ಕೆನರಾಬ್ಯಾಂಕ್ ನ ಸಂಸ್ಥಾಪಕ ಅಮ್ಮೆಂಬಳ್ ಸುಬ್ಬರಾವ್ ಪೈರವರ ಜನ್ಮದಿನ



ನವೆಂಬರ್ ೧೯ ಪ್ರಸಿದ್ದ ನ್ಯಾಯವಾದಿ, ಶಿಕ್ಷಣ ತಜ್ಞ, ಹಾಗೂ ಕೆನರಾಬ್ಯಾಂಕ್ ಮತ್ತು ಕೆನರಾ ಸ್ಕೂಲಿನ ಸಂಸ್ಥಾಪಕರಾದ ದಿವಂಗತ ಅಮ್ಮೆಂಬಳ್ ಸುಬ್ಬರಾವ್ ಪೈ ರವರ ಜನ್ಮದಿನ.ಅವರ ಸಾಧನೆಯ ಕುರಿತು ಲೇಖಕರಾದ ಶಿವಕುಮಾರ್ ಬಾಣಾವರ ಅವರು ಓದುಗರಿಗೆ ತಿಳಿಸಿ ಕೊಟ್ಟಿದ್ದಾರೆ. ಓದಿ… 

೧೮೫೨ ನವೆಂಬರ್ ೧೯ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಶ್ರೀ ಉಪೇಂದ್ರ ಪೈರವರ ಮಗನಾಗಿ ಜನಿಸಿದರು. ಉನ್ನತ ವ್ಯಾಸಂಗವನ್ನು ಮುಗಿಸಿ ಮದ್ರಾಸಿನಿಂದ ತಾಯ್ನಾಡಿಗೆ ಮರಳಿದ ಶ್ರೀ ಪೈ ರವರು ವಕೀಲಿ ವೃತ್ತಿಯನ್ನು ಆರಂಭಿಸಿದರು. ಮೊದಲಿನಿಂದಲೂ ನ್ಯಾಯಸಮ್ಮತವಾದ ಮೊಕದ್ದಮೆಯನ್ನೇ ಸ್ವೀಕರಿಸುವ ಪರಿಪಾಠವನ್ನು ಮಾಡಿಕೊಂಡಿದ್ದ ಶ್ರೀ ಪೈರವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇವರಿಗೆ ಕಾನೂನಿನ ವಿಷಯದಲ್ಲಿ ಇದ್ದ ಆಳವಾದ ಜ್ಞಾನ ಹಾಗೂ ವಾಕ್ ಚಾತುರ್ಯತೆ ಇವರನ್ನು ಅತಿ ಕಡಿಮೆ ಅವಧಿಯಲ್ಲಿ ಯಶಸ್ವಿ ನ್ಯಾಯವಾದಿಯನ್ನಾಗಿಸಿತು. ಅಂದಿನಕಾಲದಲ್ಲೇ ಅವರು ಏನಿಲ್ಲವೆಂದರೂ ತಿಂಗಳಿಗೆ ರೂ.೧,೫೦೦ ರಿಂದ ೨,೦೦೦ ರವರೆಗೆ ಸಂಪಾದಿಸುತ್ತಿದ್ದರು. ಈ ಹಣಗಳಿಕೆ ಇವರಿಗೆ ಯಾವ ತೃಪ್ತಿಯನ್ನೂ ನೀಡಲಿಲ್ಲ. ಇವರಿಗೆ ತಮ್ಮ ವೈಯುಕ್ತಿಕ ಲಾಭಕ್ಕಿಂತ, ಕಡುಬಡತನದಿಂದ ಬೇಯುತ್ತಿರುವ ಜನಸಾಮಾನ್ಯರು, ಅವರ ಹೀನಾಯ ಆರ್ಥಿಕ ಪರಿಸ್ಥಿತಿ, ಶಿಕ್ಷಣ ವಂಚಿತ ಹೆಣ್ಣು ಮಕ್ಕಳ ದುಸ್ಥಿತಿ ಇವರನ್ನು ಹೆಚ್ಚು ಕಾಡತೊಡಗಿದವು.

ಮನಸ್ಸಿನಂತೆ ಮಾತು, ಮಾತಿನಂತೆ ಕ್ರಿಯೆ ಎಂಬ ನುಡಿಯೇ ಮೈವೆತ್ತಿದಂತಿದ್ದ ಶ್ರೀ ಪೈರವರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸದುದ್ದೇಶದಿಂದ ಹೈಸ್ಕೂಲ್ ತೆರೆಯಲು ಮುಂದಾದರು. ಬಾಲ್ಯವಿವಾಹ ಪದ್ದತಿ ಹೆಚ್ಚು ಪ್ರಚಲಿತವಾಗಿದ್ದ ಆ ದಿನಗಳಲ್ಲಿ, ಹೆಣ್ಣಿನ ಸ್ಥಾನವು ಗಂಡನ ಮನೆಯಲ್ಲೇ ವಿನ: ಶಾಲೆಯಲ್ಲಲ್ಲ ಎಂದು ಭಾವಿಸಿದ್ದ ಊರಿನ ಜನತೆಯಿಂದ ನಿರೀಕ್ಷಿತ ಸಹಕಾರ ಸಿಗಲಿಲ್ಲ. ಆದರೆ ಪೈರವರು ಧೃತಿಗೆಡಲಿಲ್ಲ. ’ಒಂದು ಹಿಡಿ ಅಕ್ಕಿ ಉಳಿಸಿ, ಶಾಲೆ ಬೆಳಸಿ’ ಎಂಬ ವಿನೂತನ ಮಾದರಿಯ ಯೋಜನೆಯೊಂದನ್ನು ಜಾರಿಗೆ ತಂದರು. ಗೃಹಿಣಿಯರು ತಾವು ದಿನಂಪ್ರತಿ ಉಪಯೋಗಿಸುವ ಅಕ್ಕಿಯಲ್ಲಿ ಒಂದು ಹಿಡಿ ಅಕ್ಕಿಯನ್ನು ಪ್ರತ್ಯೇಕವಾಗಿ ತೆಗದಿಟ್ಟು, ನಿಗದಿತ ದಿನಗಳಲ್ಲಿ ಶಾಲೆಗೆ ನೀಡಲು ಕರೆಯಿತ್ತರು. ಈ ರೀತಿ ಸಂಗ್ರಹಿಸಿದ ಅಕ್ಕಿಯನ್ನು ಮಾರಿ ಬಂದ ಹಣದಿಂದ ಶಾಲೆಯ ಖರ್ಚುನ್ನು ಸರಿದೂಗಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಈ ಯೋಜನೆಯು ಅದ್ಭುತ ಯಶಸ್ಸನ್ನು ಕಂಡಿತು. ಈ ರೀತಿ ಹಮ್ಮಿಕೊಂಡಿದ್ದ ಹಲವಾರು ಯೋಜನೆಗಳ ಯಶಸ್ಸಿನಿಂದ ಪ್ರಭಾವಿತರಾದ ಶ್ರೀ ಪೈರವರು ಬ್ಯಾಂಕ್ ಒಂದನ್ನು ಸ್ಥಾಪಿಸುವ ಒಲವು ತೋರಿದರು.

೨೦ ನೇ ಶತಮಾನದ ಆದಿಯಲ್ಲಿ ಮಂಗಳೂರು ಪ್ರಾಂತ್ಯದಲ್ಲಿ ಹಣಕಾಸು ವ್ಯವಹರಿಸಲು ಈಗ ಇರುವಂತೆ ಯಾವುದೇ ಸೂಕ್ತ ಬ್ಯಾಂಕಿಂಗ್ ವ್ಯವಸ್ಥೆಗಳಿರಲಿಲ್ಲ. ಇದ್ದ ಬೆರಳಣಿಕೆ ಹಣಕಾಸಿನ ಸಂಸ್ಥೆಗಳಲ್ಲಿ ಜನ ಸಾಮಾನ್ಯರು ವ್ಯವಹರಿಸಲು ಸಾಧ್ಯವಾಗುತ್ತಿರಲಿಲ್ಲ. ಜನಸಾಮಾನ್ಯರು ತಮ್ಮ ಮಕ್ಕಳ ಭವಿಷ್ಯಕ್ಕೆ ಹಣದ ಉಳಿತಾಯ ಮಾಡಲು ನಗರ ಪ್ರದೇಶದಲ್ಲಿದ್ದ ಪಟ್ಟಣಶೆಟ್ಟಿ ಎಂಬ ಶ್ರೀಮಂತ ವರ್ಗದವರನ್ನು ಆಶ್ರಯಿಸಬೇಕಿತ್ತು. ಈ ವ್ಯವಸ್ಥೆಯಡಿ ಮಗುವು ಜನಿಸಿದಾಕ್ಷಣ ಅದರ ಹೆಸರಿನಲ್ಲಿ ಸ್ವಲ್ಪ ಹಣವನ್ನು ಈ ವ್ಯಕ್ತಿಗಳ ಬಳಿ ತೊಡಗಿಸಿ, ೧೮ ವರ್ಷದ ನಂತರ ಈ ಹಣವನ್ನು ಹಿಂತೆಗೆದುಕೊಳ್ಳುವ ಪದ್ದತಿ ಇತ್ತು. ಈ ರೀತಿ ತೊಡಗಿಸಿದ ಹಣಕ್ಕೆ ಯಾವುದೇ ಸ್ವೀಕೃತಿ ಪತ್ರ ವಾಗಲೀ ಅಥವಾ ಬಡ್ಡಿಯಾಗಲೀ ದೊರೆಯುತ್ತಿರುತ್ತಿರಲಿಲ್ಲ. ೧೮ ವರ್ಷದ ದೀರ್ಘಾವಧಿಯ ಅವಧಿಯ ನಂತರ ತೊಡಗಿಸಿದ ಹಣ ವಾಪಸ್ ಸಿಗುವುದೆಂಬ ಭರವಸೆಯೂ ಇರುತ್ತಿರಲಿಲ್ಲ. ಬ್ಯಾಂಕಿಂಗ್ ಸೌಲಭ್ಯ ವಂಚಿತರ ಈ ಕಷ್ಟ ಕಾರ್ಪಣ್ಯಗಳನ್ನು ಮನಗಂಡ ಶ್ರೀ ಪೈ ರವರು ಶ್ರೀ ಸಾಮಾನ್ಯರಿಗೆ ಬ್ಯಾಂಕಿಂಗ್ ಸೇವೆಯನ್ನು ಪರಿಚಯಿಸಲು ೧೯೦೬ ರಲ್ಲಿ ‘ಕೆನರಾ ಹಿಂದೂ ಶಾಶ್ವತ ನಿಧಿ ನಿಯಮಿತ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

೧೯೧೦ರಲ್ಲಿ ಕೆನರಾಬ್ಯಾಂಕ್ ಲಿಮಿಟೆಡ್ ಎಂದು ಈ ಸಂಸ್ಥೆಯ ಹೆಸರನ್ನು ಬದಲಾಯಿಸಲಾಯಿತು. ೧೯೬೯ ಜುಲೈ ೧೯ ರಂದು ಕೆನರಾ ಬ್ಯಾಂಕ್ ಅನ್ನು ರಾಷ್ಟ್ರೀಕೃತಗೊಳಿಸಲಾಯಿತು. ಉಳಿತಾಯ ಪ್ರವೃತ್ತಿಯನ್ನು ಬೆಳೆಸುವುದು. ಬ್ಯಾಂಕುಗಳು ಕೇವಲ ಹಣಕಾಸಿನ ಹೃದಯ ಮಾತ್ರವಾಗಿರದೆ, ಮಾನವೀಯ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುವುದು, ಸೇವಾ ಮನೋಭಾವದೊಡನೆ ದುಡಿಯುವ ಪ್ರವೃತ್ತಿಯನ್ನು ಬೆಳಸಿಕೊಂಡು, ಅವಶ್ಯಕತೆ ಇರುವವರಿಗೆ ಸಹಾಯ ಹಸ್ತ ನೀಡುವುದು ಮುಂತಾದ ಉದಾತ್ತ ಧೇಯೋದ್ದೇಶಗಳೊಂದಿಗೆ ಪ್ರಾರಂಭವಾದ ಈ ಸಂಸ್ಥೆಯು ಇಂದು ‘ಕೆನರಾ ಬ್ಯಾಂಕ್’ ಎಂಬ ಹೆಸರಿನಲ್ಲಿ ಬೃಹದಾಕಾರವಾಗಿ ಬೆಳೆದು ವಿಶ್ವದ ಅತ್ಯಂತ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿ ಅಭಿವೃದ್ಧಿ ಹೊಂದಿದೆ ಮತ್ತು ಕರ್ನಾಟಕ ತಳಹದಿಯ ಏಕೈಕ ರಾಷ್ಟ್ರೀಕೃತ ಬ್ಯಾಂಕ್ ಆಗಿದೆ.

ಫೋಟೋ ಕೃಪೆ : wikipedia

ಸಂಸ್ಥಾಪನ ದಿನದಂದು ಅಂದರೆ ಜುಲೈ ೧,೧೯೦೬ ರಲ್ಲಿ ಒಂದು ಶಾಖೆಯಿಂದ ಪ್ರಾರಂಭವಾದ ಕೆನರಾ ಬ್ಯಾಂಕ್ ಸಂಸ್ಥಾಪನ ದಿನದಂದು ಒಂದು ಶಾಖೆಯಿಂದ ಪ್ರಾರಂಭವಾದ ಕೆನರಾ ಬ್ಯಾಂಕ್ ೨೦೨೦ ಸೆಪ್ಟೆಂಬರ್ ೩೦ ರ ಅಂತ್ಯಕ್ಕೆ ವಿಶ್ವಾದ್ಯಂತ ೧೦೫೦೦ ಶಾಖೆಗಳು ಹಾಗೂ ೧೩೦೨೩ ಎ ಟಿ ಎಂ ಗಳನ್ನು ಹೊಂದಿದೆ. ರೂ. ೧೫.೯೭ ಲಕ್ಷ ಕೋಟಿ ಒಟ್ಟಾರೆ ಜಾಗತಿಕ ವ್ಯವಹಾರವನ್ನು ಹೊಂದಿದೆ.



ಜಾಗತಿಕ ಮಟ್ಟದಲ್ಲಿ ಬೆಳೆದಿದ್ದರೂ, ಸಂಸ್ಥಾಪಕರ ಆಶಯದಂತೆ, ಜವಾಬ್ದಾರಿ ಕಾರ್ಪೊರೇಟ್ ಸಾಮಾಜಿಕ ಪ್ರಜೆಯಾಗಿ ಬ್ಯಾಂಕ್ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯತ್ತ ಯುಕ್ತ ಗಮನ ನೀಡುತ್ತಿದೆ. ಗ್ರಾಮೀಣ ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಸ್ವ ಉದ್ಯೋಗ ಚಟುವಟಿಕೆಗಳನ್ನು ಪ್ರೇರೇಪಿಸಲು ಬ್ಯಾಂಕ್ ತನ್ನ ‘ಕೆನರಾ ಬ್ಯಾಂಕ್ ಶತಮಾನೋತ್ಸವ ಗ್ರಾಮೀಣ ಅಭಿವೃದ್ಧಿ ದತ್ತಿ’ ಮೂಲಕ ಗ್ರಾಮೀಣ ಅಭಿವೃದ್ದಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿ, ಲಕ್ಷಾಂತರ ನಿರುದ್ಯೋಗಿ ಯುವಜನರಿಗೆ ತರಬೇತಿ ನೀಡಿದೆ. ಇಲ್ಲಿ ಶಿಕ್ಷಣ ಪಡೆದ ಯುವಕ-ಯುವತಿಯರು ಸ್ವಂತ ಉದ್ಯೋಗವನ್ನು ಸ್ಥಾಪಿಸಿ, ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ. ಡಿಜಟಲೀಕರಣ, ಸಾಂಸ್ಥಿಕ ಸಾಮಾಜಿಕ ಕಳಕಳಿ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಇತ್ಯಾದಿ ಕಾರ್ಯಕ್ಷೇತ್ರದಲ್ಲಿ ಬ್ಯಾಂಕ್ ಸಲ್ಲಿಸಿರುವ ಸೇವೆಗಾಗಿ ಹಲವಾರು ಪ್ರಶಸ್ತಿ ಮತ್ತು ಪುರಸ್ಕಾರಗಳು ದೊರೆತಿವೆ.

ಶ್ರೀ ಪೈರವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ತತ್ವಗಳಿಗೆ ಬದ್ದರಾಗಿ ಜೀವನವನ್ನು ಇತರರಿಗೆ ಮಾದರಿಯಾಗಿ ನಡೆಸಿದಂತವರು. ಈ ಕರ್ಮಯೋಗಿಯ ಜನ್ಮದಿನವಾದ ನವೆಂಬರ್ ೧೯, ೨೦೨೦ ರಂದು ೧೧೫ ವಸಂತಗಳನ್ನು ಕಂಡ ಕೆನರಾ ಬ್ಯಾಂಕ್ ತನ್ನ ಕಚೇರಿ ಮತ್ತು ಶಾಖೆಗಳಲ್ಲಿ ವಿಜೃಂಬಣೆಯಿಂದ ಜನ್ಮಾದಿನಾಚರಣೆಯನ್ನು ಆಚರಿಸುವುದರ ಮೂಲಕ ತನ್ನ ಶ್ರದ್ಧಾಪೂರ್ವಕ ನಮಗಳನ್ನು ಸಲ್ಲಿಸಲಿದೆ.


  • ಶಿವಕುಮಾರ್ ಬಾಣಾವರ (ನಿವೃತ್ತ, ಕಾರ್ಯಪಾಲಕ ಇಂಜೀನಿಯರ್ – ಕೆ. ಪಿ.ಸಿ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW