ಚನ್ನಕೇಶವ ಜಿ ಲಾಳನಕಟ್ಟೆಯವರ ಕವನ ಸಂಕಲನದಲ್ಲಿರುವ ಪ್ರತಿಯೊಂದು ಪದಗಳೂ “ಪುಟಿಪುಟಿದೇಳುವ ಚಂದು; ಪಿರಂಗಿಯೊಳಗಿನ ಸಿಡಿಗುಂಡು”. ಕವನ ಸಂಕಲನ ‘ಯುಗಾದಿ’ (ವರ್ಷದ ಆರಂಭ) ಯುಗದ ಆದಿಯೂ ಹೌದು, ಲಾಳನಕಟ್ಟೆಯವರ ಸಾಹಿತ್ಯ ಕ್ಷೇತ್ರಕ್ಕೆ ಭದ್ರ ಬುನಾದಿಯು ಹೌದು! ಕೃತಿಯ ಹ ಸರು ಔಚಿತ್ಯಪೂರ್ಣವಾಗಿದೆ. – ಶಮಂತಕುಮಾರ್ .ಎಸ್, ತಪ್ಪದೆ ಮುಂದೆ ಓದಿ ‘ಯುಗಾದಿ’ ಕವನ ಸಂಕಲನ ಪರಿಚಯ…
ಪುಸ್ತಕ : ‘ಯುಗಾದಿ’ ಕವನ ಸಂಕಲನ
ಕವಿಗಳು : ಚನ್ನಕೇಶವ ಜಿ ಲಾಳನಕಟ್ಟೆ
ಪ್ರಕಾಶಕರು : ಗುರು ಪ್ರಕಾಶನ
ಬೆಲೆ : ೧೧೦/
ಕವನ ಸಂಕಲನದಲ್ಲಿ 70 ಕವನಗಳಿವೆ, ಪ್ರತಿಯೊಂದು ಕವನವೂ ವಸ್ತು ವಿಷಯದಲ್ಲಿ, ಶೈಲಿಯಲ್ಲಿ ಭಿನ್ನವಾಗಿವೆ.ಸಂಕಲನದ ತುಂಬೆಲ್ಲಾ ಗಂಡು ನುಡಿಗಳಿಲ್ಲದೆ,ಸೌಮ್ಯವರ್ಣದಿಂದ ಕೂಡಿದ ಕಾಂತಾಸಂಹಿತಯಾಗಿದೆ.
‘ನಾನು ಕವಿಯಲ್ಲ, ಕವಿತೆ ಬರೆಯಲ್ಲ,ಭಾವನೆಯ ಆಟವಷ್ಟೇ. ಬೆರೆವ ತುಡಿತವಿಲ್ಲ,ಆಡುನುಡಿಯೆಲ್ಲ, ಜೀವನದ ಪಾಠವಷ್ಟೇ’ ಎನ್ನುವ ಪದ್ಯವನ್ನು ಓದುವಾಗ ಪಂಪನ ವ್ಯಾಸಮುನೀಂದ್ರ ರುಂದ್ರ ವಚನಾಮೃತರ್ವಾಯನೀಸುವೆ೦ ಕವಿ ವ್ಯಾಸನನೆಂಬ ಗರ್ವಮೆನಗಿಲ್ಲ’ ಎನ್ನುವ ಪದ್ಯ ನೆನಪಾಗುತ್ತದೆ. ಈ ಒಂದು ಮಹೋನ್ನತ ಗುಣ ಕವಿಯಾದವನಿಗೆ ಇರಬೇಕು.ಇದನ್ನು ಲಾಳನಕಟ್ಟೆಯವರು ಮನನ ಮಾಡಿಕೊಂಡಿದ್ದಾರೆ.ಈ ಕವಿತೆ ಸಂಕಲನದ ಆರಂಭದಲ್ಲಿ ಇರಬೇಕಿತ್ತು .
ಭೂರಮೆ ಕವನವು ಸೃಷ್ಟಿಯಲ್ಲಿನ ಸಕಲ ಚರಾಚರ ವಸ್ತುಗಳನ್ನು ಒಂದು ಕ್ಷಣ ಕಣ್ಮುಂದೆ ಹಾದುಹೋಗುವಂತೆ ಮಾಡುತ್ತದೆ.ಇಳೆಯಲ್ಲಿ ಏನಿಲ್ಲ? ಸಕಲವೂ ಇದೆ. ಪದ್ಯದಲ್ಲಿ ಭೂರಮೆಯು ‘ಸೊಗಸಲ್ಲಿ ಮಲೆಯನು ಹೊಡೆಯುತ್ತಿದೆ’ ಎನ್ನುವುದು ವಿನೂತನ ಕಲ್ಪನೆ. ಕವಿ ಕೌಶಲ, ಕವಿ ಜಾಣ್ಮೆಗೆ ಹಿಡಿದ ಕನ್ನಡಿಯಂತಿದೆ.
ಶಿವಶರಣ್ ಕವನ ಸಂಕಲನದಲ್ಲಿ ಕವಿಗೆ ಶಿವನ ಕಾಣುವ ತುಡಿತವಿದೆ, ಮಿಡಿತವಿದೆ ‘ಮರಣ ಭಿಕ್ಷೆಗೆ ಮೊರೆಯನಿಡುವೆ, ಸುರಿಸಿ ಭಕ್ತಿಯ ಹರಿಸುವೆ’. ಇಲ್ಲಿ ಭಕ್ತಿ ಭಾವ ಭೋರ್ಗರೆದು ಪ್ರವಹಿಸಿದೆ. ‘ಶರಣರ ಗುಣವನ್ನು ಮರಣದಲ್ಲಿ ಕಾಣು’ ಎಂದಿದ್ದಾರೆ ವಚನಕಾರರು. ಆದರೆ ಆ ಶರಣರ ಗುಣವನ್ನು ನಾವು ಈ ಕವನದಲ್ಲಿ ಕಾಣಬಹುದಾಗಿದೆ.
ಫಲ ಬಿಟ್ಟ ಮರ ಬಾಗುತ್ತದೆ. ತೆನೆ ಬಿಟ್ಟ ಬೈರು ಬಾಗುತ್ತದೆ, ಆದರೆ ಮನುಷ್ಯ ಮಾತ್ರ ಬಾಗದೆ ಬೀಗುತ್ತಾನೆ. ಅದು ಸಲ್ಲದು ಎನ್ನುವ ನೀತಿ ತಾಯಿ ದೇವರು ಎನ್ನುವ ಕವಿತೆಯು ‘ಕಾಯವಿದುವೆ ಬಾಗಲಿ’ ಎನ್ನುವಲ್ಲಿ ವ್ಯಕ್ತವಾಗಿದೆ. ‘ತಾಯಿ ಇಳೆಯ ರೂಪ ಬೆಳಗು ದೀಪ’ ಎನ್ನುವ ರೂಪಕ ಕವನವನ್ನು ಉನ್ನತ ಮಟ್ಟಕ್ಕೆ ಏರಿಸಿದೆ.
ಸುಗ್ಗಿಯ ಕಾಲ ಪದ್ಯದಲ್ಲಿ ಕುಯ್ಲು, ಕಣ, ಬೆನಕ, ಬಳ್ಳ, ಕೊಳೆ ಮುಂತಾದ ಪದಗಳ ಬಳಕೆ ನಗರೀಕರಣ, ಕೈಗಾರೀಕರಣದ ಪ್ರಭಾವಕ್ಕೆ ಒಳಗಾಗಿ ಮರೆಯಾಗುತ್ತಿರುವ ಹಳ್ಳಿಯ ಸೊಗಡನ್ನು ಮತ್ತೆ ನೆನಪಿಸುತ್ತದೆ. ಕವಿಯ ಉದರ ನಿಮಿತ್ತ ಪಟ್ಟಣದಲ್ಲಿದ್ದರೂ ಹಳ್ಳಿಯ ಸಂಪರ್ಕ ಮತ್ತು ಸಂಸ್ಕೃತಿಯಿಂದ ದೂರವಾಗಿಲ್ಲ ಎನ್ನುವುದಕ್ಕೆ ಈ ಕವನ ಸಾಕ್ಷಿಭೂತವಾಗಿದೆ.
‘ಮುಂಗಾರಿನ ಧಾರೆ’ ಒಂದು ಪ್ರೇಮ ಕವನವಾಗಿದ್ದು, ಕವಿತಾ ನಾಯಕನು ತನ್ನ ಪ್ರೇಯಸಿಯ ಕಣ್ಸನ್ನೆಗೆ ಮನಸೋತಿದ್ದಾನೆ, ಅವಳ ಅಧರಾಮೃತ ಸುಧೆಯಂತಿದೆ. ಅವಳ ಜೊತೆ ನನಗೆ ಶೃಂಗಾರಭರಿತವಾಗಿದೆ ಎನ್ನುತ್ತಾನೆ. ಮುಂದುವರೆದು ಅವಳು ಕೇವಲ ಶೃಂಗಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾರಿರುಳಲ್ಲೂ ದೀವಟಿಗೆಯ ನೀಡಿ ಬೆಳಕನ್ನು ತೋರುವವಳು ಎಂದು ಹೆಣ್ಣಿಗೆ ಮಹತ್ವದ ಸ್ಥಾನವನ್ನು ನೀಡಿದ್ದಾರೆ.
‘ಯುಗಾದಿ’ ಕವನ ಸಂಕಲನ ಕವಿ ಚನ್ನಕೇಶವ ಜಿ ಲಾಳನಕಟ್ಟೆ
‘ಹಾಯಿದೋಣಿ’ ಕವನದಲ್ಲಿ ಬದುಕನ್ನು ದೋಣಿಗೆ ಹೋಲಿಸಿರುವ ಕವಿ, ಬದುಕಿನ ಪಯಣ ಸಾಗುವಾಗ ಸರಸ ವಿರಸಗಳು ಸುಳಿಗಳಾಗಿ ಬಂದೆರಗುತ್ತವೆ, ಆದ್ದರಿಂದ ಸಮರಸದಿಂದ ಬದುಕನ್ನು ಮುನ್ನಡೆಸಬೇಕೆಂದು ಕವಿ ಕಿವಿ ಮಾತನ್ನು ಹೇಳಿದ್ದಾರೆ. ಬಹುಶಃ ಬೇಂದ್ರೆಯವರ ‘ಸರಸದ ಜನನ , ವಿರಸವೆ ಮರಣ, ಸಮರಸವೇ ಜೀವನ’ ಎನ್ನುವ ಹಿತೋಕ್ತಿಯು ಕವಿಯ ಮನಸ್ಸನ್ನು ಬಹಳವಾಗಿ ಕಾಡಿರುವಂತಿದೆ.
ಬಳಗ ಎನ್ನುವ ಕವಿತೆಯಲ್ಲಿ ‘ಬಳಗವಿರಬೇಕು ಕೊಳಗದಷ್ಟು’ ಎಂದಿರುವ ಕವಿ, ಎಂತಹ ಬಳಗವಿರಬೇಕು ಎಂದು ಹೇಳುವುದನ್ನು ಮರೆತಿಲ್ಲ. ‘ಅಗುಳ ಕಂಡರೆ ಬಳಿಗೆ ಕರೆಯುವ ಕಾಗೆಗಳ ಬಳಗದಂತಿರಬೇಕು. ದುಷ್ಟರಾಗದೆ ಕಷ್ಟದಲ್ಲಿ ಕೈಹಿಡಿವ ಮಿತ್ರರಂತಿರಬೇಕು’ ಎಂದಿದ್ದಾರೆ. ಇಲ್ಲಿ ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದೆ ತನ್ನ ಬಳಗವನು ಎನ್ನುವ ಬಸವಣ್ಣನವರ ವಚನದಿಂದ ಪ್ರಭಾವಿತರಾಗಿರುವುದು ನಿಶ್ಚಳವಾಗಿ ಕಂಡುಬರುತ್ತದೆ.
‘ಯುಗಾದಿ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ಕವಿಗಳ ಜೊತೆ ಸಾಹಿತ್ಯ ವೃಂದ
ನಾವಾಡುವ ಮಾತು ಹೇಗಿರಬೇಕು ಎಂದರೆ ‘ಕೆದಕನಾಡೋ ಮಂದಿಯೊಳಗೆ ಮೂಕನಾಗಿರಬೇಕು ಮಾತಿನಲ್ಲಿ ಮಿತಿ ಇರಬೇಕು ಅತಿಯಾದ ಮಾತು ಸಲ್ಲದು’ ಎಂದಿರುವ ಕವಿ, ಸಂದರ್ಭವನ್ನು ಅರಿತು ಹಿತಮಿತವಾಗಿ ಮಾತಾಡಬೇಕು. ಅತಿಯಾದ ಮೌನ ಒಳ್ಳೇದಲ್ಲ ಎನ್ನುವ ಕಿವಿ ಮಾತನ್ನು ಹೇಳಿದ್ದಾರೆ. ‘ಅತಿಯಾದ ಮೌನ ಬಂಗಾರವಲ್ಲ, ಹಿತವಾದ ನುಡಿಯೊಂದು ಬಂಗಾರವಯ್ಯ’ ಎನ್ನುವ ಮಾತನ್ನು ನೆನಪಿಸುತ್ತದೆ.
‘ದಾಸಿ’ ಎನ್ನುವ ಕವನದಲ್ಲಿ ಯಾರದೋ ತಪ್ಪಿಗೆ ತಾಯಿಯಾದ ಹೆಣ್ಣು ಅನುಭವಿಸುವ ವೇದನೆ, ಪಡುವ ಪಾಡು, ಹೋರಾಟ ಹೇಳತೀರದು. ತಾನು ಹೆತ್ತ ಮಗುವೇ ತನ್ನಪ್ಪ ಯಾರೆಂದು ಕೇಳಿದಾಗ ಉತ್ತರಿಸಲಾಗದ ಸ್ಥಿತಿ ಅವಳದು. ಇನ್ನೂ ಸಮಾಜಕ್ಕೆ ಏನೆಂದು ಉತ್ತರಿಸಿಯಾಳು?ಈ ಕವನ ಎಲ್ಲಾ ಕವನಗಳಿಗಿಂತ ಉತ್ಕೃಷ್ಟವಾದದ್ದು, ಚಿಂತನೆಗೆ ಒಳಪಡಿಸುವಂಥದ್ದು. ಒಂದು ಕ್ಷಣ ಓದುಗನಿಗೆ ಕಣ್ತುಂಬಿಸುವಂಥದ್ದು.
ಒಟ್ಟಾರೆಯಾಗಿ ಯುಗಾದಿ ಸಂಕಲನದ ಎಲ್ಲ ಕವನಗಳು ಅನುಭವದ ಮೂಸೆಯಲ್ಲಿ ಅರಳುಗೊಂಡು ಮುಪ್ಪುರಿಗೊಂಡಿದೆ. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಮನಸ್ಸನ್ನು ಮುದಗೊಳಿಸುತ್ತದೆ, ಹದಗೊಳಿಸುತ್ತದೆ.
- ಶಮಂತಕುಮಾರ್ .ಎಸ್ – ತುಮಕೂರು