ವಿಶ್ವ ಹುಚ್ಚುನಾಯಿ ಕಾಯಿಲೆ ದಿನಾಚರಣೆ !.

ಲಿಸ್ಸಾ ವೈರಸ್ ಎಂಬ ರಾಬ್ದೋ ಎಂಬ ಬುಲೆಟ್ ಆಕಾರದ ವೈರಾಣುವಿನ ಒಂದು ಪ್ರಬೇಧದಿಂದ ಬರುವ ಈ ಕಾಯಿಲೆ ಬಿಸಿರಕ್ತದ ಎಲ್ಲಾ ಸಸ್ತನಿ ಪ್ರಾಣಿಗಳನ್ನು ಬಾಧಿಸುತ್ತದೆ. ಈ ಕಾಯಿಲೆಗೆ ಸಾಮಾನ್ಯವಾಗಿ ಗುರಿಯಾಗುವ ಪ್ರಾಣಿಗಳೆಂದರೆ ತೋಳಗಳು, ನರಿಗಳು,ನಾಯಿಗಳು,ಇಲಿಗಳು, ಬಾವಲಿಗಳು ಮತ್ತು ಹೆಗ್ಗಣಗಳು.ರೇಬಿಸ್ ರೋಗದ ಕುರಿತು ಪಶುವೈದ್ಯರಾದ ಡಾ.ಎನ್.ಬಿ.ಶ್ರೀಧರ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸೆಪ್ಟೆಂಬರ್ 28, 2023 ರಂದು ವಿಶ್ವ ಹುಚ್ಚುನಾಯಿ ಕಾಯಿಲೆ ದಿನಾಚರಣೆ !. ಹುಚ್ಚು ನಾಯಿ ಕಾಯಿಲೆ ಯಾರಿಗೆ ಗೊತ್ತಿಲ್ಲ?… ಆದರೂ ಸಹ ಈ ಖಾಯಿಲೆಯ ಬಗ್ಗೆ ಸಾರ್ವಜನಿಕರಿಗೆ ಎಷ್ಟು ತಿಳಿಸಿದರೂ ಸಹ ಕಡಿಮೆಯೇ.. ಆಗಸ್ಟ್ 21, 2021 ರಂದು 15 ನೇ ವಿಶ್ವ ರೇಬಿಸ್ ದಿನ. ಜಗತ್ತಿನಲ್ಲಿ ಪ್ರತಿ ವರ್ಷ 28 ಸೆಪ್ಟೆಂಬರ್ ದಿನ ರೇಬಿಸ್ ದಿನಾಚರಣೆ. ಇದು ವಿಶ್ವ ವಿಖ್ಯಾತ ವಿಜ್ಞಾನಿ ಲೂಯಿ ಪಾಶ್ಚರ್‌ನ ಜನ್ಮ ದಿನ ಸಹಾ. ಮನುಷ್ಯನಿಗೆ ಖಚಿತ ಮರಣ ತರುವ ರೇಬಿಸ್ ಬಗ್ಗೆ ತಿಳಿದುಕೊಂಡು ಇತರರಿಗೂ ಸಹ ತಿಳಿಸುವುದರ ಅವಶ್ಯಕತೆ ಈಗ ಇದೆ.

ಹೆಸರು ಕೇಳಿದರೇನೇ ನಡುಕ ಹುಟ್ಟಿಸುವ ರೋಗ ರೇಬಿಸ್. ರೋಗ ಬಂತೆಂದರೆ ದುರ್ಬರ ಸಾವು ಖಚಿತ. ಜಗತ್ತಿನ ಹಲವು ದೇಶಗಳಲ್ಲಿ ಮತ್ತು ನಮ್ಮ ದೇಶದಲ್ಲಿ ಬಹಳಷ್ಟು ಸಾವುಗಳನ್ನುಂಟು ಮಾಡುವ ಈ ಕಾಯಿಲೆಯ ಬಗ್ಗೆ ಕೇಳದವರು ವಿರಳ. ವಿವಿಧ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಹಲವು ಲೇಖನಗಳು ಮತ್ತು ಕಾರ್ಯಕ್ರಮಗಳು ಬಂದರೂ ಸಾರ್ವಜನಿಕರಿಗೆ ಇದರ ಬಗ್ಗೆ ಇನ್ನೂ ಮಾಹಿತಿ ಅವಶ್ಯ. ಒಂದು ಅಂಕಿ ಅಂಶದ ಪ್ರಕಾರ ರೇಬಿಸ್‌ನಿಂದ ಎಷ್ಯಾ ಖಂಡದಲ್ಲಿ ಕಳೆದ ವರ್ಷ ಸುಮಾರು 3 ಮಿಲಿಯ ಜನ ನಾಯಿಗಳ ಕಡಿತಕ್ಕೆ ತುತ್ತಾಗಿದ್ದು ಸುಮಾರು 45,000 ಮರಣಗಳು ಸಂಭವಿಸಿದ್ದು ಹೆಚ್ಚಿನ ಭಾಗ ಭಾರತದಲ್ಲಿ ಅಂದರೆ ಸುಮಾರು 30,000 ಜನರು ಈ ಕಾಯಿಲೆಯಿಂದ ಮರಣ ಹೊಂದಿದ್ದಾರೆ ಎಂದಿದೆ. ಅಲ್ಲದೇ ಹೆಚ್ಚಿನ ಸಾವು ವರದಿಯಾಗದೇ ಇರಬಹುದು. ಇಂಗ್ಲೆಂಡ್ , ಜಪಾನ್, ಫಿಲಿಪೈನ್ಸ್ ಮತ್ತು ಜಗತ್ತಿನ ಹಲವು ದೇಶಗಳಲ್ಲಿ ರೇಬಿಸ್ ಕಾಯಿಲೆಯನ್ನು ನಿರ್ಮೂಲನ ಗೊಳಿಸಿ ರೇಬಿಸ್ ಮುಕ್ತ ದೇಶಗಳೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

ಫೋಟೋ ಕೃಪೆ : google

ಲಿಸ್ಸಾ ವೈರಸ್ ಎಂಬ ರಾಬ್ದೋ ಎಂಬ ಬುಲೆಟ್ ಆಕಾರದ ವೈರಾಣುವಿನ ಒಂದು ಪ್ರಬೇಧದಿಂದ ಬರುವ ಈ ಕಾಯಿಲೆ ಬಿಸಿರಕ್ತದ ಎಲ್ಲಾ ಸಸ್ತನಿ ಪ್ರಾಣಿಗಳನ್ನು ಬಾಧಿಸುತ್ತದೆ. ಈ ಕಾಯಿಲೆಗೆ ಸಾಮಾನ್ಯವಾಗಿ ಗುರಿಯಾಗುವ ಪ್ರಾಣಿಗಳೆಂದರೆ ತೋಳಗಳು, ನರಿಗಳು, ನಾಯಿಗಳು, ಇಲಿಗಳು, ಬಾವಲಿಗಳು ಮತ್ತು ಹೆಗ್ಗಣಗಳು. ಹುಚ್ಚು÷ ನಾಯಿ ತಗಲಿದ ನಾಯಿಯ ಕಡಿತದಿಂದ ಬರುವ ಈ ಕಾಯಿಲೆ ಅದರ ಜೊಲ್ಲಿನಲ್ಲಿರುವ ವೈರಾಣುಗಳು ಕಡಿತದಿಂದ ಉಂಟಾದ ಗಾಯದಲ್ಲಿ ಸೇರಿಕೊಳ್ಳುವ ಮೂಲಕ ಬರುತ್ತದೆ. ರೋಗಾಣುಗಳು ಗಾಯವನ್ನು ಸೇರಿಕೊಂಡು ಸಮೀಪದ ನರಗಳ ಮುಖಾಂತರ ನರವ್ಯೂಹವನ್ನು ಸೇರಿ ಕೊಳ್ಳುತ್ತವೆ. ಮೆದುಳಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವೃದ್ಧಿಗೊಂಡು ಕೆಲವು ಮುಖ್ಯ ಜೀವಕೋಶಗಳನ್ನು ನಾಶ ಮಾಡಿದ ನಂತರ ರೋಗಾಣುಗಳು ಮತ್ತೊಂದು ನರದ ಮೂಲಕ ನಾಯಿಯ ಜೊಲ್ಲುಗ್ರಂಥಿಗಳನ್ನು ಸೇರಿ ಅಲ್ಲಿ ನೆಲೆಗೊಳ್ಳುತ್ತವೆ. ಈ ರೀತಿ ರೋಗ ತಗಲಿದ ನಾಯಿ ತನ್ನ ಜೊಲ್ಲಿನ ಮೂಲಕ ವೈರಾಣುಗಳನ್ನು ಇತರ ಪ್ರಾಣಿಗಳಿಗೆ ಕಡಿಯುವುದರ ಮುಖಾಂತರ ರವಾನಿಸುತ್ತದೆ. ಮೆದುಳಿಗೆ ಸಮೀಪದ ಭಾಗಗಳಾದ ಮುಖ,ತಲೆ ಇತ್ಯಾದಿ ಭಾಗಗಳಲ್ಲಿ ಕಡಿತಗಳಾದಾಗ ಬೇಗ ಬರುವುದು ಸಹಜ. ವೈರಾಣು ಶರೀರವನ್ನು ಪ್ರವೇಶಿಸಿದ ಒಂದು ವಾರದಿಂದ ಎರಡು ವರ್ಷದೊಳಗೆ ಕಾಯಿಲೆ ಬರಬಹುದು. ಅದುದರಿಂದ ಯಾವುದೇ ನಾಯಿ ಕಡಿತವನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ. ಹುಚ್ಚು ನಾಯಿ ರೋಗ ಕೇವಲ ನಾಯಿ ಕಡಿತದಿಂದ ಬರಬೇಕೆಂದೇನೂ ಇಲ್ಲ. ಬದಲಾಗಿ ಹುಚ್ಚುನಾಯಿಯ ಜೊಲ್ಲು ಗಾಯ,ಕಣ್ಣು,ಮೂಗು ಅಥವಾ ಬಾಯಿಯನ್ನು ಸೇರಿದಾಗ ಸಹ ಬರಬಹುದು.

ಬಾವಲಿಗಳು ರೇಬಿಸ್ ರೋಗವನ್ನು ತರುತ್ತವಾದರೂ ಎಲ್ಲಾ ವಿಧದ ಬಾವಲಿಗಳು ಈ ರೋಗವನ್ನು ಹರಡುವುದಿಲ್ಲ. ಕೇವಲ ವ್ಯಾಂಪೈರ್ ಬಾವಲಿಗಳು ಈ ರೋಗವನ್ನು ಹರಡುತ್ತಿದ್ದು ಇವು ನಮ್ಮ ದೇಶದಲ್ಲಿ ಇಲ್ಲ. ರೋಗಪೀಡಿತ ಬಾವಲಿಗಳು ಹಾರಾಡುತ್ತಾ ಮನುಷ್ಯನ ಅಥವಾ ಪ್ರಾಣಿಯ ತಲೆ,ಕಿವಿ ಇತ್ಯಾದಿ ಭಾಗವನ್ನು ಘಾಸಿ ಗೊಳಿಸಿ ವೈರಾಣುವನ್ನು ಸೇರಿಸಿ ಹೋಗಿಬಿಡುತ್ತವೆ.

ಫೋಟೋ ಕೃಪೆ : google

ರೋಗ ಲಕ್ಷಣಗಳನ್ನು ಅಧರಿಸಿ ಹುಚ್ಚುನಾಯಿ ರೋಗವನ್ನು ರೌದ್ರಸ್ವರೂಪ ಮತ್ತು ಮಂದ ಸ್ವರೂಪದ ಕಾಯಿಲೆಗಳಾಗಿ ವಿಂಗಡಿಸಬಹುದು. ರೌದ್ರಸ್ವರೋಪದ ಕಾಯಿಲೆಯಲ್ಲಿ ರೋಗಲಕ್ಷಣಗಳಾದ ನಿರಂತರ ಬೊಗಳುವಿಕೆ, ಬೆಳಕು ಮತ್ತು ನೀರನ್ನು ಕಂಡಾಗ ಹೆದರುವಿಕೆ, ತೀವ್ರ ಜೊಲ್ಲು ಸುರಿಸುವಿಕೆ,ಬೆಚ್ಚಿ ಬೀಳುವಿಕೆ ಇತ್ಯಾದಿ ರೋಗಲಕ್ಷಣಗಳು ಕಂಡು ಬಹುದು. ಈ ಎಲ್ಲಾ ರೋಗ ಲಕ್ಷಣಗಳೂ ಕಾಣಿಸಿಕೊಳ್ಳಬಹುದು ಅಥವಾ ಇವುಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಒಂದು ಸಲ ಈ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಂಡ ನಂತರ ಒಂದು ವಾರದೊಳಗೆ ಸಾವು ಕಟ್ಟಿಟ್ಟ ಬುತ್ತಿ. ಈ ರೀತಿಯ ರೋಗ ಲಕ್ಷಣಗಳು ನಾಯಿ,ಬೆಕ್ಕು,ಮನುಷ್ಯನಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಆಕಳು,ಎಮ್ಮೆ, ಕುರಿ ಮತ್ತು ಮೇಕೆಗಳಲ್ಲಿ ನೀರನ್ನು ಕಂಡಾಗ ಹೆದರುವ ರೋಗಲಕ್ಷಣವಿರುವುದಿಲ್ಲ. ಇದನ್ನು ಜಾನುವಾರು ಸಾಕುವರು ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಅನ್ನನಾಳದ ಮಾಂಸಖAಡಗಳು ಪಾರ್ಶ್ವವಾಯುವಿಗೆ ತುತ್ತಾಗಿರುವುದರಿಂದ ನೀರನ್ನು ಕುಡಿಯುವುದು ಅಥವಾ ಅಹಾರವನ್ನು ಸೇವಿಸುವುದು ಕಷ್ಟ. ಇದೇ ರೀತಿಯ ರೋಗಲಕ್ಷಣಗಳು ಎಲ್ಲಾ ಪ್ರಾಣಿಗಳಲ್ಲಿ ಕಂಡು ಬರಬೇಕೆಂದೇನೂ ಇಲ್ಲ. ಬೇರೆ ಬೇರೆ ಪ್ರಾಣಿಗಳಲ್ಲಿ ಬೇರೆ ಬೇರೆ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಮಂದ ಸ್ವರೂಪದ ಹುಚ್ಚುನಾಯಿ ಕಾಯಿಲೆಯಲ್ಲಿ ಪ್ರಾಣಿ ಮಂಕಾಗಿರುವುದು, ಅಹಾರ ಸೇವಿಸದಿರುವುದು, ಮೂಲೆ ಹಿಡಿದು ಕೂರುವುದು, ಪಾರ್ಶ್ವ ವಾಯು ಪೀಡೆ, ಬೊಗಳಲು ಬರದೇ ಇರುವುದು,ಕಣ್ಣಿನಲ್ಲಿ ಕಾಂತಿ ಇಲ್ಲದಿರುವುದು ಇತ್ಯಾದಿ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ಸ್ವರೂಪದ ಹುಚ್ಚು ನಾಯಿ ಕಾಯಿಲೆಯನ್ನು ಪತ್ತೆ ಮಾಡುವುದು ಸ್ವಲ್ಪ ಕಷ್ಟ. ಈ ಮಂದ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವ ಕಾಡು ಪ್ರಾಣಿಗಳು ಮನುಷ್ಯರ ಬಗ್ಗೆ ಹೆದರಿಕೆಯನ್ನು ಕಳೆದುಕೊಂಡು ಕಾಡಿನಿಂದ ನಾಡಿಗೆ ಬರಬಹುದು.

ರೋಗ ಪತ್ತೆ ಮಾಡುವುದು ಸಧ್ಯ ರೋಗಲಕ್ಷಣಗಳನ್ನು ಅವಲಂಭಿಸಿದೆ. ಆದರೂ ಕೆಲ ಪ್ರಯೋಗಶಾಲಾ ವಿಧಾನಗಳಿವೆ. ಅವುಗಳಲ್ಲಿ ಮುಖ್ಯವಾದದ್ದೆಂದರೆ ಬೆನ್ನುಹುರಿಯಿಂದ ಮೆದುಳು ದ್ರವವನ್ನು ತೆಗೆದು ಅವುಗಳಲ್ಲಿ ಬಿಳಿರಕ್ತ ಕಣಗಳು ಜಾಸ್ತಿಯಾಗಿವೆಯೇ ಎಂದು ಪರೀಕ್ಷಿಸುವುದು ಅಥವಾ ಅದರಲ್ಲಿ ವೈರಾಣುಗಳು ಇವೆಯೇ ಎಂದು ಪರೀಕ್ಷಿಸುವುದು. ಸಂಶಯಿತ ಪ್ರಾಣಿಯ ಜೊಲ್ಲಿನಲ್ಲಿ ಸಹ ವೈರಾಣುಗಳ ಇರುವಿಕೆಯನ್ನು ಪತ್ತೆ ಹಚ್ಚಬಹುದು. ಸಿಟಿ ಸ್ಕಾನಿಂಗ್ ವಿಧಾನದಿಂದ ರೇಬಿಸ್ ರೋಗವನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಆದರೆ ಇವಾವೂ ನಿಖರ ರೋಗಪತ್ತೆ ವಿಧಾನಗಳಲ್ಲ. ಮರಣೋತ್ತರ ಪರೀಕ್ಷೆಯ ನಂತರ ಮಿದುಳನ್ನು ಯುಕ್ತ ವಿಧಾನದಲ್ಲಿ ಪರೀಕ್ಷಿಸಿದಾಗ ನೆಗ್ರಿ ಕೋಶಗಳು ಕಂಡರೆ ರೇಬಿಸ್ ಕಾಯಿಲೆಯನ್ನು ತಾತ್ಕಾಲಿಕ ಪತ್ತೆ ವಿಧಾನವಾಗಿ ಬಳಸಬಹುದು. ಆದರೆ ರೇಬಿಸ್ ರೋಗವನ್ನು ಖಚಿತವಾಗಿ ಹೇಳಬೇಕೆಂದರೆ ಸೂಕ್ತ ವಿಧಾನದಲ್ಲಿ ಶೇಖರಿಸಿದ ಮೆದುಳನ್ನು ಚಿಕ್ಕಿಲಿ (ಮೌಸ್) ಗಳಿಗೆ ಚುಚ್ಚಿದಾಗ 1-3 ವಾರಗಳಲ್ಲಿ ಅವುಗಳಲ್ಲಿ ಹುಚ್ಚುನಾಯಿ ರೋಗದ ಪತ್ತೆ ಆದರೆ ಮಾತ್ರ ನಿಖರವಾಗಿ ಹೇಳಬಹುದು. ಇತ್ತೀಚೆಗೆ ಇವೆಲ್ಲವುಗಳಿಂತ ಉತ್ತಮ ರೋಗ ಪತ್ತೆ ವಿಧಾನಗಳು ಬಂದಿವೆ.

ಫೋಟೋ ಕೃಪೆ : google 

ಹುಚ್ಚುನಾಯಿ ಕಚ್ಚಿದ ಎಲ್ಲಾ ಪ್ರಾಣಿಗಳಿಗೆ ರೋಗ ಬರಬೇಕೆಂದೇನೂ ಇಲ್ಲ. ಇದು ಜೊಲ್ಲಿನಲ್ಲಿರುವ ವೈರಾಣುಗಳ ಸಂಖ್ಯೆ, ಗಾಯದ ಆಳ, ಅ ನಾಯಿ ಎಷ್ಟು ಸಲ ಕಡಿದಿದೆ ಎಂಬುವ ವಿಷಯಗಳನ್ನು ಅವಲಂಭಿಸಿದೆ. ಇದೇ ಕಾರಣದಿಂದ ಹಲವು ಜನ ತಾವು ನೀಡಿದ ನಾಟಿ ಔಷಧಿಯಿಂದ ರೋಗಬರದಂತೆ ಮಾಡಿದೆ ಎಂದುಕೊಳ್ಳುವುದು. ಮಂದ ಅಥವಾ ರೌದ್ರ ಸ್ವರೂಪದ ಹುಚ್ಚುನಾಯಿರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಮರಣ ಖಚಿತ. ರೋಗ ಬರದಂತೆ ತಡೆಗಟ್ಟಲು ಹಲವು ವಿಧಾನಗಳಿವೆ.

• ಯಾವುದೇ ನಾಯಿ ಕಡಿತ, ಬೆಕ್ಕು, ಇಲಿ ಕಡಿತ ಅಥವಾ ಹೆಗ್ಗಣ ಕಡಿತವನ್ನು ನಿರ್ಲಕ್ಷಿಸಬಾರದು.

• ಕೂಡಲೇ ಗಾಯವನ್ನು ತೊಳೆದು ಸೂಕ್ತ ರೋಗನಿವಾರಕ ದ್ರಾವಣಗಳಾದ ಸಾವ್ಲಾನ್,ಸ್ಪಿರಿಟ್,ಟಿಂಕ್ಚರ್ ಐಯೋಡಿನ್ ಇವುಗಳನ್ನು ಹಚ್ಚಬಹುದು. ರೇಬಿಸ್ ವೈರಾಣು

• ಗಾಯಗಳಿಗೆ ಹೊಲಿಗೆ ಹಾಕುವುದಾಗಲಿ ಅಥವಾ ಬಿಗಿಯಾದ ಬ್ಯಾಂಡೇಜ್ ಹಾಕುವುದಾಗಲೀ ಮಾಡಬಾರದು.

• ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ವೈದ್ಯರನ್ನು ಕಾಣುವುದು ಮೇಲು ಮತ್ತು ರೇಬಿಸ್ ನಿರೋಧಕ ಲಸಿಕೆಯನ್ನು ಅವರ ಸಲಹೆಯಂತೆ ಹಾಕಿಸಿಕೊಳ್ಳಬೇಕು

• ಹುಚ್ಚು ನಾಯಿಯಿಂದ ಕಡಿತ ಖಚಿತವಾಗಿದ್ದರೆ ವೈದ್ಯರು ಗಾಯಕ್ಕೆ ರೇಬಿಸ್ ಇಮ್ಮುನೋಗ್ಲೊಬ್ಯುಲಿನ್ ಚುಚ್ಚುಮದ್ದು ನೀಡಿ ನಂತರ ಲಸಿಕೆಯನ್ನು ನಿಗದಿತ ಅವಧಿಯಲ್ಲಿ ಹಾಕುತ್ತಾರೆ.

• ಸಧ್ಯ ಮಾರುಕಟ್ಟೆಯಲ್ಲಿ ಉತ್ತಮ ರೇಬಿಸ್ ರೋಗ ಪ್ರತಿಬಂಧಕ ಲಸಿಕೆಗಳು ಬಂದಿದ್ದು ಮೊದಲಿನ ಹಾಗೇ ಹೊಕ್ಕಳಿನ ಸುತ್ತ ನೋವಿನಿಂದ ಕೂಡಿದ 14 ಚುಚ್ಚುಮದ್ದು ಹಾಕಿಸಿಕೊಳ್ಳುವ ಕಾಲ ಹೋಗಿದೆ.

• ಕಚ್ಚಿದ ನಾಯಿ ಹುಚ್ಚು ನಾಯಿ ಹೌದೋ ಅಲ್ಲವೋ ಎಂಬ ಬಗ್ಗೆ ತಲೆಕೆಡಿಸಿಕೊಳ್ಳದೇ ಮುಂಜಾಗ್ರತಾ ಕ್ರಮವಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವುದು ಸೂಕ್ತ.

ಫೋಟೋ ಕೃಪೆ : google

ನಾಯಿಗಳಲ್ಲಿ ಈ ರೋಗ ಬರದಂತೆ ತಡೆಗಟ್ಟುವುದು ಅತ್ಯಂತ ಸೂಕ್ತ. ಏಕೆಂದರೆ ಶೇಕಡಾ 98 ರಷ್ಟು ಕಾಯಿಲೆ ನಾಯಿ ಕಡಿತದಿಂದಲೇ ಬರುತ್ತದೆ. ಕಾರಣ ನಾಯಿಗಳಲ್ಲಿ ಈ ಕಾಯಿಲೆ ಬರದಂತೆ ತಡೆಗಟ್ಟುವುದು ಅತ್ಯಂತ ಮುಖ್ಯ.

  •  ಜಂತು ನಿವಾರಕ ಔಷಧವನ್ನು ಹಾಕಿಸಿದ ನಂತರ ನಾಯಿ ಮರಿಗೆ 6-8 ವಾರ ವಯಸ್ಸಿನಲ್ಲಿ ತಜ್ಞ ಪಶುವೈದ್ಯರಿಂದ ಸೂಕ್ತ ಲಸಿಕೆ ಹಾಕಿಸಿ ಒಂದು ತಿಂಗಳ ನಂತರ ಬೂಸ್ಟರ್ ಲಸಿಕೆಯನ್ನು ಕೊಡಿಸಬೇಕು ಮತ್ತು ಇದನ್ನು ಪ್ರತಿ ವರ್ಷ ಪುನರಾವರ್ತಿಸಬೇಕು. ಈ ಮೊದಲು ರೇಬಿಸ್ ರೋಗ ನಿರೋಧಕ ಶಕ್ತಿ ಒಂದು ವರ್ಷದ ವರೆಗೆ ಇರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಕ್ರಮೇಣ ರೋಗನಿರೋಧಕ ಕಣಗಳ ಸಂಖ್ಯೆ ಇಳಿಮುಖವಾಗುತ್ತಾ ಹೋಗುವುದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ 6 ತಿಂಗಳಿಗೇ ಲಸಿಕೆಯನ್ನು ಪುನರಾವರ್ತಿಸುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ.
  • ತಾಯಿ ನಾಯಿಯು ಗರ್ಭ ಧರಿಸಿದಾಗ ಅದಕ್ಕೆ ಲಸಿಕೆ ಹಾಕಿಸಿದಲ್ಲಿ ಮರಿಗಳಿಗೆ ತಾಯಿಯಿಂದ ರೋಗ ನಿರೋಧಕ ಕಣಗಳು ಬರುವುದರಿಂದ ಅವುಗಳಿಗೆ 3-4 ತಿಂಗಳಿಗೆೆ ಲಸಿಕಾ ಕಾರ್ಯಕ್ರಮ ಪ್ರಾರಂಭಿಸಿದರೆ ಸಾಕು ಎಂದಿದೆ. ಆದರೆ ಇದು ತಾಯಿ ನಾಯಿಯ ಆರೋಗ್ಯ, ಅದರ ಶರೀರದಲ್ಲಿ ಇರುವ ರೋಗ ನಿರೋಧಕ ಕಣಗಳ ಸಂಖ್ಯೆ ಇತ್ಯಾದಿಗಳನ್ನು ಅವಲಂಭಿಸಿದೆ.
  • ಹಾಕಿಸುವ ಲಸಿಕೆ ವಿಶ್ವ ಅರೋಗ್ಯ ಸಂಸ್ಥೆಯವರು ನಿಗದಿ ಪಡಿಸಿದ ಉತ್ತಮ ಗುಣಮಟ್ಟವನ್ನು ಹೊಂದಿದ್ದು 2-80 ಸೆ ತಾಪಮಾನದಲ್ಲೇ ಇರಬೇಕು.
  • ಪ್ರಾಣಿಯ ಶರೀರದಲ್ಲಿ ರೋಗನಿರೋಧಕ ಶಕ್ತಿಕಣಗಳು ಸಾಕಷ್ಟು ಪ್ರಮಾಣದಲ್ಲಿ ಇವೆಯೋ ಇಲ್ಲವೋ ಎಂಬುದನ್ನು ಅದರ ರಕ್ತ ಸಾರವನ್ನು ನಿಗದಿತ ಸಂಸ್ಥೆಗೆ ನಿಮ್ಮ ಪಶುವೈದ್ಯರ ಸಹಾಯ ಪಡೆದು ಕಳಿಸಿ ತಿಳಿದುಕೊಳ್ಳಬಹುದು.
  • ಬೇರೆ ನಾಯಿಯಿಂದ ಅಥವಾ ಹುಚ್ಚುನಾಯಿಯಿಂದ ಕಡಿಸಿಕೊಂಡ ನಾಯಿಗೆ ಮೇಲಿನ ಪರೀಕ್ಷೆ ಮಾಡಿಸದಿದ್ದಲ್ಲಿ ಅಥವಾ ಲಸಿಕೆ ಹಾಕಿಸಿ ಬಹಳ ಸಮಯವಾದಲ್ಲಿ ಇಲ್ಲವೇ ಮಧ್ಯೆ ಯಾವುದಾದರೂ ಕಾಯಿಲೆಯಿಂದ ಬಳಲಿ ಚೇತರಿಸಿಕೊಂಡಲ್ಲಿ ಕಡಿದ ದಿನ 3 ನೇ ದಿನ, 7 ನೇ ದಿನ, 14 ನೇ ದಿನ ಮತ್ತು 28 ನೇ ದಿನ ಹೀಗೆ 5 ಸಲ ಲಸಿಕೆಯನ್ನು ಹಾಕಬೇಕಾದೀತು. ನಾ¬ಯ ರಕ್ತದಲ್ಲಿ ರೋಗನಿರೋಧಕ ಶಕ್ತಿಕಣಗಳು ಸಾಕಷ್ಟು ಪ್ರಮಾಣದಲ್ಲಿ ಇರುವ ಸಾಧ್ಯತೆ ಇದ್ದರೆ 3 ಚುಚ್ಚುಮದ್ದುಗಳೇ ಸಾಕಾದಾವು.

ಇಷ್ಟಾದರೂ ಪ್ರಶ್ನೆಗಳಿದ್ದರೆ ಇಲ್ಲಿ ಅಥವಾ ನಿಮ್ಮ ಪಶುವೈದ್ಯರನ್ನು ಕೇಳಿ.


  • ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW