ಕ್ಯಾರೆಟ್ ಹಲ್ವಾ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಮಾಡಬಹುದಾದಂತಹ ಸಿಹಿ ತಿಂಡಿ. ಅದೇ ಹಲ್ವಾ ಮಾಡುವ ಕೈಗಳು ಬೇರೆ ಬೇರೆಯಾದಾಗ, ರುಚಿಯೂ ಬೇರೆ ಬೇರೆಯಾಗಿರುತ್ತದೆ. ಹಬ್ಬಗಳಿಗೆ ಸಿಹಿ ತಿನಿಸು ಮಾಡುವುದುಂಟು, ಅದೇ ಗಣರಾಜ್ಯೋತ್ಸವಕ್ಕೆ ಸಿಹಿ ಮಾಡಿದಾಗ ಗಣರಾಜ್ಯೋತ್ಸವ ಹಬ್ಬವಾಗಿ ಕಾಣುತ್ತದೆ. ನಳಪಾಕ ಪ್ರವೀಣೆ ಪರಿಮಳ ಶಂಕರ್ ಅವರು ಮಾಡಿರುವ ಕ್ಯಾರೆಟ್ ಹಲ್ವಾ ಹೇಗಿದೆ ಮತ್ತು ಅದನ್ನು ಮಾಡುವ ವಿಧಾನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ ಮತ್ತು ನೀವು ಮನೆಯಲ್ಲಿ ಮಾಡಿ ನೋಡಿ …
ಬೇಕಾಗುವ ಸಾಮಗ್ರಿಗಳು :
ಕ್ಯಾರೆಟ್ – ೨ ಕಪ್
ಹಾಲು – ಸ್ವಲ್ಪ
ಸಕ್ಕರೆ – ಮುಕ್ಕಾಲು ಕಪ್ ಗಿಂತ ಕಮ್ಮಿ
ಸಪ್ಪೆ ಕೋವಾ – ೧೦೦ ಗ್ರಾಂ
ಗೋಡಂಬಿ – ಸ್ವಲ್ಪ
ದ್ರಾಕ್ಷಿ – ಸ್ವಲ್ಪ
ತುಪ್ಪ – ಸ್ವಲ್ಪ
ಮಾಡುವ ವಿಧಾನ : ಸ್ಟೋವ್ ಮೇಲೆ ಇರುವ ದಪ್ಪ ತಳ ಬಾಣಲೆಯಲ್ಲಿ ಕ್ಯಾರೆಟ್ ತುರಿಯನ್ನು ಹಾಕಿ. ಅದಕ್ಕೆ ಸ್ವಲ್ಪವೇ ಸ್ವಲ್ಪ ಹಾಲನ್ನು ಹಾಕಿ ಎರಡು ನಿಮಿಷ ಬೇಯಲು ಬಿಡಿ. ತದನಂತರ ಸಕ್ಕರೆ ಸೇರಿಸಿ. ಗಮನದಲ್ಲಿ ಇರಲಿ ಕ್ಯಾರೆಟ್ ಜಾಸ್ತಿ ಬೇಯಲು ಬಿಡದೆ ಅದಕ್ಕೆ ಸಕ್ಕರೆ ಹಾಕಬೇಕು. ಅನಂತರ ಸಪ್ಪೆ ಕೋವಾವನ್ನು ಮಿಶ್ರಣದ ಜೊತೆ ಹಾಕಿ, ಆಗ ಕ್ಯಾರೆಟ್ ನೀರು ಆರಂಭವಾಗುತ್ತದೆ. ಆ ಸಮಯದಲ್ಲಿ ಎರಡು ಚಮಚ ತುಪ್ಪ ಹಾಕಬೇಕು. ಇದೆಲ್ಲ ಆದಮೇಲೆ ಸ್ವಲ್ಪ ಹೊತ್ತು ಮುಚ್ಚಿ ಆವಿಯಲ್ಲಿ ಬೆಯಲು ಬಿಡಿ. ಆಗ ನೀರಿನಂಶ ಕಮ್ಮಿಯಾಗಿ ಹತ್ತು- ಹದಿನೈದು ನಿಮಿಷದಲ್ಲಿ ಗಟ್ಟಿಯಾಗುತ್ತದೆ. ಆಮೇಲೆ ದ್ರಾಕ್ಷಿ , ಗೋಡಂಬಿ ಹಾಕಿ ಅಲಂಕರಿಸಿ.
ಕಡಿಮೆ ಪದಾರ್ಥವನ್ನು ಬಳಸಿ ಮಾಡಬಹುದಂತಹ ಸಿಹಿಯಲ್ಲಿ ಕ್ಯಾರೆಟ್ ಹಲ್ವಾ ಕೂಡಾ ಒಂದು. ರುಚಿಯಾದ, ಮನಸ್ಸಿಗೆ ಖುಷಿ ಕೊಡುವ ಕ್ಯಾರೆಟ್ ಹಲ್ವಾವನ್ನು ನೀವು ಕೂಡಾ ಮಾಡಿ ನೋಡಿ ಎನ್ನುತ್ತಾ ಎಲ್ಲರಿಗೂ ಗಣರಾಜ್ಯೋತ್ಸದ ಶುಭಾಶಯಗಳು…
- ಕೈ ರುಚಿ : ಪರಿಮಳ ಶಂಕರ್, ಮೈಸೂರು.