ಬದುಕು ಇರುವುದು ನಾಲ್ಕೇ ದಿನ… ಇಲ್ಲಿ ಹಠ, ಸಿಟ್ಟು ಇಟ್ಟುಕೊಂಡು ಬದುಕಿದರೆ ಯಾರ್ ಯಾರು ಸುಖವಾಗಿ ಬಾಳಲಾರರು…ಸಮಯಕ್ಕೆ ತಕ್ಕಂತೆ ಹೊಂದಾಣಿಕೆ ಅತ್ಯಗತ್ಯ… ಎನ್ನುವ ಕತೆಯ ಎಳೆಯನ್ನು ಇಟ್ಟುಕೊಂಡು ಬರೆದಂತಹ ಕತೆಯಿದು. ತಪ್ಪದೆ ಮುಂದೆ ಓದಿ.ನಿಮ್ಮ ಅಭಿಪ್ರಾಯ ನನ್ನ ಇನ್ನೊಂದು ಕತೆಗೆ ಸ್ಪೂರ್ತಿಯಾಗುತ್ತದೆ..
ನಿಂಗವ್ವ ಬುತ್ತಿ ಗಂಟು ತಲೆ ಮೇಲೆ ಇಟ್ಟುಕೊಂಡು ಇನ್ನೇನು ಹೊಲದ ದಾರಿ ಹಿಡಿಯಬೇಕು ಅನ್ನೋಷ್ಟತ್ತಿಗೆ ಎದುರಿಗೆ ನಿಂಗವ್ವನ ಮಗ ಆನಂದನ ಶಾಲೆಯ ಮಾಸ್ತರ್ ಎದುರಿಗೆ ಬಂದರು.
“ಏನವ್ವ ನಿಂಗವ್ವ… ಹೊಲಕ್ಕ್ ಹೊಂಟಿ ಏನ್, ಆರಾಮ ಹೌದಲ್ಲ”… ಅಂದಾಕ್ಷಣ ನಿಂಗವ್ವ ಉಸಿರು ಹಾಕುತ್ತಾ
“ಹೌದುರ್ರೀ ಮಾಸ್ತರ್ … ಹೊಲದ ಕಡಿಗೆ ಹೊಂಟೇನಿ. ಎಲ್ಲಾ ಆರಾಮ ನೋಡ್ರಿ”. ನಗುತ್ತ ಉತ್ತರಿಸಿದಳು ನಿಂಗವ್ವ.
“ಆನಂದ ಸಾಲ್ಯಾಗ ಫಸ್ಟ್ ಬಂದಾನ. ಏನಾದ್ರೂ ಸಿಹಿ ಮಾಡಿ ತಿನಸು, ಬಾಳ ಶಾಣ್ಯಾ ಇದ್ದಾನ, ಅವನನ್ನ ಚಂದಾಕ್ಕೆ ಓದ್ಸು” ಎಂದು ಮಾಸ್ತರ್ ನಿಂಗವ್ವನಿಗೆ ಹೇಳಿದರು.
ನಿಂಗವ್ವ ಓದು, ಬರಹ ಕಲಿತವಳಲ್ಲ. ಹಾಗಾಗಿ ಓದಿನ ಬಗ್ಗೆ ಕಿಂಚಿತ್ತೂ ಆಸಕ್ತಿಯೇ ಇರಲಿಲ್ಲ. ಓದಿಲ್ಲದವರೇ ದೇಶ ಅಳ್ತಾರೆ ಇನ್ನೂ ನನ್ನ ಮಗ ಓದಿ ಯಾರದೋ ಕೈಯಲ್ಲಿ ಗುಲಾಮಗಿರಿ ಯಾಕ್ ಮಾಡಬೇಕು. ಇರೋ ಒಂದು ಎಕರೆ ಜಮೀನಿನಲ್ಲಿ ದುಡ್ಕೊಂಡು ರಾಜನ ತರ ಬದುಕಲಿ ಅನ್ನೋದು ಅವಳ ಆಸೆಯಾಗಿತ್ತು. ಹಾಗಾಗಿ ಮಾಸ್ತರ್ ಮಾತು ಆಕೆಗೆ ಸರಿ ಬರಲಿಲ್ಲ, ಜೊತೆಗೆ ಈ ಮಾಸ್ತರ್, ಆನಂದನಿಗೆ ಓದೋ ಹುಚ್ಚು ಎಲ್ಲಿ ಹಿಡಿಸ್ತಾನೋ ಅನ್ನೋ ಭಯ,ಅದಕ್ಕೆ ‘ ಇಲ್ಲರ್ರೀ ಮಾಸ್ತರ್… ನನಗಾದ್ರೂ ನನ್ನವರು ಅಂತ ಯಾರಿದ್ದಾರಾ?… ಆನ್ಯಾನ ಅಪ್ಪ ಕುಡುದ್ ಕುಡುದ್… ನಮ್ಮನ್ನ ನಡು ದಾರಿಯಾಗ ಬಿಟ್ಟು ಹೋದ. ಇನ್ನ ಆನ್ಯಾನೂ ಓದಿ ಊರು ಬಿಟ್ಟಿ ಹೋದ್ರ ನಂಗ್ಯಾರ ಇದ್ದಾರಾ… ಅವ್ ತಿಳಿದಷ್ಟು ಇದ ಊರಾಗ ಓದ್ಲಿ. ಮುಂದ ನನ್ನ ಜಮೀನ್ಯಾಗ್ ನಾನು, ಅವ ದುಡ್ಕೊಂತ್ ನಕ್ಕೊಂತ ಬಾಳತೀವಿ;… ಎಂದು ಮಾಸ್ತರ್ ಗೆ ಕಡ್ಡಿ ಮುರಿದಂತೆ ನೇರವಾಗಿ ಹೇಳಿದಳು.
ಅವಳ ಮಾತು ಕೇಳಿ ಮಾಸ್ತರ್ ಗೆ ಮಾತುಗಳೇ ಬರಲಿಲ್ಲ. ನಿಂಗವ್ವನ ಮಾತು ಕೇಳಿದ್ರೆ ಆನಂದನ ಭವಿಷ್ಯ ನುಚ್ಚು ನೂರು ಮಾಡ್ತಾಳೆ ಅನ್ನೋದು ಖಾತ್ರಿ ಅಂತೂ ಆಯಿತು. ಹೇಗಾದ್ರೂ ಮಾಡಿ ಆನಂದನನ್ನು ಚಂದಾಗಿ ಓದೋ ಹಾಗೆ ಮಾಡಬೇಕು ಎಂದು ಯೋಚಿಸುತ್ತಾ, ನಿಂಗವ್ವನಿಗೆ ಬುದ್ದಿ ಹೇಳೋ ವ್ಯರ್ಥ ಪ್ರಯತ್ನ ಮಾಡಲಿಲ್ಲ ‘ ಸರಿ ಬರ್ತಿನವ್ವ’… ಎಂದು ಹೇಳಿ ಮಾಸ್ತರ್ ತನ್ನ ಸೈಕಲ್ ಏರಿ ಅಲ್ಲಿಂದ ಹೊರಟು ಹೋದ. ನಿಂಗವ್ವ ಮೊದಲೇ ಘಾಟಿ ಹೆಂಗಸು. ಯಾರ ಮಾತು ಕೇಳುವಳಲ್ಲ…ಹಾಗೆ ಬಿಟ್ಟರೆ ಆನಂದನ ಭವಿಷ್ಯ ಹಾಳಾಗುತ್ತದೆ ಎನ್ನುವ ಚಿಂತೆ ಮಾಸ್ತರ್ ಗೆ ಹತ್ತಿತು.
ಮಾಸ್ತರ್ ಒಂದು ದಿನ ಸಮಯ ನೋಡಿ, ಶಾಲೆಯಲ್ಲಿ ಆನಂದನಿಗೆ ತಮ್ಮ ಕೊಠಡಿಗೆ ಕರೆದು “ಆನಂದಾ…ಮುಂದ್ ಓದಬೇಕು ಅನ್ಕೊಂಡಿಯೋ, ಇಲ್ಲಾ…. ನಿಮ್ಮವ್ವನ ಜೊತೆ ಹೊಲದಾಗ ದುಡೀಬೇಕು ಅನ್ಕೊಂಡಿಯೋ”… ಎಂದು ಆನಂದನ ಮನದ ಮಾತು ತಿಳಿದುಕೊಳ್ಳಲು ಪ್ರಶ್ನೆ ಕೇಳಿದರು. ಆನಂದ ಖುಷಿಯಿಂದ “ಇಲ್ಲರೀ…ಮಾಸ್ತರ್… ನಾನು ಓದಬೇಕು… ದೊಡ್ಡ ಇಂಜಿನಿಯರ್ ಆಗಬೇಕು. ಓದೋ ಆಸೆ ಬಾಳ ಐತಿ ರೀ ಸರ್”… ಅಂದಾಗ ಅವನ ಕಣ್ಣುಗಳಲ್ಲಿ ಹೊಳಪಿತ್ತು.
ಮಾಸ್ತರ್ ಗೂ ಆನಂದ ಛಲವಾದಿ ಇದ್ದಾನೆ, ತಾನು ಅಂದುಕೊಂಡದ್ದನ್ನು ಸಾಧಿಸಿಯೇ ತೋರಿಸುತ್ತಾನೆ ಅಂದು ದೃಢವಾಯಿತು. ಇಂತ ಹುಡುಗನ್ನ್ ದಾರಿ ತಪ್ಪಿಸೋಕೆ ನಿಂತಾಳಲ್ಲ ಹುಚ್ಚು ಈ ನಿಂಗವ್ವ. ಆನಂದ ಓದಿ ಒಳ್ಳೆ ಕೆಲಸ ಹಿಡಿದರೆ ಮನೆ ಕಷ್ಟವೆಲ್ಲ ತಿರುತ್ತೆ, ಈ ನಿಂಗವ್ವನಿಗೆ ಏನ್ ಹೇಳಬೇಕು ಎಂದು ಮಾಸ್ತರ್ ಹಣೆ ಚಚ್ಚಿಕೊಂಡರು.
ಆನಂದನಿಗೆ ” ನೋಡು… ನಾನು ಕೆಲವು ಪರೀಕ್ಷಾ ಫೀಸು ಕಟ್ಟತೀನಿ. ನೀನು ಚಂದಾಗಿ ಓದಿ ಪರೀಕ್ಷಾ ಪಾಸು ಮಾಡು. ಆಮೇಲೆ ನಿನ್ನ ಹಿಡಿಯೋರೇ ಇಲ್ಲಾ’… ಎಂದು ಮಾಸ್ತರ್ ಹೇಳಿದಾಗ ಆನಂದ ಖುಷಿಯಿಂದ ಆಯ್ತು ಮಾಸ್ತರ್… ಅನ್ನುತ್ತಾ ಪುಟ್ಟಿಯುತ್ತಾ ಕೊಠಡಿಯಿಂದ ಹೊರಗೆ ಓಡಿದ.
ಪ್ರತಿದಿನ ಮನೆಯಲ್ಲಿ ಬುಡಿ ದೀಪದಡಿಯಲ್ಲಿ ಕೂತು ಓದತೊಡಗಿದ. ನಿಂಗವ್ವ “ಓದಿ ಏನ್ ದೊಡ್ಡ ಆಫೀಸರ್ ಆಗ್ತಿ… ಬುಕ್ ಅತ್ಲಾಗ ಬಿಸಾಕಿ, ನನ್ನ ತಲಿ ಮೇಲಿನ ಹೋರಿ ಇಳಸ್ ಬಾ ಆನ್ಯಾ”…. ಎಂದು ಗದರುತ್ತಿದ್ದಂತೆ ಆನಂದ ಹೆದರಿ ಅವ್ವ ಹೇಳಿದ ಕೆಲಸವನ್ನೆಲ್ಲ ಮಾಡುತ್ತಿದ್ದ. ಕುಡುಕ ಗಂಡನ ಕೈಯಲ್ಲಿ ಅವ್ವ ನಿತ್ಯ ಹೊಡೆತ ತಿನ್ನುತ್ತಿದ್ದಳು, ಅವನು ಹೋದ್ಮೇಲೆ ಹೊಲದಲ್ಲಿ ಗಾಣದ ಎತ್ತಾದಳು… ಅವ್ವನ ಕಷ್ಟವನ್ನೆಲ್ಲ ಕಣ್ಣಾರೆ ನೋಡಿದ್ದ ಆನಂದನಿಗೆ ತಾನು ಕೆಲಸಕ್ಕೆ ಸೇರಿ ಅವ್ವನನ್ನು ತನ್ನ ಜೊತೆಗೆ ಇಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳಬೇಕು… ಆಕೆ ಕೇಳಿದ್ದೆಲ್ಲ ಕೊಡಿಸಬೇಕು… ಊರು ಸುತ್ತಿಸಬೇಕು… ರಾಣಿ ತರ ಇಟ್ಟುಕೊಳ್ಳಬೇಕು….ಎನ್ನುವ ನೂರಾರು ಕನಸ್ಸುಗಳನ್ನ ಕಂಡಿದ್ದ.
ಮಾಸ್ತರ್ ಬೆಂಬಲ ಸಿಕ್ಕ ಮೇಲೆ ಹಿಂದೆ ತಿರುಗಿ ನೋಡುವ ಮಾತೆ ಇಲ್ಲಾ ಎಂದು ನಿರ್ಧಾರ ಮಾಡಿ ಕಷ್ಟ ಪಟ್ಟು ಓದ ತೊಡಗಿದ. ಆನಂದನ ಓದಿನಿಂದ ಅವನ ಭವಿಷ್ಯವಷ್ಟೇ ಅಲ್ಲ, ಮನೆ ಪರಿಸ್ಥಿತಿ ಕೂಡಾ ಬದಲಾಗುತ್ತೆ ಎಂದು ನಿಂಗವ್ವ ಎಂದೂ ಕೂಡಾ ಊಹಿಸಿರಲಿಲ್ಲ.
ಮಾಸ್ತರ್ ಆನಂದನಿಗೆ ಐದನೇಯ ತರಗತಿಗೆ ಬಿಜಾಪುರದ ಸೈನಿಕ ಶಾಲೆಗೆ ಸೇರಿಸಲು ಸಿದ್ಧತೆ ನಡೆಸಿದರು. ಆನಂದ ಪ್ರವೇಶಾತಿ ಪರೀಕ್ಷೆ ಬರೆದು ಶಾಲೆಗೂ ಆಯ್ಕೆಯಾಗಿದ್ದ. ಆದರೆ ಸಮಸ್ಯೆ ಇದ್ದದ್ದು ನಿಂಗವ್ವನ ಮನಸ್ಸುನ್ನು ಓಲೈಸುವುದು. ಆಕೆ ತನಗೆ ಆಸರೆಯಾಗಿದ್ದ ಒಬ್ಬನೇ ಮಗನನ್ನು ದೂರದ ಬಿಜಾಪುರಕ್ಕೆ ಕಳುಹಿಸುವುದು ಅಷ್ಟು ಸುಲಭವಿರಲಿಲ್ಲ. ನಿತ್ಯ ಆನಂದನಿಗೆ ‘ಆನ್ಯ… ಓದಿ ಏನ್ ಮಾಡ್ತಿದ್ದಿ. ನಮ್ಮದ್ ಜಮೀನ್ ಐತಿ ಪಾ. ಅದರಾಗ ಇಬ್ಬರೂ ದುಡ್ಕೊಂತ ಆರಾಮಾಗಿ ಜೀವನ ಮಾಡೋನು. ದೊಡ್ಡ ಆಫೀಸರ್ ಆಗೋ ಕನಸ್ ಕಾಣಬೇಡ. ಅದು ಆಗದ ಮಾತು. ಸುಮ್ಮನ್ ಸಮಯ ದಂಡ”… ಎಂದು ಮಗನ ಮನಸ್ಸು ಬದಲಾಯಿಸಲು ಪ್ರಯತ್ನಿಸುತ್ತಿದ್ದಳು. ಆದರೆ ಆನಂದ ಹಿಡಿದ ಛಲ ಬಿಡುವ ಹುಡುಗನಾಗಿರಲಿಲ್ಲ. ಸೈನಿಕ ವಸತಿ ಶಾಲೆ ಸೇರಿಯೇ ಸೇರುತ್ತೇನೆ ಎಂದೂ ಧೃಡ ನಿರ್ಧಾರ ಮಾಡಿದ್ದ, “ನಾನು ಸೈನಿಕ ವಸತಿ ಶಾಲೆ ಸೇರಕೋತಿನಿ. ನೀನು ಬ್ಯಾಡ್ ಅಂದ್ರ…ನಂಗ್, ಊಟ ತಿಂಡಿ ಏನು ಬೇಡಾ”… ಅಂತ ಹಠ ಹಿಡಿದು ಕೂತ. ಮಗನ ಹಠದ ಮುಂದೆ ನಿಂಗವ್ವ ಒಲ್ಲದ ಮನಸ್ಸಿನಿಂದ ಕಣ್ಣೀರು ಸುರಿಸುತ್ತಾ ಅನಿವಾರ್ಯವಾಗಿ ಒಪ್ಪಲೇ ಬೇಕಾಯಿತು.
ಆನಂದ ಮುಂದೆ ಬಿಜಾಪುರ ಸೈನಿಕ ವಸತಿ ಶಾಲೆಗೆ ಸೇರಿ ಚೆನ್ನಾಗಿ ಓದ ತೊಡಗಿದ. ಹೆಚ್ಚು ಬುದ್ದಿವಂತನಾಗಿದ್ದ ಆನಂದ, ಶಾಲೆಯಲ್ಲಿ ಎಲ್ಲದರಲ್ಲೂ ಮೊದಲಿಗನಾಗಿದ್ದ. ದಿನ ಉರುಳಿದಂತೆ ಆನಂದನದು ಮೆಟ್ರಿಕ್ ಮುಗಿತು, ಪಿಯುಸಿಯಲ್ಲಿ ಸೈನ್ಸ್ ವಿಭಾಗವನ್ನು ಆಯ್ಕೆ ಮಾಡಿಕೊಂಡ. ಒಳ್ಳೆ ಇಂಜಿನಿಯರ್ ಕಾಲೇಜಿನಲ್ಲಿ ಸೀಟು ಸಿಕ್ಕಿತು. ಅಲ್ಲಿಯೂ ಉತ್ತಮ ಅಂಕ ಗಳಿಸಿ ಇಂಜಿನಿಯರ್ ಆದ. ಎಲ್ಲದರಲ್ಲೂ ಒಳ್ಳೆ ಅಂಕ ಇದ್ದುದ್ದರಿಂದ ಯಾವ ಕಂಪನಿಯೂ ಅವನಿಗೆ ಉದ್ಯೋಗ ನೀಡಲು ಹಿಂದೇಟು ಹಾಕಲಿಲ್ಲ. ಬಹುರಾಷ್ಟ್ರೀಯ ಕಂಪನಿಯಲ್ಲಿ ಒಳ್ಳೆ ಉದ್ಯೋಗ ಸಿಕ್ಕಿತು. ಅವನು ಇಷ್ಟಪಟ್ಟಂತೆ ಸಾಫ್ಟ್ ವೇರ್ ಆದ, ಒಳ್ಳೆ ಸಂಬಳ ಒಳ್ಳೆ ಜೀವನ ಶುರುವಾಯಿತು.
ಹೊಲದಲ್ಲಿ ಕೆಲಸ ಮಾಡಿ ಮಾಡಿ ಕೃಶವಾಗಿದ್ದ ನಿಂಗವ್ವ, ಮಗನ ಬೆಳವಣಿಗೆಯಿಂದ ಹಂತ ಹಂತವಾಗಿ ಮನೆ ಆರ್ಥಿಕ ಪರಿಸ್ಥಿತಿಯೂ ಬದಲಾಗ ತೊಡಗಿತು. ಆನಂದನಿಂದ ಕಷ್ಟಗಳು ಇಂಗಿತ್ತು ಎಂದು ಊರವರ ಮುಂದೆ ಸಂತೋಷದಿಂದ ಹೇಳಿಕೊಂಡು ಬರುತ್ತಿದ್ದಳು. ಆದರೆ ತನ್ನ ಹಾಗೂ ಮಗನನ್ನು ದೂರ ಮಾಡಿದ ಮಾಸ್ತರ್ ನನ್ನು ಎಂದು ಕ್ಷಮಿಸಲಿಲ್ಲ. ಮಾಸ್ತರ್ ಎದುರಿಗೆ ಬಂದರೂ ಮಾತಾಡದೆ ಮುಖ ಸಿಂಡರಿಸಿಕೊಂಡು ಹೋಗುತ್ತಿದ್ದಳು. ಮಾಸ್ತರ್ ಗೂ ನಿಂಗವ್ವನ ಸಿಟ್ಟು ಅರ್ಥವಾಗಿತ್ತು. ಹಾಗಾಗಿ ತಲೆ ಕೆಡಿಸಿಕೊಂಡಿರಲಿಲ್ಲ.
ಆನಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಉತ್ತಮ ಉದ್ಯೋಗಿ ಆಗಿದ್ದರಿಂದ ಬೇಗ ಬೇಗನೇ ಬಡ್ತಿ ಕೂಡಾ ಸಿಕ್ಕಿತು. ಅವ್ವನನ್ನು ತನ್ನ ಜೊತೆಗೆ ಇರಲು ಎಷ್ಟೇ ಬಲವಂತ ಮಾಡಿದರು ಸುತಾರಂ ಒಪ್ಪಲಿಲ್ಲ. ತನ್ನ ಗಂಡ ಬದುಕಿ ಬಾಳಿದ ಮನೆ, ಹೊಲ ಬಿಟ್ಟು ಬರೋಲ್ಲ. ಬೇಕಿದ್ದರೇ… ನೀನೇ ಬಂದು ನನ್ನ ಜೊತೆಗೆ ಬಂದು ಇರು… ಎಂದು ಆನಂದನಿಗೆ ಕಡ್ಡಿ ಮುರಿದಂತೆ ಹೇಳಿದ್ದಳು. ಆನಂದನು ಊರಿನ ಹಿರಿಯರ ಮುಂದೆ ಹೇಳಿಸಿ ನೋಡಿದ, ಅವರಿಗೂ ಅದೇ ಉತ್ತರ ನೀಡಿದ್ದಳು ಘಾಟಿ ಹೆಣ್ಣು ನಿಂಗವ್ವ. ಊರಿನ ಹಿರಿಯರು ಕೂಡಾ ನಿಂಗವ್ವನ ಪರವಾಗಿ ತನ್ನದಲ್ಲದ ಪರದೇಸಿ ಊರಾಗ, ಗೊತ್ತು ಗುರಿ ಇಲ್ಲದ ಜನರ ಮಧ್ಯೆ ಹೆಂಗ್ ಹೊತ್ತು ಕಳಿತಾಳ ಪಾ ಆನಂದ. ನೀನೇ… ಆಗಾಗ ಬಂದು ಹೋಗಿ ಮಾಡು … ಎಂದು ಆನಂದನಿಗೆ ವಾಪಾಸ್ ಬುದ್ದಿ ಹೇಳಿ ಸುಮ್ಮನಾದರು. ಅಲ್ಲಿಂದ ಆನಂದನಿಗೆ ಬೆಂಗಳೂರು, ಹಳ್ಳಿ ಮಧ್ಯೆ ಓಡಾಟ ಶುರುವಾಯಿತು.
ನಿಂಗವ್ವ ಕಾಯಿಲೆ ಬಿದ್ದಾಗ ರಜೆ ಹಾಕಿ ಓಡೋಡಿ ದೂರದಿಂದ ಬರಬೇಕಿತ್ತು. ದವಾಖಾನೆ ಅಲ್ಲಿ ಇಲ್ಲಿ ತೋರಿಸಿ ಹುಷಾರಾದ ಮೇಲೆ ಮತ್ತೆ ಬೆಂಗಳೂರಿನ ಕೆಲಸಕ್ಕೆ ಓಡೋಡಿ ಹೋಗಬೇಕಿತ್ತು.
“ಆನ್ಯಾ .. ಜೀವ ನೆನಸಕತ್ತೈತಿ ಬಾರಪಾ ಊರಿಗೆ”… ಅಂದಾಗ ಕೆಲಸದ ಒತ್ತಡದ ನಡುವೆ ಒಮ್ಮೊಮ್ಮೆ ಕೂಗಾಡುತ್ತಿದ್ದ, ಇನ್ನೊಮ್ಮೆ ಹೆತ್ತ ಜೀವ ಎಂದು ಮನಸ್ಸು ಕರಗಿ, ಓಡೋಡಿ ಹೋಗುತ್ತಿದ್ದ. ಆಫೀಸಿನ ಕೆಲಸ ಹಾಗೂ ನಿಂಗವ್ವನ ನಡುವೆ ಆನಂದನ ಪಾಡು ಕೇಳ ಬಾರದಾಯಿತು. ನೀನೇ ನನ್ನ ಜೋತಿಗೆ ಬಂದು ಇರು. ನಾನು ಪದೆ ಪದೆ ಆಫೀಸ್ ರಜೆ ಹಾಕಿ ಬರೋಕ ಆಗೋಲ್ಲ… ಅಂದರೆ ಮಂಡು ನಿಂಗವ್ವ ಅಕ್ಕಪಕ್ಕದವರಿಗೆ ಕೇಳುವಂತೆ ಬಾಯಿ ಮಾಡಿ ‘ನನ್ನವರಂತ ಯಾರಿದ್ದಾರ… ಇರೋನು ನೀನೊಬ್ಬವ … ನೀನೂ ಬರೋಲ್ಲ ಅಂದ್ರ… ನಾನು ಪರದೇಸಿ ಹೆಣ ಆಗತೈನಿ…ಬರೋಕಾ ಹೋಗಬೇಡ. ಪ್ಯಾಟ್ಯಾಗ ಇರು … ಅಂತ ದೊಡ್ಡ ಬಾಯಿ ಮಾಡುತ್ತಾ ಓಹ್ …ಹ್… ಅಂತ ಅಳುತ್ತಿದ್ದಳು. ತಾಯಿ ಹಠಕ್ಕೆ ಆನಂದ ತತ್ತರಿಸಿ ಹೋಗುತ್ತಿದ್ದ.
ಒಂದು ದಿನ ಬಂದೆ ಬಿಟ್ಟಿತು. ಆಫೀಸ್ ಮೀಟಿಂಗ್ ಲ್ಲಿ ಬ್ಯುಸಿ ಆಗಿದ್ದ ಆನಂದನಿಗೆ ಊರಿಂದ ಮೇಲಿಂದ ಮೇಲೆ ಕರೆ ಬರುತ್ತಿತ್ತು. ಹೊತ್ತು ಗೊತ್ತು ಇಲ್ಲದ ಸಮಯದಾಗ ನಮ್ಮವ್ವ ಕಾಡ್ತಾಳೆ…ಅಂತ ಫೋನ್ ನನ್ನ ಸಿಟ್ಟಲ್ಲಿಯೆ ಸೈಲೆಂಟ್ ಮೋಡ್ ಹಾಕಿ ತನ್ನ ಮೀಟಿಂಗ್, ಆಫೀಸ್ ಕೆಲಸವನ್ನು ಮುಗಿಸಿಕೊಂಡ. ತನ್ನ ಎಲ್ಲ ಕೆಲಸ ಮುಗಿಯೋ ಹೊತ್ತಿಗೆ ರಾತ್ರಿ ೯ ಗಂಟೆ ಆಗಿತ್ತು. ಸುಸ್ತಾಗಿ ಮನೆಗೆ ಬಂದು ಮೊಬೈಲ್ ಚಾರ್ಜ್ ಹಾಕಿದ್ದ ಅಷ್ಟೋತ್ತಿಗೆ ಮಾಸ್ತರ್ ಕರೆ ಬಂದಿತ್ತು. ‘ಯಾಕಪ್ಪಾ ಆನಂದ ಬೆಳಗ್ಗೆಯಿಂದ ಊರನವರು ಎಲ್ಲ ಕರೆ ಮಾಡತ್ತಾರಂತ ಫೋನ್ ತಗೀವಲ್ಲoತಿ, ಅರ್ಜೆಂಟ್ ವಿಷ್ಯ ಇತ್ತಪ್ಪಾ ಅದಕ್ಕ ನಾನ್ ಕರೆ ಮಾಡಿದೆ’ ಅಂದರು ಮಾಸ್ತರ್. ಆನಂದ ಕ್ಷಮಿಸಿ ಮಾಸ್ತರ್ ಬೆಳಗ್ಗೆಯಿಂದ ಕೆಲಸ ಮುಗಿಯವಲ್ಲದಾಗಿತ್ತು… ಬಿಡುವಿಲ್ಲದ ಬದುಕಾಗೈತಿ…ಆಮೇಲೆ ಫೋನ್ ಹಚ್ಚುನ ಅಂತ ಅಂದ್ರ ಚಾರ್ಜ್ ಖಾಲಿ ಆಗಿತ್ತು. ಈಗ ಮನಿಗೆ ಬಂದೇನಿ ಮಾಸ್ತರ್…ಏನ್ ವಿಷಯ ಹೇಳ್ರಿ…ಅಂತ ಕೇಳಿದ ಆನಂದ.
ಮಾಸ್ತರ್ ಬೇಸರದಲ್ಲಿಯೇ ‘ಹೇಗ ಹೇಳ್ಬೇಕು… ತಿಳಿವಲ್ಲದು ಆನಂದ’…ಅಂತ ಗೊಣಗುತ್ತಿದ್ದಾಗ. ಆನಂದನಿಗೆ ಭಯವಾಯಿತು. ‘ಯಾಕ ಮಾಸ್ತರ್…ಊರಾಗ ಅವ್ವ ಹೆಂಗ್ ಇದ್ದಾಳಾ?’…ಅಂತ ಹೇಳಿವಾಗ ಅವನ ಧ್ವನಿ ನಡುಗುತ್ತಿತ್ತು. ಮಾಸ್ತರ್ ‘ಅದನ್ನ, ಹೇಳೋಕ್ಕ… ಊರನವರು ಬೆಳಗ್ಗಿನಿಂದ ಫೋನ್ ಹಚ್ಚಿದ್ರಪ್ಪಾ…ನಿಮ್ಮ ಅವ್ವ …ಹೊಲದಾಗ ಕೆಲಸ ಮಾಡಬೇಕಾದ್ರೆ ಹೃದಯಾಘಾತ ಆಗಿ ಅಲ್ಲೇ ಕುಸುದು ಬಿದ್ದಳಂತ ಪಾ….ಬಾಳ ಬ್ಯಾಸರಾತು…ನೀನು ಲಗೂನ ಹೊರಟು ಬಾ..ಪಾ…ಮುಂದಿನ ಕಾರ್ಯ ನೀನೇ ಮಾಡಬೇಕು’ ಅಂದಾಗ ಆನಂದ ಅಲ್ಲಿಯೇ ಕುಸಿದು ಕೆಳಗೆ ಕೂತ… ಕಣ್ಣೀರಲ್ಲಿ ದಿಕ್ಕು ತೋಚದೆ ಕೂತಾಗ, ಅವನ ಜೊತೆಗೆ ಇದ್ದ ರೂoಮೇಟ್ ಪರಿಸ್ಥಿತಿ ಅರ್ಥ ಮಾಡಿಕೊಂಡು. ತನ್ನ ಕಾರ್ ನಲ್ಲಿಯೇ ಆನಂದನಿಗೆ ಊರಿಗೆ ಕರೆದುಕೊಂಡು ಹೊರಟ. ಆನಂದನಿಗೆ ತನ್ನ ಅವ್ವ ಕೊನೆಯ ಗಳಿಗೆಯವರೆಗೂ ಯಾವ ಸುಖವಾಗಲಿ, ನನ್ನೊಂದಿಗೆ ಇರಬೇಕು ಎನ್ನುವ ಆಸೆಗಳು ಈಡೇರಲೇ ಇಲ್ಲಾ ಅನ್ನೋ ನೋವು ಅವನನ್ನು ಚುಚ್ಚುತ್ತಿತ್ತು… ಆ ಕತ್ತಲು ರಾತ್ರಿ ಭಾರವೆನಿಸಿತು.
ಊರು ಮುಟ್ಟಿದ್ದಾಗ ಬೆಳಗ್ಗೆ ೫ ಗಂಟೆ ಆಗಿತ್ತು. ಊರಿನ ಜನ ಹೆಣ ಕಾಯ್ದು ಕಾಯ್ದು ರೋಸಿ ಹೋಗಿದ್ದರು. ‘ಬಂದ್ಯಪ್ಪಾ…ಸೂರಾ…ನಿಂಗ್ ಎಷ್ಟು ಅಂತ ಫೋನ್ ಹಚ್ಚಬೇಕು. ನಿಮ್ಮ ಅವ್ವ ಸತ್ತ ಎಷ್ಟೋತ್ತಾತು. ನೀ ಈಗ ಬಂದಿ…ನಿನಗ ನಿಮ್ಮ ಅವ್ವನಿಗಿಂತ, ಆಫೀಸ್ ಕೆಲ್ಸಾನ ಹೆಚ್ಚಾತ್ತೇನು!… ನೋಡು…ಪಾಪ…ನಿಂಗವ್ವ ಬದುಕಿದ್ದಾಗ ಮಗಾ ಮಗಾ ಅಂತ ಬಡಕೊತ್ತಿದ್ಲು. ಈಗ ಆಕೀನ ಇಲ್ಲಾ…ಇನ್ನ್ ಯಾರನ್ನ ಅವ್ವಾ ಅಂತ ಕರೀತಿ… ಕೂತು ಕಣ್ಣೀರು ಹಾಕಿ, ಮತ್ತ ನಿನ್ನ ಪ್ಯಾಟಿಗೆ ಸೇರಕೋ’ …. ಒಬ್ಬೊಬ್ಬರು ಒಂದೊಂದು ಮಾತಿನಿಂದ ಅವನಿಗೆ ಚೂರಿಯಂತೆ ಚುಚ್ಚಿದರು. ಮಾಸ್ತರ್ ಆನಂದನಿಗೆ ಭುಜದ ಮೇಲೆ ಕೈ ಇಟ್ಟು. ‘ಅಳಬೇಡಾ ಪಾ …ಧೈರ್ಯ ತಗೋ…ಮುಂದಿನ ಕಾರ್ಯಕ್ಕೆ ಸಿದ್ದ ಆಗು’… ಎಂದು ಸಮಾಧಾನ ಹೇಳಿದಾಗ, ನನ್ನವರು ಅಂತ ಉಳಿದಿದ್ದು ಈಗ ಮಾಸ್ತರ್ ಮಾತ್ರ….ಅವರು ನಡೆಸಿದಂತೆ ನಡೆಯುವೆ… ಎಂದು ಧೈರ್ಯ ಮಾಡಿಕೊಂಡು ಮುಂದಿನ ಕಾರ್ಯಕ್ಕೆ ಸಜ್ಜಾಗಿ ನಿಂತ…
- ಶಾಲಿನಿ ಹೂಲಿ ಪ್ರದೀಪ್