ಜನುಮ ಜನುಮಕೂ – ಭಾಗ ೫

ನಾಯಕಿ ಅನುಷ್ಕಾ ಚಾವ್ಲಾ ಶೂಟಿಂಗ್ ಗೆ ತಡವಾಗಿ ಬಂದ ಮೇಲೆ ಡೈರೆಕ್ಟರ್ ರಾಣಾ ಅವರ ಪ್ರತಿಕ್ರಿಯೆ ಹೇಗಿತ್ತು? ಸುಮಾ ಎಂದರೆ ಯಾರು? ಈ ಸುಮಾ ಸಿನಿಮಾದಲ್ಲಿ ನಟಿಸುತ್ತಾಳೆಯೇ?…ಮುಂದೆ ಓದಿ ಇದು ಜನುಮ ಜನುಮದ ಪ್ರೀತಿಯ ಕತೆ…

ಇಬ್ಬರಲ್ಲಿ ಹೀರೋಯಿನ್ ಯಾರು?

ಅಷ್ಟರಲ್ಲಿ ಗುಡ್ಡದ ಕೆಳಗಿನ ಎಸ್ಟೇಟ್ ನ ಮಧ್ಯೆ ಕಾಡು ರಸ್ತೆಯಲ್ಲಿ ಧೂಳೆಬ್ಬಿಸುತ್ತ ಪ್ರೊಡ್ಯೂಸರರ ಕಾಂಟೆಸ್ಸಾ ಕಾರು ನಿಧಾನವಾಗಿ ಏರಿ ಬರುತ್ತಿತ್ತು. ಇನ್ನೇನ್ನು ನಿರ್ಮಾಪಕರಿಗೂ ನಿರ್ದೇಶಕರಿಗೂ ಜಟಾಪಟಿ ನಡೆದು ಏನಾದರೂ ಒಂದಾಗುತ್ತದೆ ಎಂದು ಯುನಿತ್ತು ಹುಡುಗರು ಮಾತಾಡಿಕೊಂಡರು. ರಾಣಾ ಕಂಡೂ ಕಾಣದಂತಿದ್ದರು.

ಫೋಟೋ ಕೃಪೆ : My Space (ಸಾಂದರ್ಭಿಕ ಚಿತ್ರ)

ಕಾಂಟೆಸ್ಸಾ ಬಂತು. ನಿರ್ಮಾಪಕ ಚಂದೂ ಪಾಟೀಲ್ ಮತ್ತು ನಾಯಕಿ ಅನುಷ್ ಚಾವ್ಲಾ ಒಟ್ಟಿಗೆ ಇಳಿದರು. ಈಗ ಪ್ರೊಡಕ್ಷನ್ ಮ್ಯಾನೇಜರ್ ಹೊಗೆರಾಮ ಜಾಗೃತನಾದ. ಅವನ ಸನ್ನೆಯಂತೆ ಹುಡುಗನೊಬ್ಬ ಓಡಿಹೋಗಿ ನಾಯಕಿಯ ತೆಲೆಯ ಮೇಲೆ ಬಣ್ಣದ ಛತ್ರಿ ಹಿಡಿದ. ಈಗ ಮತ್ತೆ ಎಲ್ಲರೂ ತಬ್ಬಿಬ್ಬು. ಹೀರೋಯಿನ್ ಇವಳಾ?ಅವಳಾ? ಎಂದು ತಡಬಡಿಸಿದರು. ನಾಯಕ ಶಯನಕುಮಾರ್ ನಿಗೆ ವಿಷಯ ತಿಳಿದಾಗ ಪೆಚ್ಚು ಮೊರೆ ಹಾಕಿಕೊಂಡ. ಆದರೂ ಹೀರೋಯಿನ್ ಸಖತ್ ಆಗವಳೇ ಎಂದು ಒಳಗೆ ಕುಲುಕುಲು ಅಂದ. ತಡವಾಗಿ ಬಂದಿದ್ದರೂ ನಾಯಕಿಗೆ ಕಿಂಚಿತ್ತೂ ಬೇಸರವಿರಲಿಲ್ಲ. ನಿರ್ದೇಶಕ ರಾಣಾರನ್ನು ನೋಡಿ ‘ಹಾಯ್, ಐ ಆಯಮ್ ರೆಡಿ’  ಅಂದಳು. ರಾಣಾ ಅವಳತ್ತ ತಿರುಗಿಯೂ ನೋಡಲಿಲ್ಲ. ‘ನಿಮ್ಮಜ್ಜಿ ಪಿಂಡ’ ಅಂದರು ಒಳಗೆ.

ತಂಗಮಣಿ… ಕೆಮರಾ ರೆಡಿ ಮಾಡಿ…ಎಂದು ಛಾಯಾಗ್ರಾಹಕನಿಗೆ ಹೇಳಿ ಕೆಲಸದಲ್ಲಿ ಚುರುಕಾದರು. ನಿರ್ಮಾಪಕ ಚಂದೂ ಪಾಟೀಲ್ ನಾಯಕಿಯ ಅಮ್ಮ ರೋಶನಿ ಚಾವ್ಲಾಳ ಹತ್ತಿರ ಕುರ್ಚಿ ಎಳೆದುಕೊಂಡು ಕೂತರು. ಶೂಟಿಂಗ್ ಗಡಿಬಿಡಿ ಶುರುವಾಯಿತು.

***
ಮನೆಯ ಮುಂದಿನ ಕಾಂಕ್ರೀಟ್ ಅಂಗಳದಲ್ಲಿ ಕಾಫಿ ಬೀಜ ಒಳನಾಗಿಸಲು ಆಳುಗಳಿಬ್ಬರು ಓಡಾಡುತ್ತಿದ್ದರು. ಅಲ್ಲಿಯೇ ನಿಂತಿದ್ದ ಇಪ್ಪತ್ಮೂರು ವರ್ಷದ ಸುಮಾ ಏರುತ್ತಿರುವ ಬಿಸಿಲಿಗೆ ಒಣಗುವ ಹಸಿ ಬೀಜಗಳನ್ನು ದಿಟ್ಟಿಸಿ ನೋಡುತ್ತಿದ್ದಳು. ಕಾಫಿ ಬೀಜ ಕುಯ್ದು ನಂತರ ಅದನ್ನು ಸಂಸ್ಕರಿಸಿ ಇಲ್ಲಿ ಅಂಗಳಕ್ಕೆ ತಂದು ಹಾಕುವವರೆಗೆ ಸಾಕಷ್ಟು ಶ್ರಮವಿರುತ್ತದೆ. ಸಂಸ್ಕರಿಸಿದ ಬೀಜಗಳನ್ನು ಒಣಗಿಸಿ ನಂತರ ಚೀಲಗಳಿಗೆ ತುಂಬಿ ಮಡಿಕೇರಿಯ ದಲಾಲಿ ಅಂಗಡಿಯ ಪೂಣಚ್ಚ ಬಂದು ಎತ್ತಿಕೊಂಡು ಹೋಗುವವರೆಗೂ ಇಲ್ಲಿ ಇವರಿಗೆ ವಿಪರೀತ ಕೆಲಸ ಇರುತ್ತದೆ.

ಬಾಳೆಲೆ ತೋಟದ ಎಲ್ಲ ಲೆಕ್ಕ ಬರೆಯುತ್ತಿದ್ದವಳು ಸುಮಾನೇ. ಯಾಕೆಂದರೆ ಮನೆಯಲ್ಲಿ ಇದ್ದವರೇ ಮೂರೂ ಜನ. ಡಿಗ್ರಿ ಮುಗಿಸಿ ಮನೆಯಲ್ಲಿ ತೋಟ ನೋಡಿಕೊಳ್ಳುತ್ತಿರುವ ಸುಮಾ. ಆಕೆಯ ಅಮ್ಮ ನಲವತ್ತೆಂಟು ವರ್ಷದ ಕಾವೇರಿ ಮಡಿಕೇರಿಯಲ್ಲಿ ಕಾಲೇಜು ಓದುತ್ತಿದ್ದ ಒಬ್ಬನೇ ತಮ್ಮ ಪೂವಯ್ಯ.

ಫೋಟೋ ಕೃಪೆ : Inkl (ಸಾಂದರ್ಭಿಕ ಚಿತ್ರ)

ತಂದೆ ಅಪ್ಪಚ್ಚು ಸೇನೆಯಲ್ಲಿದ್ದವರು ಗಡಿ ಭಾಗದಲ್ಲಿ ನಡೆದ ಗುಂಡಿನ ಚಕಮಕಿಯೊಂದರಲ್ಲಿ ತುಂಬಾ ಹಿಂದೆಯೇ ತಿರಿ ಹೋಗಿದ್ದರು. ಕಾವೇರಮ್ಮ ಎರಡೂ ಮಕ್ಕಳನ್ನು ಎರಡೂ ಕಣ್ಣುಗಳಂತೆ ನೋಡಿಕೊಂಡಿದ್ದರು. ಇರುವ ಐದು ಎಕರೆ ಕಾಫಿ ತೋಟವನ್ನು ನಿಭಾಯಿಸುವುದರಲ್ಲೇ ಅವರಿಗೆ ಸಾಕಾಗಿ ಹೋಗುತ್ತಿತ್ತು.

ಸುಮಾರು ಐದೂವರೆ ಅಡಿ ಎತ್ತರದ ಬಿಳಿ ಬಣ್ಣದ ನೀಲ ಕೂದಲಿನ ಸುಂದರ ಹುಡುಗಿ. ಹೇಳಿ ಮಾಡಿಸಿದ ಕೊಡಗಿನ ಮೈಮಾಟ. ಬುದ್ದಿವಂತೆ. ಅಷ್ಟೇ ಧೈರ್ಯವಂತೆ ಕೂಡ. ಕೋಗಿಲೆಯಂತೆ ಹಾಡುತ್ತಾಳೆ. ಕಾಫಿ ತೋಟದ ಇಳಿಜಾರು ಬೆಟ್ಟದಲ್ಲಿ ಅವಳು ಜಿಂಕೆಯಂತೆ ಜಿಗಿಯುತ್ತ ಓಡುಡುವುದನ್ನು ನೋಡುವುದೇ ಚೆಂದ. ಗುಂಪಿನಲ್ಲಿ ಚುರುಕಾಗಿರುತ್ತಾಳೆ. ನಗುತ್ತಾಳೆ. ನಗಿಸುತ್ತಾಳೆ.

ಹೋಯ್…ಸುಮಕ್ಕಾ… ನಿನಗೊಂದು ಸುದ್ದಿ ತಂದೆ ನೋಡೇ.’ .

ಮನೆಯ ಕೆಳಗಿನ ಸೀಳುದಾರಿಯಿಂದ ಅವಸರವಾಗಿ ಬಂದ ತಮ್ಮ ಪೂವಯ್ಯ ಕೂಗಿದಾಗ ಯಾವುದೋ ಯೋಚನೆಯಲ್ಲಿದ್ದ ಸುಮಾ ಇವನತ್ತ ನೋಡಿದಳು.

‘ಎಂಥದು… ಮಾರಾಯ ಅದು. ದಿನದಿನಕ್ಕೂ ನೀ ಹೊಸ ಸುದ್ದಿ ತರ್ತಿಯಲ್ಲೇ;’

‘ಸುಮಾ ಹಾಗಂದಾಗ ಪೂವಯ್ಯ ಅಕ್ಕನ ಕೈ ಹಿಡಿದು – ಆಳುಗಳು ಉಂಟು. ಅವರ ಎದುರು ಹೇಳ್ತಾರೇನೇ ಮಾರಾಯ್ತಿ. ಒಳಕ್ಕೆ ಬಾ. ಅಮ್ಮನ ಜೋಡಿ ಹೇಳ್ತೇನೆ’. ಎಂದು ಅಕ್ಕನೊಂದಿಗೆ ಒಳಗೋಡಿದಳು.

ಫೋಟೋ ಕೃಪೆ : Youtube (ಸಾಂದರ್ಭಿಕ ಚಿತ್ರ)

ಒಳಗೆ ಕಾವೇರಮ್ಮ ಕಡ್ಲೆ ಕಾಳು ಸಾರು ಮಾಡಿಟ್ಟು ದೋಸೆಗೆ ಹಂಚು ಇಟ್ಟುಕೊಂಡು ಒಲೆ ಮುಂದೆ ಕೂತಿದ್ದರು. ಇಬ್ಬರೂ ಮಕ್ಕಳು ಒಳಗೆ ಓಡಿ ಬಂದದ್ದನ್ನು ನೋಡಿ-

‘ಪೂವು …ಮಡಿಕೇರಿಗೆ ಹೋಗುವುದಿಲ್ಲವ?ಕಾಲೇಜು ರಜಾನಾ?’ ಎಂದು ಕೇಳಿದರು. ಪೂವಯ್ಯ ಒಂದೇ ಉಸಿರಿನಲ್ಲಿ ಹೇಳಿದ.

ಅಮ್ಮಾ…ಬಗ್ಗನಮನೆ ಮಾಚಯ್ಯನೋರ್ ತೋಟದಲ್ಲಿ ಸಿನಿಮಾ ತಗೀತಾರಂತೆ. ಬೆಂಗಳೂರಿನಿಂದ ಬಂದಿದ್ದಾರೆ. ಇವತ್ತು ಬಗ್ಗುಮನೆ ತೋಟಕ್ಕೆ ಹೋಗ್ತೀನಿ. ಮಾಚಯ್ಯ ಅಂಕಲ್ಲು ಬಾ ಅಂತ ಹೇಳಿ ಕಲ್ಸಿದ್ದಾರೆ.’

ಈಗ ತಾಯಿ ಮಗಳು ಇಬ್ಬರಿಗೂ ಅಚ್ಚರಿ.

‘ಸಿನಿಮಾದವು ಬಂದಿದ್ದಾರಾ? ಮಾಚಯ್ಯನೋರು ಬರೋದಕ್ಕೆ ಹೇಳಿದ್ರಾ?’

ಕಾವೇರಮ್ಮ ಕುತೂಹಲಗೊಂಡು ಕೇಳಿದರು.

‘ಸಿನಿಮಾ ಹೆಸರು ಏನಂತೆ? ಹೀರೊ -ಹೀರೋಯಿನ್ ಯಾರಂತೆ? ಕೊಡಗಿನಲ್ಲೇ ಶೂಟಿಂಗಾ? ಮಾಚಯ್ಯಾ ಅಂಕಲ್ಲು ಬಾ ಅಂತ ಹೇಳಿ ಕಳ್ಸಿದ್ದಾರೆ.’

ಈಗ ತಾಯಿ ಮಗಳು ಇಬ್ಬರಿಗೂ ಅಚ್ಚರಿ.

ಸಿನಿಮಾದವು ಬಂದಿದ್ದಾರಾ? ಮಾಚಯ್ಯನೋರು ಬರೋದಕ್ಕೆ ಹೇಳಿದ್ರಾ?’ ಕಾವೇರಮ್ಮ ಕುತೂಹಲಗೊಂಡು ಕೇಳಿದರು.

ಸಿನಿಮಾ ಹೆಸರು ಏನಂತೆ?ಹೀರೊ – ಹೀರೋಯಿನ್ ಯಾರಂತೆ? ಕೊಡಗಿನಲ್ಲೇ ಶೂಟಿಂಗಾ?ಮಾಚಯ್ಯ ಅಂಕಲ್ ಪ್ರೊಡ್ಯೂಸರಾ?’ ಸುಮಾ ಗಡಬಡಿಸಿ ಕೇಳಿದಳು. ನಕ್ಕ ಪೂವಯ್ಯ.

ನಿನ್ನ ತಲೆ. ಸಿನಿಮಾಕ್ಕೇನು ಕಡಿಮೆ ದುಡ್ಡು ಬೇಕಾ? ಮೂರೂ ಕಾಫಿ ಬೆಳೆ ಬಂದ್ರೂ ಸಿನಿಮಾ ಮುಗಿಯೋದಿಲ್ಲಮ್ಮ. ಸಿನಿಮಾ ಅಂದ್ರೆ ಏನ್ ಅನ್ಕೊಂಡಿದೀಯಾ? ಮಾಚಯ್ಯ ಅಂಕಲ್ಲು ಸುಮ್ನೆ ಶೂಟಿಂಗ್ ಗೆ ಮನೆ ಕೊಟ್ಟಿದ್ದಾರೆ ಅಷ್ಟೇ.’

‘ಹೌದಾ?’

ಸುಮಾ ಅಚ್ಚರಿಪಟ್ಟರು. ಕಾವೇರಮ್ಮ ಕುತೂಹಲದಿಂದ ಈ ಮಾತುಗಳನ್ನು ಕೇಳುತ್ತಿದ್ದರು.

‘ಸಿನಿಮಾ ಹೆಸರು ಗೊತ್ತಿಲ್ಲ. ಹೀರೋ ಶಯನಕುಮಾರಂತೆ. ಹೀರೋಯಿನ್ ಬಾಂಬೆಯವಳಂತೆ. ಹಿಂದಿ ಸಿನಿಮಾದಲ್ಲಿ ತುಂಬಾ ಮಾಡಿದಳಂತೆ. ಅವಳಿಗೆ ಒಂದು ಕೋಟಿ ಕೊಡ್ತಾರಂತೆ?’.

ಪೂವಯ್ಯ ಹಾಗೆ ಹೇಳಿದಾಗ ಇಬ್ಬರೂ ಇಷ್ಟಗಲ ಬಾಯಿ ತೆರೆದರು.

‘ಕೋಟಿ ಅಂದ್ರೆ? ದುಡ್ಡಾ?’

ಕಾವೇರಮ್ಮ ಕೌತಕ ತಡೆಲಾರದೆ ಕೇಳಿದಾಗ ಪೂವಯ್ಯನೇ ಎಲ್ಲ ಕೇಳಿದ.

‘ಹಿಂದಿಯವ್ರು ಅದಕ್ಕೂ ಕಮ್ಮಿ ಬರಲ್ಲ ಬಿಡು. ಸಿನಿಮಾ ನೂರು ಡೇಸ್ ಓಡೋದು ಗ್ಯಾರಂಟಿನೇ. ದೊಡ್ಡ ಡೈರೆಕ್ಟ್ರು ರಾಣಾ ಬಂದಿದಾರಂತೆ. ಅವ್ರೇ ಇದನ್ನೂ ಡೈರೆಕ್ಟು ಮಾಡ್ತಾರಂತೆ.’

ನನಗೂ ಒಂದು ಪಾತ್ರ ಕೊಡಿಸೋ…

ಪೂವಯ್ಯ ಎಲ್ಲ ತಿಳಿದುಕೊಂಡೇ ಬಂದಿದ್ದ. ಸುಮಾ ಅವನ ತೋಳು ಹಿಡಿದು.

‘ಇಷ್ಟೆಲ್ಲ ತಿಳ್ಕೊಂಡಿದೀಯ. ನನಗೂ ಒಂದು ಪಾರ್ಟು ಕೊಡ್ಸೋ.ಸಿನಿಮಾ ಹಂಡ್ರೆಡ್ ಡೇಸ್ ಓಡಿದ್ರೆ ನನಗೂ ಹೆಸರಲ್ವಾ? ಸುಮಾ ಅಪ್ಪಚ್ಚು ಅಂದ್ರೆ ಇಡೀ ಕೊಡಗು ಹೋಗಳ್ಬೇಕು. ಹಾಗ್ ಮಾಡ್ತೀನಿ.’
ಸುಮಾ ತಡೆಯಲಾರದೆ ಹೇಳಿದಾಗ ಅಮ್ಮ ಜಬರಿಸಿದರು.

‘ಸುಮ್ನಿರೇ. ನಿಂಗ್ಯಾಕೆ ಸಿನಿಮಾ?ಈ ವರ್ಷ ನಿನ್ನ ಮದ್ವೆ ಆಗುತ್ತೆ. ಸೋಮವಾರಪೇಟೆ ಹುಡುಗ ನಿನ್ನ ಸಲುವಾಗಿ ಕಾಯ್ಕೊಂಡು ಕೂತಿದ್ದಾನೆ. ಅವನ ಕಾಫಿ ಎಸ್ಟೇಟಿನಲ್ಲಿ ನೀನೇ ಮಹಾರಾಣಿ ಅಲ್ಲವಾ…?’

ಫೋಟೋ ಕೃಪೆ : LBB (ಸಾಂದರ್ಭಿಕ ಚಿತ್ರ)

‘ನೀನು ಸಿನಿಮಾದಲ್ಲಿ ಪಾರ್ಟು ಮಾಡ್ತಿಯಾ? ಮುಗಿದುಹೋಯಿತು. ಪ್ರೊಡ್ಯೂಸರ್ ಕತೆ. ಕೋಡಂಗಿ ಥರ ಇದ್ದೀಯ. ಸಿನಿಮಾಕ್ಕೆ ಸೂಟು ಆಗೋ ಮುಖ ಬೇಡವೇನೇ?ನಿನ್ನ ಮುಖ ಕಂಡ ತಕ್ಷಣ ಜನ ಥೇಟರಿನಿಂದ ಓಡಾಡಿದ್ರೆ ಕೇಳು.’

ಪೂವಯ್ಯ ಅಕ್ಕನನ್ನು ರೇಗಿಸಿದ. ಈಗ ಅಮ್ಮನೇ ಅವಳ ಪರವಾಗಿ ನಿಂತಳು. ‘ಸುಮ್ನಿರೋ ಏನಾಗಿದೆ ಅವಳ ಮುಖಕ್ಕೆ? ಕೊಡಗಿನ ಅದೆಷ್ಟು ಜನ ತುದಿಗಾಲ ಮೇಲೆ ನಿಂತಿದ್ದಾರೆ. ಇವಳನ್ನ ಮದ್ವೆ ಆಗೋದಕ್ಕೆ. ಸಿನಿಮಾ ಒಂದು ಬೇಡ ಅಷ್ಟೇ’.
ಸುಮಾಳಿಗೆ ಅದು ರುಚಿಸಲಿಲ್ಲ.

‘ಇಲ್ಲಮ್ಮ ನನಗೆ ಏನು ಇಷ್ಟವಾಗುತ್ತೋ ಅದನ್ನು ಮಾಡ್ತೀನಿ. ನೀನು ಬೇಡ ಅನ್ನೋದ್ಯಾಕೆ?’ ಎನ್ನುತ್ತ ಮುಖ ತಿರುಗಿಸಿದಳು. ನಕ್ಕ ಪೂವಯ್ಯ ‘ಇಲ್ಲ… ಸುಮಕ್ಕೆ ಮಾಚಯ್ಯ ಅಂಕಲ್ ನಿನಗೂ ಬರೋಕ್ ಹೇಳಿದ್ದಾರೆ. ನಿಮಗೂ ಒಂದ್ ಚಾನ್ಸ್ ಕೊಡಿಸ್ತೀನಿ’ ಅಂದಿದ್ದಾರೆ. ‘ಅಮ್ಮ…ಅಕ್ಕನ ಆಸೆ ಪೂರೈಸಲಿ ಬಿಡು. ಮದ್ವೆ ಹ್ಯಾಗೂ ಆಗ್ತದೆ. ಕೊಡಗಿನಲ್ಲಿ ಭಯಂಕರ ಸುಂದರಿ ಅನ್ನೋ ಹೆಸರಾದ್ರೂ ಬರ್ತದೆ. ಇವ್ಳು ಗಂಡನ ಮನೆ ಸೇರೋಕ್ ಮುಂಚೆ.’ ಎಂದು ನಕ್ಕ. ಸುಮಾಳಿಗೆ ಖುಷಿಯೋ ಖುಷಿ. ‘ಮಾಚಯ್ಯ ಅಂಕಲ್ಲು ತನಗೂ ಬರೋಕ್ ಹೇಳಿದ್ದರೆಂದ್ರೆ ಅವರು ಡೈರೆಕ್ಟರ್ ಹತ್ತಿರ ಮಾತಾಡಿರುತ್ತಾರೆ’ ಅಂದುಕೊಂಡಳು.

‘ಅಮ್ಮ …ನಾನೂ ಪೂವಯ್ಯನ ಜೊತೆ ಶೂಟಿಂಗ್ ಕಡೆ ಹೋಗಿ ಬರತೀನಿ. ನಾನು ಶೂಟಿಂಗ್ ನೋಡಿಲ್ಲ.’ ಅಂದಳು. ಕಾವೇರಮ್ಮ ಯೋಚಿಸಿದರು.

‘ಶೂಟಿಂಗ್ ಗೆ ಬೇಕಾದ್ರೆ ಹೋಗಿ ನೋಡು. ಪಾರ್ಟು ಕೊಡು ಅಂತ ಮಾತ್ರ ಕೇಳಬೇಡ ಮಾರಾಯ್ತಿ. ಸಿನಿಮಾ ನೋಡೋದಕ್ಕಷ್ಟೇ ಛಂದ ಅಂತೇ.’

ಅಮ್ಮ ಅಷ್ಟು ಹೇಳಿದ್ದೇ ಸಾಕಾಯಿತು. ಸುಮಾ ಅಲ್ಲಿ ನಿಲ್ಲದೆ ನಿಲುವುಗನ್ನಡಿ ಇದ್ದ ಕೋಣೆಯತ್ತ ಧಾಮಿಸಿದಳು.

(ಸೂಚನೆ : ಈ ಕತೆಯೂ ಈಗಾಗಲೇ ಪುಸ್ತಕರೂಪದಲ್ಲಿದ್ದು, ಆಕೃತಿಕನ್ನಡ ಮ್ಯಾಗಝಿನ್ ನಲ್ಲಿ ಪ್ರತಿ ಶನಿವಾರ ಪ್ರಕಟವಾಗುತ್ತದೆ. ಇತರೆ ಯಾರು ಕೂಡ ಈ ಕತೆಯನ್ನು ಪ್ರಕಟಿಸುವ ಹಾಗಿಲ್ಲ.ಹಾಗೂ ಕದಿಯುವಂತಿಲ್ಲ.)

ಮತ್ತೆ ಮುಂದಿನ ಶನಿವಾರ ಓದಿರಿ. ಇದೊಂದು ಕುತೂಹಲಕಾರಿ ಕತೆ. ತಪ್ಪದೆ ಓದಿರಿ. ]


  • ಹೂಲಿಶೇಖರ್  (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಾಕಾರರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW