ಅ…ಅ…ಅಮೆರಿಕಾ ನೋಡಾ (ಭಾಗ-೧೧)

‘ ಅಮ್ಮಾ… ಗ್ಯಾಜ್ಯೂಯೇಷನ್ ಡೇ ದಿನ ಸೀರೆ ಉಡ್ತೀಯಲ್ಲ… ಸೀರೆನೇ ಇರಲಿ. ಅದೇ ಚೆಂದ’ ಎಂದಿದ್ದ. ಅದನ್ನು ಖಾತ್ರಿ ಪಡಿಸಿಕೊಂಡಿದ್ದ ಕೂಡ. ಕರ್ನಾಟಕದ ಹೆಮ್ಮೆಯ ರೇಷ್ಮೆ ಸೀರೆಯುಟ್ಟು ನಾನು ಸಿದ್ಧವಾದರೆ ನಮ್ಮವರು, ವಿನೀತ್ ಇಬ್ಬರೂ ಸೂಟು ಬೂಟು ಹಾಕಿಕೊಂಡು ಸಿದ್ಧವಾದರು. ಲೇಖಕಿ ಕಮಲಾಕ್ಷಿ ಸಿ ಆರ್ ಅವರ ಅಮೆರಿಕಾ ಪ್ರವಾಸ ಕಥನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪ್ರವಾಸದ ಉದ್ದೇಶ ಮಗನ COMMENCEMENT DAY ಕಾರ್ಯಕ್ರಮ ಮಗನ ಗ್ರಾಜ್ಯುಯೇಷನ್ನಿನಲ್ಲಿ ಭಾಗವಹಿಸಲೆಂದೇ ಇಲಾಖೆಯಿಂದ ನಾನು ಅಮೆರಿಕಾ ಪ್ರವಾಸಕ್ಕೆ ಅನುಮತಿ ಪಡೆದದ್ದು. ಹಾಗಾಗಿ ನಮ್ಮ ಪ್ರವಾಸ ಕೇಂದ್ರೀಕೃತವಾಗಿದ್ದು ಆ ದಿನದತ್ತ.

ಸಂಜೀತ್ ನಮಗಿಂತ ಮೊದಲೆರಡು ದಿನ ನಾಶ್ವೆಲ್‌ನಿಂದ Boston ಸಮೀಪದ ವೂಸ್ಟರ್‌ ತಲುಪಿದ್ದ. ಗ್ರಾಜ್ಯುಯೇಷನ್ ಡೇ ಹಿಂದಿನ ಕಾಲೇಜಿನ ಆವರಣದಲ್ಲಿರುವ ಪುಟ್ಟದೊಂದು ಬ್ರಿಡ್ಜ್ ಕ್ರಾಸ್ಸಿಂಗ್ ಕಾರ್ಯಕ್ರಮ ಬಹಳ ವಿಶೇಷವಾಗಿರುತ್ತದೆ. ಕಾಲೇಜಿನ ಮೊದಲ ದಿನ ಬ್ರಿಡ್ಜ್ ಮೂಲಕ ಕಾಲೇಜನ ಆವರಣ ಪ್ರವೇಶಿಸಿದರೆ, ಪದವಿ ಮುಗಿಸಿದ ಬಳಿಕ ಕಾಲೇಜಿನ ಕಡೆಯಿಂದ ಬ್ರಿಡ್ಜ್ ಮೂಲಕ ಹೊರ ಬರುವರು. ಇದನ್ನು ಸ್ಥಳೀಯರು ನೋಡುತ್ತ ಚಪ್ಪಾಳೆ ಮೂಲಕ ಪ್ರೋತ್ಸಾಹಿಸುತ್ತಾರೆ‌. ಆ ದಿನ ನಾವು ಮನೆಯಲ್ಲೇ ಕುಳಿತು, ಯೂಟ್ಯೂಬ್ ನೇರ ಸಂಪರ್ಕದ ಮೂಲಕ ವೀಕ್ಷಿಸಿದೆವು.

ನಾವು ಮೂವರು ಅದೇ ದಿನ ( ಏಪ್ರಿಲ್ – ೧೪) ಸಂಜೆ ನಾಶ್ವೆಲ್‌ನಿಂದ ಬಾಸ್ಟನ್‌ಗೆ ಪ್ರಯಾಣ ಬೆಳೆಸಿದೆವು. ವಿಮಾನದಲ್ಲಿ ಎರಡೂವರೆ ಗಂಟೆ ಪ್ರಯಾಣವಷ್ಟೇ. ಮಗ ಮೊದಲೇ ಬಾಡಿಗೆ ಕಾರು, ರೂಮು ಎಲ್ಲವನ್ನೂ ಕಾಯ್ದಿರಿಸಿದ್ದ. ಬಾಡಿಗೆ ಕಾರಿಗೆ ಸರದಿಯಲ್ಲಿ ಮಗ ನಿಂತಿದ್ದರೆ ಕುಳಿತಿದ್ದ ನಮಗೆ ನಿದ್ದೆ ಆವರಿಸುತ್ತಿತ್ತು. ಅವನು ಕಾಯ್ದಿರಿಸಿದ್ದ ಕಾರು ಸಿಗದೆ ಅದಕ್ಕಿಂತಲೂ ದೊಡ್ಡದಿದ್ದ ಹೊಸ ಟೊಯೋಟಾ ಕಾರನ್ನು ನೀಡಿದರು. ಆ ದೊಡ್ಡ ಕಾರು ನೋಡಿ ನನಗೆ ಗಾಬರಿಯಾಯ್ತು. ನಮ್ಮವರು ಮಕ್ಕಳಿಗೆ SX-4 ಕಾರನ್ನು ಹೆಚ್ಚೆಂದರೆ ಹತ್ತು ಕಿ.ಮೀ ದೂರಗಳಿಗಷ್ಟೇ ಡ್ರೈವ್ ಮಾಡಲು ನೀಡುತ್ತಿದ್ದದ್ದು. ಇಷ್ಟು ದೊಡ್ಡ ಕಾರಾ? ಎನಿಸಿತ್ತು. ಇಪ್ಪತ್ತು ದಿನಗಳಲ್ಲಿ ಅವನ ಡ್ರೈವಿಂಗ್ ನೋಡಿ ವಿಶ್ವಾಸ ತುಂಬಿತ್ತು.

ಕಾರಿನಲ್ಲಿ ಲಗೇಜು ಹಾಕಿಕೊಂಡು ಬಾಸ್ಟನ್ ನಗರದ ಕಡೆ ಹೊರಟೆವು. ಗಗನ ಚುಂಬಿ ಕಟ್ಟಡಗಳು, ಸ್ವಲ್ಪ ಕಿರಿದಾದ ರಸ್ತೆಗಳು, ಸುರಂಗ ರಸ್ತೆಗಳನ್ನು ಹಾದು ಮೊದಲು ಹೊರಟಿದ್ದು ಹಸಿವು ತಣಿಸಿಕೊಳ್ಳಲು. ಮಗ ಹೋಟೆಲ್ ಕರೆದೊಯ್ದದ್ದು ಕೆಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿರುವ ‘ಮದ್ರಾಸ್ ದೋಸಾ ಕಂಪನಿ’ ಹೋಟೆಲಿಗೆ. ಪಕ್ಕಾ ದಕ್ಷಿಣ ಭಾರತದ ತಿಂಡಿ ತಿನಿಸುಗಳ ಹೋಟೆಲಿದು. ದೋಸೆ, ಇಡ್ಲಿ, ಉದ್ದಿನ ವಡೆ, ಪಡ್ಡು.. ಆಹಾ ಎನಿಸಿತು. ನಾನು ಸೆಟ್ ದೋಸೆ, ನಮ್ಮವರು ಇಡ್ಲಿ ವಡೆ ಹಾಗೂ ಮಗ ಪೂರಿ ಸಾಗು ಆರ್ಡರ್ ಮಾಡಿ ತಿಂದೆವು. ಸ್ವಾದಿಷ್ಟ ಡಿಕಾಕ್ಷನ್ ಕಾಫಿ ಕುಡಿದು ಸಂತೃಪ್ತಿಯಾಯಿತು. ಅಲ್ಲಿಂದ ಹದಿನೈದು ನಿಮಿಷಗಳಲ್ಲಿ ‘ಸ್ಟೇ ಅಮೆರಿಕ’ ಹೋಟೆಲು ತಲುಪಿದಾಗ ರಾತ್ರಿ ಹನ್ನೊಂದು ಗಂಟೆ. ಆ ಹೋಟೆಲಿನಿಂದ ವೂಸ್ಟರ್‌ಗೆ 4೦ ನಿಮಿಷಗಳ ಹಾದಿ ಎಂದು ಬಾಸ್ಟನ್ ಹೊರವಲಯದಲ್ಲಿ ಬುಕ್ ಮಾಡಿದ್ದ.

ಕಾರ್ಯಕ್ರಮ ಸಂಜೆ ಐದು ಗಂಟೆಗೆ ನಿಗದಿಯಾಗಿತ್ತು. ಮಧ್ಯಾಹ್ನ ಎರಡೂವರೆವರೆಗೆ ಮಗ ಕೆಲಸ ಮಾಡಲಿ, ಬಳಿಕ ವೂಸ್ಟರ್‌ ಕಡೆ ಹೊರಡುವುದು ಎಂದು ನಿರ್ಧರಿಸಿದ್ದೆವು. ಬೆಳಗಿನ ಉಪಹಾರ, ಮಧ್ಯಾಹ್ನದ ಊಟದ ಬಳಿಕ ಸಿದ್ಧವಾದೆವು. ಮಗ ಕಳೆದ ಜನವರಿಯಲ್ಲಿ ಬೆಂಗಳೂರಿಗೆ ಬಂದಿದ್ದಾಗಲೇ ‘ ಅಮ್ಮಾ.. ಗ್ಯಾಜ್ಯೂಯೇಷನ್ ಡೇ ದಿನ ಸೀರೆ ಉಡ್ತೀಯಲ್ಲ.. ಸೀರೆನೇ ಇರಲಿ. ಅದೇ ಚೆಂದ’ ಎಂದಿದ್ದ. ಅದನ್ನು ಖಾತ್ರಿ ಪಡಿಸಿಕೊಂಡಿದ್ದ ಕೂಡ. ಕರ್ನಾಟಕದ ಹೆಮ್ಮೆಯ ರೇಶಿಮೆ ಸೀರೆಯುಟ್ಟು ನಾನು ಸಿದ್ಧವಾದರೆ ನಮ್ಮವರು, ವಿನೀತ್ ಇಬ್ಬರೂ ಸೂಟು ಬೂಟು ಹಾಕಿಕೊಂಡು ಸಿದ್ಧವಾದರು.

ರೂಮ್ ಸರ್ವೀಸ್ ಕೊಡಲು ಬಂದ ಮಹಿಳಾ ಮ್ಯಾನೇಜರ್ ನನ್ನ ಉಡುಪು ನೋಡಿ ಆನಂದವಾಯಿತು‌. ಈ ವಸ್ತ್ರವನ್ನು ಏನೆಂದು ಕರೆಯುವರು? ನೀವು ಭಾರತದವಾರ.‌ ನಿಮಗೆ ಇದು ಚೆನ್ನಾಗಿ ಒಪ್ಪುತ್ತೆ ಎಂದು ಹೇಳಿದ್ದು ಖುಷಿಯಾಯ್ತು. I ‘ ‘can’t believe that you have a child of a grown son like this’ ಎಂದು ಮುಕ್ತವಾದ ಹೊಗಳಿಕೆ ನಾಲ್ಕು ವರ್ಷ ಚಿಕ್ಕವಳಾದಷ್ಟು ಪುಳಕಿತಳಾದೆ. ಮೂವರೂ ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆವು. ವಿನೀತ್ ಬಂದು ತೊಡೆಯ ಮೇಲೆ ಚಿಕ್ಕ ಮಗುವಿನಂತೆ ಕುಳಿತು ಫೋಟೋ ತೆಗೆಸಿಕೊಂಡದ್ದು ಅವನಲ್ಲಿ ಮಗುವಿನ ಮನಸ್ಸು ಇನ್ನೂ ಜಾಗೃತವಾಗಿದೆ ಎನಿಸಿತು.

ಎರಡೂವರೆಗೆ ಅಲ್ಲಿಂದ ಹೊರಟೆವು. ಹೊರಟ ಹತ್ತು ನಿಮಿಷಗಳಲ್ಲಿ ರಸ್ತೆ ಪಥ ಬದಲಿಸಿ, ಎಂದು ಸೂಚನಾ ಫಲಕ ಕಾಣಿಸಿತು. ಪಥ ಬದಲಿಸಿದಾಗ ನಲವತ್ತು ನಿಮಿಷದ ದಾರಿ ಒಂದು ಗಂಟೆಯಾಗಿ ಬದಲಾಗಬೇಕೆ? ಹೀಗೆಲ್ಲ ಆಗೋದು ಸಹಜ..ಏನುಮಾಡಲಾಗದು ಎಂದುಕೊಂಡೆವು. ಸಾಲದ್ದಕ್ಕೆ ಮಳೆ ಹೊಯ್ ಎಂದು ಸುರಿಯತೊಡಬೇಕೆ? ವೂಸ್ಟರ್‌ನಲ್ಲಿ ಮಳೆಯ ಸೂಚನೆ ಇತ್ತು..ಅದೂ ಬಾಸ್ಟನ್‌ನಲ್ಲೇ ಶುರುವಾಯಿತಲ್ಲ ಎನಿಸಿತು. ಒಂದೆಡೆ ಕಿರಿದಾದ ದ್ವಿಮುಖ ರಸ್ತೆ, ಇನ್ನೊಂದೆಡೆ ರಭಸವಾದ ಮಳೆ ನಮ್ಮ ಸಂಚಾರವನ್ನು ನಿಧಾನಗೊಳಿಸಿದವು. ಸಾಲದ್ದಕ್ಕೆ ಸ್ವಲ್ಪ ಬೆಟ್ಟ ಗುಡ್ಡಗಳ ಸಾಲು. ನಾಶ್ವೆಲ್‌ನಲ್ಲಿ ” ಇಲ್ಲಿ ಸ್ಕೂಲ್ ಮಕ್ಕಳು ಹೆಗಲಿಗೆ ಬ್ಯಾಗು ಹಾಕಿಕೊಂಡು ಹೋದವರನ್ನೇ ನೋಡಲಿಲ್ಲ” ಎಂದಿದ್ರು. ಆದರೆ ನಾವು ಹೊರಟ ಸಮಯ ದಾರಿಯುದ್ದಕ್ಕೂ ಶಾಲಾ ಬಸ್ಸು, ಮಕ್ಕಳನ್ನೇ ನೋಡುತ್ತ ಸಾಗುವಂತಾಯಿತು. ಅಲ್ಲಲ್ಲಿ ಬಸ್ ನಿಲ್ಲಿಸಿದಾಗ ಕಾರನ್ನು ನಿಲ್ಲಿಸಬೇಕಿತ್ತು. ಅದನ್ನು ದಾಟಿ ಹೋದರೆ ದಂಡ ಖಚಿತ. ಶಾಲೆಯ ಮುಂದೆ ಸಾಗುವಾಗ ವಾಹನದ ವೇಗ ಹತ್ತು ಮೈಲಷ್ಟೇ. ಅಷ್ಟೂ ದಿನ ಕಾರಿನ ಹೊರಗೆ ನೋಡುತ್ತ ಹಸಿರು, ಅಲ್ಲಿನ ಸೌಂದರ್ಯ ಸವಿಯುತ್ತಿದ್ದವಳು ಒಳಗೆ ಕುಳಿತು ಚಡಪಡಿಸುವಂತಾಯಿತು.

ಅಂತೂ ಇಂತೂ ಒಂದು ಗಂಟೆಯ ಬಳಿಕ ಮುಖ್ಯ ರಸ್ತೆಗೆ ಬಂದೆವು ಎಂದು ಕೊಳ್ಳುತ್ತ ಐದಾರು ಮೈಲು ಸಾಗಿದ್ದೆವಷ್ಟೇ. ವಾಹನಗಳು ಹೇಗೆ ಸಾಲುಗಟ್ಟಿದ್ದವೆಂದರೆ ಒಂದು ಕಿ.ಮೀ ಸಾಗಲು ಬರೋಬ್ಬರಿ ಐವತ್ತು ನಿಮಿಷ. ಮಳೆ ಸ್ವಲ್ಪ ನಿಧಾನವಾಗಿ ಬೀಳುತ್ತಿತ್ತು. ನದಿ, ಕೆರೆ, ಬೆಟ್ಟ, ಗುಡ್ಡಗಳಿರುವ ವೂಸ್ಟರ್ ಸುಂದರ ತಾಣವೆಂದು ನೋಡಿದೊಡನೆ ತಿಳಿಯಿತು. ಸಂಜೀತನ ಕರೆ ಬರುತ್ತಲೇ ಇತ್ತು.‌.ಎಲ್ಲಿದ್ದೀರಾ? ಎಷ್ಟು ಹೊತ್ತಾಗುತ್ತೆ ಬರೋದು ಅಂತ. ‘ಅವನಿಗೇ ಲೋಕೆಷನ್ ಕಳಿಸಿದರೆ ಬೇಸರವಾಗುತ್ತೆ..ಬೇಡ’ ಎಂದುಕೊಂಡು ಇನ್ನೇನು ಬಂದೆವು ಎಂದು ಹೇಳುತ್ತಿದ್ದೆವು. ಒಂದು ಬಾರಿ, ” ಅಮ್ಮಾ.. ನಾನು ಈಗಷ್ಟೇ ಸ್ಟೇಜ್ ಮೇಲೆ ಹೋಗಿ ಸರ್ಟಿಫಿಕೇಟ್ ತಗೊಂಡಾಯ್ತು” ಎಂದು ಬಿಟ್ಟ. ನನಗೆ ಅಳು ಬರುವುದೊಂದು ಬಾಕಿ. ಗಡಿಯಾರ ನೋಡಿದರೆ ನಾಲ್ಕು ನಲವತ್ತು ತೋರಿಸುತ್ತಿತ್ತು.. ಕಾರ್ಯಕ್ರಮ ಐದೂವರೆಗೆ ನಾಲ್ಕೂವರೆಗೆ ಶುರುಮಾಡಿದ್ರಾ? ಎಂದೆ. ” ನೀವು ಇನ್ನೂ ಲೇಟಾದರೆ ಅದೂ ಆಗಿಬಿಡುತ್ತೆ. ನಾವಿನ್ನೇನು ಆಡಿಟೋರಿಯಂ ಒಳಗೆ ಹೋಗ್ತಾ ಇದ್ದೀವೆ..ಬೇಗ ಬನ್ರಮ್ಮ” ಎಂದಾಗ ಸಮಾಧಾನವಾಯ್ತು.

ಅಂತೂ ಇಂತೂ ಆ ಸಂಚಾರ ಸಿಕ್ಕಿನಿಂದ ಹೊರಬಂದದ್ದು ಉದ್ದವಾದ ಗುಂಗುರು ಕೂದಲಿನಲ್ಲಿನ ಸಿಕ್ಕು ಬಿಡಿಸಿದಂತೆ ಭಾಸವಾಯಿತು. ಕಾರನ್ನು ಸೂಚಿಸದ ಕಡೆ ಪಾರ್ಕ್ ಮಾಡಿ ಮಗ ಹೇಳಿದ ಗೇಟಿನ ಸಂಖ್ಯೆಯ ಮೂಲಕ ಹೋಗಿ ಒಳಗೆ ಕುಳಿತೆವು. ಮಗ ಮೊದಲೇ ಕಳುಹಿಸಿದ್ದ ಪಾಸ್ ತೋರಿಸಿದ ಮೇಲೆಯೇ ನಮ್ಮನ್ನು ಒಳಗೆ ಹೋಗಲು ಬಿಟ್ಟದ್ದು. ಒಳಗೆ ಹೋಗುವಷ್ಟರಲ್ಲಿ ವಿದ್ಯಾರ್ಥಿಗಳನ್ನು ಒಳಗೆ ಕೂರಿಸಲಾಗಿತ್ತು. ಒಳಗೆ ಉಳಿತ ನಂತರ ಕಣ್ಣಾಡಿಸಿದೆ. ಅದು ಒಳಾಂಗಣ ಕ್ರೀಡಾಂಗಣದಂತಿತ್ತು. ಮಧ್ಯದಲ್ಲಿ ವಿದ್ಯಾರ್ಥಿಗಳಿದ್ದರೆ ಮುಂಭಾಗದಲ್ಲಿ ವೇದಿಕೆಯಿತ್ತು. ಸುತ್ತ ಪೋಷಕರು,ಗಣ್ಯರು ಹಾಗೂ ಸ್ಥಳೀಯ ಆಹ್ವಾನಿತರು ಕಿಕ್ಕಿರಿದು ತುಂಬಿದ್ದರು.

ನಮ್ಮ ಕುಳಿತಿದ್ದ ಕಡೆ ಸೀರೆಯುಟ್ಟಿದ್ದ ಇಬ್ಬರು ಮಹಿಳೆಯರಿದ್ದರು. ಅದರಲ್ಲಿ ಒಬ್ಬಾಕೆ, ನನ್ನತ್ತ ಬಂದು ಮೆಲ್ಲನೆ ” ಮೇಡಂ ಜೀ.. ಆಪ್ ಇಂಡಿಯಾಸೆ ಆಯೆ ಹೇ ಕ್ಯಾ.‌ ಆಪ್ ಕೆ ಪಾಸ್..ಏಕ್ ಸೇಫ್ಟಿ ಪಿನ್ ಹೇ?” ಎಂದರು. ನಮ್ಮವರು ಕೇಳಿದರೆ ಇಲ್ಲ ಎನ್ನುವುದೇ ಎಂದು ಆಕೆಗೆ ಇದೆ ಎಂದು ಹೇಳಿದ್ದಲ್ಲದೆ ಆಕೆಯೊಂದಿಗೆ ವಾಶ್ ರೂಮಿನ ಕಡೆ ಹೋಗಿ ಸೀರೆ ಸರಿಪಡಿಸಿದೆ. ಆಕೆ ಗುಜರಾತಿನವರಂತೆ.. ತನ್ನ ಮಗಳ ಗ್ಯಾಜ್ಯೂಯೇಷನ್ ಡೇಗೆ ಬಂದಿದ್ದವರು.

ಶಿಷ್ಟಾಚಾರದಂತೆ ಕಾರ್ಯಕ್ರಮಗಳು ಶಿಸ್ತಿನಿಂದ ನಡೆದವು. ಡಾಕ್ಟರೇಟ್ ಪದವಿ ಬಳಿಕ ಸ್ನಾತಕೋತ್ತರ ಕೊನೆಯಲ್ಲಿ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಂಜೀತ್ ಹೆಸರು ಕರೆದಾಗ, ಅವನನ್ನು ಕಣ್ತುಂಬಿಕೊಂಡು ಫೋಟೋ ತೆಗೆದುಕೊಂಡೆವು. ಗೌರವಯುತವಾಗಿ ವಿದ್ಯಾರ್ಥಿಗಳನ್ನು ಒಳಕರೆದುಕೊಂಡು ಹೋದ ರೀತಿಯಲ್ಲೇ ಬ್ಯಾಂಡ್ ಸೆಟ್ ನೊಂದಿಗೆ ಹೊರಗೆ ಕಳುಹಿಸಿಕೊಡಲಾಯಿತು.

ಹೊರಬಂದ ಮಗನನ್ನು ಹುಡುಕುವುದೇ ಕಷ್ಟ. ಆ ಗೌನು ಹಾಕಿದ್ದ ವಿದ್ಯಾರ್ಥಿಗಳ ನಡುವೆ ಕಂಡೊಡನೆ ಅವನತ್ತ ಧಾವಿಸಿದೆವು. ಎಲ್ಲರ ಕಣ್ಣಲ್ಲೂ ಆನಂದ ಭಾಷ್ಪ ಜಿನುಗುತ್ತಿತ್ತು. ನಮ್ಮತ್ತ ಬಂದವ ಎಲ್ಲರನ್ನೂ ಬಿಗಿದಪ್ಪಿದ. ಅವನೊಡನೆ ಅವನ ಸಹಪಾಠಿಗಳು ನಮ್ಮ ಪಾದ ಸ್ಪರ್ಶಿಸಿ ನಮಸ್ಕರಿಸಿ,ಆಶೀರ್ವಾದ ಪಡೆದದ್ದು ಆಪ್ತವಾಗಿತ್ತು. ಅವನ ಸ್ನೇಹಿತನೊಬ್ಬನ ಚಿಕ್ಕಮ್ಮ ಚಿಕ್ಕಪ್ಪ ದೂರದೂರಿನಿಂದ ಬಂದಿದ್ದರೂ ಮಳೆಯ ಕಾರಣದಿಂದ ಲ್ಯಾಂಡಿಂಗ್ ತಡವಾಗಿ ಕಾರ್ಯಕ್ರಮಕ್ಕೆ ಬರಲಾಗದೆ ಬಾಸ್ಟನ್ ನಲ್ಲಿ ಇದ್ದರು. ಅವನ ಪ್ರೊಫೆಸರುಗಳನ್ನು ಪರಿಚಯಿಸಿದ. ಇಂಟರ್ನ್ಸ್‌ಶಿಪ್ ಮಾಡಿಸಿಕೊಟ್ಟಿದ್ದ ಹೆಚ್ ಆರ್ ವಿಭಾಗದ ಮುಖ್ಯಸ್ಥೆ ,’ ಹಿ ಸಿ ಎ ವೆರಿ ಡೀಸೆಂಟ್ ಗೈ ಅಂಡ್ ಹಾರ್ಡ್ ವರ್ಕಿಂಗ್. ಐ ಕೇಮ್ ಒನ್ಲೀ ಬಿಕಾಸ್ ಆಫ್ ಹಿಂ’ ಎಂದಾಗ ಅವನು ಅವರತ್ತ ಬೆರಗಿನಿಂದ ಕಣ್ಣರಳಿಸಿದ್ದ.

ಇದರ ನಡುವೆ ವಿನೀತ್‌ನ ಗ್ರಾಜ್ಯೂಯೇಷನ್ ಡೇಗೆ ಹೋಗದೆ ಅವನಿಗೆ ಮನಸ್ಸಿನಲ್ಲಿ ನೋವಿರಬಹುದು ಎನಿಸಿತು..ನಮಗೂ ನೋವಿತ್ತು. ಅವನಿಗಷ್ಟೇ ಕೇಳುವಂತೆ, ” ಸಾರಿ ಮಗನೆ.. ನಿನ್ನ ಗ್ರಾಜ್ಯೂಯೇಷನ್ ಡೇ ಮಿಸ್ ಮಾಡಿದ್ವಿ” ಎಂದೆ. “ಅಮ್ಮಾ.. ಅದಕ್ಯಾಕೆ ಸಾರಿ. ನಾನು ನಿಮ್ಮ ಮಗ. ನಿಮ್ಮಿಂದಲೇ ಅಲ್ವಾ.. ನಾನಿದ್ದ ಕಡೆ ನೀವು ಇದ್ದೇ ಇರ‌್ತೀರಿ. ಹಾಗೆಲ್ಲ ಹೇಳಬಾರದು” ಎಂದಾಗ ಮನ ತುಂಬಿ ಬಂದಿತು.

ಮಗನೊಡನೆ ಅವನ ಸ್ನೇಹಿತರ ಹಲವು ಫೋಟೋ ತೆಗೆದುಕೊಟ್ಟು ಬಳಿಕ ನಾವುಗಳೂ ತೆಗೆದುಕೊಂಡೆವು. ದಕ್ಷಿಣ ಭಾರತದೆಲ್ಲೆಡೆ ಇರುವ ‘ಆನಂದ್ ಭವನ್’ ಹೊಸದಾಗಿ ಪ್ರಾರಂಭವಾಗಿತ್ತು. ಆ ದಿನ ವಿಶೇಷ ವ್ಯಕ್ತಿಯೊಬ್ಬರು ನಮ್ಮೊಂದಿಗೆ ಬಂದದ್ದು ಸಂತಸವನ್ನು ಹೆಚ್ಚಿಸಿತ್ತು. ಅಲ್ಲಿಗೆ ಹೋಗಿ ಭೂರಿ ಭೋಜನ ಮಾಡಿದೆವು. ಅದಾದ ಬಳಿಕ ಮಗ ಕಾರಿನಲ್ಲೇ ವೂಸ್ಟರ್‌ ತಿರುಗಾಡಿಸಿ ಅವನಿತ್ತ ಮನೆ, ತನ್ನ ರೂಮು ತೋರಿಸಿದ. ಕಾಲೇಜಿನಿಂದ ಮೂರ್ನಾಲ್ಕು ನಿಮಿಷಗಳ ನಡಿಗೆ ಅಷ್ಟೇ. ‘ಅಮ್ಮಾ ಇಲ್ಲೇ ನೂಡಲ್ಸ್ ತಿಂತಾ ಇದ್ದೆ, ಇಲ್ಲಿ ಟಾಕೋಬೆಲ್, ಇಲ್ಲಿ ಪಿಜ್ಜಾ’ ಅಂತೆಲ್ಲ ಅವನು ಓಡಾಡಿದ ತಾಣಗಳನ್ನು ತೋರಿಸಿದ. ಕಾಲೇಜಿನಿಂದ “ನಿನಗೆ ವಿಡಿಯೋ ಕಾಲ್ ಮಾಡಿದಾಗ ಬರುತ್ತಿದ್ದ ರಸ್ತೆ ಇದೇ ನೋಡಮ್ಮ” ಎಂದು ಹೇಳುತ್ತ ನಮಗೆ ಪರಿಚಯಿಸಿದ. ವಿನೀತ್ ತಮ್ಮನಿಗಾಗಿ ಕಾಲೇಜಿನ ಸಮೀಪವೇ ರೂಮು ಹುಡುಕಿಕೊಟ್ಟಿದ್ದ. ತಡರಾತ್ರಿಯಾದರೆ ಕಾಲೇಜಿನ ವಾಹನವೇ ಅವರ ವಾಸಸ್ಥಳಕ್ಕೆ ಬಿಡುವ ವ್ಯವಸ್ಥೆ ಅಲ್ಲಿತ್ತು.

ರಾತ್ರಿ ಹತ್ತು ಗಂಟೆಯಾಗಿತ್ತು..ಹೊರಗೆ ನೋಡಿದರೆ ಸಾಕು. ಒಳಗಡೆ ಯಾಕೆ? ಎಂದೆ. ಅವನೋ ತನ್ನ ಕಾಲೇಜು ತೋರಿಸಲು ಫಣ ತೊಟ್ಟಂತಿತ್ತು. ‘ಅಮ್ಮಾ..ನಾನು ರಾತ್ರಿ ಎರಡು ಗಂಟೆವರೆಗೆ ಇರ‌್ತಿದ್ದೆ. ಈಗ ಅಂತ ಟೈಮೇನಾಗಿದೆ. ಬನ್ರಮ್ಮಾ..’ ಎಂದ. ಕಟ್ಟಡ ಹೊರಗಿನಿಂದ ನೋಡಲು ಸಾಮಾನ್ಯ ಎನಿಸುವಂತಿತ್ತು.

ಲಿಫ್ಟ್ ನಲ್ಲಿ ಐದನೇ ಮಹಡಿಗೆ ಕರೆದೊಯ್ದು ಅಲ್ಲಿಂದ ಬೆಟ್ಟದ ಮೇಲ್ಭಾಗಕ್ಕೆ ಹೋದೆವು. ಅಬ್ಬಾ..ಅವನ ವಿಶ್ವವಿದ್ಯಾಲಯದ ಪ್ರಮುಖ ಕಟ್ಟಡ ಇರುವುದೇ ಬೆಟ್ಟದ ಮೇಲೆ. ಇಡೀ ಬೆಟ್ಟವನ್ನು ಅಲ್ಲಲ್ಲಿ ಸಮದಟ್ಟು ಮಾಡಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಅಷ್ಟು ವಿಶಾಲವಾದ ಜಾಗ ಇದೆ ಎಂದು ಕೆಳಗಿನಿಂದ ಕಾಣಿಸುವುದೇ ಇಲ್ಲ. ತನ್ನ ತರಗತಿ ಕೋಣೆಗಳು, ಲೈಬ್ರರಿ, ಜಿಮ್, ರೀಡಿಂಗ್ ರೂಂ, ಗೇಮ್ ಯಾರ್ಡ್ ಎಲ್ಲ ಕಡೆ ಓಡಾಡಿಸಿದ. ಕೆಲವು ಪಾರಂಪರಿಕ ಕಟ್ಟಡಗಳು ಆಕರ್ಷಕವಾಗಿದ್ದವು. ಸುಂದರ ಪರಿಸರ, ಎಲ್ಲಾ ಅನುಕೂಲತೆಗಳಿರುವ ವಿಶ್ವವಿದ್ಯಾಲಯವದು. ತಡರಾತ್ರಿಯಾಯಿತು ಹೋಗೋಣವೆಂದರೂ ಬಿಡದೆ ಎಲ್ಲ ಕಡೆ ತೋರಿಸಿದ ಬಳಿಕವೇ ಕೆಳಗೆ ಇಳಿಸಿಕೊಂಡು ಬಂದದ್ದು. ಬರುವಾಗ ಬ್ರಿಡ್ಜ್ ಕೂಡ ನೋಡಿದೆವು.
ಬಾಸ್ಟನ್ ಕಡೆ ಮುಖ ಮಾಡಿದಾಗ ರಾತ್ರಿ ಹನ್ನೆರಡು ಗಂಟೆ ದಾಟಿತ್ತು. ಅಷ್ಟು ಓಡಾಡಿದರೂ ದಿನದ ಮಹತ್ವದಿಂದಾಗಿ ಕಿಂಚಿತ್ತು ಆಯಾಸ ಎನಿಸಲಿಲ್ಲ. ಹಿಂದಿರುಗುವಾಗ ಮಾರ್ಗಮಧ್ಯದಲ್ಲಿ ಬಹಳಷ್ಟು ಕಡೆ ಕಾಮಗಾರಿ ನಡೆಯುತ್ತಿದ್ದದ್ದು ಕಾಣಿಸಿತು. ಹಗಲಿನಲ್ಲಿ ಹೆಚ್ಚು ಕೆಲಸ ನಡೆಯುತ್ತಿದ್ದರಿಂದ ಪಥ ಬದಲಿಸಿದ್ದರು. ನಾಲ್ವರೂ ಮಾತನಾಡುತ್ತಲೇ ಇದ್ದಿದ್ದರಿಂದ ಬಾಸ್ಟನ್ ಬೇಗ ತಲುಪಿದೆವು ಎನಿಸಿತು.

ಮುಂದುವರೆಯುವುದು..

ಹಿಂದಿನ ಸಂಚಿಕೆಗಳು :


  • ಕಮಲಾಕ್ಷಿ ಸಿ ಆರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW