‘ಆಗಂತುಕ’ ಮೂರು ಕವಿತೆಗಳು

ಪ್ರಿಯಕರನ ಬರುವಿಕೆಗೆ ಕಾದು ಕುಳಿತ ಪ್ರಿಯತಮೆಯ ಮನದಾಳದ ಭಾವನೆಯ ಬುಗ್ಗೆ ಪ್ರೀತಿಯ ಧಾರೆಯನ್ನು ಕೆಳಗಿನ ಮೂರು ಕವಿತೆಗಳಲ್ಲಿ ಕವಿ, ಕವಿಯತ್ರಿಯರು ಕಟ್ಟಿಕೊಟ್ಟಿದ್ದಾರೆ ತಪ್ಪದೆ ಓದಿ…

 • ನೀನು ಬಂದ ದಿನವೆ ನಿದಿರೆ
  ರಜೆಯ ಹಾಕಿ ಹೋಗಿದೆ
  ರೆಪ್ಪೆ ಚಿಲಕ ಹಾಕದಂತೆ
  ಸಜೆಯ ಕೊಟ್ಟು ತಡೆದಿದೆ

  ಅಧರವೆರಡು ಮೌನತಾಳಿ
  ನುಡಿಯು ಹೂಡಿ ಮುಷ್ಕರ
  ಹೃದಯ ಬಡಿತ ವೇಗವಾಗಿ
  ಹಿಡಿದ ಕನಸು ಸಾಸಿರ

  ಅಲೆವ ಮನಸು ನಿನಗೆ ಸೋಕಿ
  ಬರದೆ ನಿನ್ನೊಳುಳಿದಿದೆ
  ಒಲವು ಸೆಳೆದು ಬಂಧಿಸಿರಲು
  ಬಿಡದೆ ಮರಳಲಾಗದೆ

  ನನ್ನಲಿರದ ನನ್ನ ಮನದ
  ಸಾಲ ಬಾಕಿ ತೀರಿಸು
  ಕಡೆಗಣಿಸದೆ ಹಂಬಲವನು
  ತೆರವು ನೀಡಿ ಸಂಧಿಸು

 • ಜ್ಯೋತಿ. ಎಸ್ , ಕೆನಡಾ

  (ಕರುನಾಡಿನಲ್ಲಿ ಹುಟ್ಟಿ ದೂರದ ಕೆನಡಾದಲ್ಲಿ ವಾಸವಾಗಿರುವ ಶ್ರೀಮತಿ ಜ್ಯೋತಿ ಕೃಷ್ಣನ್ ಅವರ ಕನ್ನಡದ ಅಭಿಮಾನ ಅಗಾಧವಾದದ್ದು. ಪ್ರತಿ ದಿನ ಒಂದಿಲೊಂದು ಛಂದಸ್ಸು ಹಾಗು ಛಂದಸ್ಸೇತರ ಕಾವ್ಯ ರಚಿಸುತ್ತಿರುತ್ತಾರೆ. ಅವರ ಒಂದು ರಚನೆಗೆ ಶ್ರೀಮತಿ ಲಲಿತ ಬಿಟ್ಟೀರ ಚೋಂದಮ್ಮ ಹಾಗು ಚನ್ನಕೇಶವ ಜಿ ಲಾಳನಕಟ್ಟೆ ಸೊಗಸಾಗಿ ಮರು ಕವಿತೆ ರಚಿಸಿದ್ದಾರೆ.)


 • ನೀನು ಹೋದ ದಿನವೆ ನಿದುರೆ
  ದೂರ ಹಾರಿ ಹೋಗಿದೆ
  ಮೀನ ಕಂಗಳೆರಡು ರೆಪ್ಪೆ
  ಮುಚ್ಚದಂತೆ ಮುನಿದಿದೆ

  ಅಧರವೆರಡು ತೆರೆಯದಂತೆ
  ಚಿಲಕ ಹಾಕಿ ಕುಳಿತಿದೆ
  ಮಧುರ ನುಡಿಯನಾಡದಂತೆ
  ಮೌನವನ್ನು ಧರಿಸಿದೆ

  ಅಲೆಯುತಿಹುದು ಎನ್ನ ಮನಸು
  ನಿನ್ನ ಹಿಂದೆ ಸುತ್ತುತ
  ಬಲೆಯಬೀಸಿ ಹಿಡಿಯಲಾರೆ
  ಬಂಧಿಸಿರುವೆ ಕಟ್ಟುತ

  ಕನಸು ಬಿತ್ತಿ ಮನಸು ಕೊಡದೆ
  ಚಿಗುರದಂತೆ ಮಾಡಿದೆ
  ಹನಿಸದಿರಲು ನೀರ ಹನಿಯ
  ಮೊಳಕೆಯಲ್ಲೆ ಕಮರಿದೆ

  ಗಾಳಿ ಬೀಸುತಳಿಸಿತಲ್ಲೆ
  ನಿಟ್ಟುಸಿರಿನ ಮಾಲೆಯ
  ಬೀಳುತಿರುವ ಮಳೆಯು
  ತೊಳೆಯೆ
  ಕಣ್ಣ ಹನಿಯ ಛಾಯೆಯ

 •  ಬಿಟ್ಟೀರ ಚೋಂದಮ್ಮ, ಬೆಂಗಳೂರು.


 • ಅವಿತು ಮಾತು ಮೌನದೊಳಗೆ
  ನಿನ್ನ ಬರುವ ನೋಡುತ
  ಸವಿಯ ಸಮಯ ನಿದಿರೆ ಕೂಡ
  ಜಾರಿ ಹೋಯ್ತು ಕಾಣುತ

  ಮಧುರ ಸಂಜೆ ದಿನಪನಿಳಿದ
  ನಮ್ಮೊಳಿಳಿಸಿ ಬೆಳಕನು
  ಅಧರಕಧರ ಬಂಧಿಸುತಲಿ
  ಇನಿಯನೊಲವ ಕಂಡೆನು

  ನಿನ್ನ ಸಂಗದೊಳಗೆ ರಾತ್ರಿ
  ತನುವಿಗೂಟ ತೃಪ್ತಿಯು
  ಮುನ್ನ ನೀನು ಬರುವ ದಿನಕೆ
  ಕಾಯ್ವೆ ನೆನಪನಪ್ಪಿಯು

  ಉಸಿರಿಗುಸಿರು ಬೆಸೆಯುತಿರಲು
  ಬಸಿರ ಹೊರುವ ಕೌತುಕ
  ಹಸಿರು ಹೊತ್ತ ಭೂಮಿಯಂತೆ
  ತಾಯಿಯಾಗೆ ಸಾರ್ಥಕ.

 • ಚನ್ನಕೇಶವ ಜಿ ಲಾಳನಕಟ್ಟೆ

 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW