ಯಾರಿಗೆ ಗೊತ್ತು… ನಾಳೆ ಇರ್ತೀವೋ, ಹೋಗ್ತೀವೋ??? ಜಗ್ಗದ ಮೈಗೆ ಕೆಲಸ ಕೊಟ್ಟು ಬದುಕನ್ನು ಹೊಳಪುಗೊಳಿಸಬೇಕು.ನಾಳೆ ಎಂಬುದನ್ನು ತಲೆಯಿಂದ ತಗೆಯಿರಿ ,ಇಂದಿಗಾಗಿ ಬದುಕಿ. ಲೇಖಕಿ ಗಿರಿಜಾ ಹೆಗ್ಡೆ ಅವರಿಂದ ಜೀವನಕ್ಕೆ ಉತ್ಸಾಹ ತುಂಬುವ ಲೇಖನ. ಮುಂದೆ ಓದಿ…
ಮನೆಯಲ್ಲಿರುವ ಅಷ್ಟೂ ಚಾಕುಗಳೂ ಬಳಸಿ ಬಳಸಿ, ಬಡ್ಡು ಹಿಡಿದಿದ್ವು. ನಿಮಿಷದಲ್ಲಿ ಹೆಚ್ಚಬಹುದಾದ ತರಕಾರಿ, ಹಣ್ಣುಗಳು ಅರ್ಧ ಗಂಟೆ ತಗೊಳ್ತಿತ್ತು. ಮಾಡಲು ಅಂಥ ಮಹತ್ವದ್ದು ಬೇರೆ ಇರ್ಲಿಲ್ಲ; ಗಂಟೆಗಟ್ಟಲೇ ಕೂತು ಅದೇ ಚಾಕುವಿನಿಂದ ನಿಧಾನಕ್ಕೆ ಹೆಚ್ತಿದ್ದೆ. ಕಿರಿಕಿರಿ… ಬೇಸರ… ” ಅಯ್ಯೋ ಮಾಡ್ಬೇಕಲ್ಲ” ಅನ್ನೋ ಸ್ಟೇಟ್ ಅಫ್ ಮೈಂಡ್! ಖುಷಿ ಇಲ್ಲದ ಕೆಲಸ ಅದು.
ಇದು ಬರೀ ದಿನ, ತಿಂಗಳುಗಳ ಮಾತಲ್ಲ. ವರ್ಷಗಟ್ಟಲೇ ಹಾಗೇ ಕಳೆದೆ.

ಫೋಟೋ ಕೃಪೆ : thespruceeats
ಒಂದು ದಿನ ” ಥತ್ ” ಅನ್ನಿಸ್ತು.
ಮನೆಯಲ್ಲಿ ಬಿದ್ದಿದ್ದ ಅಷ್ಟೂ ಚಾಕು, ಕತ್ತರಿ, ಕತ್ತಿ, ಈಳಿಗೆ ಮಣೆಗಳನ್ನೆಲ್ಲ ಸಾಣೆಹಿಡಿಸಿ ಫಳಗುಟ್ಚಿಸಿದೆ. ( ಗಂಡ ಸ್ವಲ್ಪ ಗಾಬರಿ ಆದದ್ದು ನಿಜ). ತರಕಾರಿ, ಹಣ್ಣುಗಳನ್ನ “ಕಚಕಚ” ಹೆಚ್ಚಿ ಕೊಚ್ಚಿ ಕತ್ತರಿಸಿ ಬಿಸಾಡಿದೆ. ಕೆಲಸ ಬೇಗ ಮುಗಿಸಿ, ಹಾಡು ಕೇಳಿದೆ. ಪುಸ್ತಕ ಓದ್ತಾ ನಿದ್ದೆ ಮಾಡಿದೆ. ಗಿಡಗಳ ಜೊತೆ ಹೆಚ್ಚು ಸಮಯ ಕಳೆದೆ. ಈಗ ಕೆಲಸ ಮಾಡಲೂ ಖುಶಿ.. ಕೆಲಸದ ಪ್ರೊಸೆಸ್ಸೇ ಖುಶಿ!
ಹಾಗೇ… ಸುಮಾರು ಸಂಗತಿಗಳನ್ನು ಮುಂದೂಡ್ತೇವೆ.

ಫೋಟೋ ಕೃಪೆ : ledger.mcgilleus
ಕರಿಬೇವು ಇಲ್ಲದೆಯೇ ಮಾಡಿದ ಒಗ್ಗರಣೆ… ದೋಸೆ ಸರಿಯಾಗಿ ಏಳದ ಕಾವಲಿ…ಬಟನ್ ಹೊಲಿಯದೇ ಹಾಕಿದ ಶರ್ಟು… ಫಾಲ್ ಹಚ್ಚದೇ ಉಡುವ ಸೀರೆ… ಕ್ಲಿಪ್ ಹಾಕಬೇಕಿರುವ ಹಲ್ಲು… ಧೂಳು ಹೊಡೆಯಬೇಕಿರುವ ಕಿಟಕಿ… ಓದದೇ ಇಟ್ಟ ಪುಸ್ತಕ…ಶುರುಮಾಡಬೇಕಿರುವ ವಾಕು….ಕಲಿಯಬೇಕಿರುವ ಡ್ರೈವಿಂಗು.. ಮಾಡಿಸದೇ ಬಿಟ್ಟ ಹೇರ್ಕಟ್.. ಕಷ್ಟವೆನಿಸುವ ಜಾಬ್.. ಅಸಹನೀಯ ಸಂಬಂಧ… ಮತ್ತೆ ಮತ್ತೆ ತಪ್ಪಿಸಿಕೊಂಡ ಭೇಟಿ..!
ಎಲ್ಲದಕ್ಕೂ ಅಡ್ಜಸ್ಟ್ ಆಗ್ತಾ, ಇದು ಪರವಾಗಿಲ್ಲ ಇನ್ನೂ ಸ್ವಲ್ಪ ದಿನ ಓಕೆ ಅನ್ತಾ, ಒಪ್ಪಿಕೊಳ್ತಾ, ಮಾಡಬೇಕಿರುವುದನ್ನು ಆಗಬೇಕಿರುವುದನ್ನು ಮುಂದೂಡ್ತಾ, ಒಗ್ಗರಣೆಯ ರುಚಿ, ಸೀರೆಯ ಅಂದ, ಕಾರ್ ಓಡಿಸುವ ಖುಷಿ…ಎಲ್ಲ ಮುಂದೂಡ್ತಾ ಹೋಗ್ತೇವೆ. ಖುಷಿಯನ್ನು ಕದಿಯುವ ‘ನಾಳೆ’ ಎಂಬ ಕಳ್ಳನ ಕೈಗೇ ಕೀಲಿ ಕೊಟ್ಟು, ಜಡ್ಡುಗಟ್ಟಿ ನರಳ್ತಾ, ಸಿಗಬಹುದಾದ ಮೊಮೆಂಟಮ್ ತಪ್ಪಿಸಿಕೊಳ್ತೇವೆ. ನಾಳೆ ಮಾಡಿದ್ರಾಯ್ತು…ನಾಳೆ ಕಲಿತರಾಯ್ತು…ನಾಳೆ ಸಿಕ್ಕರಾಯ್ತು. ನಾಳೆ… ನಾಳೆ… ನಾಳೆ…!
As if, we live here forever !!
ಯಾರಿಗ್ಗೊತ್ತು ಸ್ವಾಮಿ???
ನಾಳೆ ಇರ್ತೀವೋ, ಹೋಗ್ತೀವೋ??!
ಬಡ್ಡಾದ ಬದುಕಿಗೆ ಇವತ್ತೇ ಸಾಣೆ ಹಿಡಿಸಬೇಕು.
ಬದುಕು ಹೊಳೆದು ಫಳಗುಟ್ಟಬೇಕು.
- ಗಿರಿಜಾ ಹೆಗ್ಡೆ (ಲೇಖಕರು) ಬೆಂಗಳೂರು
