆ “ರಂವ್ವ್” ಎಂದು ಓಡುತ್ತಿದ್ದವು.. ಕಾಗಿನೆಲೆಯಿಂದ ಹಂಸಬಾವಿ, ಕೋಡ ರಸ್ತೆಯ ಮೂಲಕ ರಟ್ಟಿಹಳ್ಳಿ ದಾಟಿ ಕಣವಿಶಿದ್ಗೇರಿಯತ್ತ.
ಅಕ್ಕ ಪಕ್ಕ ಹಚ್ಚ ಹಸಿರು, ದೂರದಲ್ಲಿ ಮುಸುಕು ಮುಸುಕಾದ ಏರಿಳಿವಿನ ಬೆಟ್ಟಗಳು, ಕಡಿಮೆ ವಾಹನ ದಟ್ಟಣೆಯ ಅಂಕು ಡೊಂಕಿನ ಟಾರು ರೋಡು, ನಮಗೋ ಒಳಗೊಳಗೆ ಹುಕಿ, ಬೀಸಿ ತೇಲುತ್ತಿದ್ದ ತಣ್ಣನೆಯ ಗಾಳಿ, ಮಂಕಾದ ಸೂರ್ಯನ ಪ್ರಖರತೆ.
ಕಣವಿ ಶಿದ್ಗೇರಿ ಗ್ರಾಮದ ಹೊರಭಾಗಕ್ಕೆ ಬಂದು ನಿಂತಾಗ ಎಲ್ಲರದೂ ಉದ್ಘಾರ!! ಅರಳಿದ ಮುಖಭಾವ. ಕಪ್ಪು ಟಾರು ರೋಡು ವಯ್ಯಾರದಿಂದ ತಿರುವಿಕೊಂಡು ಮುಂದೇ ಓಡಿತ್ತು. ಕಣ್ಣೇದುರಿಗೆ ಅಕ್ಕ ಪಕ್ಕ ಎರಡು ಬೆಟ್ಟಗಳು ಒಂದಕ್ಕೊಂದು ಪೈಪೋಟಿಗೆ ಬಿದ್ದಂತೆ ಆಕಾಶದೆತ್ತರಕ್ಕೆ, ವಿಶಾಲವಾಗಿ ಬೆಳೆದು ನಿಂತಿವೆ.
ಬೆಟ್ಟಗಳ ನಡುವೆ ಬೈತಲೆಯಂತೆ ರಸ್ತೆ ಸಾಗಿ ಹೋಗಿದೆ. ರಸ್ತೆಯ ಒಂದೆಡೆ ದಡಕ್ಕೆ ನಿಂತು ಎರಡು ಬೆಟ್ಟವನ್ನು ಅವುಗಳ ತುದಿಯನ್ನು ಎವೆಯಿಕ್ಕದೆ ತಲೆಯತ್ತಿ ನೋಡತೊಡಗಿದೆವು.
ಎರಡು ಬೃಹತ್ ಬೆಟ್ಟಗಳ ನಡುವಿನ ಕಣಿವೆಯಲ್ಲಿ ಸಿದ್ದೇಶ್ವರ ದೇವಸ್ಥಾನ ಇರುವುದರಿಂದ “ಕಣವಿಶಿದ್ಗೇರಿ” ಎಂಬ ಹೆಸರಿದೆ.
ಆಕಾಶದೆತ್ತರಕ್ಕೆ, ವಿಶಾಲವಾಗಿರುವ ಎರಡೂ ಬೆಟ್ಟಗಳ ಮೈ ತುಂಬಾ ಹೆಬ್ಬಂಡೆ ಗಳು, ಬೆಳೆದು ನಿಂತಿರುವುದು “ಕುರುಚಲು ಕಾಡು”. ಮಳೆಗೆ ಮೈ ದುಂಬಿಕೊಂಡು ಹಸಿರಾಗುವ ಬೆಟ್ಟ, ಬೇಸಿಗೆಗೆ ಎಲೆಯುದುರಿಸಿಕೊಂಡ ಶುಷ್ಕವಾಗುತ್ತೆ. ಇಲ್ಲಿ ಕೋತಿಗಳನ್ನು ಹೊರತುಪಡಿಸಿದರೆ ಬೇರಾವ ಪ್ರಾಣಿಗಳಿರುವ ಕುರುಹುಗಳಿಲ್ಲ. ಇಲ್ಲಿ ಹೆಬ್ಬಂಡೆಗಳು ಬಿಸಿಲಿಗೆ ಮೈ ಚಾಚಿಕೊಂಡು ಮಲಗಿರುವುದರಿಂದ, ನಿಸರ್ಗ ನಿರ್ಮಿತ ಹಲವು ಚಿಕ್ಕ, ಮಧ್ಯಮ ಗಾತ್ರದ ಗುಹೆಗಳಿರುವುದರಿಂದ “ಕರಡಿ”ಗಳು ಹೇರಳವಾಗಿದ್ದವಂತೆ, ಚಿರತೆಗಳು ಕಂಡದ್ದುಂಟು ಆದರೆ ಇವಾಗಿಲ್ಲ.
ಒಂದು ಬೆಟ್ಟದ ಬುಡಕ್ಕೆ ಸುಮಾರು “12 ನೇಯ ಶತಮಾನದಲ್ಲಿ ನಿರ್ಮಿಸಲಾದ” ಸಿದ್ದೇಶ್ವರ” ದೇವಸ್ಥಾನವಿದೆ. ದೇವಸ್ಥಾನದ ಹೊರಭಾಗದಲ್ಲಿ ಪ್ರಸನ್ನ ಚಿತ್ತದಿಂದ ಕುಳಿತ “ಶಿವನ” ಬೃಹತ್ ಮೂರ್ತಿಯಿದೆ.
ದೇವಸ್ಥಾನದೊಳಗೆ ನಡೆಯುತ್ತಿದ್ದಂತೆ ನೆರಳು ಆವರಿಸಿಕೊಂಡು ತಂಪನೆಯ ಶಾಂತತೆ ನೀಡುವ ಪ್ರಾಂಗಣವಿದೆ, ಹೆಬ್ಬಂಡೆಗಳನ್ನು ಬಳಸಿ ನಿರ್ಮಿಸಿದ ಪುರಾತನ ಶೈಲಿಯ ಪ್ರಾಂಗಣ ವಿಶಾಲವಾಗಿದ್ದು, ಸುತ್ತಲೂ ಎತ್ತರದ ಕಟ್ಟೆ, ಕಂಬಗಳಿಂದ ಅಲಂಕೃತವಾಗಿದೆ. ಬೆಟ್ಟದ ಕೆಳಗೆ, ಪ್ರಾಂಗಣದ ಎದುರಿಗೆ “ಸಿದ್ದೇಶ್ವರ ದೇವಸ್ಥಾನ”ವಿರುವುದು. ದೇವಸ್ಥಾನ ಅರ್ಧ ಬೆಟ್ಟದೊಳಗೆ ಚಾಚಿಕೊಂಡಿದೆ. ಬೆಟ್ಟದ ಬುಡವನ್ನೆ ಕೊರೆದು ನಿರ್ಮಿಸಿದಂತಿದೆ ದೇವಸ್ಥಾನ. ಗರ್ಭಗುಡಿಯಲ್ಲಿ ಬೃಹತ್ ಶಿವಲಿಂಗವಿದೆ. ನಂದಿ ತದೇಕಚಿತ್ತದಿಂದ, ಶಿವಲಿಂಗದ ಎದುರಿಗೆ ಕಾಲೂರಿ ಮಲಗಿದ್ದಾನೆ. ಶಿವಲಿಂಗದ ಎಡ-ಬಲಕ್ಕೆ ಗಣೇಶ ಮತ್ತು “ರೇವಣ ಸಿದ್ದೇಶ್ವರ”ರ ಕಲಾಕೃತಿಗಳಿವೆ.
ಗರ್ಭಗುಡಿಯ ಹಿಂದೆ ನಡೆದು ಹೋಗಲು ಬಂಡೆಗಳ ಸಂದಿಯಲ್ಲಿ ಕಿರಿದಾದ ದಾರಿಯಿದೆ ಅದೂ ಬೆಟ್ಟದ ಬುಡಕ್ಕೆ ನಡೆದು ಹೋಗುವ ದಾರಿ. ಸಂಪೂರ್ಣ ಕತ್ತಲೆ, ಬಾವಲಿಗಳಿರುವ ತಣ್ಣನೆಯ ಗುಹೆ.
ಮೊಬೈಲ್’ನ ಬೆಳಕಿನ ಸಹಾಯದಿಂದ ಒಬ್ಬರ ಹಿಂದೆ ಮತ್ತೊಬ್ಬರು ನಿಧಾನಕ್ಕೆ ನಡೆದೆವು, ಸುತ್ತ ಕಾಡು ಕಗ್ಗಲ್ಲು, ಛಾವಣಿ ಒರಟಾಗಿದ್ದು, ಬಾವಲಿಗಳು ಅಂಟಿಕೊಂಡಿವೆ. ಘಾಟು ವಾಸನೆ. ಘಾಟಿಗೆ ಪೈಪೋಟಿ ನಿಡುವಂತೆ ಊದುಬತ್ತಿಯ “ಸುವಾಸನೆ” ಸಹ ಮೂಗಿಗೆ ಬಡಿಯುತಿತ್ತು, ಗುಹೆಯ ಒಳ ಕೊನೆಗೆ ಮಿಣುಕು ದೀಪ ಉರಿಯುತ್ತಿದೆ. ನಿಧಾನಕ್ಕೆ ಒಳಗೆ ಬಂದಾಗ ನಮ್ಮ ಹೃದಯ ಕವಾಟಗಳ ಬಡಿತ ನಮಗೆ ಕೇಳುವಷ್ಟು ಜೋರು. ಕೊನೆಯ ತುದಿಗೆ ಶಿವಲಿಂಗ ಆಗಲೇ ಪೂಜಿಸಿಕೊಂಡು, ದೀಪದ ಬೆಳಕಿನಲ್ಲಿ ಅಸ್ಪಷ್ಟವಾಗಿದೆ. ಮಗ್ಗುಲಿಗೆ “ತ್ರಿಶೂಲ”, ಕಮಂಡಲ ಸಹ ಇವೆ. ದೀರ್ಘದಂಡ ನಮಸ್ಕಾರ ಸಲ್ಲಿಸಿ, ಸ್ವಲ್ಪ ಸಮಯ ಕಳೆದು ಮರಳುವಾಗಲೂ ಬಾಗಿಕೊಂಡು ಬಂಡಿಯ ಕೊರಕಲಿನಿಂದ ಹೊರಗೆ ಬಂದದ್ದಾಯ್ತು. ಅದೇನೋ “ಪರಮಾನಂದ” ಆವರಿಸಿದ ಕ್ಷಣ.
(ಲೇಖಕ ಡಾ ಪ್ರಕಾಶ ಬಾರ್ಕಿ ಅವರ ಜೊತೆ ಫಕ್ಕಿರೇಶ ಬಾರ್ಕಿ, ದಯಾನಂದ ದಿಡಗೂರ, ಪ್ರಸನ್ನ ಬಾರ್ಕಿ)
ಗರ್ಭಗುಡಿ, ಪ್ರಾಂಗಣ ಬಿಟ್ಟು ದೇವಸ್ಥಾನದ ಎಡಭಾಗಕ್ಕೆ ನಡೆದೆವು. ಅಲ್ಲಿ ಬೆಟ್ಟವನ್ನು ಕಡಿದು, ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ “ಅಕ್ಕಮಹಾದೇವಿ ಗುಹೆಗೆ”.
ಅಲ್ಲಿನ ಮೆಟ್ಟಿಲುಗಳನ್ನು ಬಳಸಿ ಒಂದರ್ಧ ಬೆಟ್ಟ ಏರಿದ್ದಾಯಿತು.. ಬೆಟ್ಟದ ಹೆಬ್ಬಂಡೆಯ ಕೊರೆದು ನಿರ್ಮಿಸಿದ ಗುಹಾಂತರ ದೇವಾಲಯವಿದು, ಗುಹೆ ತೀರಾ ಚಿಕ್ಕದಲ್ಲ ವಿಶಾಲವಾಗಿದೆ. ಒಳಗಡೆ ಅದೇ ನೇತಾಡುವ ಬಾವಲಿಗಳು, ಬೆಳಕು ಮಂದವಾಗಿದೆ, ಪೂಜಿಸಿಕೊಂಡ “ಅಕ್ಕಮಹಾದೇವಿ” ವಿಗ್ರಹ ಆಕರ್ಷಕವಾಗಿ ಸೆಳೆಯುತ್ತದೆ.
ಗುಹೆಯ ಹೊರಬಂದು ನಿಂತರೆ ಏದುರಿನ ಬೆಟ್ಟಕ್ಕೆ ಎದೆ ಕೊಟ್ಟು ನಿಂತಂತೆ ಭಾಸವಾಗುತ್ತೆ. ಏದುರಿನ ಬೆಟ್ಟದ ಮಧ್ಯದಲ್ಲಿನ ಬೃಹತ್ ಕಾಡ್ಗಲ್ಲಿನ ಮೇಲೆ “ಓಂ” ಎಂದು ಬರೆದು, ಕೇಸರಿ ಧ್ವಜ ನೆಡಲಾಗಿದೆ, ಆದ್ದರಿಂದಲೇ ಆ ಬೆಟ್ಟವನ್ನು “ಓಂ ಬೆಟ್ಟ” ಎನ್ನುತ್ತಾರೆ. ಚಾರಣಿಗರಿಗೆ ಅತ್ಯಂತ ಪ್ರಶಸ್ತವಾದ ಬೆಟ್ಟವದು. ಇಲ್ಲಿನ ಪ್ರಕೃತಿ ಸೌಂದರ್ಯ ಕಣ್ಮನ ಸೆಳೆಯುತ್ತೆ, ರಮಣೀಯ ನಿಸರ್ಗ. ಇದರ ತುತ್ತ ತುದಿಯ ಮೇಲೆ ದೀಪ ಮಾಲೆ ಕಂಬವಿದೆ.
“ಓಂ” ಬೆಟ್ಟದ ಬುಡದಲ್ಲಿ ಸುಮಾರು 25–30 ಅಡಿ ಆಳದಲ್ಲಿ ನೀರಿನ ಜಲಧಾರೆಯೊಂದು ರಸ್ತೆ ಪಕ್ಕಕ್ಕೆ ಇದೆ. ಇದನ್ನು ‘ಭಜನೆ ಬಾವಿ’ ಎಂದು ಕರೆಯಲಾಗುತ್ತೆ, ಪ್ರತಿ ಅಮಾವಾಸ್ಯೆ ರಾತ್ರಿ ದೇವತೆಗಳು ಇಲ್ಲಿಗೆ ಬಂದು, ಬಾವಿಯಲ್ಲಿ ಮಿಂದು ದೇವರ ಭಜನೆ ಮಾಡುತ್ತಾರೆ ಎಂಬ ಪ್ರತೀತಿ ಇದೆ.
ನಂತರ..
ಸಿದ್ದೇಶ್ವರ ದೇವಸ್ಥಾನದ ಕೊನೆಯ ಎಡ ತುದಿಗೆ ಇರುವ ದುರ್ಗಾದೇವಿ ದೇವಸ್ಥಾನ ನೋಡಿದ್ದಾಯಿತು. ಅಲ್ಲಿನ ಅರ್ಚಕರು “ಅಂತರ ಗಂಗೆ” ಸ್ಥಳದ ಬಗ್ಗೆ ತಿಳಿಸಿದರು. “ಅಂತರ ಗಂಗೆ”ಗೆ ಬೆರಳೆಣಿಕೆಯಷ್ಟು ಭಕ್ತರು, ಪ್ರವಾಸಿಗರು ಮಾತ್ರ ಭೇಟಿ ನೀಡುತ್ತಾರೆ, ಹಲವರಿಗೆ ಇದು ತಿಳಿಯದು. ಮಾರ್ಗ ಮಾತ್ರ ಕಠಿಣವಾಗಿದೆ.
ಇದು ಸುತ್ತು ಬಳಸಿ ಕಾಲುದಾರಿಯ ಮೂಲಕ, ಬಂಡೆಗಲ್ಲು, ಜಾರುವ ಏರು, ಕುರುಚಲು ಪೊದೆ, ಮರಗಳನ್ನು ಬಳಸಿ ಮುಕ್ಕಾಲು ಬೆಟ್ಟ ಏರುವ ದುಸ್ಸಾಹಸದ ಕೆಲಸ.
ಕೊನೆಗೆ ನಾಲ್ಕು ಜನ ಬೆಟ್ಟ ಏರಲು ನಿರ್ಧರಿಸಿ, ಒಬ್ಭರ ಬೆನ್ನ ಹಿಂದೊಬ್ಬರು ಹುರುಪಿನಿಂದ ನಡೆ ಆರಂಭಿಸಿದೆವು. ಅರ್ಧ ಬೆಟ್ಟ ಏರುವುದರೊಳಗೆ ತೊಡೆ ನಡುಗಲಾರಂಭಿಸಿದವು, ಎಲ್ಲರಿಗೂ ಜೋರು ಏದುಸಿರು, ಆಮೇಲೆ ಸಂಪೂರ್ಣ ಮುಂದೇ ಭಾಗಿ ತಿರುವು ಬಳಸಿಕೊಂಡು.. ಅಲ್ಲಲ್ಲಿ ಪೊದೆಗಳ ಸಹಾಯದಿಂದ ಅಂತೂ ದೊಡ್ಡದಾದ ಬಂಡೆ ಏದುರಿಗೆ ದಾರಿ ಕೊನೆಯಾದಾಗ ಏದುಸಿರು ಬಿಡುತ್ತಾ ನಿಂತದ್ಧಾಯಿತು. ಮೈ ತೊಪ್ಪೆಂದು ಬೆವರಿ ಹೋಗಿತ್ತು. ಅಬ್ಬಾ..!! ಆವಾಗಿನ ಅನುಭವ ಹೇಳಲಾಗದು. ಏನೋ ಗೆದ್ದ ಭಾವ.
ಏದುರಾದ ಆ ಭವ್ಯ ಕಾಡು ಕಲ್ಲಿನ ನಡುವೆ ಒಂದು ತೂತು ಕೊರೆಯಲಾಗಿದೆ, ಅಲ್ಲಿ ಕೈ ತೂರಿಸಿದರೆ “ನೀರು” ದೊರೆಯುತ್ತೆ ಅದುವೆ “ಅಂತರ ಗಂಗೆ”.
(ಕೆಲವರಿಗೆ ನೀರು ಅಷ್ಟೇ ಅಲ್ಲದೆ ತಾಂಬೂಲ, ಬಿಲ್ವಪತ್ರೆ, ಹಣ್ಣು ಸಹ ದೊರೆಯುವುದು ಅಂತ ಅರ್ಚಕರು ತಿಳಿಸಿದರು)
ಸಿದ್ದೇಶ್ವರನನ್ನು ನೆನೆದು ಆ ಬಂಡೆಯಲ್ಲಿ ಕೊರೆದ ತೂತಿನಲ್ಲಿ, ಕೈ ತೂರಿಸೆದೆವು, ಒಬ್ಬರ ಕೈ ಸಂಪೂರ್ಣ ನುಗ್ಗುವಷ್ಟು ಆಳವಾಗಿದೆ. ಇಂತ ಬಿಸಿಲಿನಲ್ಲೂ ಅಲ್ಲಿ ನೀರು ದೊರೆಯುತ್ತೆ. ಅಲ್ಲಿಗೆ ನಾವು ಧನ್ಯರು. ಇದು ನಿರ್ಜನ ಪ್ರದೇಶ. ಸ್ವಲ್ಪ ಸಮಯ ಅಲ್ಲಿಯೇ ಕೂತು ಹರಟೆ ಹೊಡೆದು ವಾಪಸ್ಸು ಬೆಟ್ಟ ಇಳಿಯತೊಡಗಿದೆವು, ಇವಾಗ ಕಾಲಿನ ಮೀನುಖಂಡದಲ್ಲಿ ನಡುಕ. ಚಪ್ಪಲಿ ಅಲ್ಲಲ್ಲಿ ಜರಿಯುತ್ತಿದ್ದವು, ಒಬ್ಬರಿಗೊಬ್ಬರ ಸಹಾಯದಿಂದ ನಿಧಾನಕ್ಕೆ ಇಳಿದೆವು. ಅಲ್ಲಿಗೆ ಸಂಪೂರ್ಣ ದೇವಸ್ಥಾನ ಸುತ್ತಿದಂತಾಯಿತು.
“ಕಣವಿ ಸಿದ್ದನಗಿರಿ” ಆಧ್ಯಾತ್ಮಿಕ ಮತ್ತು ಪ್ರವಾಸಿ ತಾಣವಾಗಿದೆ. ದೇವಸ್ಥಾನದ ಎದುರಿಗೆ ಸರ್ಕಾರಿ ಅನುದಾನದಲ್ಲಿ “ಸಮುದಾಯ ಭವನ” ನಿರ್ಮಿಸಲಾಗಿದೆ. ಪ್ರವಾಸಿಗರನ್ನು ಸೆಳೆಯಲು “ಪಾರ್ಕ್” ಸಹ ಇದೆ, ಇನ್ನೂ ಸಂಪೂರ್ಣ ಅಭಿವೃದ್ಧಿಯಾಗಿಲ್ಲ.
ದೂರದಿಂದ ಕೈ ಮಾಡಿ ಕರೆದ ಒಬ್ಬರು.. ” ಮಧ್ಯಾಹ್ನದ ಪ್ರಸಾದ ಸ್ವೀಕರಿಸಲು ಕರೀತಿದಾರೆ ಬನ್ನಿ” ಎಂದರು. ಶಿವ ಒಲಿದಿದ್ದಲ್ಲದೆ, ಅನ್ನಪೂರ್ಣೇಶ್ವರಿಯು ಸಹ ಒಲಿದಳು. ಕಣ್ಮನ ಹೊಟ್ಟೆ ಆಹ್ಲಾದಕರ, ಧನ್ಯ.
“ಕಣವಿ ಸಿದ್ದೇಶ್ವರನಿಗೆ” ನಮಿಸಿ, ಮತ್ತೊಮ್ಮೆ ಎಲ್ಲವನ್ನೂ ಕಣ್ತುಂಬಿಕೊಂಡು ಹೊರಡುವ ಹೊತ್ತಿಗೆ ನಡುಮಧ್ಯಾಹ್ನ ಮೂರು ಗಂಟೆ ಸಮಯ. ಮುಂದೆ ನಡೆದದ್ದು ಮತ್ತೊಂದು ಅಚ್ಚರಿಯ ತಾಣದತ್ತ….
- ಡಾ.ಪ್ರಕಾಶ ಬಾರ್ಕಿ – ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು, ಕಾಗಿನೆಲೆ.