ಅಹಂಕಾರ ಎನ್ನುವುದು ನಮ್ಮನ್ನು ಸ್ವತಃ ನಾವೇ ಕೊಲ್ಲಿಸಿಕೊಂಡಂತೆ ಜೋಕೆ. ಅಹಂಕಾರದ ಬಗ್ಗೆ ಲೇಖಕ ಪ್ರೊ.ರೂಪೇಶ್ ಅವರು ಅರ್ಥಪೂರ್ಣವಾಗಿ ವಿವರಿಸಿದ್ದಾರೆ.ಮುಂದೆ ಓದಿ…
ನನ್ನ ಅಮ್ಮಜ್ಜ ಬೆಳ್ಳಂ ಬೆಳೆಗೆ ಎತ್ತುಗಳ ಜೊತೆ ಹೊರಟು, ಮಧ್ಯಾಹ್ನ ಸುಮಾರು ೩ ಗಂಟೆಯ ನಂತರ ಗದ್ದೆಯಿಂದ ಮರಳುತ್ತಿದ್ದರು.
ಎಲಿಮೆಂಟರಿ ತರಗತಿಯಲ್ಲಿದ್ದಾಗ, ಬೇಸಿಗೆ ರಜೆ ಸಮಯದಲ್ಲಿ,ನಾನೂ ಅಜ್ಜನ ಜೊತೆ ಗದ್ದೆಗೆ ಹೋಗಿ ಮರಳುತ್ತಿದ್ದೆ.
ದಾರಿಯಲ್ಲಿ ಒಂದು ಮನೆಯಿಂದ “ಸ್ವಾಮೀ…ಹೊರಟ್ರಾ….ಚಹಾ ಕುಡಿದು ಹೊಗಿವ್ರಂತೆ, ಮಗುಬೇರೆ ಜೊತೆಯಲ್ಲಿದೆ. ಇನ್ನೂ ದೂರ ನಡಿಯಬೇಕಲ್ವೇ?” ಅಂದರು.
ನನಗೆ ಚಹಾ ಕುಡಿಯುವ ಆಸೆ ಇತ್ತು. ಆದರೆ ಅಮ್ಮಜ್ಜ “ಧನ್ಯವಾದಗಳು, ಈಗಷ್ಟೇ ಗಂಜಿ ನೀರು ಕುಡಿದು ಹೊರಟ್ಟಿದ್ದು. ಬರಲೇ…” ಎಂದು ಮುಂದುವರಿದರು.
ಸುಮಾರು ಎರಡು ಗಂಟೆಗಳ ಕಾಲ್ನಡಿಗೆ, ನಾನು ಕೆಲವೊಮ್ಮೆ ನಡ್ಕೊಂಡು,ಓಡಿಕೊಂಡು, ಎತ್ತಿನ ಮೇಲೆ ಕುಳಿತೂ ಮನೆ ತಲುಪಿದೆ.
ಅಜ್ಜಿಯಲ್ಲಿ ಚಹಾ ಕುಡಿಯದ ವಿಷಯ ಹೇಳಿದೆ “ನಿನ್ನಜ್ಜ ಕೆಲಸಕ್ಕೆ ಹೋಗುವಾಗ ಬರುವಾಗ ಯಾರ ಮನೆಯಿಂದಲೂ ಏನೂ ತಿನ್ನಲ್ಲ,ಕುಡಿಯಲ್ಲ”. ಎಂದುತ್ತರಿಸಿದರು.
ಸ್ನಾನ ಮಾಡಿ ಶುಬ್ರ ವಸ್ತ್ರ ಧರಿಸಿ ಕೂತ ಅಮ್ಮಜ್ಜನಿಗೆ “ಅಜ್ಜಾ..ಆ ಮನೆಯವರು ಚಹಾಕ್ಕೆ ಕರೆದಾಗ ನಿರಾಕರಿಸಿದ್ದು ಯಾಕೆ?”
“ಕಂದಾ, ನನಗೆ ಆ ಚಹಾ ತುಂಬಾ ವರುಷದಿಂದ ಅಲ್ಲೇ ಇದೆ. ಒಂದ್ಸಲ ಕುಡಿದರೆ ಮತ್ತೆ ಆ ಚಹಾ ನನಗಲ್ಲಿ ಇರುವುದಿಲ್ಲ”ಅಂದ್ರು
ನನ್ನಜ್ಜನಿಗೂ ಒಂದು ಮುಖವಾಡವಿತ್ತು. ಆ ಚಹಾ ಕುಡಿದ ಮೇಲೆ, ಅವರಲ್ಲಿ(ಆ ಮನೆಯವರಿಗೆ) ಅಜ್ಜನ ಓಡಾಟ ವೀಕ್ಷಿಸುವುದು ನಿಂತು ಹೋಗುತ್ತೆ. ವಯಸ್ಸಾದ ಅಮ್ಮಜ್ಜ ಗದ್ದೆಗೆ ಹೋಗುವಾಗ-ಬರುವಾಗ, ಕೆಲಸ ಮಾಡುವಾಗ, ಎಲ್ಲಾದ್ರೂ ಆಪತ್ತಾದರೆ, ಅವರನ್ನು ಸಹಾಯಿಸಲು “ಚಹಾ” ಉಪಕಾರವಾಗುತ್ತೆ.—ಎಂದಾಗಿರಬಹುದು.
ಮುಖವಾಡ ಒಳ್ಳೆಯದಕ್ಕೂ, ಕೆಟ್ಟದಕ್ಕೂ ಹಾಕುವವರಿದ್ದಾರೆ. ನಾನೂ ಹೊರತಲ್ಲ. ಆದರೆ ನನಗೆ ಮುಖವಾಡವಿದೆಯೆಂದು ಅಹಂಕರ ಭೂಷಿತನಾಗದಿದ್ದರೆ ಸಾಕು. ಎಲ್ಲಾ ಮುಖವಾಡದಿಂದ ಅಹಂಕಾರ ಬರುವುದಿಲ್ಲ. ಆದರೂ, ಮುಖವಾಡದಿಂದ ಬಂದ ಅಹಂಕಾರ ಅಹಂಕಾರದಿಂದ ಬಂದ ಮುಖವಾಡ ತುಂಬಾ ದೊಡ್ಡ ಆಪತ್ತು.
ಯಾಕೆಂದರೆ ನನ್ನ ಪ್ರಕಾರ ಅಹಂಕಾರವೆಂದರೆ ಅದೊಂದು ದಾರಿದ್ರ್ಯ, ಆ ಮದ ನನ್ನ ನಾನು ಕೊಲ್ಲುವುದಕ್ಕೆ ಸಮ ಎಂದು ತಿಳಿಯುತ್ತೇನೆ.
ಅಹಂಕಾರವಿಲ್ಲದೆ ಜೀವಿಸಲು ಶೃಮಿಸುತ್ತಿರುವ….
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು ವಿಜಯಾ ಕಾಲೇಜು ಬೆಂಗಳೂರು)