ಜೀವನದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೋ ಅದರ ಬಗ್ಗೆ ಮಾತ್ರ ಯೋಚಿಸಿ, ಜೀವನದ ಅಮೂಲ್ಯ ಕ್ಷಣವನ್ನು ವ್ಯರ್ಥಮಾಡದಿರಿ ಎನ್ನುವ ಉತ್ತಮ ಸಂದೇಶ ನೀಡುವ ಉತ್ತಮ ಲೇಖನ ಪ್ರೊ. ರೂಪೇಶ್ ಪುತ್ತೂರು ಅವರ ಲೇಖನಿಯಲ್ಲಿ, ಮುಂದೆ ಓದಿ…
ನಮ್ಮ ದೇಹದ ತೀಕ್ಷ್ಣ ನ್ಯೂನತೆ , ತೀವ್ರ ಅನಾರೋಗ್ಯಕ್ಕೆ ವೈದ್ಯರನ್ನು ಸಂಪರ್ಕಿಸಬಹುದು. ಆದರೆ… ಮಾನಸಿಕವಾದ ಅನಾನುಕೂಲಕ್ಕೆ ಉತ್ತಮವಾದ – ಅತ್ಯುತ್ತಮವಾದ ವೈದ್ಯರೆಂದರೆ
ಅದು ನಾವೇ…
ಕೆಲವೊಮ್ಮೆ ನಡೆದ ಘಟನೆಗಳು ಮನದೊಳಗೆ ಗೊಂದಲನದ ಸಂಚಲನ ಮಾಡುತ್ತಿದ್ದರೆ, ಅದು ನಡೆದೇ ಇಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ , ಎಲ್ಲೋ ಕನಸಲ್ಲಿ ನಡೆದುದು ಎಂದು
ನಿರ್ಲಕ್ಷಿಸಬೇಕು, ಮರೆಯಬೇಕು. ಒಂದು ವೇಳೆ ಅದರಿಂದ ಏನಾದರೂ ಕಲಿಯುವುದಾಗಿದ್ದರೆ ಅದರ ಮೂಲ್ಯತೆ ಅವಶ್ಯಕತೆಯಾದಾಗ ನಾವು ಅಳವಡಿಸಬಹುದು ಅಷ್ಟೇ.
ಒಬ್ಬ ೫೦-೬೦ ವರುಷ ಪ್ರಾಯದ ಒಬ್ಬ #ಗುರು , ೨೫-೩೦ ವರುಷದ ಶಿಷ್ಯ ಪ್ರಯಾಣ ಮುಂದುವರಿಸುತ್ತಾ ಮುಸ್ಸಂಜೆ ಹೊತ್ತಿಗೆ, ಒಂದು ಹೊಳೆಯ ತೀರ ಬರುತ್ತಾರೆ. ಹೊಳೆ ನಡೆದು ದಾಟಬಹುದು ಎಂದು ಹೆಜ್ಜೆಗೆ ನಿರ್ಧಾರ ಮಾಡುವ ಹೊತ್ತಿಗೆ …

ಫೋಟೋ ಕೃಪೆ : Hindustan Times
” ನನಗೂ ಈ ಹೊಳೆ ದಾಟಬೇಕಿತ್ತು ಸಹಾಯ ಮಾಡಬಹುದೇ” ಎಂದು ಅಲ್ಲೇ ನಿಂತಿದ್ದ ಯುವತಿ ವಿನಯದಿಂದ ಪ್ರಶ್ನೆ ಕೋರಿದಳು. ಗುರು ಅವಳ ಮಾತನ್ನು ಕೇಳದಂತೆ ಗಂಭೀರತೆಯಿಂದ ಹೊಳೆಯ ಇನ್ನೊಂದು ತೀರವನ್ನು ನೋಡಿ, ನಡೆದು ಬಂದ ದಣಿವು ನೀಗಿಸಿ ನಿಟ್ಟುಸಿರು ಬಿಡುತ್ತಿದ್ದರು. ಗುರು ಯುವತಿಯ ಕೋರಿಕೆಯನ್ನು ಕೇಳಲಿಲ್ಲವೆಂದುಕೊಂಡು ” ಅಭ್ಯಂತರವಿಲ್ಲದಿದ್ದರೆ ನೀವು ನಮ್ಮಿಬ್ಬರಲ್ಲಿ ಯಾರಾದರೂ ಒಬ್ಬರ ಹೆಗಲಲ್ಲಿ ಕುಳಿತು ದಾಟಬಹುದು” ಎಂದ ಶಿಷ್ಯ. ಕೆಲ ಹೊತ್ತು ಯೋಚಿಸಿದ ಆಕೆ, ಶಿಷ್ಯನ ಹೆಗಲಲ್ಲಿ ಕೂತು ಹೊಳೆ ದಾಟಿ, ಅವನಿಗೆ ಧನ್ಯವಾದ ಸಮರ್ಪಿಸಿ, ನಡೆದು ದೂರ ಸರಿದು ಹೋದಳು.
ಅಲ್ಲಿಂದ ಮುಂದೆ ಒಂದು ಛತ್ರದ ಕಡೆ #ಗುರು_ಶಿಷ್ಯ ನಡೆದು ಹೋಗುವಾಗ ಕ್ಷಣ ಕ್ಷಣ ಗುರುವಿನ ಮುಖಾರವಿಂದದಲ್ಲಿ ಬದಲಾವಣೆಗಳು ಗುರುವಿನ ನಡೆಯುವ ವೇಗದಲ್ಲಿ ಕಾಣುತ್ತಿತ್ತು. ರಾತ್ರಿ ಭೋಜನವಾದ ಬಳಿಕ, ಮುಂಜಾವಿನಿಂದ ರಾತ್ರಿಯವರೆಗೂ ನಡೆದು ದಣಿದ ಇಬ್ಬರೂ ನೆಲದಲ್ಲೇ ಮಲಗಿ ನಿಧ್ರಾಪರವಶರಾದರು. ಮಧ್ಯರಾತ್ರಿಯಲ್ಲಿ ಗಾಢವಾದ ನಿದ್ರೆಯಲ್ಲಿ ಶಿಷ್ಯನಿಗೆ, ಗುರು ಎಬ್ಬಿಸುವಂತೆ ಕನವರಿಕೆ ಆಯಿತು. ಆದರೆ ತನ್ನ ದೇಹವೇ ಅಲ್ಲಡುತ್ತಿರುವಂತೆ ಎಚ್ಚರಿಕೆಯಾದ ಶಿಷ್ಯ ಕಣ್ತೆರೆದು ನೋಡಿದಾಗ , ನಿಜವಾಗಿಯೂ ಗುರು ಅವನನ್ನು ಮೈದೂಡಿ ಎಬ್ಬಿಸುತ್ತಿದ್ದರು.
” ಏನಾಯಿತು ಗುರುವರ್ಯ?”
” ನೀನು ಇಂದು , ಆ ಯುವತಿಯನ್ನು ಹೆಗಲಮೇಲೆ ಏರಿಸಿ ಹೊಳೆ ದಾಟಿಸಿದ್ದು ಸರಿಯಾದ ನಡವಳಿಕೆ ಆಗಲಿಲ್ಲ”
” ಅಯ್ಯೋ #ಗುರುವರ್ಯ …. ನನ್ನ ಹೆಗಲಿಂದ ಅವಳನ್ನು ಇಳಿಸಿದಾಗಲೇ, ನಾನು ಆ ಮಾಡಿದ ಕೆಲಸವನ್ನೂ , ಆ ಯುವತಿಯನ್ನೂ , ಆ ಘಟನೆಯನ್ನೂ ಮರೆತೆ. ನೀವು ಈಗಲೂ ನಿದ್ದೆಗೆಟ್ಟು ಈ
ಮಧ್ಯರಾತ್ರಿಯ ವರೆಗೂ ಅದನ್ನು ಚಿಂತಿಸಿ ಸಮಯ ಹಾಗೂ ಯೋಚನಾ ಶಕ್ತಿ ವ್ಯರ್ಥ ಮಾಡುತ್ತಿರುವಿರೋ!!!!!?”
ನಾವೂ ಜೀವನದಲ್ಲಿ ಕೆಲವೊಮ್ಮೆ ಯೋಚಿಸಬಾರದುದನ್ನು ಯೋಚಿಸಿ, ಯೋಚಿಸ ಬೇಕಾದುದನ್ನು ಯೋಚಿಸದೆ, ಜೀವನದ ಅಮೂಲ್ಯತೆಯನ್ನು ಅರಿಯದೆ ಕಳೆದುಕೊಳ್ಳುತ್ತೇವೆ. ಬರೆಯಬಾರುದುದನ್ನು ಬರೆವ.
ನಿಮ್ಮವ ನಲ್ಲ
*ರೂಪು*
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು) ಬೆಂಗಳೂರು.
