ಈ ಬದುಕನ್ನು ನಮ್ಮ ತಟ್ಟೆಯಲ್ಲಿ ಬಡಿಸಿದ ‘ಅನ್ನ’ ದಂತೆ ನೋಡಿಕೊಳ್ಳಬೇಕು, ಬಂದದ್ದನ್ನು ಪ್ರಸಾದವೆಂದು ತೃಪ್ತಿಯಾಗಿ ಸೇವಿಸಿದಾಗ ಅದರಲ್ಲಿ ಉಪ್ಪು, ಖಾರ, ಹುಳಿ ಗೊತ್ತಾಗುವುದಿಲ್ಲ. ಬದುಕಿನ ಬಗ್ಗೆ ಅರ್ಥಪೂರ್ಣ ಬರಹವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಲೇಖಕಿ ವಿಮಲಾ ಪದಮಗೊಂಡ ಅವರು….
ಮತ್ತೇನೂ ಇಲ್ಲ ಈ ಬದುಕು, ಇಷ್ಟೇ ನಮ್ಮೆದುರು ತಟ್ಟೆಯಲ್ಲಿ ಬಡಿಸಿದ – ‘ಅನ್ನ’. ಬಂದುದನ್ನು ಪ್ರಸಾದವೆಂದು ತೃಪ್ತಿಯಾಗಿ ಸೇವಿಸುವುದು. ಪ್ರಸಾದವೆಂದಾಗ ಆಹಾರದ ಸ್ವಾದವನ್ನು ನಾವು ಜಡ್ಜ್ ಮಾಡುವುದಿಲ್ಲ. ‘ಉಪ್ಪು, ಖಾರ ಅಥವಾ ಸಿಹಿ ಹೇಗಿದ್ದರೂ ಅದನ್ನು ಮೃಷ್ಟಾನ್ನ, ಅಮೃತವೆಂದು ಸೇವಿಸುವ ಮನಸ್ಥಿತಿ ಇರುತ್ತೆ’.
ನಾವೇ ಅಡುಗೆ ತಯಾರಿಸಿ ತಿನ್ನುವಾಗ ಮಾತ್ರ ಸಿಕ್ಕಾಪಟ್ಟೆ ರಗಳೆ..ಇದರ ರುಚಿ ಹೀಗ್ಯಾಕೆ, ಹಾಗ್ಯಾಕೆ..!ಅಡುಗೆ ಮಾಡಿದವರ ಮೇಲೆ ಅನಗತ್ಯ ಕೂಗಾಟ. ಚೆನ್ನಾಗಿದ್ದರೂ ಏನಾದರೂ ಒಂದು ನೆಗೆಟಿವ್ ಹುಡುಕುತ್ತೇವೆ.
“ಎಲ್ಲಿಯವರೆಗೆ ನಾವು ಈ ಜೀವನವನ್ನು ಪ್ರಸಾದವನ್ನಾಗಿ ಸ್ವೀಕರಿಸುವುದಿಲ್ಲವೋ ಅಲ್ಲಿಯವರೆಗೆ ನಮಗೆ ‘ನೆಮ್ಮದಿ’ ಎಂಬುದು ಕೇವಲ ಕನಸು”.
“ನಮ್ಮ ಕೈಲಿ ಸಾಧಿಸಲು ಅಸಾಧ್ಯವಾದಾಗ ಹಣೆಬರಹವನ್ನು ದೂಷಿಸುತ್ತೇವೆ ಅಥವಾ ಸುತ್ತಲಿನವರನ್ನು. ‘ಇವರಿಂದ ನಾನು ಹೀಗಾದೆ, ಅವರಿಂದಾಗಿಯೇ ನನ್ನ ಪರಿಸ್ಥಿತಿ ಹೀಗಾಯ್ತು’ ಹೀಗೆ ಅರ್ಥ ರಹಿತ ಆರೋಪಗಳ ಸುರಿಮಳೆ ಸುರಿಸುತ್ತಾ ಮನಸ್ಸನ್ನು ಅಶಾಂತಿಯ, ಗೊಂದಲದ ಗೂಡನ್ನಾಗಿ ಮಾಡುತ್ತೇವೆ” .
“ನಮ್ಮ ಬದುಕಿನ ಮೇಲೆ ಫೋಕಸ್ ಮಾಡದೆ ‘ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು’, ನಾವು ಅವರ ಹಂತಕ್ಕೆ ತಲುಪಲಿಲ್ಲ ಎನ್ನುವ ಒಣ ಚಿಂತೆ. ಅವರು ಗಳಿಸಿದಷ್ಟು ಹಣ ನಾವು ಗಳಿಸಲಿಲ್ಲ., ‘ಅವರು ಪಡೆದ ಗೆಲುವು ನಮ್ಮ ಕಾಲಿಗೇಕೆ ಬೀಳಲಿಲ್ಲ’.!, ಅವರು ಅದನ್ನು ಮಾಡಿದ್ರು, ಇದನ್ನು ಮಾಡಿದ್ರು ನಾನು ಮಾತ್ರ ಇಲ್ಲೇ ಉಳಿದೆ ಎನ್ನುವ ಹುಚ್ಚು ಕೊರಗು”.
“ನಮಗೆ ಯಾವುದೇ ಕಷ್ಟ, ನೋವು ಬರಬಾರದು , ಯಾವುದೇ ಹೋರಾಟವಿಲ್ಲದೆ ಎಲ್ಲವೂ ದಕ್ಕಬೇಕು. ‘ಸಂದರ್ಭಗಳನ್ನು, ಘಟನೆಗಳನ್ನು ಎದುರಿಸಲು ಸೋತಾಗ ಅವು ನಮಗೆ ಪೆಡಂಭೂತವಾಗಿ ಕಾಣಿಸುತ್ತವೆ’. ಅದನ್ನು ಬಗೆಹರಿಸುವ ತಾಳ್ಮೆ, ಇಚ್ಛಾಶಕ್ತಿಗಿಂತ ಅದನ್ನು ಮತ್ತಷ್ಟು ದೊಡ್ಡ ಸಮಸ್ಯೆಯಾಗಿ ಸೃಷ್ಟಿಸುವಲ್ಲಿ ನಿರತರಾಗುತ್ತೇವೆ.
“ಬೇರೆಯವರಿಗೆ ಒಲಿದಿದ್ದು ನಮ್ಮಲ್ಲಿ ಇಲ್ಲ ಎಂಬ ಭಾವನೆ ‘ಮತ್ಸರ’ ಬೆಳೆಯಲು ಕಾರಣವಾಗುತ್ತೆ ಅಥವಾ ಅತೀ ದುಃಖಿಗಳನ್ನಾಗಿಸುತ್ತೆ” .
“ನಮ್ಮನ್ನು ನಾವು ಪ್ರೀತಿಸಬೇಕು, ‘ಎಲ್ಲೆ ಮೀರಿ ಪ್ರೀತಿಸಬೇಕು…’! ಈ ಪ್ರೀತಿಯೇ ಅರ್ಥಪೂರ್ಣವಾದ ಜೀವನ ಸಾಗಿಸಲು ರಹದಾರಿ. ಈ “ಸ್ವ ಪ್ರೀತಿ” -‘ಸೋತಾಗ ಸಾಂತ್ವನ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ, ತನ್ನಂತೆ ಬೇರೆಯವರನ್ನೂ ಪ್ರೀತಿಸಲು ಪ್ರೋತ್ಸಾಹಿಸುತ್ತದೆ’. ಕಷ್ಟಗಳನ್ನು ಸ್ವೀಕರಿಸಿ ಅವುಗಳನ್ನೂ ಪ್ರೀತಿಸುವ ಉತ್ಸಾಹ ತುಂಬುತ್ತದೆ” .
“ಪ್ರಸಾದ ಎಷ್ಟು ಸಿಗುತ್ತೊ ಅಷ್ಟು ಮಾತ್ರ ಸವಿದು ಖುಷಿ ಪಡಬೇಕು, ಆಗ ಅಕ್ಕಪಕ್ಕದವರಿಗೆ ಏನು ಸಿಕ್ತು, ಎಷ್ಟು ಸಿಕ್ತು ಎನ್ನುವ ಯೋಚನೆಯೇ ಇರಲ್ಲ. ‘ಸಿಕ್ಕಿದನ್ನ ಮನಸಾರೆ ಸವಿಯುವುದೇ ಈ ಬದುಕು, ಇದೇ ಅಮೃತವೆಂಬ ಜೀವನ’. ‘ಬೇರೆಯವರಿಗೆ ಸಿಕ್ಕಿದ್ದನ್ನು ಕಸಿದುಕೊಳ್ಳುವ ಇರಾದೆಯೂ ಇರುವುದಿಲ್ಲ’….”!!
ಬರಹ ವ್ಯಸನಿ….
- ವಿಮಲಾ ಪದಮಗೊಂಡ
