ಡಾ. ಅಶೋಕ ನರೋಡೆ ಅವರು ಇತ್ತೀಚಿನ ಪ್ರವಾಸ ಮನಮೋಹಕ ಮಾಲ್ಡೀವ್ಸ್ ದ್ವೀಪದ ಕುರಿತು ಬರೆದ ‘ಪ್ರೇಮಿಗಳ ಪ್ಯಾರಾಡೈಸ್ ಮಾಲ್ಡೀವ್ಸ್’ ಪುಸ್ತಕಕ್ಕೆ ಲೇಖಕಿ ಕವಿತಾ ಹೆಗಡೆ ಅಭಯಂ ಅವರು ಬೆನ್ನುಡಿ ಬರೆದಿದ್ದಾರೆ. ದೇಶ ಸುತ್ತುವ, ಕೋಶ ಓದುವ ಎರಡೂ ಅದ್ಭುತ ರುಚಿಯನ್ನು ಡಾ. ಅಶೋಕ ನರೋಡೆ ಅವರು ಈ ಪುಸ್ತಕದ ಮೂಲಕ ಓದುಗನಿಗೆ ನೀಡಿದ್ದಾರೆ, ಪುಸ್ತಕದ ಕುರಿತು ತಪ್ಪದೆ ಮುಂದೆ ಓದಿ…
ಪುಸ್ತಕ : ಪ್ರೇಮಿಗಳ ಪ್ಯಾರಾಡೈಸ್ ಮಾಲ್ಡೀವ್ಸ್
ಲೇಖಕರು : ಡಾ. ಅಶೋಕ ನರೋಡೆ
ಪ್ರಕಾಶನ : ಸಚಿನ್ ಪಬ್ಲಿಷರ್ಸ್
ಪುಟ : ೨೨೪
ಬೆಲೆ : ೨೦೦/-
ಅವರ “ಪ್ರೇಮಿಗಳ ಪ್ಯಾರಾಡೈಸ್ ಮಾಲ್ಡೀವ್ಸ್ ” ಪುಸ್ತಕದ ಬಗ್ಗೆ ಬರೆದ ಅನಿಸಿಕೆಯ ಸಾರಾಂಶವನ್ನು ಬೆನ್ನುಡಿಯಾಗಿಟ್ಟುಕೊಂಡಿದ್ದು ತುಂಬ ಸಂತೋಷವಾಯ್ತು. ಡಾ. ಅಶೋಕ ನರೋಡೆಯವರೆಂದರೆ ತನ್ನ ಧಮನಿಗಳಲ್ಲಿ ಸಾಹಿತ್ಯಪ್ರೇಮ ಹಾಗೂ ನಿರಂತರ ಸಂಚಾರದ ಅಭಿರುಚಿಯನ್ನು ತುಂಬಿಕೊಂಡ ಸಹೃದಯಿ. ತನ್ನ ಜೀವನದ ಪಯಣದುದ್ದಕ್ಕೂ ದರ್ಶಿಸಿದ ತಾಣಗಳು, ವ್ಯಕ್ತಿಗಳು, ಘಟನೆಗಳು ಹಾಗೂ ಅಸದೃಶ ಅನುಭವ ಅವರ ವಾಸ್ತವದ ದರ್ಶನಕ್ಕೆ ಸಜ್ಜುಗೊಳಿಸಿವೆ.
ಕವನ, ಸಂಪಾದನೆ, ಸಂಶೋಧನೆ, ಮಾರ್ಗದರ್ಶನ, ಅಧ್ಯಾಪನ ವೃತ್ತಿ ಹೀಗೆ ಹಲವು ರೀತಿಯ ಅಭಿರುಚಿ ಹಾಗೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ದೇಶ ವಿದೇಶಗಳ ಪ್ರವಾಸವನ್ನೂ ತಮ್ಮ ಆದ್ಯತೆಯನ್ನಾಗಿಸಿಕೊಂಡಿರುವ ನರೋಡೆಯವರು ಕೈಗೆತ್ತಿಕೊಂಡ ಇತ್ತೀಚಿನ ಪ್ರವಾಸ ಮನಮೋಹಕ ಮಾಲ್ಡೀವ್ಸ್ ದ್ವೀಪದೇಶದ್ದು. ದೇಶ ಸುತ್ತುವ, ಕೋಶ ಓದುವ ಎರಡೂ ಅದ್ಭುತ ರುಚಿಗಳು ಇವರ ತಟ್ಟೆಯಲ್ಲಿರುವ ಕಾರಣ ಯಾವುದನ್ನು ಕೈಗೆತ್ತಿಕೊಂಡರೂ ಓದುಗನಿಗೆ ಸವಿ ತುತ್ತು ದೊರಕುವುದು ಖಚಿತ. ತಮ್ಮ ಸೀಮಿತ ಸಮಯದ ಒಂದೊಂದು ಕ್ಷಣವನ್ನೂ ಸದಾ ಸದುಪಯೋಗಪಡಿಸಿಕೊಳ್ಳುವತ್ತಲೇ ಚಿತ್ತವಿಟ್ಟ ನರೋಡೆಯವರು ಈ ಪ್ರವಾಸವನ್ನು”ಪ್ರೇಮಿಗಳ ಪ್ಯಾರಡೈಸ್ ಮಾಲ್ಡೀವ್ಸ್” ಎಂಬ ಭಾವಜಾಗೃತಿ ಮೂಡಿಸುವ ಪುಸ್ತಕರೂಪದಲ್ಲಿ ಕಥನಗೈದಿರುವುದು ಬಹಳ ಆಸಕ್ತಿದಾಯಕವಾಗಿದೆ.
ನರೋಡೆಯವರ ಪ್ರವಾಸ ಕಥನ ಆಪ್ತವೆನಿಸುವುದು ಅವರ ಯಾವ ಕೃತಕತೆಯೂ ಇರದ ಪ್ರಾಮಾಣಿಕ ನಿರೂಪಣೆಯಿಂದ ಅಂದರೆ ಅತಿಶಯೋಕ್ತಿಯಲ್ಲ. ಪ್ರವಾಸದ, ಆರಂಭ, ಅಡ್ಡಿ -ಆತಂಕಗಳು, ಹೊಸ ಪ್ರದೇಶದ ಹಿತ -ಅಹಿತಕರ ಅನುಭವಗಳು, ಗಳಿಸಿದ ಜ್ಞಾನ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ, ವಿವರವಾಗಿ ನಿರೂಪಿಸುತ್ತ ಓದುಗರಿಗೆ ಸಮಗ್ರ ಮಾಹಿತಿಯನ್ನು ಕೊಡುವ ಪರಿ ಅವರ ಆಸಕ್ತಿ ಹಾಗೂ ಅಧ್ಯಯನಶೀಲತೆಗೆ ಸಾಕ್ಷಿ.
“ಜೀವನ ಪ್ರೀತಿಯುಳ್ಳವರಿಗೆ, ಬದುಕಿನಲ್ಲಿ ಶ್ರದ್ಧೆಯುಳ್ಳವರಿಗೆ ಪ್ರವಾಸ ಹೊನ್ನಗಣಿಯಾಗಿದೆ” ಎನ್ನುವ ಮಾತು ಅದೆಷ್ಟು ಅರ್ಥಪೂರ್ಣವಾಗಿದೆ!
ಮೊದಲ ಅಧ್ಯಾಯದಲ್ಲಿ ಮಾಲ್ಡೀವ್ಸಿನ ಮಾಂತ್ರಿಕತೆಯನ್ನು ಚಿತ್ರಿಸುವ ಲೇಖಕರು ಈ ಪ್ರವಾಸದ ಕಾರ್ಯಕಾರಣ ಸಂಬಂಧವನ್ನು ವಿವರಿಸಿದ್ದಾರೆ. ಅಲ್ಲಿ ಜರುಗಬೇಕಾದ “ಸಂಸ್ಕೃತಿ ಸಮ್ಮೇಳನ”ದಲ್ಲಿ ಭಾಗವಹಿಸಬೇಕಾಗಿದ್ದರೂ ಕೊರೊನಾ ಮಹಾಮಾರಿ ಈ ಕಾರ್ಯಕ್ರಮವನ್ನು ಸ್ಥಬ್ದವಾಗಿಸಿ ಪರಿಸ್ಥಿತಿ ಸರಿಹೋದಾಗ ಮತ್ತೆ ಒದಗಿಬಂದ ಸದವಕಾಶದ ಬಗ್ಗೆ ಸುಂದರ ವರ್ಣನೆಯಿತ್ತಿದ್ದಾರೆ. ಹಲವು ಇಲ್ಲಗಳ ನಡುವೆಯೂ ಬರಿಯ ನಿಸರ್ಗಮಾತೆಯ ಆಶೀರ್ವಾದದಿಂದ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಆಕರ್ಷಕ ತಾಣವಾದ ಮಾಲ್ಡೀವ್ಸ್ ಅವರನ್ನು ಕೈಬೀಸಿ ಕರೆದ ಪರಿಯಿದೆ. ಮುಂದೆ ಮಾಲ್ಡೀವ್ಸಿನಲ್ಲಿ 25ನೇ ಅಂತರಾಷ್ಟ್ರೀಯ ಕಲ್ಚರಲ್ ಫೆಸ್ಟ್ನಲ್ಲಿ ಭಾಗವಹಿಸಲು ಬಂದ ಆಮಂತ್ರಣವಿದೆ.
ಲೇಖಕರ ಅಧ್ಯಯನಶೀಲತೆ ಹೆಜ್ಜೆ ಹೆಜ್ಜೆಗೂ ಪರಿಚಯವಾಗುವುದು ಅವರು ಸ್ವತಃ ತಾವು ಅರಿತು ಇತರರಿಗೂ ತಮ್ಮ ಗಮ್ಯದ ಸಮಗ್ರ ಮಾಹಿತಿ ನೀಡುವಲ್ಲಿ. ಬ್ರಿಟಿಷರ ವಸಾಹತಾದ ಮಾಲ್ಡೀವ್ಸ್ 1965ರಲ್ಲಿ ಸ್ವತಂತ್ರವಾಗಿ ತನ್ನನ್ನು ಗಣತಂತ್ರ ದೇಶವೆಂದು ಘೋಷಿಸಿಕೊಂಡು ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವ, ಅದರ ಭೋಗೋಳಿಕ ಸ್ಥಾನ, ವಿಸ್ತೀರ್ಣ, ಜನಸಾಂದ್ರತೆಯೇ ಮೊದಲಾಗಿ ದೇಶದ ಸಂಪೂರ್ಣ ವಿವರ ಸಿಕ್ಕಿಬಿಡುತ್ತದೆ. ಪ್ರತಿ ವಿವರವನ್ನೂ ಲೇಖಕರು ಎಚ್ಚರಿಕೆಯಿಂದ ಕಲೆಹಾಕಿದ್ದು ವಿಶ್ವದ ಅತಿ ಕಿರಿದಾದ ಇಸ್ಲಾಮಿಕ್ ದೇಶದ ಒಂದು ಒಳ್ಳೆಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅಲ್ಲಿನ ಅರಣ್ಯ, ಒಕ್ಕಲುತನ, ವೇಷ, ಭಾಷೆ, ಪ್ರವಾಸೋದ್ಯಮ ಒದಗಿಸುವ ವಿವಿಧ ಸೌಲಭ್ಯಗಳ ಯಥಾವತ್ತಾದ ಚಿತ್ರಣ ಬಲು ಆಪ್ತವೆನಿಸುತ್ತದೆ.
ಲೇಖಕರ ಪ್ರವಾಸದ ಆರಂಭ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮ್ಮ ಗುಂಪಿನೊಂದಿಗೆ ಸೇರಿಕೊಂಡ ವರ್ಣನೆ ಬಹಳ ಉತ್ಸಾಹ ತರುವುದರಲ್ಲಿ ಸಂಶಯವೇ ಇಲ್ಲ. ಕೊರೊನಾ ಮಹಾಮಾರಿಯ ದೈತ್ಯ ಬಾಹುಗಳು ಪ್ರವಾಸೋದ್ಯಮವನ್ನೇ ಇಡಿಯಾಗಿ ಆಪೋಷಣ ತೆಗೆದುಕೊಂಡು ಹೇಗೆ ವಿಮಾನ ನಿಲ್ದಾಣಗಳನ್ನು ಖಾಲಿ ಕೆಡವಿತೆನ್ನುವ ವಿಷಾದಭರಿತ ವಿವರಣೆ ಜಗತ್ತಿನ ಬದಲಾವಣೆಯ ಪರ್ವದ ಚಿತ್ರಣವಾಗಿದೆ. ಕಡೆಗೆ ಎಲ್ಲ ತಪಾಸಣೆಯ ಪ್ರಹಸನಗಳನ್ನು ಮುಗಿಸಿ ಹೇಗೆ ತಮ್ಮ ಗಮ್ಯದತ್ತ ಹಾರಿದ್ದರೆನ್ನುವ ಕುತೂಹಲಕಾರೀ ಘಟನೆಗಳಿವೆ. ಊಟ ತಿಂಡಿ, ಮೋಜು, ಮಜಾಗಳು ಲೇಖಕರ ಆದ್ಯತೆಯಾಗಿ ತೋರದಿದ್ದರೂ ಒಂದನ್ನೂ ಬಿಡದೇ ದಾಖಲಿಸುತ್ತಾರೆ. ಲೇಖಕರ ಸಂಶೋಧನಾ ಪ್ರವೃತ್ತಿ ಅವರನ್ನು ಸುಮ್ಮನೆ ಇರಗೊಡದು.
ವೆಲಾನಾ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೀಡ್ ಬೋಟ್ ಮುಖಾಂತರ ಅವರ ವಾಸ್ತವ್ಯವಾದ ಮಾಫುಶಿ ದ್ವೀಪ ತಲುಪುವ ಸಾಹಸ ಬಹಳ ಚೆನ್ನಾಗಿದೆ. ಅಲ್ಲಿನ ಕ್ಯಾನಿ ಪಾಮ್ ಗ್ರ್ಯಾಂಡ್ ಹೋಟೆಲ್, ಅಲ್ಲಿನ ವೈಫೈ ವೈಫಲ್ಯ, ನೆಟ್ವರ್ಕ್ ತೊಂದರೆ ತಂದ ಭ್ರಮನಿರಸನ ಮುಂತಾದ ವಿಷಯಗಳನ್ನು ಮುಚ್ಚುಮರೆಯಿಲ್ಲದೆ ಹಂಚಿಕೊಳ್ಳುತ್ತಾರೆ.
‘ಪ್ರೇಮಿಗಳ ಪ್ಯಾರಾಡೈಸ್ ಮಾಲ್ಡೀವ್ಸ್’ ಲೇಖಕ ಡಾ. ಅಶೋಕ ನರೋಡೆ
ಮರುದಿನ ಕಾರ್ಯಕ್ರಮ ಸಂಜೆಗೆ ನಿಗದಿಯಾಗಿದ್ದ ಕಾರಣ ಬೆಳಗಿನ ಸಮಯದಲ್ಲಿ ಅರ್ಧದಿನದ ಪ್ರವಾಸಕ್ಕೆ ಕೆಲ ಸಹಪಯಣಿಗರು ಮನಸ್ಸು ಮಾಡಿದರೆ, ಸಮಯಕ್ಕೆ ಸರಿಯಾಗಿ ಬಂದು ತಲುಪದಿದ್ದರೆ ಬಂದ ಉದ್ದೇಶವೇ ವಿಫಲವಾಗುವ ಕಾರಣದಿಂದ ಹಾಗೂ ಬಹುತೇಕ ಎಲ್ಲ ಪ್ರೇಕ್ಷಣೀಯ ಸ್ಥಳಗಳು ಒಂದೇ ರೀತಿಯಲ್ಲಿದ್ದರೂ ಇಲ್ಲದ ಆಮಿಷ ಒಡ್ಡಿ ಪ್ರವಾಸಿಗರ ಸುಲಿಗೆ ಮಾಡುವ ಮನಃಸ್ಥಿತಿಯನ್ನು ಅಲ್ಲಿಯೂ ಕಂಡು ಲೇಖಕರು ಜಾಗೃತಿ ವಹಿಸುತ್ತಾರೆ.
ಆಯೋಜಕರಾದ ಮಂಜುನಾಥ ಸಾಗರ, ಕಾರ್ಯಕ್ರಮ ನಿರೂಪಕಿಯರಾದ ಪ್ರತಿಭಾ ಗೌಡ, ಪುಷ್ಪಾ ಆರಾಧ್ಯ, ಖ್ಯಾತ ಸಾಹಿತಿ ಮಲ್ಲೇಪುರಂ ವೆಂಕಟೇಶ್, ಸಹ ಪ್ರಯಾಣಿಕರಾದ ಮಹದೇವ ಸತ್ತಿಗೇರಿ, ಪ್ರಶಾಂತ ಮಹಾಜನ, ನೃತ್ಯ ವಿದುಷಿ ಸಹನಾ ಭಟ್, ಗೊ ನಾ ಸ್ವಾಮಿ, ಬಿಂಡಿಗನವಿಲೆ, ಹೀಗೆ ಎಲ್ಲರೂ ಒಂದಿಲ್ಲೊಂದು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿರುವ ಸಹೃದಯಿಗಳನ್ನು ನೆನೆದು ಅವರ ಕುರಿತು ಕಿರು ಪರಿಚಯವನ್ನು ನೀಡುವುದನ್ನು ಲೇಖಕರು ಮರೆಯುವುದಿಲ್ಲ.
ಬಲು ಆಸ್ಥೆಯಿಂದ ಕಾರ್ಯಕ್ರಮದ ಸ್ಥಳವನ್ನು ಸಮಯಕ್ಕೆ ಸರಿಯಾಗಿ ತಲುಪಿ, ಕಾದು ಕಾರ್ಯಕ್ರಮದಲ್ಲಿ ಭಾಗ ವಹಿಸಿ ತಮ್ಮ ಆದ್ಯತೆಯನ್ನು ಮೆರೆಯುತ್ತಾರೆ. ಕಾರ್ಯಕ್ರಮದಲ್ಲಿ ತಮಗೆ ಹಾಗೂ ಸಭಿಕರಿಗೆ ಸಂತೋಷ ತಂದ ಗಳಿಗೆಗಳನ್ನೂ ಅಷ್ಟಾಗಿ ಪ್ರಭಾವ ಬೀರದ ಘಟನೆಗಳನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ಅವರ ಬಹು ನಿರೀಕ್ಷಿತ ಪುಸ್ತಕ “ಮಹಾಕಾವ್ಯಗಳಲ್ಲಿ ಬುದ್ಧ” ಲೋಕಾರ್ಪಣೆಗೆ ಒಳಗಾಗುವುದು, ಲೇಖಕರ ಸಾಹಿತ್ಯ ಸಾಧನೆಗಳನ್ನು ನಿರೂಪಕರು ಸುಂದರವಾಗಿ ಅಭಿವ್ಯಕ್ತಗೊಳಿಸುವುದು ಒಂದು ಸಾರ್ಥಕ ಗಳಿಗೆಯ ಚಿತ್ರಣವಾಗಿದೆ.
ಲೇಖಕರು ಕಾರ್ಯಕ್ರಮದ ವಿವರಗಳನ್ನು ಯಾವ ಭಾವೋದ್ವೇಗಗಳಿಲ್ಲದೆ ಸಮಚಿತ್ತದಿಂದ ನಿರೂಪಿಸಿರುವುದು ಅವರ ಅನುಭವಬಾಹುಳ್ಯಕ್ಕೂ ಪ್ರಬುದ್ಧತೆಗೂ ಹಿಡಿದ ಕನ್ನಡಿ. ಇದೇ ಲೇಖಕರ ಮನ ಅರಳುವುದು ಮಾತ್ರ ಪ್ರಕೃತಿಮಾತೆಯ ಮಡಿಲಲ್ಲಿ. ಅಪಾರ ಜಲರಾಶಿ ಹೊಂದಿದ ಸಾಗರ ತೀರದ ಸಂಚಾರ ಮಾತ್ರ ಅವರನ್ನು ತೀವ್ರ ಭಾವಪರವಶಗೊಳಿಸುತ್ತದೆ.
“ಗಾಳಿಯ ರಭಸಕ್ಕೆ ತೆರೆಗಳು ಏಳುವಾಗ ಹೊನ್ನಿನ ನೀರು ಚಿಮ್ಮಿದಂತೆ ಅಲೌಕಿಕ ಅನುಭವ! ದಿವ್ಯಾನುಭೂತಿ!!” ಎಂದು ಕವಿಯಾಗಿಬಿಡುವ, ವರಕವಿ ಬೇಂದ್ರೆ, ಕುವೆಂಪು, ಗೋಕಾಕರಂಥ ಪೂರ್ವಸೂರಿಗಳ ಅಮರ ಕವಿತೆಗಳನ್ನು ನೆನೆ ನೆನೆದು ಸಂಭ್ರಮಿಸುವ ಸಮಯ ನಿಜಕ್ಕೂ ಇಡೀ ಪುಸ್ತಕಕಕ್ಕೆ ಕಳಸಪ್ರಾಯ ಕಥನ ಎನ್ನಬಹುದು. ಏಕಾಂತ ಹಾಗೂ ಪ್ರಕೃತಿಯ ಸಾನ್ನಿಧ್ಯ ಅವರನ್ನು ಸಂಪೂರ್ಣವಾಗಿ ಆವರಿಸಿ ಅವರೊಳಗಿನ ಕವಿಯನ್ನು ಜಾಗೃತವಾಗಿಡುತ್ತವೆ.
ಕೊರೊನಾ ಮಹಾಮಾರಿ ಊರಿಗೆ ಹಿಂದಿರುಗುವ ದಾರಿಯನ್ನು ಕೂಡ ಸುಲಲಿತವಾಗಿಸಿಲ್ಲ. ಟೆಸ್ಟ್ ರಿಪೋರ್ಟ್ಗಳನ್ನು ಅಪ್ಲೋಡ್ ಮಾಡಲು ಎಲ್ಲರೂ ನಿದ್ರೆಗೆಟ್ಟು ಒದ್ದಾಡುವುದು, ನಿದ್ರೆಗೆ ಶರಣು ಹೋದವರು ಮರುದಿನ ಪೇಚಾಡುವುದು ಅತ್ಯಂತ ಸಹಜವಾಗಿ ವರ್ಣಿತವಾಗಿದೆ. ಅಂತೂ ಎಲ್ಲವೂ ಸರಿಹೋಗಿ ಬೆಂಗಳೂರು ಸೇರಿ ತಮ್ಮ ತಮ್ಮ ವಾಸ ಸ್ಥಳಕ್ಕೆ ಬಂದು ಸೇರಿಕೊಂಡಾಗ ಅದೇನೋ ಅಪೂರ್ವ ಧನ್ಯತೆ ಕಾಣಬರುತ್ತದೆ. ಒಟ್ಟಾರೆಯಾಗಿ ನೋಡಿದಾಗ ಲೇಖಕರಲ್ಲಿ ಒಂದು ಅದಮ್ಯ ಜೀವನೋತ್ಸಾಹವಿದೆ, ಆದರೆ ಎಲ್ಲವನ್ನೂ ಮುಗಿಸಿಬಿಡುವ ಅವಸರವಿಲ್ಲ. ಪ್ರಖರ ಪಾಂಡಿತ್ಯವಿದೆ, ಆದರೆ ಪ್ರತಿಷ್ಠೆಯಿಲ್ಲ. ಅಪಾರ ಅನುಭವವಿದೆ, ಆದರೆ ಇತರರಿಗೆ ಇರುಸು ಮುರುಸು ಉಂಟಾಗುವ ಹಾಗೆ ಮಾಡುವುದಿಲ್ಲ, ಶರಣ ನಡೆಯಂತೆ ಸರಳ, ಸಜ್ಜನಿಕೆಯ ಮೂಲಕ ಪ್ರವಾಸದಲ್ಲಿ ಸಹಚರರ ಮನ ಗೆಲ್ಲುತ್ತಾರೆ.
ಮುಂದಿನ ಭಾಗಗಳಲ್ಲಿ ಲೇಖಕರು ಮಾಲ್ಡೀವ್ಸ್ ಬಗ್ಗೆ ಅತ್ಯಂತ ಪಾಂಡಿತ್ಯಪೂರ್ಣ ಹಾಗೂ ಅಧ್ಯಯನಪೂರ್ವಕವಾದ ಸಮಗ್ರ ಮಾಹಿತಿಯನ್ನು ತೆರೆದಿಡುವುದು ಪುಸ್ತಕದ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ. ಬರಿಯ ತಿರುಗಿದೆ, ತಿಂದೆ, ಸಂತೋಷಪಟ್ಟೆ ಎಂಬ ಅನುಭವಗಳ ಕಥನದ ಪುಸ್ತಕ ಇದಲ್ಲ. ಆದರೆ ಇಲ್ಲಿ ಮಾಲ್ಡೀವ್ಸ್ ಎಂಬ ಪುಟ್ಟ ದ್ವೀಪದ ಬಗ್ಗೆ ಗಹನ ಚರ್ಚೆಯಿದೆ. ರಾಷ್ಟ್ರದ ಕುತೂಹಲಕಾರೀ ಇತಿಹಾಸವಿದೆ. ಪುರಾತನ ಬೌದ್ಧ ಮತವನ್ನು ಹತ್ತಿಕ್ಕಿ ಇಸ್ಲಾಮಿಕ್ ಆಡಳಿತ ಸ್ಥಾಪಿಸಿ ತಮ್ಮ ಮತವನ್ನು ರಾಷ್ಟೀಯ ಧರ್ಮವನ್ನಗಿಸಿದ ರಾಜಕೀಯ ಪರಿಸ್ಥಿತಿಯ ಪಲ್ಲಟದ ಸುದೀರ್ಘ ವಿವರಣೆಯಿದೆ. ಅದರೊಂದಿಗೆ ದೇಶೀ ಸಂಸ್ಕೃತಿ ಹೊಸ ಸಂಸ್ಕೃತಿಯೊಂದಿಗೆ ಬೆಸೆದುಕೊಂಡ ದಾರಿಯ ಅವಲೋಕನವಿದೆ. ಭಾಷೆಯ ಹಾಗೂ ಬದುಕಿನ ಮೇಲಾದ ಪ್ರಭಾವದ ಕಥೆಯಿದೆ. ಮಾನವ ನಿರ್ಮಿತ ಕಟ್ಟಡಗಳ ಬದಲು ಅಲ್ಲಿನ ಪ್ರಸಿದ್ಧ ನೈಸರ್ಗಿಕ ಪ್ರೇಕ್ಷಣೀಯ ಸ್ಥಳಗಳು, ಅತ್ಯದ್ಭುತ ಸಾಗರ ತೀರಗಳು, ರೋಮಾಂಚನಕಾರೀ ಹವಳ ದ್ವೀಪಗಳು, ಜಲಚರ, ಜೀವ ಸಂಕುಲದ ವೈವಿಧ್ಯತೆ, ಸಾಹಸ ಕ್ರೀಡೆಗಳು, ಮಧುಚಂದ್ರಕ್ಕೆ ಆಗಮಿಸಿದ ನವಜೋಡಿಗಳು ಹಾಗೂ ಪ್ರೇಮಿಗಳ ಪಾಲಿಗೆ ದ್ವೀಪ ಹೇಗೆ ಮತ್ತು ಏಕೆ ಪ್ರೇಮಿಗಳ ಪ್ಯಾರಾಡೈಸ್ ಆಗಿದೆ ಎನ್ನುವ ಸಮೀಕ್ಷೆಯಿದೆ. ಜಾಗತಿಕ ಜಲಮಟ್ಟ ಏರಿಕೆಯಿಂದ ಮುಳುಗುವ ಭೀತಿಯಲ್ಲಿರುವ ಮಾಲ್ಡೀವ್ಸ್ ಬಗೆಗಿನ ಆತಂಕವಿದೆ. ಅಲ್ಲಿ ತೆಗೆದುಕೊಂಡ ಅಪರೂಪದ ಛಾಯಾಚಿತ್ರಗಳು ಹಾಗೂ ತಿರುಗಿ ಊರಿಗೆ ಬಂದ ನಂತರ ಪುಸ್ತಕ ಬಿಡುಗಡೆಯ ಪತ್ರಿಕಾ ವರದಿಯ ಚಿತ್ರಗಳ ಸಂಚಯನವಿದೆ.
ಒಟ್ಟಿನಲ್ಲಿ ಇದೊಂದು ಪುಸ್ತಕವನ್ನು ಕೈಲಿ ಹಿಡಿದುಕೊಂಡು ಮಾಲ್ಡೀವ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವುದು ಖಂಡಿತ ಸಾಧ್ಯ. ಹೀಗೆ ಈ ಪುಸ್ತಕ ಸರ್ವಕಾಲಕ್ಕೂ ತನ್ನ ಮಾಹಿತಿಪೂರ್ಣತೆಯ ಗುರುತ್ವದಿಂದ ಒಂದೊಳ್ಳೆ ಪುಸ್ತಕ ಓದಿದ ಅನುಭೂತಿ ಮೂಡಿಸುತ್ತದೆ.
ತಾವು ಮಾಡಿದ ಪ್ರತಿ ಪ್ರವಾಸವನ್ನೂ ಒಂದು ಅದ್ಭುತ ಕಥನದ ರೂಪದಲ್ಲಿ ಕೈಗಿಡುವ ಡಾ. ಅಶೋಕ ನರೋಡೆಯವರು ಇನ್ನಷ್ಟು ಪ್ರವಾಸ ಮಾಡುತ್ತಿರಲಿ, ಹೀಗೇ ಅತ್ಯುಪಯುಕ್ತ ಪುಸ್ತಕಗಳನ್ನು ನಮಗೆ ನೀಡುತ್ತಿರಲಿ ಎಂಬ ಹಾರೈಕೆಯೊಂದಿಗೆ ಈ ಪುಸ್ತಕಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಬೆನ್ನುಡಿ ಬರೆಸಿದ ಅಶೋಕ ನರೋಡೆ ಅವರಿಗೆ ಧನ್ಯವಾದಗಳು.
- ಕವಿತಾ ಹೆಗಡೆ ಅಭಯಂ, ಹುಬ್ಬಳ್ಳಿ