ಗಂಡಿನಿಂದ ಹೆಣ್ಣಿಗೆ ರಕ್ಷಣೆಬೇಕು..ಇದರರ್ಥ ಆಕೆ ಗಂಡಿನ ಮೇಲೆ ಅವಲಂಬಿಯಲ್ಲ. ಚಾರಿತ್ರ್ಯಹೀನರಿಂದ ಆಕೆಗೆ ತೊಂದರೆಯಾಗಬಾರದು ಎನ್ನುವ ಒಂದು ಕಟ್ಟುಪಾಡಷ್ಟೇ…
ಹೆಣ್ಣಿನಲ್ಲಿ ಅನೇಕ ವೈಶಿಷ್ಟ್ಯತೆಗಳಿವೆ. ಅನೇಕ ನ್ಯೂನತೆಗಳೂ ಇವೆ. ಹೆಣ್ಣು ಗಂಡಿಗಿಂತಲೂ ಬೇಗ ಭಾವುಕಳಾಗುತ್ತಾಳೆ. ಗಂಡಿಗಿಂತ ಹೆಚ್ಚು ಮಮತೆ ತೋರುತ್ತಾಳೆ. ಆಕೆ ದೈಹಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿ ಕೂಡಾ ಗಂಡಿಗಿಂತ ವಿಭಿನ್ನ. ಆದರೆ ಮಾನವೀಯತೆಯಲ್ಲಿ ಹೆಣ್ಣನ್ನು ಮೀರಲು ಗಂಡಿಗೆ ಎಂದಿಗೂ ಸಾಧ್ಯವಿಲ್ಲ. ಹಾಗೆಯೇ ಆಕೆ ಎಂದಿಗೂ ಕ್ಷಮಯಾ ಧರಿತ್ರಿ.
ಆದರೆ ಕೆಲವರು ಹೆಣ್ಣನ್ನು ತುಚ್ಛ ರೀತಿಯಲ್ಲಿ, ಇನ್ನು ಕೆಲವರು ಉಚ್ಛ ರೀತಿಯಲ್ಲಿ ವೈಭವೀಕರಿಸುವುದನ್ನು ದಿನನಿತ್ಯ ಕಾಣುತ್ತೇವೆ. ಅದು ಗಂಡಸಿನ ಕೀಳರಿಮೆ ಮತ್ತು ಮೇಲರಿಮೆಯ ಪ್ರತಿಫಲನ ಮಾತ್ರ. ನಮ್ಮನ್ನು ಹೆತ್ತ ಅಮ್ಮ ಮನೆಯಲ್ಲಿಯೇ ಇದ್ದರೂ ಸಹ ಬೀದಿಯಲ್ಲಿ ಕಾಣುವ ಇನ್ನೊಬ್ಬಳು ಹೆಣ್ಣು ನಮಗೆ ‘ಏನೇನೋ’ ರೀತಿಯಲ್ಲಿ ಕಾಣುವುದು ನಮ್ಮ ಕಣ್ಣಿನ ವಕ್ರತೆಯನ್ನೇ ಸೂಚಿಸುತ್ತದೆ.
ಫೋಟೋ ಕೃಪೆ : theguardian
ಸುಂದರ ಹೆಣ್ಣೊಬ್ಬಳು ಪರಿಚಿತಳಾದಳೆಂದರೆ ಅವಳಲ್ಲಿ ವಿಶ್ವಾಸ ಮೂಡುವ ಮೊದಲೇ ಪ್ರೀತಿ ಮೂಡುವುದು ಸರಿಯಲ್ಲ. ಕೇವಲ ಪ್ರೇಮ ಪ್ರೀತಿಗಳಿಗಾಗಿ ಸ್ನೇಹ ಬೆಳೆಸುವುದು ಗಂಡಿನ ದೌರ್ಬಲ್ಯ. ದೈಹಿಕ ಆಕರ್ಷಣೆಗೆ ಹೊರತಾದ ಒಂದು ಗೆಳೆತನವನ್ನು ಬೆಳೆಸಿಕೊಂಡರೆ ಆಕೆ ಸಹಾ ಸ್ಪೂರ್ತಿ ಚಿಲುಮೆಯಾಗಿ ನಮಗೆ ದಾರಿದೀಪವಾಗಬಲ್ಲಳು. ಆದರೆ ಅಂತಹ ಅವಕಾಶವನ್ನು ಕಳೆದುಕೊಳ್ಳುವರೇ ಹೆಚ್ಚು.
ಹೆಣ್ಣಿನ ಗುಣ ಸೌಂದರ್ಯ, ತಾಳ್ಮೆ, ಸಹನೆ, ತ್ಯಾಗ, ಶೌರ್ಯ, ಛಲ, ನೃತ್ಯ, ಸಂಗೀತ, ವಿದ್ವತ್ ಸಾಧನೆ ಹೋರಾಟ ದ್ವೇಷ ಮತ್ಸರ ಕರುಣೆ ಯಾವುದರ ಬಗ್ಗೆ ಬರೆಯಲಿ. ಸೃಷ್ಟಿಯ ಭಾಗವೇ ಆಗಿರುವ ಸ್ತ್ರೀಯ ಬಗೆಗಿನ ಇತಿಹಾಸ ಮತ್ತು ವಾಸ್ತವವನ್ನು ಅರಿತಾಗ – ಸ್ತ್ರೀಯರತ್ತಲಿನ ಒಲವು – ನಿಲುವುಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಪ್ರಕೃತಿಯು ಸ್ತ್ರೀ ಪುರುಷರ ಅನ್ಯೋನ್ಯತೆಗೇ ಹೆಚ್ಚಿನ ಪ್ರಾಧಾನ್ಯತೆ ನೀಡಿರುವುದನ್ನು ಮರೆಯಬಾರದು. ಕಾರಣ ಎಲ್ಲಾ ಜೀವರಾಶಿಗಳಿಗೂ ಸೃಷ್ಟಿ ಇತ್ತ ವರವೇ – ಸಂತಾನಾಭಿವೃದ್ಧಿ. ಅದಕ್ಕೇ “ಪುನರಪಿ ಜನನಂ ಪುನರಪಿ ಮರಣಂ”- ಉಕ್ತಿ. ಅರಿತು ಬಾಳಿದರೆ ಬದುಕು ಬಂಗಾರ ! ಅರಿಯದಿರೆ ಬದುಕೆಲ್ಲ ಅಂಗಾರ! ಹಾಗಾಗಿ ಬನ್ನಿ… ಪ್ರಕೃತಿದತ್ತವಾದ ಈ ಭುವಿಯಲ್ಲಿ ತಾರತಮ್ಯ ಎಣಿಸದೆ ಪರಸ್ಪರರು (ಗಂಡು – ಹೆಣ್ಣು) ಗೌರವದಿಂದ ಸಾಮರಸ್ಯದಿಂದ ಬದುಕಲೆಳಸೋಣ.
ಮನು, ವಾಲ್ಮೀಕಿ, ವ್ಯಾಸ, ಕಾತ್ಯಾಯನ, ಕೌಟಿಲ್ಯ, ಹೀಗೆ ಎಲ್ಲಾ ಹಿಂದೂ ಚಿಂತಕರು ಹೆಣ್ಣನ್ನು ‘ತಾಯಿ’ ಎಂದೇ ಕಂಡಿದ್ದಾರೆ. ಆಕೆಯನ್ನು ಗೌರವಿಸದಿದ್ದವರಿಗೆ ಸುಖ ಅಸಾಧ್ಯ ಎಂದಿದ್ದಾರೆ.
ಫೋಟೋ ಕೃಪೆ : indiatimes
ಸ್ತ್ರೀಯರ ಆಸ್ತಿಯ ಮೇಲೆ ಬಲಾತ್ಕಾರ ಸಲ್ಲದೆಂದು ಕಾತ್ಯಾಯನ ಎಚ್ಚರಿಸಿದ್ದಾನೆ. ಕಾತ್ಯಾಯನನಂತೂ ತಪ್ಪು ಮಾಡಿದ ಹೆಣ್ಣಿಗೆ ಪುರುಷನಿಗೆ ನಿಗದಿ ಪಡಿಸಿದ ಶಿಕ್ಷೆಯ ಅರ್ಧಭಾಗ ಮಾತ್ರವೇ ಕೋಡಬೇಕು ಎಂದು ಆದೇಶಿಸಿದ್ದಾನೆ. ಕೌಟಿಲ್ಯನಂತೂ ಹೆಣ್ಣನ್ನು ಬಲಾತ್ಕರಿಸಿದವರಿಗೆ ಮರಣದಂಡನೆ ವಿಧಿಸಬೇಕೆಂದು ಕಟುವಾಗಿ ಹೇಳಿದ್ದಾನೆ. ಮನು ‘ಸ್ತ್ರೀಧನ’ ಎಂಬ ಹೆಸರಿನಲ್ಲಿ ಆಕೆಗೆ ಆರ್ಥಿಕ ಭದ್ರತೆಯನ್ನು ಕಲ್ಪಿಸಿದ್ದು ಮದುವೆಯ ಸಂದರ್ಭದಲ್ಲಿ ತಂದೆ, ತಾಯಿ, ಸಹೋದರರು, ನೆಂಟರು, ನೀಡುವ ಚರ ಆಸ್ತಿಯನ್ನೇ ಮನು ‘ಸ್ತ್ರೀಧನ’ ಎಂದು ಕರೆದಿದ್ದಾನೆ.
ನಿಜ ಸಂಗತಿ ಹೀಗಿದೆ. ನಮ್ಮ ಶೃತಿ- ಸ್ಮೃತಿ- ಪುರಾಣಗಳನ್ನು ಅರಿಯದವರು ಹಿಂದೂ ಧರ್ಮವನ್ನೇ ಸ್ತ್ರೀ ವಿರೋಧಿ ಎಂದು ಬರೆಯುವುದು ಅರ್ಥಹೀನ. ಅವರೆಲ್ಲ ನಮ್ಮ ಆಕರ ಗ್ರಂಥಗಳನ್ನು ಓದಿಯೇ ಇಲ್ಲ. ಏಕೆಂದರೆ ಅವು ಇರುವುದು ಸಂಸ್ಕೃತದಲ್ಲಿ. ಇವರಿಗೆ ಆ ಭಾಷೆ ಬರುವುದಿಲ್ಲ. ಮಹಾತ್ಮ ಗಾಂಧೀಜಿ ಹೇಳುತ್ತಿದ್ದ ಮಾತೊಂದು ಇಲ್ಲಿ ನೆನಪಾಗುತ್ತಿದೆ. ‘ಭಾರತೀಯ ಸಂಸ್ಕೃತಿಯ ಸತ್ವ ತಿಳಿಯಲು ಸಂಸ್ಕೃತ ಓದಲೇಬೇಕು’ – ಈ ಮಾತು ಎಷ್ಟು ಅರ್ಥಪೂರ್ಣವಾಗಿದೆ ನೋಡಿ.
ಮನು ಸ್ಮೃತಿಯಲ್ಲಿನ ‘ನಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂಬುದನ್ನೇ ಸಂದರ್ಭ ಬಿಟ್ಟು ಉಲ್ಲೇಖಿಸಿ ಸ್ತ್ರೀ ವಿರೋಧಿ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಈ ಶ್ಲೋಕದ ಮತ್ತುಳಿದ ಭಾಗ – ಕನ್ಯೆಯನ್ನು ಬಾಲ್ಯದಲ್ಲಿ ತಂದೆ, ವಿವಾಹದ ನಂತರ ಗಂಡ, ಇಳಿವಯಸ್ಸಿನಲ್ಲಿ ಗಂಡು ಮಕ್ಕಳು ರಕ್ಷಿಸಬೇಕು ಎನ್ನುತ್ತದೆ. ಇದರ ಅರ್ಥ ಯಾವಾಗಲೂ ಆಕೆಗೆ ರಕ್ಷಣೆ ಬೇಕು ಎಂದಷ್ಟೇ. ಸ್ವಭಾವತಃ ಕೋಮಲಳಾದ ಆಕೆಯ ರಕ್ಷಣೆಗೆ ವಿಶೇಷ ಗಮನ ನೀಡಿದೆ ಅಷ್ಟೇ. ಚಾರಿತ್ರ್ಯಹೀನರಿಂದ ಆಕೆಗೆ ತೊಂದರೆ ಆಗಬಾರದೆಂದೇ ಈ ಕಟ್ಟುಪಾಡು.
- ಶಿವಕುಮಾರ್ ಬಾಣಾವರ್ (ನಿವೃತ್ತ, ಕಾರ್ಯಪಾಲಕ ಇಂಜೀನಿಯರ್ – ಕೆ. ಪಿ.ಸಿ. ಎಲ್)