ಹಾಸನ ಜಿಲ್ಲೆಯ ರುದ್ರಪಟ್ಟಣ ಚನ್ನಕೇಶವ ದೇವಾಲಯ

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಒಂದು ಸಾಮಾನ್ಯ ಸಣ್ಣ ಹಳ್ಳಿ ರುದ್ರಪಟ್ಟಣವು ಕಾವೇರಿನದಿ ದಂಡೆಯಲ್ಲಿ ಇದೆ. ಇಲ್ಲಿ ಸುಮಾರು ನಾಲ್ಕುನೂರು ವರ್ಷಗಳಷ್ಟು ಹಳೆಯದಾದ ಚನ್ನಕೇಶವ ದೇವಾಲಯವಿದೆ. ಈ ದೇವಾಲಯದ ಕುರಿತು ವಸಂತ ಗಣೇಶ್ ಅವರು ಬರೆದಿರುವ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಒಂದು ಸಾಮಾನ್ಯ ಸಣ್ಣ ಹಳ್ಳಿ ರುದ್ರಪಟ್ಟಣವು ಕಾವೇರಿನದಿ ದಂಡೆಯಲ್ಲಿ ಇದೆ. ಇಲ್ಲಿ ಸುಮಾರು ನಾಲ್ಕುನೂರು ವರ್ಷಗಳಷ್ಟು ಹಳೆಯದಾದ ಚನ್ನಕೇಶವ ದೇವಾಲಯವಿದೆ. ಅದರ ಜೊತೆಗೆ ಇತ್ತೀಚೆಗೆ ಕಟ್ಟಲ್ಪಟ್ಟಿರುವ ಸಪ್ತಸ್ವರ ಮಂದಿರ ಹಾಗೂ ದ್ವಾದಶ ಸ್ವರ ಸ್ತಂಭ ಮಂಟಪಗಳು ಇಲ್ಲಿನ ವಿಶೇಷಗಳು. ಈ ಗ್ರಾಮ ಶ್ರೀಮಂತ ಸಂಗೀತ ಪರಂಪರೆಯ ಗ್ರಾಮ ಎಂದರೆ ತಪ್ಪಾಗಲಾರದು.

ಈ ಗ್ರಾಮವನ್ನು ವೇದ ಬ್ರಹ್ಮ ಹಾಗೂ ನಾದಬ್ರಹ್ಮರ ಸಂಗಮ ಸ್ಥಾನ ಎನ್ನುತ್ತಾರೆ. ಒಂದು ಹೇಳಿಕೆಯ ಪ್ರಕಾರ ಈ ಹಳ್ಳಿಯ ಮೂಲ ಜನರು ತಮಿಳುನಾಡಿನ ತಿರುನಲ್ವೆಲಿ ಜಿಲ್ಲೆಯ ಸೆಂಗೊಟ್ಟೈ ನಿಂದ ಬಂದು ನೆಲೆಸಿದವರು. ಹೀಗೆ ಬಂದವರಲ್ಲಿ ಒಂದು ಗುಂಪಿನ ಜನರು ಹಾಸನದ ಕೌಶಿಕಾ ಗ್ರಾಮದಲ್ಲಿ ನೆಲೆಸಿದರೆ ಮತ್ತೊಂದು ಗುಂಪು ಬೆಟ್ಟದಪುರಕ್ಕೆ ಬಂದು ನೆಲಸಿದರು. ಅಲ್ಲಿಂದ ಜನರು ಕಾವೇರಿ ನದಿ ತೀರದಲ್ಲಿ ವಾಸಿಸಲು ಆರಂಭಿಸಿದರು, ಹಾಗೆಯೇ ರುದ್ರಪಟ್ಟಣದಂತಹ ಗ್ರಾಮವು ರೂಪುಗೊಂಡಿತು ಎಂದು ಹೇಳುತ್ತಾರೆ. ಇಲ್ಲಿ ನೆಲೆಸಿದವರನ್ನು ಸಂಕೇತಿಗಳು ಎಂದು ಕರೆಯಲಾಯಿತು. ಸಂಗೀತ ಹಾಗೂ ವೇದಾಧ್ಯಯನ ಇವರ ಮೂಲ ಕಸುಬಾಯಿತು. ಇವೆರಡೂ ವಿಷಯಗಳಲ್ಲಿ ಇಲ್ಲಿನ ಜನರು ಹೆಚ್ಚಿನ ಸಾಧನೆ ಮಾಡಿದವರು ಪರಿಣಿತರು ಎಂದರೆ ತಪ್ಪಾಗಲಾರದು. ಸಂಗೀತ ಕ್ಷೇತ್ರಕ್ಕೆ ಸಾಕಷ್ಟು ಹೆಸರಾಂತ ಕಲಾವಿದರನ್ನು ನೀಡಿರುವುದು ಈ ರುದ್ರಪಟ್ಟಣ. ಸಂಗೀತದಲ್ಲಿ ಇಲ್ಲಿನವರನ್ನು ಮೀರಿಸುವುದು ಕಷ್ಟವೇ ಸರಿ.

ಫೋಟೋ ಕೃಪೆ : google

ಈ ಚಿಕ್ಕ ಹಳ್ಳಿಯಿಂದ ಕಲೆಗಾಗಿ ಸೇವೆಸಲ್ಲಿಸಿದ ಮಹನಿಯರುಗಳಲ್ಲಿ ವೆಂಕಟರಮಣಯ್ಯ, ವೆಂಕಟರಾಮಯ್ಶ ಆರ್ ಕೆ.ಶ್ರೀಕಂಠನ್, ಶತಾವಧಾನಿಗಳು, ವೀಣೆ ಸುಬ್ಬರಾಯರು, ಆರ್ ಕೆ ಪ್ರಕಾಶ್, ವೀಣೆ ಪದ್ಮನಾಭ, ವೀಣೆ ದೊರೆಸ್ವಾಮಿ, ಮರಿಯಪ್ಪ, ವೀಣೆ ರಂಗಪ್ಪ, ಆರ್ ವಿ ರಂಗನಾಥ. ಆರ್ ಕೆ ನಾರಾಯಣ್, ಕೃಷ್ಣಶಾಸ್ತ್ರಿ, ರಾಮಸ್ವಾಮಯ್ಯೊಂಗಾರ್, ವೀಣೆ ಕೇಶವಮೂರ್ತಿ,  ಆರ್ ಕೆ  ಸೂರ್ಯನಾರಾಯಣ, ರುದ್ರಪಟ್ಟಣ ಸಹೋದರರು, ಶಾಮಶಾಸ್ತಿ, ಗುರುಕಾರ್ ರಾಮಸ್ವಾಮಿ, ವೀಣೆ ದೊರೆಸ್ವಾಮಿ,ಇತ್ತೀಚಿನ ರತ್ನಮಾಲಾ ಪ್ರಕಾಶ್ ಹೀಗೆ ಇನ್ನೂ ಸಾಕಷ್ಟು ಸಂಗೀತದಲ್ಲಿ ಹೆಸರಾಂತರನ್ನು ಕೊಟ್ಟ ಊರು. ಇವರೆಲ್ಲ ಸಂಗೀತವನ್ನು ಅಭ್ಯಸಿಸಿ ಸಾಧನೆಯ ಜೊತೆಗೆ ಪ್ರಚಾರ ಮಾಡಿದವರು.

೨೦೦೨ ರಲ್ಲಿ ಇಲ್ಲಿನ ಸಂಗಿತಾಸಕ್ತ ಸ್ನೇಹಿತರು ಸೇರಿ ಸಂಗೀತದ ಮಿಲನ ಎನ್ನುವ ಹೆಸರಿನಲ್ಲಿ ಸಂಗೀತ ಮಹೋತ್ಸವ ಏರ್ಪಡಿಸುತ್ತಾರೆ. ಇದು ಮುಂದುವರೆದಂತೆ ಇಲ್ಲಿನವರೆ  ಆರ್ ಕೆ ಪದ್ಮನಾಭ ಅವರಲ್ಲಿ ರುದ್ರಪಟ್ಟಣ ಗ್ರಾಮ ಮತ್ತೊಂದು ತಿರುವೈಯಾರ್ ಆಗಬೇಕು ಎನ್ನುವ ತುಡಿತ ಹುಟ್ಟುತ್ತದೆ. ಅದೇ ತುಡಿತದಲ್ಲಿ ಸಂಗೀತ ವಿದ್ವಾನ್, ಕಲಾಭೂಷಣ
ಡಾ .ಆರ್.ಕೆ. ಪದ್ಮನಾಭ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ದೇವಾಲಯವೇ “ಸಪ್ತಸ್ವರ ದೇವತಾ ಧ್ಯಾನ ಮಂದಿರ”.ಇದು ಸಂಗೀತದ ಮಹಾನ್ ಚೇತನಗಳು ಬಾಳಿ ಬದುಕಿದ ಗ್ರಾಮ ಅದ ಕಾರಣ ಸಂಗೀತಕ್ಕೆ ಅನ್ವಯವಾದ ದೇವಾಲಯ ಕಟ್ಟುವ ಯೋಚನೆಯೊಂದು ಇವರಲ್ಲಿ ಮೂಡಿದಾಗ ನಿರ್ಮಾಣ ಆಗಿದ್ದೇ ಈ “ಸಪ್ತಸ್ವರ ದೇವತಾ ಧ್ಯಾನ ಮಂದಿರ” ಸಂಗೀತಕ್ಕೆ ಆಧಾರವಾದದ್ದು ಶ್ರುತಿ, ಶ್ರುತಿಯನ್ನು ಕೊಡುವ ತಂಬೂರಿಯ ಆಕಾರದಲ್ಲಿ ಜಾತಿ ರಹಿತ ಸಂಗೀತದ ದೇವಾಲಯವನ್ನು ಕಟ್ಟುವ ಯೋಜನೆಯಗೆ ೨೦೦೭ ರಲ್ಲಿ ಶಿಲಾನ್ಯಾಸ ಅಗಿ ೨೦೦೮ ಮೇ ಪೂರ್ಣವಾಗಿ ಲೋಕಾರ್ಪಣೆ ಆಯಿತು.

ಇಲ್ಲಿ ಎಲ್ಲವೂ ೭ಕ್ಕೆ ಅನ್ವಯ ೭ಮೆಟ್ಟಿಲು, ೭ಮೂಲೆಗಳು ೭ ದೇವತೆಗಳು, ೭೨ ಮೇಳಕ್ಕೆ ಅನ್ವಯ ಆಗುವಂತೆ ಎರಡು ಸಾಲು 36_36 ನಕ್ಷತ್ರಗಳ ಮೂಲಕ ಸೂಚಿಸಲಾಗಿದೆ. ಸಂಗಿತದಿಂದಲೆ ಷೋಡಶೋಪಚಾರ ಪೂಜೆ ಮಾಡುವುದು ಇಲ್ಲಿನ ವಿಶೇಷ. ಪ್ರತೀ ದೇವತೆಗೆ 7 ನಾಮಾವಳಿಗಳಿಂದ ಪೂಜೆ ನಡೆಯುತ್ತದೆ, ಇದನ್ನು ಆರ್.ಕೆ.ಪದ್ಮನಾಭ ಅವರೇ ಬರೆದಿರುವುದು ಮತ್ತೊಂದು ವಿಶೇಷ.

ಫೋಟೋ ಕೃಪೆ : google

ಈ ಸಪ್ತಸ್ವರ ಮಂದಿರವು ಒಂದು ಸಸ್ಯೋಧ್ಯಾನದ ನಡುವೆ ತಂಬೂರಿ ಇಟ್ಟಂತೆ ನಿರ್ಮಿಸಲಾಗಿದೆ. ಈ ದೇವಾಲಯಕ್ಕೆ ಎರಡು ದ್ವಾರಗಳು ಇದ್ದು, ಒಂದರ ಮೂಲಕ ಪ್ರವೇಶಿಸಿದರೆ ಮತ್ತೊಂದರ ಮೂಲಕ ಹೊರ ಬರುವಂತೆ ಯೋಜಿಸಲಾಗಿದೆ. ಪ್ರತಿಯೊಬ್ಬರೂ ಇಲ್ಲಿ ಪ್ರವೇಶ ಮಾಡುವಾಗ ತಂಬೂರಿಯ ನಾದ ಹೊಮ್ಮುವಂತೆ, ಸ್ವರಗಳ ನಿನಾದ ಕೇಳುವಂತೆ ತಂತ್ರಜ್ಞಾನ ಅಳವಡಿಸಿದ್ದು, ಪ್ರವೇಶಿಸಿದ ಕೂಡಲೇ ನಮ್ಮನ್ನು ಒಂದು ಧ್ಯಾನ ಲೋಕಕ್ಕೆ ಕೊಂಡೊಯ್ಯುವ ಅನುಭವ ಆಗುತ್ತದೆ.

ದೇವಾಲಯದ ಮಧ್ಯದಲ್ಲಿ ಸಂಗೀತದ ಅಧಿದೇವತೆ ಸರಸ್ವತಿಯ ವಿಗ್ರಹವಿದ್ದು, ಒಂದು ಪಕ್ಕಕ್ಕೆ ಮೂವರು ದಾಸ ಶ್ರೇಷ್ಠರಾದ ಕನಕ ದಾಸರು ಪುರಂದರ ದಾಸರು ವಾದಿರಾಜರು ಹಾಗೂ ಮತ್ತೊಂದು ಪಕ್ಕದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಾದ ತ್ಯಾಗರಾಜರು, ಮೂತ್ತೂಸ್ವಾಮಿ ದೀಕ್ಷಿತರು ಹಾಗೂ ಶ್ಯಾಮಾಶಾಸ್ತ್ರೀ ಗಳು ಹೀಗೆ ಆರು ಜನ ಸಂಗೀತದ ಶ್ರೇಷ್ಠರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಸರಸ್ವತಿ ಮೂರ್ತಿಯ ಮೇಲೆ “ಸ” ಎಂದು ಬರೆದಿದ್ದು ಉಳಿದ ಮೂರ್ತಿಗಳ ಮೇಲೆ ರಿ ಗ ಮ ಪ ಧ ನಿ ಎಂದು ಸಂಗೀತದ ಸ್ವರಗಳನ್ನು ಬರೆಯಲಾಗಿದೆ. ಇಲ್ಲಿ ಸಂಗೀತದ ಮೂಲಕವೇ ಪೂಜೆ ನಡೆಯುವುದು ಅತೀ ವಿಶೇಷ. ಇಲ್ಲಿ ಸಂಗೀತ ತಿಳಿದ ಭಕ್ತರು ಮನದಣಿಯೆ ಹಾಡಿ ಸಂಗೀತ ಸೇವೆ ಮಾಡಬಹುದು.ಇಂದು ಇದು ವಿಶ್ವ ಪ್ರಸಿದ್ದವಾಗಿದೆ. ಎಲ್ಲೆಡೆಯಿಂದ ಸಾಕಷ್ಟು ಜನ ಬರ್ತಾರೆ.

ರುದ್ರಪಟ್ಟನ ಸಂಗೀತೋತ್ಸವ ಸಮಿತಿ ಟ್ರಸ್ಟ್ ಮುಖಾಂತರ ಪ್ರತೀ ವರ್ಷ ಮೇ ತಿಂಗಳಲ್ಲಿ ಬೃಹತ್ ಸಂಗೀತೋತ್ಸವ ನಡೆಯುತ್ತದೆ. ಆಗಂತೂ ಸಂಗೀತ ಪ್ರೇಮಿಗಳಿಗೆ ಸಂಗೀತದ ರಸದೌತಣವೇ ಸರಿ.

ಇದರೊಂದಿಗೆ ಇತ್ತೀಚೆಗೆ ಲೋಕಾರ್ಪಣೆ ಅದ ದ್ವಾದಶ ಸ್ವರ ಸ್ತಂಭ ಮಂಟಪ ಕೂಡಾ ಅತ್ಯಂತ ವಿಶಿಷ್ಟ. ಹೊರಗಿನಿಂದ ನೋಡಲೇ ಮನಸೂರೆಗೊಳ್ಳುವ ಹಾಗಿದೆ. ಶಿಲಾಬಾಲಿಕೆ ಹಾಗೂ ಸುಂದರ ಕಂಬಗಳಿಂದ ಕೂಡಿದ್ದು ಬಹಳ ಸೊಗಸಾಗಿದೆ. ಇನ್ನು ಒಳಭಾಗವಂತೂ ಸಂಗೀತ ಸರಸ್ವತಿಯ ಆವಾಸ ಸ್ಥಾನ ಎನ್ನುವಂತಿದೆ.

ಫೋಟೋ ಕೃಪೆ : google

ಜನ ಸಾಮಾನ್ಯರಿಗೆ ಹಾಗೂ ಸಂಗೀತದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದವರಿಗೆ ಸಂಗೀತದಲ್ಲಿ 7 ಸ್ವರಗಳಿವೆ ಎನ್ನುವುದು ಮಾತ್ರ ತಿಳಿದಿರುತ್ತದೆ. ಆದರೆ ಈ 7 ಸ್ವರಗಳಲ್ಲಿ ಕೆಲವೊಂದು ಸ್ವರಾಗಳಲ್ಲಿ ಅತೀ ಸೂಕ್ಷ್ಮವಾದ ವ್ಯತ್ಯಾಸಗಳಿಂದ ಬೇರೆ ಬೇರೆಯಾಗಿದ್ದು ಅವುಗಳನ್ನು ೧೨ ಸ್ವರಗಳಾಗಿ ಗುರುತಿಸಬಹುದು.

ಇನ್ನೂ ವಿಸ್ತಾರವಾಗಿ ಹೇಳಬೇಕೆಂದರೆ ಶಾಸ್ತ್ರೀಯ ಸಂಗೀತ ನಿಂತಿರುವುದು ಇದೇ 12 ಸ್ವರಸ್ಥಾನಗಳ ಮೇಲೆ. ಈ 12 ಸ್ವರ ಸ್ಥಾನಗಳ ಸ್ತಂಭಗಳನ್ನು ಇಲ್ಲಿ ಕಾಣಬಹುದು. ಇವುಗಳು “ಆಧಾರ ಷಡ್ಜ, ಶುದ್ಧ ರಿಶಭ, ಚತುಶೃತ ರಿಷಭ, ಸಾಧಾರಣ ಗಾಂಧಾರ, ಅಂತರ ಗಾಂಧಾರ, ಶುದ್ಧ ಮಧ್ಯಮ, ಪ್ರತಿ ಮಧ್ಯಮ, ಪಂಚಮ, ಶುದ್ದ ದೇವತಾ, ಚತುಶೃತ ದೇವತಾ, ಕೈಶಕಿ ನಿಷಾಧ , ಕಾಕಲಿ ನಿಷಾಧ, ತಾರಾ ಷಡ್ಜ ಹೆಸರಿನ ಈ 12 ಕಂಬಗಳಾಗಿವೆ. ಈ 12 ಕಂಬಗಳಿಂದ ಒಂದೊಂದು ಸ್ವರದ ನಾದ ಹೊಮ್ಮುವುದನ್ನ ನಾವೇ ಸುತ್ತಿಗೆಯಿಂದ ಹೊಡೆದು ಕೇಳಬಹುದು ಹಾಗೂ ಅನುಭವಿಸಬಹುದು.

ಹೊಯ್ಸಳರ ಕಾಲದ ದೇವಾಲಯಗಳಲ್ಲಿ ಇರುವ ಸಂಗೀತ ಸ್ತಂಭಗಳ ನೆನಪನ್ನು ತರುತ್ತವೆ ಈ ಕಂಬಗಳು. (ಹಂಪೆ, ಬೇಲೂರು ಹಾಗೂ ಸಚ್ಚಿದಾನಂದ ಆಶ್ರಮದಲ್ಲಿ ಸಪ್ತ ಸ್ವರಗಳ ಸ್ತಂಭಗಳಿವೆ. ಇದರಲ್ಲಿ ಶಂಕರಾಭರಣ ಸ್ಕೇಲ್ ನ ಸ್ತಂಭಗಳು ಇವೆ). ಅದರೆ ದ್ವಾದಶ ಸ್ವರ ಸ್ತಂಭ ಗಳ ಪರಿಕಲ್ಪನೆ ಹಾಗೂ ನಿರ್ಮಾಣ ಇಡೀ ವಿಶ್ವದಲ್ಲಿಯೇ ಇಲ್ಲಿಯೇ ಪ್ರಥಮ ಎನ್ನುವುದು ನಮ್ಮ ಕರ್ನಾಟಕದ ಹೆಮ್ಮೆಗೆ ಮತ್ತೊಂದು ಗರಿ ಎಂದರೆ ತಪ್ಪಾಗಲಾರದು. ಇದೆಲ್ಲಕ್ಕೂ ಕಾರಣರು ನಮ್ಮವರೇ ಆದ  ಆರ್ ಕೆ ಪದ್ಮನಾಭ ಅವರು.


  • ವಸಂತ ಗಣೇಶ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW