ಮುವತ್ತೊಂಬತ್ತು ವರ್ಷದಲ್ಲಿ ಎಲ್ಲವನ್ನು ಕಳೆದುಕೊಂಡ ಹಿಂದಿ ಚಿತ್ರತಾರೆ ಮೀನಾಕುಮಾರಿಯ ಪರದೆಯ ಹಿಂದಿನ ಕಟು ಸತ್ಯದ ಕುರಿತು ಖ್ಯಾತ ಕತೆಗಾರ ಕೇಶವ ರೆಡ್ಡಿ ಹಂದ್ರಾಳ ಅವರ ಪುಟ್ಟ ಲೇಖನ. ಮುಂದೆ ಓದಿ…
ಕನಸಿನ ಬೇರುಗಳು ಬೇವರ್ಸಿಗಳಾದಾಗ…
ನಾನು ಬಣ್ಣದ ಚಿಟ್ಟೆ !
ನಾನು ಮೀನಾಕುಮಾರಿ !!
ಬಣ್ಣದ ತೆರೆಯ ಕ್ಷಣದ ಕಾಮನಬಿಲ್ಲು !!!
ಬಣ್ಣದ ಏಣಿಯ ಮಂಜಿನ ಮೆಟ್ಟಿಲುಗಳನ್ನು ಏರುವುದು ಸುಲಭದ ಕೆಲಸವೇನೂ ಅಲ್ಲ. ಅಂತಹುದರಲ್ಲಿ ಕಷ್ಟಪಟ್ಟು ನಾನು ಏರಿಬಿಟ್ಟಿದ್ದೆ. ಆದರೆ ಮಂಜಿನ ಮೆಟ್ಟಿಲುಗಳು ಕ್ರಮೇಣ ಕರಗಿಹೋಗಿಬಿಡುತ್ತವೆಂಬ ಸತ್ಯವನ್ನು ನನ್ನ ಕಣ್ಣುಗಳಲ್ಲಿ ಅವಿತು ಕುಳಿತಿದ್ದ ಕಾಮನ ಬಿಲ್ಲುಗಳು ಮರೆಮಾಚಿ ನನ್ನನ್ನು ನಯವಾಗಿ ವಂಚಿಸಿಬಿಟ್ಟಿದ್ದವು. ಓಹ್ ಬದುಕು ಎಂಥ ಮಾಯೆ ! ನಾನು ಮುಂಬಯಿಯ ಸಿನಿಮಾ ಪರದೆಯನ್ನು ಕಣ್ರೆಪ್ಪೆಯಿಂದ ಕುಣಿಸುತ್ತಲೇ ಬೆರಗುಗೊಳಿಸಿದವಳು. ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಮೋಹದ ಕನಸುಗಳ ಕಲರವವನ್ನು ಎಬ್ಬಿಸಿದವಳು. ನನ್ನ ಸಿನಿಮಾಕ್ಕಾಗಿ ಮುಂಬಯಿಯ ಜನರಲ್ಲದೆ ದೇಶಾದ್ಯಂತ ತುದಿಗಾಲಿನಲ್ಲಿ ಕಾಯುತ್ತಿದ್ದರು. ನನ್ನ ದರ್ಶನಕ್ಕೆ ಸದಾ ನೂಕು ನುಗ್ಗಲು. ಕನ್ನಡಿಗಳ ಅಂಗಡಿಯಲ್ಲಿ ನನ್ನ ಮುಖದಲ್ಲಿ ಎಷ್ಟೊಂದು ಬಣ್ಣಗಳು ಮೇಳೈಸುತ್ತಿದ್ದವು. ನಾನು ಆಗಸದಲ್ಲಿ ತೇಲಾಡುತ್ತಿದ್ದೆ ಚುಕ್ಕಿ ಚಂದ್ರಮರನ್ನೂ ನಾಚಿಸುವಂತೆ. ಈಗಲೂ ತೂರಾಡುತ್ತಿದ್ದೇನೆ ಚೀಪ್ ಲಿಕ್ಕರ್ ಕುಡಿದು ಕಿತ್ತು ಹೋದ ಮುಂಬಯಿಯ ಫುಟ್ಪಾತ್ ಮೇಲೆ. ಒಹ್ ! ಕಣ್ಣುಗಳು ಮಂಜಾಗುತ್ತಿವೆ. ನನ್ನನ್ನು ಯಾರೂ ಗುರುತು ಹಿಡಿಯುತ್ತಿಲ್ಲ. ನನಗೀಗ ಅರ್ಜೆಂಟಾಗಿ ಒಂದು ಕ್ವಾರ್ಟರ್ ಚೀಪ್ ಲಿಕ್ಕರ್ ಬೇಕು. ಅದರ ಮತ್ತಿನಲ್ಲಿ ನನ್ನನ್ನು ನಾನೇ ಮರೆತು ಕನಸುಗಳಲ್ಲಿ ಕರಗಿ ಹೋಗಿಬಿಡಬೇಕು . ಹಾಗೆಯೇ ಉಸಿರು ಕಳೆದುಕೊಳ್ಳಬೇಕು …

ಫೋಟೋ ಕೃಪೆ : bollywoodirect
ನಾನು…ನೆನಪಾಯಿತೇ ನಿಮಗೆ ? ಮೀನಾಕುಮಾರಿ ! ಎರಡು ದಶಕಗಳ ಕಾಲ ಹಿಂದಿ ಬೆಳ್ಳಿತೆರೆಯನ್ನು ಆಳಿದವಳು. ನನ್ನ ಬದುಕಿನ ವಾಸ್ತವದ ಒಂದು ಪುಟ್ಟ ಸಿನಿಮಾದ ರೀಲನ್ನು ಹರಿದ ಪರದೆಯ ಮೇಲೆ ನಿಮ್ಮ ಮುಂದಿಡುತ್ತೇನೆ. ಒಡೆದ ಕನ್ನಡಿಯ ಚೂರುಗಳಲ್ಲಿ ನನ್ನ ಆಸೆ, ಕನಸು, ಭ್ರಮೆ, ಯವ್ವನ, ಸೌಂದರ್ಯ, ಮೋಹ ಎಲ್ಲವೂ ಹುಳ ಬಿದ್ದು ಹೇಗೆ ನರಳಾಡುತ್ತಿವೆ.
ಸ್ಟಾರ್ಟ್ ಕ್ಯಾಮರಾ
ಸ್ಟಾರ್ಟ್ ಆಕ್ಟಿಂಗ್
ನಾನು ಮುಂಬಯಿಯ ಅತ್ಯಂತ ಬಡ ಕುಟುಂಬವೊದರಲ್ಲಿ ಹುಟ್ಟಿದವಳು. ಬಡವರ ಮನೆಗಳಲ್ಲಿ ಸುಂದರಿಯರಾದ ಹೆಣ್ಣು ಮಕ್ಕಳು ಹುಟ್ಟಬಾರದು. ಹುಟ್ಟು ಇಷ್ಟಪಟ್ಟಂತೆ ಆಗಿದ್ದಿದ್ದರೆ ಬಡವರ ಮನೆಯಲ್ಲಿ ಹುಟ್ಟುಲು ಯಾರೂ ಇಷ್ಟಪಡುತ್ತಿರಲಿಲ್ಲ. ನನ್ನನ್ನೂ ಸೇರಿಸಿಕೊಂಡು ! ಜೊತೆಗೆ ನಾನು ಚೂಟಿಯಾಗಿದ್ದೆ. ನಾನು ನಾಲ್ಕು ವರ್ಷದವಳಾಗಿದ್ದಾಗಲೇ ಮನೆಯಿಂದ ಕದ್ದು ಹೋಗಿ ಹತ್ತಿರವಿದ್ದ ಗೌರ್ನಮೆಂಟ್ ಸ್ಕೂಲಿನಲ್ಲಿ ಅಡಗಿ ಕೂರುತ್ತಿದ್ದೆ. ಶಾಲೆಯೆಂದರೆ ತುಂಬಾ ಇಷ್ಟ ಇತ್ತು. ಆದರೆ ಅಪ್ಪ ಹುಡುಕಿಕೊಂಡು ಬರುತ್ತಿದ್ದ. ಅಪ್ಪ ಆಲಿಬಕ್ಸ್ ಥಿಯೇಟರ್ ಒಂದರಲ್ಲಿ ಕಾವಲುಗಾರನಾಗಿದ್ದ. ಅಮ್ಮ ಪ್ರಭಾವತಿ ದೇವಿ ನೃತ್ಯಗಾರ್ತಿ. ಅಮ್ಮನಿಗೆ ‘ಇಕ್ಬಾಲ್ ಬೇಗಂ’ ಎಂಬ ಹೆಸರೂ ಇತ್ತು. ಆಂ, ನನ್ನ ಒರಿಜಿನಲ್ ಹೆಸರು #ಮಹಜಾಬಿನ್_ಬಾನಂ.
ಸಿನಿಮಾ ಮತ್ತು ಥಿಯೇಟರಿನ ಪ್ರಭಾವ ಇರಬೇಕು ಅಪ್ಪ ನನ್ನನ್ನು ಬಾಲನಟಿಯನ್ನಾಗಿ ಮಾಡಲು ತೀರ್ಮಾನಿಸಿದ್ದ. ಜೊತೆಗೆ ಕಿತ್ತು ತಿನ್ನುವ ಬಡತನ. ನಾಲ್ಕೈದು ವರ್ಷಗಳಾಗಿದ್ದ ನನ್ನನ್ನು ಭುಜದ ಮೇಲೆ ಕೂರಿಸಿಕೊಂಡು ಮುಂಬಯಿಯ ಸ್ಟುಡಿಯೋಗಳನ್ನು ಅಲೆಯತೊಡಗಿದ್ದ. ಅಪ್ಪನ ಬಡತನ ನನ್ನ ಮನ ಕರಗಿಸಿತ್ತು. ನನ್ನಲ್ಲೂ ಬಾಲನಟಿಯಾಗಬೇಕೆಂಬ ಆಸೆ ಟಿಸಿಲೊಡೆದಿತ್ತು. ಅಪ್ಪನ ಕನಸು ಕಡೆಗೂ ನನಸಾಗಿಬಿಟ್ಟಿತ್ತು. ಆರು ವರ್ಷದವಳಿರುವಾಗ ನಾನು ಮುಖಕ್ಕೆ ಬಣ್ಣ ಹಚ್ಚಿದೆ. ‘ ಲೆದರ್ ಫೇಸ್ ‘ ಎನ್ನುವ ಚಿತ್ರದ ನಿರ್ದೇಶಕ #ವಿಜಯ್_ಭಟ್ ಆ ಚಿತ್ರದಲ್ಲಿ ಮೊದಲ ಬಾರಿಗೆ ಸಿನಿಮಾ ಜಗತ್ತಿಗೆ ಪರಿಚಯಿಸಿದ್ದರು. ನನ್ನ ಅಗಲವಾದ ಕಣ್ಣುಗಳನ್ನು ನೋಡಿ ” ನೀನು ಮೀನಿನಂಥ ಕಣ್ಣುಳ್ಳವಳಾಗಿದ್ದೀಯ. ಆದ್ದರಿಂದ ನಿನ್ನನ್ನು ಮೀನಾ… ಮೀನಾಕುಮಾರಿ ಎಂದು ಕರೆಯುತ್ತೇನೆ ..” ಎಂದು ಅಪ್ಪನ ಕಡೆ ನೋಡುತ್ತಾ ” ಆಲಿಬಕ್ಸ್ , ನಿನ್ನ ಮಗಳಲ್ಲಿ ಅದ್ಭುತವಾದ ನಟನಾ ಕೌಶಲ್ಯವಿದೆ. ಅವಳು ಮುಂದೆ ಒಂದು ದಿನ ಮುಂಬಯಿಯ ಬೆಳ್ಳಿ ತೆರೆಯನ್ನು ಆಳುತ್ತಾಳೆ ..” ಎಂದಿದ್ದರು. ಲೆದರ್ ಫೇಸ್ ಸಿನಿಮಾ ಗೆಲ್ಲುವುದರೊಂದಿಗೆ ನನಗೆ ಸಾಲು ಸಾಲು ಅವಕಾಶಗಳು ಒದಗಿ ಬಂದಿದ್ದವು . ಎರಡು ವರ್ಷಗಳಲ್ಲಿ ಹದಿನೈದು ಸಿನಿಮಾಗಳಲ್ಲಿ ನಟಿಸಿದ್ದೆ . ಸಿನಿಮಾವೊಂದಕ್ಕೆ ಹತ್ತು ಸಾವಿರ ಸಂಭಾವನೆ ಪಡೆಯತೊಡಗಿದ್ದೆ ! ನನ್ನಿಂದಾಗಿ ಮನೆಯ ಬಡತನ ದೂರವಾಗತೊಡಗಿತು . ಬಾಲೆಯಾಗಿದ್ದ ನಾನು ಹೆಣ್ಣಾಗಿಬಿಟ್ಟಿದ್ದೆ !

ಫೋಟೋ ಕೃಪೆ : bollywoodhungama
ನನ್ನ ರೂಪ ಮತ್ತು ಪ್ರತಿಭೆ ನನ್ನನ್ನು ತಾರೆಯನ್ನಾಗಿಸಿದ್ದವು. ನಾನು ನಾಯಕಿಯಾಗಿ ನಟಿಸಿದ ಚಿತ್ರಗಳನ್ನು ನೋಡಲು ಜನ ಥಿಯೇಟರ್ ಗಳಿಗೆ ಮುಗಿಬೀಳುತ್ತಿದ್ದರು. ನಾನು ಖ್ಯಾತಿಯ ಉತ್ತುಂಗಕ್ಕೆ ಏರಿದ್ದೆ. ಮಾಧ್ಯಮದವರು ನನ್ನ ಸಣ್ಣ ಸಂದರ್ಶನಕ್ಕೆ ಗಂಟೆಗಟ್ಟಲೆ ಕಾಯುತ್ತಿದ್ದರು. ದುರಂತ ನಾಯಕಿಯ ಪಾತ್ರಗಳಲ್ಲಿ ನನ್ನನ್ನು ಜನ ಹೆಚ್ಚು ಹೆಚ್ಚು ಇಷ್ಟಪಡತೊಡಗಿದರು. ಕೇವಲ ಇಪ್ಪತ್ತು ವರ್ಷಗಳಲ್ಲಿ… ಓಹ್ ! ನಾನು ಎಷ್ಟು ಎತ್ತರಕ್ಕೆ ಏರಿಬಿಟ್ಟಿದ್ದೆ …ನನಗೆ ನಾನೇ ಎಟುಕದ ಎತ್ತರಕ್ಕೆ !! ಇಂಥ ಸಮಯದಲ್ಲಿ ” ನಾನು ನಿನ್ನನ್ನು ಪ್ರೀತಿಸುತ್ತೇನೆ ತುಂಬಾ ತುಂಬಾ ...” ಎಂದಿದ್ದ ಆತ. ಆತನೇ ಪ್ರಸಿದ್ಧ ನಟ ಮತ್ತು ನಿರ್ದೇಶಕ . ನನಗಿಂತ ಹದಿನೆಂಟು ವರ್ಷ ದೊಡ್ಡವನು. ನಾನು ರೋಮಾಂಚಿತಳಾಗಿದ್ದೆ. ಪ್ರೀತಿಗೆ ಜಾತಿ, ವಯಸ್ಸು ಯಾವುದೂ ಅಡ್ಡಿ ಬರಲಾರದು. ” ನಿನ್ನನ್ನು ಬಿಟ್ಟು ನಾನು ಬದುಕಲಾರೆ. ನಾವಿಬ್ಬರು ಮದುವೆಯಾಗೋಣ …” ಆತ ಬಡಬಡಿಸತೊಡಗಿದ. ಆತನಿಗೆ ಮದುವೆಯಾಗಿ ಮಕ್ಕಳಿದ್ದರು. ಅಪ್ಪನಿಗೆ ಹೇಳದೆಯೇ ನಾನು ಅಮ್ರೋಹಿಯೊಂದಿಗೆ ಹೆಂಡತಿಯಂತೆ ಬದುಕತೊಡಗಿದ್ದೆ. ಅಮ್ರೋಹಿ ಕೂಡ ಒಬ್ಬ ಸಾಮಾನ್ಯ ಗಂಡಸು ಮಾತ್ರವಷ್ಟೇ ಎಂಬುದು ನನಗೆ ಬಹುಬೇಗ ಅರಿವಾಗಿತ್ತು. ಮಗು ಬೇಡವೆಂದು ಅಭಾರ್ಷನ್ ಮಾಡಿಸಿದ್ದ #ಅಮ್ರೋಹಿ.

ಅಮ್ರೋಹಿ ಮತ್ತು ಮೀನಾಕುಮಾರಿ (ಫೋಟೋ ಕೃಪೆ : bollywoodirect)
ಈ ಸಂದರ್ಭದಲ್ಲಿ ನನ್ನ ಬಾಳಿನಲ್ಲಿ #ಧರ್ಮೇಂದ್ರ ಪ್ರವೇಶ ಮಾಡಿದ್ದ. ಧರ್ಮೇಂದ್ರ ಹಿಂದಿ ಸಿನಿಮಾ ತೆರೆಯಲ್ಲಿ ಬೇರೂರಲು ನಾನು ಬಹಳವಾಗಿ ಸಹಾಯ ಮಾಡಿದ್ದೆ. ಇಬ್ಬರೂ ಪರಸ್ಪರ ಬಹಳವಾಗಿ ಪ್ರೀತಿಸುತ್ತಿದ್ದೆವು. ಆತನೂ ಮದುವೆಯಾಗಿದ್ದ. ಆದರೆ ನಮ್ಮಿಬ್ಬರ ಪ್ರೀತಿ ಹೆಚ್ಚು ಕಾಲ ನೆಲೆ ನಿಲ್ಲಲಿಲ್ಲ. ಆತ ಕೂಡಾ ಪುಕ್ಕಲ. ಗಂಡಸರು ತೃಪ್ತಿಯ ನಂತರ ನಿರ್ದಯಿಗಳಾಗಿ ಬಿಡುತ್ತಾರೆ.. ನನಗೆ ಒಂಟಿತನ ಇಷ್ಟವಾಗತೊಡಗಿತು. ಒಮ್ಮೆ ಶೀತವಾದಾಗ ಅಮ್ರೋಹಿ ನನಗೆ ಬಲವಂತವಾಗಿ ಬ್ರಾಂಡಿಯನ್ನು ಕುಡಿಸಿದ್ದ. ನನ್ನನ್ನು ನಾನು ಮರೆಯಲು ವಿಪರೀತವಾಗಿ ಮದ್ಯಪಾನ ಮಾಡತೊಡಗಿದೆ. ಅಮ್ರೋಹಿ, ಧರ್ಮೇಂದ್ರ ದೂರವಾಗತೊಡಗಿದರು. ಸಿನಿಮಾಗಳಲ್ಲಿ ಮದ್ಯವೆಸನಿ ಹೆಣ್ಣಿನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ನಾನು ವಾಸ್ತವದಲ್ಲೂ ವಿಪರೀತವಾಗಿ ಮದ್ಯವೆಸನಿಯಾಗಿಬಿಟ್ಟೆ. ನನ್ನ ಅದ್ಬುತವಾದ ಬಣ್ಣದ ಲೋಕ ಕರಗಿಹೋಯಿತು. ಕೇವಲ ಮುವತ್ತೊಂಬತ್ತು ವರ್ಷಗಳಿಗೇ ನನ್ನ ಯವ್ವನ ಕೃಶವಾಗಿ ಹೋಗಿತ್ತು. ಸೌಂದರ್ಯದೊಂದಿಗೆ ನನ್ನ ಸಂಪತ್ತೂ ಕರಗಿ ಹೋಗಿತ್ತು. ಬಣ್ಣದ ಪರದೆ ನನ್ನ ಮಟ್ಟಿಗೆ ಹರಿದು ಹೋಗಿತ್ತು.

ಫೋಟೋ ಕೃಪೆ : flickr
ಒಂದು ಪೆಗ್ ಚೀಪ್ ಲಿಕ್ಕರ್ ಗೂ ನನ್ನ ಬಳಿ ಕಾಸು ಇಲ್ಲದಾಯಿತು. ನಾನು ಒಂಟಿಯಾಗಿ, ಅನಾಥೆಯಾಗಿ ದೂರ ದೂರ ಬಲು ದೂರ ಹೋಗಿಬಿಟ್ಟೆ… ನಾನು ಬಣ್ಣದ ಚಿಟ್ಟೆ..! ಕಾಮನಬಿಲ್ಲು…!! ಪರದೆಯ ಹಿಂದಿನ ಕಟು ಸತ್ಯ…!!!
- ಕೇಶವ ರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)
