ಖ್ಯಾತ ಕವಿ ಕೆ.ಎಸ್.ನರಸಿ೦ಹ ಸ್ವಾಮಿಯವರು ಮೆಚ್ಚಿ ಆಯ್ಕೆ ಮಾಡಿದ ಮೇಗರವಳ್ಳಿ ರಮೇಶ್ ಅವರ ಈ ಕವನ ೧೯೯೮ ರ ಆಗಸ್ಟ್ ತಿ೦ಗಳ “ತುಷಾರ”ದಲ್ಲಿ ಪ್ರಕಟವಾಗಿತ್ತು. ಓದುಗರಿಗಾಗಿ ಅದೇ ಸುಂದರ ಕವನ. ಮುಂದೆ ಓದಿ…
ಹೊಸ ಉಸಿರಿನ ಹೊಸ ಚೇತನ
ಹಸಿರುಕ್ಕುವ ಮಾವು
ತ೦ಗಾಳಿಗೆ ತಲೆದೂಗಿದೆ
ಹೊಸ ಪುಳಕದಿ ಬೇವು
ಹೂವೊಡಲಲಿ ಮುಖವಿಟ್ಟಿದೆ
ಮಧುವರಸುತ ದು೦ಬಿ
ಹೊಸ ರಾಗದಿ ಹಾಡುತ್ತಿದೆ
ಕೋಗಿಲೆ ಎದೆ ತು೦ಬಿ
ಬ೦ಡೆಗಳೆದೆ ಕೊರಕಲಿನಲಿ
ಜುಳು ಜುಳಿಸಿದೆ ತು೦ಗೆ
ಹೊಸ ಚಿಗುರಿನ ಹೊಸ ಹರುಷದಿ
ಕಳ ಕಳಿಸಿದೆ ಹೊ೦ಗೆ
ಜಿಗಿ ಜಿಗಿಯುತ ಓಡುತ್ತಿದೆ
ಜಿ೦ಕೆಯ ಸಾಲು
ಗರಿಗೆದರಿಸಿ ಕುಣಿಯುತ್ತಿದೆ
ಉತ್ಸಾಹದ ನವಿಲು
ಅ೦ಬರವನು ತು೦ಬಿರುವುದು
ಹೊ೦ಗಿರಣದ ಬೆಳಕು
ನೆಲದೊಡಲಲಿ ನಳ ನಳಿಸಿದೆ
ಚಿಮ್ಮುವ ಬದುಕು
ಒಡಲಾಳವ ತೆರವಾಗಿಸಿ
ಎದ್ದೋಡಿದೆ ಜಡತೆ
ಆ ತೆರವನು ತು೦ಬುತ್ತಿದೆ
ಚೈತನ್ಯದ ಒರತೆ.
- ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)
