ಸುದೀಪ್ ಎಂಬ ಸಾಲುದೀಪಗಳ ಮೆರೆವಣಿಗೆ!

ತಮ್ಮ ದೈತ್ಯ ಪ್ರತಿಭೆ, ನೇರ ನಡೆ-ನುಡಿ, ಬಹುಮುಖ ಸಾಧನೆಗಳಿಂದ ಹೆಸರಾದವರು ಸುದೀಪ್. ಅವರು ಆಗಾಗ ಸಕಾರಾತ್ಮಕ ಕಾರಣಗಳಿಗಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಅವರಾಗಿ ಸುದ್ದಿಯ ತಂಟೆಗೆ ಹೋಗುವವರಲ್ಲ. ಪ್ರಚಾರಕ್ಕಾಗಿ ಹಂಬಲಿಸುವವರಲ್ಲ. ಆದರೆ ಸುದ್ದಿಯೇ ಅವರನ್ನು ಹಿಂಬಾಲಿಸುತ್ತದೆ. ಇದೀಗ ಅವರು ಮತ್ತೊಂದು ಒಳ್ಳೆಯ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.

ತುಮಕೂರು ವಿಶ್ವವಿದ್ಯಾಲಯ ತಮಗೆ ನೀಡಲು ಉದ್ದೇಶಿಸಿದ ಗೌರವ ಡಾಕ್ಟರೇಟ್ ಮನ್ನಣೆಯನ್ನು ನಯವಾಗಿ ಒಲ್ಲೆ ಎಂದಿದ್ದಾರೆ. ತಮ್ಮ ಹೆಸರಿನ ಹಿಂದೆ ಡಾ. ಎಂದು ಸೇರಿಸಿಕೊಳ್ಳಲು ಹಪಹಪಿಸುವ ಮಂದಿಯ ನಡುವೆ ಅವರ ಈ ನಡೆ ಬೆರಗು ಮೂಡಿಸುತ್ತದೆ. ಈ ನಿರಾಕರಣೆ ಅವರ ಬಗೆಗಿನ ಗೌರವವನ್ನು ಹೆಚ್ಚಿಸಿದೆ. ನಮ್ಮ ನೆಚ್ಚಿನ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್ ಸಹ ಹೀಗೆಯೇ ಬೆಂಗಳೂರು ವಿಶ್ವವಿದ್ಯಾಲಯ ಘೋಷಿಸಿದ ಗೌರವ ಡಾಕ್ಟರೇಟ್ ಬೇಡವೆಂದು ತಮ್ಮ ಬಗೆಗಿನ ಗೌರವಾದರಗಳನ್ನು ಹೆಚ್ಚಿಸಿಕೊಂಡವರು. ಇದೀಗ ಸುದೀಪ್ ಅವರ ಸರದಿ. ತಮ್ಮ ಈ ನಡೆಯಿಂದ ಜನಮಾನಸದಲ್ಲಿ ಅವರು ಮತ್ತಷ್ಟು ಗಟ್ಟಿಯಾಗಿ ನೆಲೆಗೊಂಡಿದ್ದಾರೆ.

ಫೋಟೋ ಕೃಪೆ : google

ಇತ್ತೀಚಿನ ವರ್ಷಗಳಲ್ಲಿ ಹುಟ್ಟಿಕೊಂಡಿರುವ ನಕಲಿ ವಿವಿಗಳು, ಶೀರ್ಷಪತ್ರ ಸಂಸ್ಥೆಗಳು ಗೌರವ ಡಾಕ್ಟರೇಟ್ ಪದವಿಯನ್ನು ಕಾಸು-ಕಾಂಚಾಣ ಪಡೆದು ನೂರರಗಟ್ಟಲೆ ಪ್ರದಾನ ಮಾಡಲು ಹೊರಟಿದ್ದವು. ಅವು ಡಾಕ್ಟರೇಟ್ ಮಾರಾಟ ಮೇಳಗಳನ್ನೂ ಆಯೋಜಿಸುತ್ತಿದ್ದವು. ಈ ಪ್ರಹಸನಗಳನ್ನು ನೋಡಿ, ನೋಡಿ ಜನ ಬೇಸತ್ತಿದ್ದರು. ಹೀಗೆ ಕಾಸುಕೊಟ್ಟು ಹುಸಿ ಪುರಸ್ಕಾರ ಪಡೆದು ಘನತೆ ಹೆಚ್ಚಿಸಲು ಮುಂತೊಡಗುತ್ತಿದ್ದವರನ್ನು ಕಂಡು ತಿರಸ್ಕಾರ ಮೂಡಿತ್ತು.

ಆದರೆ ಸುದೀಪ್ ಅವರ ಪ್ರಸ್ತುತ ನಡೆ ವಿಭಿನ್ನವಾದುದು. ರಾಜ್ಯದ ಅಧಿಕೃತ ವಿಶ್ವವಿದ್ಯಾಲಯ ವೊಂದು ನೀಡಲು ಬಂದ ಇಂತಹ ಗೌರವವನ್ನು ಅವರು ಒಲ್ಲೆ ಎಂದು ಮಾದರಿ ಆಗಿದ್ದಾರೆ. ನನಗಿಂತ ಹೆಚ್ಚು ಸಾಧಸಿದವರಿದ್ದಾರೆ ಅವರಿಗೆ ಕೊಡಿ ಎಂದು ನಮ್ರರಾಗಿದ್ದಾರೆ. ನಮ್ಮ ನಡುವಿನ ಸೆಲೆಬ್ರಿಟಿಗಳ ನಡೆ ತೀವ್ರ ಬೇಸರ, ಸಂಕಟ, ಜಿಗುಪ್ಸೆ ಮತ್ತು ತಿರಸ್ಕಾರ ಮೂಡಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸುದೀಪ್ ನಮ್ಮ ಗಾಯಕ್ಕೆ ಮುಲಾಮು ಹಚ್ಚಿದ್ದಾರೆ. ಅವರು ಡಾಕ್ಟರೇಟ್ ಸ್ವೀಕರಿಸಿದ್ದರೆ ಔಪಚಾರಿಕವಾಗಿ ಅಭಿನಂದನೆಗಳು ಎಂದು ಹೇಳುತ್ತಿದ್ದೆವು. ಆದರೆ ಈಗ ಅವರಿಗೆ ವಂದನೆ ವಂದನೆ, ಸಾವಿರ ವಂದನೆ ತ್ಯಾಗವ ಮಾಡಿದ ಜಾಣಗೆ #ಅಭಿವಂದನೆ ಎಂದು ಒಕ್ಕೊರಲಿನಿಂದ ಹೇಳುವ ಸಮಯ. ರಾಶಿ, ರಾಶಿ ಕಂಠಗಳು ಒಗ್ಗೂಡಿ ಅವರಿಗೆ ಅಭಿವಂದನೆಗಳು ಎಂದು ಉಲಿಯಲಿ.

ಸುದೀಪ್ ಎಂಟು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಕರೋನಾ ಸಂದರ್ಭದಲ್ಲಿ ದಾಸೋಹ ನಡೆಸಿದ್ದಾರೆ. ಆಪತ್ತಿನಲ್ಲಿರುವವರ ನೆರವಿಗೆ ಧಾವಿಸಿದ್ದಾರೆ. ಆದರೆ ಅವರು ತಮ್ಮ ಇಂತಹ ಸಾಮಾಜಿಕ ಸೇವೆಗೆ ಸುದ್ದಿಯ ಪೋಷಾಕು ತೊಡಿಸಲು ಮುಂದಾಗದ ನಿಜ ಸಮಾಜಮುಖಿ.

ಸುದೀಪ್ ಎಂದರೆ ಅದೊಂದು ಸಮಗ್ರ ಪ್ಯಾಕೇಜ್! ನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ಚಿತ್ರಕಥಾ ಲೇಖಕ, ಕ್ರೀಡಾಪಟು, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಸಮರ್ಥ ಸಂಘಟಕ, ಕಂಠದಾನಿ, ದೂರದರ್ಶನದ ‘ಬಿಗ್‌ಬಾಸ್’! ಮಿಗಿಲಾಗಿ ತನ್ನ ಕೌಟುಂಬಿಕ ಬದುಕಿನಲ್ಲಿ ಎದ್ದಿದ್ದ ಹೆದ್ದೆರೆಗಳನ್ನೂ, ಬಿರುಕನ್ನೂ ಮತ್ತೊಬ್ಬರ ಹಸ್ತಕ್ಷೇಪವಿಲ್ಲದೆ ತಾನೇ ನಿವಾರಿಸಿಕೊಂಡ ಮುತ್ಸದ್ದಿ.

ಫೋಟೋ ಕೃಪೆ : google

ನಟನೆಯಲ್ಲಿ ಸ್ವಂತಿಕೆಯ ಛಾಪು; ನಡೆಯಲ್ಲಿ ಚೂಪು. ಅವರದು ಹೊಸಹಾದಿ. ಆನೆ ನಡೆದದ್ದೇ ದಾರಿ! ಯಾರಿಗೂ ಡೊಗ್ಗು ಸಲಾಮು ಹೊಡೆದವರಲ್ಲ; ನಡುಬಗ್ಗಿ ನಜ಼ರುಗಳನ್ನು ಸಲ್ಲಿಸಿದವರಲ್ಲ. ಹಾಗಾಗಿ ಸುದೀಪ್ ಎಂಬುದು ಸದ್ದಿಲ್ಲದ ವಿಪ್ಲವ. ಗಾಂಧಿನಗರಕ್ಕೆ ಚೈತನ್ಯದ ಸ್ಪರ್ಶ ನೀಡಿ, ಸ್ವೋಪಜ್ಞತೆಯ ಅಕ್ಷರಾಭ್ಯಾಸ ಮಾಡಿಸಿದ ಕಲಾವಿದ!

ಇದೀಗ ಈ ‘ಸಿರಿಕಂಠ’ದ ಒಡೆಯ ಕನ್ನಡ ಶಾಲೆಗಳ ಪೋಷಕ! ಇದು ಹಲವರಿಗೆ ಮಾದರಿಯಾಗಲಿ; ಪ್ರೇರಣೆಯಾಗಲಿ. ಕನ್ನಡ ಶಾಲೆಗಳ ಸಬಲೀಕರಣವೆಂದರೆ ಈ ನೆಲದ ಸೊಗಡು ಹಾಗೂ ಅಂತಃಸತ್ತ್ವವನ್ನು ಜತನಗೊಳಿಸುವಿಕೆ ಎಂಬುದನ್ನು ಅರಿತ ಜಾಣ. ಧೈರ್ಯಕ್ಕೆ, ಸ್ಥೈರ್ಯಕ್ಕೆ ಅವರೊಂದು ರೂಪಕ. ಬೆಳ್ಳಿಚಮಚೆಯನ್ನು ಬಾಯಲ್ಲಿಟ್ಟುಕೊಂಡು ಜನಿಸಿದ ಸುದೀಪ್, ‘ಸರೋವರ’ದ ವಾರಸುದಾರನಾದರೂ, ಅದರ ಪ್ರಭಾವ ಬಳಸದೆ, ಎಲ್ಲರ ಹಾಗೆ ಕಾನಿಷ್ಕದ ಅಂಗಳದಿಂದಲೇ ರಜತಪರದೆಗೆ ಜಿಗಿದವರು.

ದೀಪ ಎಂದರೆ ಜ್ಯೋತಿ, ಬೆಳಕು. ಸುದೀಪ ಎಂದರೆ ಪ್ರಖರ ಬೆಳಕು ಎಂದೂ ಅರ್ಥೈಸಬಹುದು. ಅವರು ದೀಪದಿಂದ ದೀಪವ ಹಚ್ಚುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಹಚ್ಚುತ್ತ, ಹಚ್ಚುತ್ತ ತಾವೇ ಸಾಲುದೀಪಗಳ ಮೆರೆವಣಿಗೆ ಆಗಿದ್ದಾರೆ!

ಅವರು ತಾವು ಮಾಡಿದ ಕೆಲಸಗಳನ್ನು ಕೊಚ್ಚಿಕೊಳ್ಳುವುದಿಲ್ಲ. ಆಡಿದ ಮಾತನ್ನು ತಪ್ಪುವುದಿಲ್ಲ. ಸುದೀಪ್ ಎಂದರೆ ಆತ್ಮವಿಶ್ವಾಸದ ಅಗಣಿತ ಗಣಿ. ಅವರ ಲಕ್ಷ್ಯ ಸದಾ ಸಾಧನೆಯ, ಸಿದ್ಧಿಯ ಕಡೆಗೆ. ಪ್ರಸಿದ್ಧಿಯ ಕಡೆಗಲ್ಲ. ಖ್ಯಾತಿ ಎಂಬುದು ಅವರ ಕದಗಳನ್ನು ಬಡಿಯುತ್ತಲೇ ಇದೆ. ಸುದೀಪ್ ಚಂದನವನದಿಂದ ಟಾಲಿವುಡ್, ಬಾಲಿವುಡ್ ಗಳಿಗೆ ಜಿಗಿದ ರಾಕೆಟ್ಟು. ಅವರು ಬೆಳಕಿನ ಹಾದಿಯ ಪಯಣಿಗ. ಹಾಗಾಗಿ ಅವರಿಗೆ ಕತ್ತಲ ದಾರಿ ದೂರ! ‘ತಮಸೋಮ ಜ್ಯೋತಿರ್ಗಮಯ’ ಎಂಬ ಮಾತಿನಲ್ಲಿ ನಂಬಿಕೆಯನ್ನು ನೆಲೆಗೊಳಿಸಿದವರು. ಅವರಿಗೆ ಶುಭವಾಗಲಿ.


  • ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading