ಅಣ್ಣಂದಿರಲ್ಲಿ ಅಣ್ಣಯ್ಯ: ಅಜ್ಜನಗದ್ದೆ ಮಾಷ್ಟ್ರಣ್ಣಯ್ಯ.

‘”ಗಾನಯೋಗಿ” ಶ್ರೀ ಗಣಪಯ್ಯ ಭಾಗವತರಾದ ದೊಡ್ಡಪ್ಪಯ್ಯ ಅವರಿಗೆ ಹುಟ್ಟಿದ್ದೇ ಎ.ಜಿ.ಸುಬ್ರಾಯ, ಅವರು ಕರ್ನಾಟಕದೆಲ್ಲೆಡೆ ಮುಂದೆ ಸಾಗುತ್ತಾ ನಾಡಿಗೇ ಖ್ಯಾತ ಸಾಹಿತಿ-ಕವಿ ಸುಬ್ರಾಯ ಚೊಕ್ಕಾಡಿಯವರಾಗಿ ಪ್ರಸಿದ್ದಿಗೊಂಡದ್ದು ಹೆಮ್ಮೆ’. – ಬಾಲು ದೇರಾಜೆ ಅವರ ಲೇಖನಿಯಲ್ಲಿ ಸುಬ್ರಾಯ ಚೊಕ್ಕಾಡಿ ಕುರಿತು ಒಂದು ಲೇಖನ ತಪ್ಪದೆ ಓದಿ…

ನಾಡಿನೆಲ್ಲೆಡೆ ನಾಳೆ 5-9-2022 ಶಿಕ್ಷಕರ ದಿನಾಚರಣೆಯ ದಿನ. ನಾಡಿನಲ್ಲಿರುವ ಹಲವಾರು ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಮೊದಲಿಗೆ ಬರುವುದು ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳು. ಈ ಸಂಸ್ಥೆಗಳಲ್ಲಿ ಶಿಕ್ಷಕ ,ಶಿಕ್ಷಕಿಯರಿದ್ದು, ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿ, ಸಾಧಕರಾಗಿ ಸಾರ್ಥಕತೆಯ ಭಾವ ಹೊಂದಿದವರು ನಮ್ಮ ಕಣ್ಣ ಮುಂದೆ ಹಲವಾರು ಜನರಿದ್ದಾರೆ. ಅಲ್ಲದೆ ಇದಕ್ಕೆ ತದ್ವಿರುದ್ಧವಾಗಿ ಶಾಲೆ, ಪಾಠ, ಮನೆ ,ಬಂಧುಗಳ ಜೊತೆಗೆ ತಮ್ಮ ಸಂಸಾರವೆಂಬ ಭುವನದೊಳಗೆ ಹುದುಗಿಕೊಂಡಿರುವ ಮಹನೀಯರು ನಮ್ಮ ಮುಂದೆ ಕಾಣಿಸಿಕೊಳ್ಳುವವರೂ ಇದ್ದಾರೆ. ಎಲ್ಲವೂ ಅವರವರ ಭಾವಕ್ಕೆ ಅವರವರ ಭಕುತಿಗೆ…..

ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಚೊಕ್ಕಾಡಿಯ ಅಜ್ಜನಗದ್ದೆ ಮನೆಯಲ್ಲಿ ವಾಸಿಸುತ್ತಿದ್ದ “ಗಾನಯೋಗಿ” ಶ್ರೀ ಗಣಪಯ್ಯ ಭಾಗವತರಾದ ನಮ್ಮ ದೊಡ್ಡಪ್ಪಯ್ಯ ಹಾಗೂ ಪತ್ನಿ ಶ್ರೀಮತಿ ಸುಬ್ಬಮ್ಮ ದೊಡ್ಡಮ್ಮ ಇವರಿಗೆ ಮೂರು ಜನ ಮಕ್ಕಳಲ್ಲಿ.(2.ಲಕ್ಷ್ಮೀಶ ಚೊಕ್ಕಾಡಿ,3 ಸಂತೋಷ ಚೊಕ್ಕಾಡಿ). 1940ನೇ ಇಸವಿ ಜೂನ್29 ರಂದು ಜನಿಸಿದ ಹಿರೀ ಮಗನಿಗೆ ಸುಬ್ರಾಯ ಎಂದು ನಾಮಕರಣ ಮಾಡಿದರು. ದೊಡ್ಡವನಾಗಿ ಅಜ್ಜನಗದ್ದೆ ಹಾಗೂ ಪಂಜದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಮಂಗಳೂರು ಬುನಾದಿ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಎರಡು ವರ್ಷ ತರಬೇತಿಗೊಂಡು,ಪ್ರಾರಂಭದಲ್ಲಿ ಇದೇ ತಾಲೂಕಿನ ಐವರ್ನಾಡು ಗ್ರಾಮದ ದೇವರಕಾನ ಸರಕಾರಿ ಶಾಲೆಯಲ್ಲಿ 1959ನೇ ಇಸವಿ ಆಗಸ್ಟ್
20ರಂದು ಶಿಕ್ಷಕರಾಗಿ ನೇಮಕಗೊಂಡು, ಊರಿಗೆ ಶ್ರೀ ಎ.ಜಿ.ಸುಬ್ರಾಯರಾಗಿ ನಮ್ಮ ಪಾಲಿಗೆ ಅಜ್ಜನಗದ್ದೆ ಮಾಸ್ಟ್ರಣ್ಣಯ್ಯರಾದರು.

ಅಜ್ಜನಗದ್ದೆ ಮನೆ ಹಾಗೂ ದೇವರಕಾನ ದ ಸಾಮಾನ್ಯ ಮಧ್ಯ ಭಾಗದಲ್ಲಿರುವ ನಮ್ಮ ಮನೆ ದೇರಾಜೆಗೆ ಮಾಸ್ಟ್ರಣ್ಣಯ್ಯ ಆಗಾಗ ಬರುತ್ತಿದ್ದು (ಆಗಿನ ಕಾಲದಲ್ಲಿ ಪಾದಯಾತ್ರೆ ಯೇ ಗತಿ) ಒಮ್ಮೆ ಚಿಕ್ಕಯ್ಯ (ನಮ್ಮ ಅಪ್ಪ) ನನ್ನು ಮಾತಾಡಿಸಿ ಹೋಗ್ತೇನೆ ಎಂದು ಹೇಳುತ್ತಿದ್ದರಂತೆ. ಇವರು 1969 ನೇ ಇಸವಿ ತನಕ ಈ ಶಾಲೆಯಲ್ಲಿ ಶಿಕ್ಷಕರಾಗಿದ್ದುದರಿಂದ ಕೊನೆಗೆ ಇವರ ಒಡನಾಟ ಆರಂಭವಾಗಿತ್ತು. ಆಗೆಲ್ಲಾ ನಾವು ಚಿಕ್ಕವರಾಗಿದ್ದರಿಂದ ಇವರು ನಮ್ಮಲ್ಲಿಗೆ ಬಂದಾಗ ಬಹಳ ಖುಷಿಯಿಂದ “ಮಾಟಣ್ಣಯ್ಯ” ಬಂದರು ಎಂದು ಮಾತಾಡಿಸಿ ಕೈ ಹಿಡಿದು ನೇತಾಡುತ್ತಿದ್ದೆವು. ಅಪ್ಪನ ಹಾಗೂ ಇವರ ಮಾತುಕತೆಗಳು ಆರಂಭಗೊಳ್ಳುತ್ತಿದ್ದವು. ನಂತರದ ವರ್ಷಗಳಲ್ಲಿ ಇವರು ಕುಕ್ಕುಜಡ್ಕದ ಹಾಸನಡ್ಕ ಶಾಲೆಗೆ ವರ್ಗಾವಣೆ ಗೊಂಡರು.
1975-76ನೇ ಇಸವಿಯಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನಾನು ದಾಖಲಾತಿಗೊಂಡ ಒಂದೆರಡು ವರ್ಷ ಅಜ್ಜನಗದ್ದೆ ಮನೆಯಿಂದಲೇ ಶಾಲೆಗೆ ಹೋಗಿ ಬರುತ್ತಿದ್ದರಿಂದ ಈ ಮನೆಯವರ ಜೊತೆಯಲ್ಲಿ ಕಾಲಕಳೆಯುವ ಸಂದರ್ಭ ಒದಗಿ ಬಂದಿತ್ತು..

ಆಗಿನ ಕಾಲದಲ್ಲಿ ಈ ಮನೆಯು ಎತ್ತರದ ಪಂಚಾಂಗದ ಮಣ್ಣಿನ ಗೋಡೆ, ಎರಡು ಕೋಣೆಗಳಿದ್ದ ಸುತ್ತಲೂ ಬಿದಿರ ತಡಿಕೆಗಳಿಂದ ಕೂಡಿದ ಉದ್ದವಾದ ಜಗಲಿಗೆ ಮುಳಿ ಹುಲ್ಲಿನ ಮಾಡಾಗಿತ್ತು. ಬಿದಿರ ತಡಿಕೆಯ ಮಧ್ಯದಿಂದ ಬರುತ್ತಿದ್ದ ತಂಪಾದ ಗಾಳಿಯ ಜೊತೆಗೆ ,ಮನೆಯೊಳಗೆ ಇಂಪಾದ ಹಾಡುಗಳು ,ಜಗಲಿಯಲ್ಲಿ ದೊಡ್ಡಪ್ಪಯ್ಯ ಶಯನದ ಭಂಗಿಯಲ್ಲಿ ಯಕ್ಷಗಾನದ ಪದ್ಯಗಳನ್ನು ಹಾಡುತ್ತಿದ್ದರು. ಒಳಗಿನಿಂದ ಮೆಲುಧ್ವನಿಯಲ್ಲಿ ,ಕ್ಷೀರ ಸಾಗರ ಶಯನ ಎಂದು ದೊಡ್ಡಮ್ಮನ ಸುಶ್ರಾವ್ಯ ಸಂಗೀತ ಹಾಡು ,ಒಂದೊಂದು ಕೋಣೆಯಿಂದ ಭಾವಗೀತೆ, ಹಳೆಯ ಹಿಂದಿ ಚಲನಚಿತ್ರಗೀತೆಗಳು ಕೇಳಿ ಬಂದು ಮನೆಯೆಲ್ಲಾ ನಾದಮಯವಾಗಿ….. ಈ ಸಮಯ ಆನಂದಮಯ ….. ಜೊತೆಗೆ ಇವರ ಓದುವಿಕೆ ನಮಗೊಂದು ಸ್ಪೂರ್ತಿ ದಾಯಕವಾಗಿದ್ದು. ಆಗ ಮನೆಯಲ್ಲಿ ಉರಿಯುತ್ತಿದ್ದ ದೀಪದ ಬೆಳಕು ಈಗ ನಾಡಿನೆಲ್ಲೆಡೆ ಪ್ರಕಾಶಮಾನವಾದ ಬೆಳಕನ್ನು ಕಾಣುವಂತಾಗಿದೆ.

1959 ನೇ ಇಸವಿಯಿಂದ ಆರಂಭಗೊಂಡ ವೃತ್ತಿಯಿಂದ ಊರಿನ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಕೊನೆಗೆ ಕುಕ್ಕುಜಡ್ಕದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಗಿದ್ದು ,ತಮ್ಮ ಸುದೀರ್ಘವಾದ ಶಿಕ್ಷಕ ವೃತ್ತಿಯಿಂದ 1998 ನೇ ಇಸವಿ ಜೂನ್ 30 ರಂದು ಮಾಸ್ಟ್ರಣ್ಣಯ್ಯ ನಿವೃತ್ತಿಗೊಂಡರು. ಇವುಗಳ ನಡುವಿನ ಸಮಯದಲ್ಲಿ ಕನ್ನಡ ಸ್ನಾತಕೋತ್ತರ ಹಾಗೂ ರಾಷ್ಟ್ರ ಭಾಷಾ ವಿಶಾರದ ಪದವಿಯನ್ನು ಗಳಿಸಿಕೊಂಡರು..

ಮಾಸ್ಟ್ರಣ್ಣಯ್ಯ ರ ಮಾತಿನಂತೆ ಇವರು ಪ್ರೌಢಶಾಲೆ ಯಲ್ಲಿರುವಾಗಲೇ ಕಥೆಗಳನ್ನು ಬರೆಯುತ್ತಿದ್ದು ,ಶಾಲಾಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಇವರ ಮೊದಲ ಕವನ 1961ನೇ ಇಸವಿ ಯುಗಪುರುಷ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಶಾಲಾ ಶಿಕ್ಷಕರ ನ್ನು ಒಡಗೂಡಿ ಕೊಂಡು ಕುಕ್ಕುಜಡ್ಕ ಗೆಳೆಯರ ತಂಡ ರಚಿಸಿ ನಾಟಕವಾಡುತ್ತಿದ್ದರು. ಸುಮನಸಾ ವಿಚಾರ ವೇದಿಕೆ ಬಳಗದೊಂದಿಗೆ ಮನೆ.ಮನೆ ಸಾಹಿತ್ಯಗೋಷ್ಟಿಗಳನ್ನು ಏರ್ಪಡಿಸಿದ್ದಾರೆ. 1980ನೇ ಇಸವಿಯಲ್ಲಿ ಅಭಿನಯ ನಾಟಕ ತಂಡ ,ಸುಳ್ಯ ಇದರ ಶ್ರೀ ಆರ್ . ನಾಗೇಶ್ ನಿರ್ದೇಶನದ ಚೋಮ ನಾಟಕದಲ್ಲಿ ,ಚೋಮನಾಗಿ ಅಭಿನಯಿಸಿದ್ದು ಈಗಲೂ ನಮ್ಮ ಕಣ್ಣ ಮುಂದಿದೆ. ಇವರಿಂದ ಒಂದೊಂದು ಸಮಗ್ರ ಕಾವ್ಯ ,ಕಥಾಸಂಕಲನ , ಕಾದಂಬರಿ ,ಐದು ವಿಮರ್ಶಕ ಪುಸ್ತಕಗಳು ,4-5 ಸಂಪಾದಿತ ಪುಸ್ತಕಗಳಲ್ಲದೆ 12 ಕವನ ಸಂಕಲನಗಳು ಪ್ರಕಟಣೆಗೊಂಡಿವೆ.

ಇವರ ಮುನಿಸಿ ತರವೇ ಮುಗುದೇ ಗೀತೆಯನ್ನು ಪುತ್ತೂರು ಶ್ರೀ ನರಸಿಂಹ ನಾಯಕ್ ತಮ್ಮ ಕಂಠಸಿರಿಯಿಂದ ಹಾಡಿದ್ದು ,ಯಕ್ಷಗಾನ, ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಸೇರಿದಂತೆ ಹೆಚ್ಚಿನ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಂಡು ಹಾಡುದರ ಹಾಗೂ ವಿವಿಧ ವಾದ್ಯಗಳಲ್ಲಿ ನುಡಿಸುವಿಕೆಯಿಂದ ಹಿತವಾಗಿ ನಾಡಿನಾದ್ಯಂತ ಪ್ರಸಿದ್ದಿಗೊಂಡು…ಎಲ್ಲೆಲ್ಲೂ….
ಸುಮಾರು 1965ನೇ ಇಸವಿ ತನಕದ ಶ್ರೀ ಎ.ಜಿ.ಸುಬ್ರಾಯ ರು ಚೊಕ್ಕ ಚೊಕ್ಕ ಅಡಿಗಳನ್ನು ಮುಂದಿಡುತ್ತಾ ಚೊಕ್ಕಾಡಿಯಿಂದ ,ಕರ್ನಾಟಕದೆಲ್ಲೆಡೆ ಮುಂದೆ ಸಾಗುತ್ತಾ ನಾಡಿಗೇ ಖ್ಯಾತ ಸಾಹಿತಿ-ಕವಿ ಸುಬ್ರಾಯ ಚೊಕ್ಕಾಡಿಯವರಾಗಿ ಪ್ರಸಿದ್ದಿಗೊಂಡದ್ದು ಹೆಮ್ಮೆ. ಆದರೂ ನಮ್ಮ ಮಧ್ಯೆ ಇರುವ ಅಣ್ಣಯ್ಯಂದಿರಲ್ಲಿ ಅಣ್ಣಯ್ಯ ಅಜ್ಜನಗದ್ದೆ ಮಾಸ್ಟ್ರಣ್ಣಯ್ಯ….
ಶ್ರೀ ಸುಬ್ರಾಯ ಚೊಕ್ಕಾಡಿಯವರು ಯಾರ ಬೆನ್ನಿಗೆ ತಟ್ಟಿದವರಲ್ಲ…

ಸಂದರ್ಭ ಬಂದಾಗ ಯಾರ ಬೆನ್ನು ತಟ್ಟದೇ ಬಿಟ್ಟವರಲ್ಲ….


  • ಬಾಲು ದೇರಾಜೆ,  ಸುಳ್ಯ.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW