‘ಕನ್ನಡಮ್ಮನ ತೇರು’ ಮನದಾಳದ ಮಾತುಗಳು – (ಭಾಗ೨)

ಕನ್ನಡಮ್ಮನ ತೇರು ಬಳಗ ಸಾಹಿತ್ಯಸೇವೆಗಾಗಿ ಮುಡುಪಾಗಿ ಇಟ್ಟಂತಹ ಒಂದು ಬಳಗ. ಈ ಬಳಗದ ವಿಶೇಷತೆ ಏನೆಂದರೆ ಛಂದೋಬದ್ಧ ರಚನೆಗಳನ್ನು ಕಲಿಸಿಕೊಡಲಾಗುತ್ತದೆ. ಬಳಗದಿಂದ ಕಲಿತು ಸ್ವತಂತ್ರ ಕವಿತೆಗಳನ್ನು ಬರೆಯುತ್ತಿರುವ ಕವಿಗಳು ಹಾಗು ಕವಿಯತ್ರಿಯರ ಮನದ ಮಾತನ್ನು (ಭಾಗ ೨) ತಪ್ಪದೆ ಮುಂದೆ ಓದಿ…

ಕನ್ನಡಮ್ಮನ ತೇರು ಬಳಗದ ಕಿರುಪರಿಚಯ :

(ಕನ್ನಡಮ್ಮನ ತೇರು ಛಂದೋಬದ್ಧ ಕಾವ್ಯ ರಚನೆಯಲ್ಲಿ ಹಲವು ಪ್ರಕಾರಗಳಿದ್ದು ಹಳೆಗನ್ನಡ ಹಾಗು ನಡುಗನ್ನಡ ಕಾಲಘಟ್ಟದಲ್ಲಿ ಛಂದೋಬದ್ಧ ಕಾವ್ಯ ರಚನೆಗಳು ಉತ್ತುಂಗದ ಸ್ಥಿತಿಯಲ್ಲಿದ್ದವು. ಕಾಲ ಕಳೆದಂತೆ ಪರಕೀಯರ ಆಕ್ರಮಣ ಹಾಗು ನವ್ಯ ನವೋದಯ ಸಾಹಿತ್ಯದ ಬಳಕೆಯಿಂದ ಹಲವು ಕನ್ನಡ ಸಾಹಿತ್ಯ ಪ್ರಕಾರಗಳ ಬಳಕೆ ಕಡಿಮೆಯಾದವು.

ಕನ್ನಡ ಸಾಹಿತ್ಯದಲ್ಲಿ ಮಾತ್ರಗಣ, ಅಕ್ಷರಗಣ ಹಾಗು ಅಂಶಗಣ ಆಧಾರಿತ ಪದ್ಯಗಳನ್ನು ಕಾಣಬಹುದು. ಇವುಗಳಲ್ಲಿ ಸಾಕಷ್ಟು ಮಾದರಿಯಲ್ಲಿ ಪದ್ಯಗಳನ್ನು ರಚಿಸಿಬಹುದು.ಛಂದೋಬದ್ಧ ರಚನೆಗಳನ್ನು ಕಲಿಸುವ ದೃಷ್ಟಿಯಿಂದಲೇ ಕನ್ನಡಮ್ಮನ ತೇರು ಬಳಗವನ್ನು ಪ್ರಾರಂಭಿಸಿದ್ದು ಈಗಾಗಲೇ ಸಾವಿರಾರು ಕವಿಮನಗಳು ಛಂದಸ್ಸು ಕಲಿತು ಬರೆಯಲು ಪ್ರಾರಂಭಿಸಿದ್ದಾರೆ.)

ಕನ್ನಡಮ್ಮನ ತೇರು ಬಳಗವನ್ನು ನವೆಂಬರ್ ೧, ೨೦೨೨ ರಲ್ಲಿ ಚನ್ನಕೇಶವ ಜಿ ಲಾಳನಕಟ್ಟೆ ಹಾಗು ಶಕುಂತಲಾ ಪಿ ಆಚಾರ್ ರವರು ಸ್ಥಾಪಿಸುರುತ್ತಾರೆ.
ಶ್ರೀಮತಿ ವಿಜಯಲಕ್ಷ್ಮಿ ಎಸ್
ಶ್ರೀಮತಿ ಸಹನಾ ಎಲ್.ಪಿ,
ಶ್ರೀಮತಿ ಮಂಗಳಗೌರಿ ಭಟ್
ಶ್ರೀಮತಿ ಸುಜಾತಾ ರವೀಶ್
ಶ್ರೀಯುತ ಜಗದೀಶ್ ನಾಗರಾಜು
ಶ್ರೀಯುತ ಅಮೃತಗೌಡ ಪಾಟೀಲ್
ಶ್ರೀಮತಿಭುವನೇಶ್ವರಿ ಪ್ರೇಮರವರು ಹಲವು ಆಯೋಜನೆಗಳನ್ನು ಹಮ್ಮಿಕೊಂಡ ನಿರ್ವಾಹಕರ ಸ್ಥಾನ ನಿರ್ವಹಿಸುತಿದ್ದಾರೆ.

 


  • ಕನ್ನಡಮ್ಮನ ತೇರು ಕಣ್ದೆರೆದು ಉದಯಿಸಿದ್ದು ಕಳೆದ ವರ್ಷ ೨೦೨೨,ಅಕ್ಟೊಬರ್ ೧೧ ರಲ್ಲಿ. ಈ ವರ್ಷದ ನವೆಂಬರ್ ಮಾಹೆಯಲ್ಲಿ ವರ್ಷಾಚರಣೆಗೊಳ್ಳುತ್ತಿದೆ. ಹಲವಿಧದ ಕಲೆಗಳಲ್ಲೊಂದಾದ ಸಾಹಿತ್ಯದ ಸರಮಾಲೆ ತೊಟ್ಟು ಸಿಂಗರಿಸಿಕೊಂಡು ಜೀವನೋತ್ಸಾಹಿ ಕವಿಮನಸಿತರೆಲ್ಲರನ್ನು ತನ್ನತ್ತ ಸೆಳೆದು ಸಮರ್ಪಕವಾಗಿ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ನನ್ನ ಮನಃಸ್ಫುರಿತ ಕೆಲ ವಿಷಯ ಸಾಲುಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುವೆ..!! ಸರಿ ಸುಮಾರು ಏಳೆಂಟು ವರ್ಷಗಳ ನನ್ನ ಕವಿಮನದ ಭಾವನೆಗಳನ್ನು ತೆರೆದಿಡಲು ಉತ್ತಮತರನಾದ ಕೆಲ ವೇದಿಕೆಗಳನ್ನು ಆಶ್ರಯಿಸಿದರೂ, ಬರೆದುದನ್ನು ಸಮರ್ಪಕವಾಗಿ ತಿದ್ದಿ ತೀಡುವ ಗುಣ ಪೂರ್ಣ ವೇದಿಕೆಗೆ ನಿರೀಕ್ಷಿಸುತ್ತಿದ್ದೆ. ನನ್ನ ನಿರೀಕ್ಷೆಗೆ ವರವಾಗಿ ಲಭಿಸಿದ್ದು #ಕನ್ನಡಮ್ಮನ_ತೇರು ವೇದಿಕೆ.( ಫೆಬ್ರುವರಿ ಮಾಹೆಯ ಮಧ್ಯದಲ್ಲಿ) ಇಲ್ಲಿಯೂ ಮೊದಲಿಗೆ ನನ್ನ ಒಂದೆರಡು ಕವನಗಳನ್ನು ಹಂಚಿಕೊಂಡಿದ್ದೆನಷ್ಟೆ. ನಂತರ ಬಳಗದಲ್ಲಿ ಪ್ರಕಟವಾದ ಛಂದಸ್ಸಿನ ಕಲಿಕೆಯಲ್ಲಿ ಆಸಕ್ತಿ ತೋರಿ ಬರೆಯಲು ಪ್ರಯತ್ನಿಸಿ ಒಂದು ಮಟ್ಟಿಗೆ ಸಫಲಳಾಗಿದ್ದೇನೆಂಬುದೇ ಅತಿಶಯೋಕ್ತಿ.

    ಆನಂತರ ನನ್ನ ಲೇಖನದ ಗುಣಮಟ್ಟವನ್ನು ವೀಕ್ಷಿಸಿದ ಮುಂಚೂಣಿಯ ನಿರ್ವಾಹಕರಾದ ಶ್ರೀಯುತ ಚನ್ನಕೇಶವ ಜಿ ಲಾಳನಕಟ್ಟೆಯವರು ಮತ್ತಷ್ಟು ಉತ್ತೇಜಿತ ನುಡಿಗಳಿಂದ ಬಹಳವಾಗಿ ಸಹಕರಿಸಿದ್ದು ನನ್ನ ಸುಯೋಗವೆಂದೇ ಪರಿಗಣಿಸಿರುವೆ. ಈ ನಿಟ್ಟಿನಲ್ಲಿ ನಾನು ಕಲಿಕಾ ವಿದ್ಯಾರ್ಥಿಯಾಗಿ ಅನೇಕ ಛಂದಸ್ಸಿನ ಸುಳುಹುಗಳನ್ನು ಕಲಿತು ಅದನ್ನು ನನ್ನ ಕವನಗಳಲ್ಲಿ ಅಳವಡಿಸಿಕೊಂಡು ಬಂದುದನ್ನು ಗಮನಿಸಿದ ಶ್ರೀಯುತರು ಕನ್ನಡಮ್ಮನ ತೇರನ್ನು ಎಳೆಯಲು ಆಹ್ವಾನಿಸಿದರು. ಮೊದಲಿಗೆ ನನ್ನ ನಿರಾಕರಣೆಯೇ ಅವರಿಗೆ ಉತ್ತರವಾಗಿದ್ದು , ಛಲ ಬಿಡದ ಛಲಗಾರ ಸಹೃದಯಿ #ಚನ್ನಕೇಶವ್ ಅವರು ನನ್ನ ನಂಬಿ ನನ್ನಲ್ಲಿ ಭರವಸೆಯನ್ನು ತುಂಬಿದ ಕಾರಣ ನಿರ್ವಹಣೆಯ ಆಯೋಜಕಳಾಗಿ ಹೃನ್ಮನಃ ಪೂರ್ವಕ ಅಡಿಯಿಟ್ಟು ಬಂದಿದ್ದೇನೆ. ನನ್ನ ನಿರ್ವಹಣೆಯ ಭಾವದನುಭೂತಿ ಮನದ ಮಾತು ಆಯೋಜನೆಗೆ ಸಿಕ್ಕ ಪ್ರೋತ್ಸಾಹವಂತೂ ನನ್ನ ಊಹೆಗೂ ಮೀರಿದ ಅನುಭವದರಿವಾಗಿ ಸಂತಸವಾಗಿದೆ..!!

ನಾ ಕಂಡ ಕನ್ನಡಮ್ಮನ ತೇರು :

( ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದೆ )

ಪರಿಶುದ್ಧ ಸಂವೇದದಡಿಯಲ್ಲಿ ನಾನಿಂದು
ಪರಿಪರಿಯ ಮನಸೋಕ್ತ ನುಡಿವವರ ನಾಕಂಡೆ
ಚಿರ ಕಾಂತಿ ಸೊಡರಿಂದು ಅನವರತ ಪಸರಿಸುತ ದಶ ದಿಕ್ಕು ಬೆಳಗುತಿಹುದ ॥
ಕರುನಾಡ ತೇರಿನಲಿ ಸರ್ವಸಮ ಕವಿಮನದ
ಕುರುಹಿಂದು ಸುಮದಂತೆ ಥಳಥಳಿಸಿ ಶೋಭಿಸುತ
ಪರಮಾಪ್ತ ರಾಜಹಂಸದ ತೆರದಿ ರಾಜಪಥವಾಶ್ರಯಿಸಿ ಸಾಗುತಿಹುದು॥

ಚಂದುಳ್ಳ ಛಾಂದೋಗ್ಯವಲ್ಲಿಹುದ ನಾಕಂಡೆ
ಕುಂದಿಲ್ಲದಂತಿಹರ ನಿರ್ವಹಿತರನು ಕಂಡೆ
ಬಂದೆಲ್ಲ ಭಾಗ್ಯಸಿರಿಗಧಿಕತೆಯ ನುಡಿಸಾರ ಸಾರೋಟಿನಲ್ಲಿಹುದನು ॥
ಬಂಧುಳ್ಳ ಭಗಿನಿಯರ ಮಂದುಳ್ಳ ಭಾವಿತರ
ನಂದಿಲ್ಲದಂತಿಹುದೈ ಸವಿಸಾರದಮೃತವು
ಮುಂದೆಲ್ಲ ನಾವಿಕರ ಪರಿವೇಕ್ಷಣೆಯಲಿಂದು ಹೊಂದೇರು ಮುನ್ನಡೆಯಲಿ ॥

  • ಭುವನೇಶ್ವರಿ ಆಚಾರ್ಯ


  • ಕನ್ನಡಮ್ಮನ ತೇರು ಬಳಗದ ಅಡ್ಮಿನ್ ಗಳು ,ನಿರ್ವಾಹಕರು ಮತ್ತು ಸದಸ್ಯರೆಲ್ಲರಿಗೂ ನನ್ನ ಹೃತ್ಪೂರ್ವಕ ವಂದನೆಗಳು. ಕನ್ನಡಮ್ಮನ ತೇರು ಬಳಗ ಒಂದು ವರ್ಷ ಪೂರೈಸುತ್ತಿರುವುದನ್ನು ತಿಳಿದು ತುಂಬಾ ಸಂತಸವಾಯಿತು ಬಳಗಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಈ ಬಳಗ ಪ್ರಾರಂಭವಾದದ್ದು ಕಳೆದ ವರ್ಷ ನವೆಂಬರ್ ಒಂದರಂದು ನಾನು ಸೇರಿದ್ದು 29 1 2023 ರಂದು ಅಲ್ಲಿಂದ ಇಲ್ಲಿಯವರೆಗೂ ಸಾಹಿತ್ಯದ ವಿವಿಧ ಪ್ರಕಾರಗಳಾದ ರಗಳೆ ಸಾಂಗತ್ಯ ಷಟ್ಪದಿಗಳು ಮುಕ್ತಕಗಳು ತ್ರಿಪದಿ ಮತ್ತು ಏಳೆ ಇವುಗಳನ್ನು ಒಂದು ದಿನವೂ ಬಿಡದೆ ಬರೆದು ಕಲಿಯುತ್ತಾ ಬಂದಿದ್ದೇನೆ.

    ಛಂದಸ್ಸಿನ ವಿಷಯವಾಗಿ ಹೇಳುವುದಾದರೆ ಶ್ರೀಯುತ ಚನ್ನಕೇಶವ ಲಾಳನಕಟ್ಟೆ ಅವರು ಗುರುತರ ಜವಾಬ್ದಾರಿಯಿಂದ ನಮ್ಮ ಬರಹಗಳನ್ನು ತಿದ್ದಿ ಇಂದಿಗೂ ಪ್ರೋತ್ಸಾಹ ಕೊಡುತ್ತಿದ್ದಾರೆ. ಪ್ರತಿ ಬುಧವಾರ ಛಂದಸ್ಸಿನ ಪಾಠಗಳನ್ನು ಕಲಿಸುತ್ತಾ ಅದಕ್ಕೆ ಸಂಬಂಧಪಟ್ಟ ಹಾಗೆ ಚಿತ್ರ ಕವನ ಸ್ಪರ್ಧೆಯನ್ನು ಪ್ರತಿ ಭಾನುವಾರ ಆಯೋಜಿಸುತ್ತಾರೆ. ಈ ನಿಟ್ಟಿನಲ್ಲಿ ಬಿಟ್ಟೀರ ಚೌಂದಮ್ಮ ಮೇಡಂ ವಿಜಯಲಕ್ಷ್ಮಿ ಮೇಡಂ ಮಂಗಳ ಗೌರಿ ಮೇಡಂ ಅವರು ಉದಾಹರಣೆ ಕವನಗಳನ್ನು ಬರೆದು ಅವುಗಳ ಮೂಲಕ ನಮ್ಮನ್ನು ಸುಲಭವಾಗಿ ಕಲಿಯುವಂತೆ ಮಾಡುತ್ತಿದ್ದಾರೆ. ಶ್ರೀಯುತ ಚನ್ನಕೇಶವ ಲಾಳನಕಟ್ಟೆ ಅವರು ಪ್ರತಿದಿನವೂ ಒಂದಾದರೂ ಕವನವನ್ನು ಬರೆದು ನಮ್ಮನ್ನು ಕಲಿಯಲು ಪ್ರೋತ್ಸಾಹ ಕೊಡುತ್ತಿದ್ದಾರೆ. ತಿಂಗಳಿಗೊಮ್ಮೆ ಬರಹಗಾರರನ್ನು ಪ್ರೋತ್ಸಾಹಿಸುವುದಕ್ಕಾಗಿ ತಿಂಗಳ ಬರಹಗಾರರು, ಗುಣಮಟ್ಟದ ಬರಹಗಾರರು ಸಕ್ರಿಯ ಬರಹಗಾರರು ಇವರನ್ನು ಗುರುತಿಸಿ ಶ್ರೀಮತಿ ಮಂಜುಳಾ ಮೂರ್ತಿಯವರು ಪುಸ್ತಕ ಬಹುಮಾನವನ್ನು ಆಯೋಜನೆ ಮಾಡುತ್ತಿದ್ದಾರೆ.

    ಕನ್ನಡಮ್ಮನ ತೇರು ಬಳಗದಲ್ಲಿ ಇದಿಷ್ಟೇ ಅಲ್ಲದೆ ಇದರ ಜೊತೆಗೆ ಪ್ರತಿ ಸೋಮವಾರ ಬನ್ನಿ ನಕ್ಕು ನಗಿಸೋಣ ಹಾಸ್ಯದ ಬರವಣಿಗೆಗೆ ಜಗದೀಶ್ ರವರು ನಾನಾ ವಿಷಯಗಳ ಬಗ್ಗೆ ಆಯೋಜನೆ ಮಾಡುತ್ತಾರೆ ಉದಾ: ಅಡುಗೆ, ಪ್ರವಾಸ ಇತ್ಯಾದಿ. ಮಂಗಳವಾರ ಶ್ರೀಮತಿ ಸುಜಾತ ರವೀಶ್ ರವರಿಂದ ಚುಟುಕು ಸ್ಪರ್ಧೆ ಆಯೋಜನೆ ಇರುತ್ತದೆ. ಪುಸ್ತಕ, ನಿರೀಕ್ಷೆ ಕನಸು ಹೀಗೆ ಹತ್ತು ಹಲವಾರು ವಿಷಯಗಳನ್ನು ಒಳಗೊಂಡ ಚುಟುಕುಗಳು ಬರೆಯಲು ಖುಷಿಯಾಗುತ್ತದೆ.

    ಬುಧವಾರ ಬನ್ನಿ ಛಂದಸ್ಸು ಕಲಿಯೋಣ ವಾರಕ್ಕೊಂದು ಷಟ್ಪದಿಯ ಪಾಠ ಕಲಿಯಲು ತುಂಬಾ ಆಸಕ್ತಿ ಇರುತ್ತದೆ. ಪ್ರತಿ ಗುರುವಾರ ಮುಕ್ತಕ ಬರೆಯುವ ಸ್ಪರ್ಧೆಯ ಆಯೋಜನೆ ಹಬ್ಬಗಳು, ಸ್ವಾತಂತ್ರ್ಯೋತ್ಸವ, ಗುರುವರ್ಯ ಯೋಗ, ವರಕವಿ ಹೀಗೆ ಸಂದರ್ಭದಕ್ಕೆ ತಕ್ಕಹಾಗೆ ಶೀರ್ಷಿಕೆಗಳನ್ನು ಕೊಟ್ಟು ಮುಕ್ತಕ ಬರೆಸುತ್ತಾರೆ. ಪ್ರತಿ ಶುಕ್ರವಾರ ಭುವನೇಶ್ವರಿ ಪ್ರೇಮ ಅವರಿಂದ ಭಾವದ ಅನುಭೂತಿ ದೇವರು, ಮನೆಗೆ ಬಂದ ಮಹಾಲಕ್ಷ್ಮಿ ಈ ರೀತಿ ವಿಷಯಗಳ ಬಗ್ಗೆ ನಮ್ಮ ಅನಿಸಿಕೆಗಳ ಬರಹ. ಪ್ರತಿ ಶನಿವಾರ ಕಥೆ ಬರೆಯೋಣ ನಾನಾ ವಿಷಯಗಳ ಬಗ್ಗೆ ಕಥೆ ಬರೆಯುವ ಬರಹದ ಆಯೋಜನೆ ಶಕುಂತಲಾ ಪಿ ಆಚಾರ್ ಅವರಿಂದ. ಭಾನುವಾರ ಚಿತ್ರ ಕವನ ಸ್ಪರ್ಧೆ ನಾನಾ ಷಟ್ಪದಿ ರಗಳೆ ಸಾಂಗತ್ಯ ತ್ರಿಪದಿ ಮುಂತಾದ ವಿಷಯಗಳ ಬಗ್ಗೆ ಚಿತ್ರ ಕೊಟ್ಟು ಸ್ಪರ್ಧೆಯ ಆಯೋಜನೆ.ಅದಕ್ಕೆ ಸುಂದರ ಪ್ರಶಸ್ತಿ ಪತ್ರಗಳು. ನಾನು ಇಲ್ಲಿ ಕಲಿತಿರುವುದು ಬಹಳ.ಇನ್ನೂ ಕಲಿಯುತ್ತಾ ಇದ್ದೇನೆ. ಮುಂದೂ ಕಲಿಯುತ್ತೇನೆ. ಇಲ್ಲಿ ಸಕ್ರಿಯ ಬರಹಗಾರಳಾಗಿ ಹಾಗೂ ಗುಣಮಟ್ಟದ ಬರಹಕ್ಕಾಗಿ ಗುರುತಿಸಿಕೊಂಡು ಪುಸ್ತಕ ಬಹುಮಾನಕ್ಕೆ ಎರಡುಬಾರಿ ಭಾಜನಳಾಗಿರುವುದು ಹೆಮ್ಮೆಯ ಸಂಗತಿ.

    ಕನ್ನಡಮ್ಮನ ತೇರು ಬಳಗದ ಅಡ್ಮಿನ್ ಗಳು ಮತ್ತು ನಿರ್ವಾಹಕರು ತುಂಬಾ ಶ್ರಮವಹಿಸಿ ಈ ಬಳಗವನ್ನು ಮುಂದೆ ತರುತ್ತಿದ್ದಾರೆ ಈ ಬಳಗದ ಕೀರ್ತಿ ಮುಗಿಲೆತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತಾ ನನ್ನ ಲೇಖನವನ್ನು ಮುಗಿಸುತ್ತೇನೆ.

  • ಶ್ರೀ ಲಕ್ಷ್ಮಿ ಶ್ರೀ ನಾಥ್


  • ‘ಕನ್ನಡಮ್ಮನ ತೇರು ಬಳಗ ‘ ಪ್ರಾರಂಭವಾಗಿ ವರುಷವಾಗುತ್ತಿರುವುದು. ತುಂಬಾ ಸಂತೋಷದ ವಿಷಯ. ನೋಡ ನೋಡುತ್ತಲೆ ವರುಷದ ಹೊಸ್ತಿಲಲ್ಲಿ ಅಂಬೆಗಾಲಿಡುತ್ತಿರುವ ಬಳಗ ವಿಶ್ವದೆತ್ತರಕ್ಕೆ ಬೆಳೆಯುತ್ತಾ ವಿಶ್ವ ಬಂಧುವಾಗಿ , ವಿಶ್ವದ ವಿಶ್ವಾಸ ಗಳಿಸಲಿ.. ಬಳಗದ ಸರ್ವ ಸಂಗಾತಿಗಳಿಗೆ ವಂದನೆಗಳು. ಶುಭವಾಗಲಿ. ಬಳಗದಿಂದ ಅಷ್ಟು ಇಷ್ಟು ಕಲಿತಿರುವೆ.ಕಲಿಯುವುದು ಬಹಳಷ್ಟಿದೆ. ಎಷ್ಟು ಬಾರಿ ಓದಿದರು ಛಂದಸ್ಸು ತಲೆಗೆ ಹತ್ತತಾನೆ ಇಲ್ಲ. ನೆನಪಲ್ಲಿ ಉಳಿತಾನೆ ಇಲ್ಲರಿ. ಚನ್ನಕೇಶವ ಅವರು ಛಂದಸ್ಸು ಹೇಳುವ ಪರಿ ಅನನ್ಯ. ” ಸರ್ವಜ್ಞನೆಂಬುವವನು ಗರ್ವದಿಂದಾದವನೇ ಸರ್ವರೊಳಗೊಂದೊಂದು ನುಡಿಗಲಿತು.

    ವಿದ್ಯದ ಪರ್ವತವನ್ನೇ ಏರಿದ” ಎಂಬಂತೆ ಕನ್ನಡಮ್ಮನ ತೇರು ಬಳಗ ಸರ್ವಜ್ಞನ ತ್ರಿಪದಿಯಂತಿದೆ.ಬಳಗದಲ್ಲಿ ಭಾಗವಹಿಸುವುದು ಪುಣ್ಯವು ಸರಿ. ಬಳಗಕ್ಕೂ,ಭಾಗವಹಿಸುವ ಸರ್ವ ಕವಿ ಮನಸುಗಳಿಗೆ ಶುಭಾಷಯಗಳು ಶುಭವಾಗಲಿ ಶರಣು ಶರಣಾರ್ಥಿಗಳು.

  • ನಾಗೇಂದ್ರಪ್ಪ ಮಡ್ಯಾಲೆ


  • ಹಲವಾರು ಬಳಗಗಳಲ್ಲಿ ಬರೆದುಕೊಂಡಿದ್ದ ನನಗೆ, ಕನ್ನಡಮ್ಮನ ತೇರು ಸೇರಲು ಆಹ್ವಾನ ಬರುತ್ತದೆ (ಬಹುಶಃ ಚನ್ನಕೇಶವ ಅವರೇ ಕಳುಹಿಸಿದ್ದರು, ನೆನಪಿಲ್ಲ). ಹತ್ತರೊಡನೆ ಹನ್ನೊಂದು ಎಂದು ಬಳಗಕ್ಕೆ ಕಳೆದ ವರ್ಷ ನವೆಂಬರ್ ಒಂದನೆಯ ತಾರೀಖು ಸೇರ್ಪಡೆಗೊಂಡೆ. ಆದರೂ, ನಿಯಮಿತವಾಗಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಫೆಬ್ರವರಿವರೆಗೂ ಮೂರು ತಿಂಗಳಲ್ಲಿ ಬಿಡುವಿದ್ದಾಗ ಒಂದು ನಾಲ್ಕು ಪೋಸ್ಟ್ ಪ್ರಕಟಿಸಿದ್ದೆ ಅಷ್ಟೇ. ಒಂದು ದಿನ ಚೆನ್ನಕೇಶವ ಅವರೇ ಫೋನ್ ಮಾಡಿ, “ಅಕ್ಕಯ್ಯ, ನೀವೂ ಬಳಗದ ನಿರ್ವಾಹಕರಾಗಿ, ನಿಮ್ಮ ಅವಶ್ಯಕತೆ ಇದೆ” ಎಂದರು. “ನನ್ನ ಕೆಲಸದ ಒತ್ತಡದಲ್ಲಿ ನಿರ್ವಹಣೆ ಸಾಧ್ಯವಿಲ್ಲ” ಎಂದು ಹೇಳಿದರೂ, “ಹೆಚ್ಚೇನೂ ಕೆಲಸ ಇರುವುದಿಲ್ಲ, ನೀವು ಬಿಡುವಿದ್ದಾಗ, ಪೋಸ್ಟ್ ಗಳಿಗೆ ಅಪ್ರೂವಲ್ ಕೊಡುವುದು ಅಷ್ಟೇ, ನಾವೂ ಎಲ್ಲಾ ಜೊತೆಯಲ್ಲಿ ಇರ್ತೀವಿ” ಎಂದರು. ಹೀಗೆ ನಾನೂ ಬಳಗದಲ್ಲಿ ನಿರ್ವಾಹಕಳಾದೆ.

    ಫೆಬ್ರವರಿ ಮಾಹೆಯಲ್ಲಿ ಸದಸ್ಯರ ಪರಿಚಯ ಅಭಿಯಾನ ನಡೆಯುತ್ತಿತ್ತು. ಅಲ್ಲಿಯವರೆಗೆ ನಾನಿನ್ನೂ ನನ್ನ ಪರಿಚಯ ಹಾಕಿರಲಿಲ್ಲ. ನಿರ್ವಾಹಕಳಾದ ಮೇಲೆ ನನ್ನ ಪರಿಚಯದ ಪೋಸ್ಟ್ ಹಾಕಿ, ಅದರಲ್ಲಿ “ಹಲವಾರು ಫೇಸ್ ಬುಕ್ ಮತ್ತು ವಾಟ್ಸ್ ಆ್ಯಪ್ ಬಳಗಗಳಲ್ಲಿ ಛಂದಸ್ಸಿನ ಹಲವು ಪ್ರಕಾರಗಳ ಬಗ್ಗೆ ಕಲಿಯುತ್ತಿರುವುದಾಗಿ” ಬರೆದುಕೊಂಡಿದ್ದೆ. ಅದನ್ನು ಓದಿದ ಸದಸ್ಯರೊಬ್ಬರು, ಕಾಮೆಂಟ್ ಬಾಕ್ಸ್ ನಲ್ಲಿ, “ನಮಗೂ ಛಂದಸ್ಸಿನ ಬಗ್ಗೆ ಕಲಿಸಿಕೊಡಿ” ಎಂದು ಕಾಮೆಂಟ್ ಮಾಡಿದ್ದರು. ವಿಷಯವನ್ನು ನಮ್ಮ ನಿರ್ವಾಹಕರ ಬಳಗದಲ್ಲಿ ಪ್ರಸ್ತಾಪಿಸಿದಾಗ, ಚನ್ನಕೇಶವ ಅವರು, “ನಾವೂ ಬಳಗದಲ್ಲಿ ಆ ಬಗ್ಗೆ ಚರ್ಚೆ ಮಾಡಿದ್ದೆವು, ನೀವೂ ಈಗ ಅದನ್ನೇ ಹೇಳುತ್ತಿದ್ದೀರಿ, ಅದಕ್ಕೇ ಸಮಾನ ಮನಸ್ಕರು ಎಂದು ಹೇಳುವುದು. ನೀವೇ ಪ್ರಾರಂಭ ಮಾಡಿ ಬಿಡಿ” ಎಂದರು. “ನಾನೇ ಇನ್ನೂ ಕಲಿಕಾರ್ಥಿ, ಬಳಗದಲ್ಲಿ ಲಲಿತಮ್ಮ ಅವರಂತಹ ಛಂದಸ್ಸಿನ ಬಗ್ಗೆ ಹೆಚ್ಚಿನ ಜ್ಞಾನ ಇರುವವರು ಇದ್ದಾರೆ, ಅವರು ಮತ್ತು ನೀವು ನಡೆಸಿಕೊಂಡು ಹೋಗಿ” ಎಂದೆ. “ಲಲಿತಮ್ಮ ಅವರು ಫೇಸ್ ಬುಕ್ ಹೆಚ್ಚು ಬಳಸುವುದಿಲ್ಲ, ಪರವಾಗಿಲ್ಲ ನಿಮಗೆ ಗೊತ್ತಿರುವಷ್ಟೇ ಕಲಿಸಿಕೊಡಿ, ನಾವೂ ಜೊತೆಯಲ್ಲಿ ಇರ್ತೀವಿ” ಎಂದರು. “ಸರಿ ಆದಿಪ್ರಾಸದ ಬಗ್ಗೆ ಪ್ರಕಟಣೆ ಮಾಡ್ತೀನಿ, ಸದಸ್ಯರಿಂದ ಪ್ರತಿಕ್ರಿಯೆ ನೋಡಿಕೊಂಡು ಮುಂದುವರೆಸಬೇಕ? ಬೇಡವ? ಎಂಬ ಬಗ್ಗೆ ನಿರ್ಧರಿಸೋಣ” ಎಂದೆ.

    ಹೀಗೆ, ಮೊದಲಿಗೆ ಛಂದೋಬದ್ಧ ಕವನಗಳ ಜೀವಾಳವಾದ ಆದಿಪ್ರಾಸದ ಬಗ್ಗೆ ದಿ: ೧೫-೦೨-೨೦೨೩ರಂದು ಪ್ರಾರಂಭಿಸಲಾಯಿತು. ಅದಕ್ಕೆ, ಸದಸ್ಯರಿಂದ ಅಮೋಘವಾದ ಪ್ರತಿಕ್ರಿಯೆ ಬಂತು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಚಟುವಟಿಕೆ ಹಾಗೂ ಛಂದಸ್ಸಿಗೆ ಪೂರಕವಾದ ಭಾನುವಾರದ ಸ್ಪರ್ಧೆಯಲ್ಲಿ ತೊಡಗಿಸಿಕೊಂಡರು. ನಂತರದ ವಾರಗಳಲ್ಲಿ ಮಾತ್ರಾಗಣ ಆಧಾರಿತ ಪದ್ಯಗಳು, ಲಯಬದ್ಧ ಕವನಗಳು, ಮುಕ್ತಕಗಳು ‌ಹಾಗೂ ರಗಳೆಗಳ ಬಗ್ಗೆ ಲಲಿತಮ್ಮ ಅವರು, ಲತಾ ಮೇಟಿಕುರ್ಕೆಯವರು, ಸಹನಾ ಅವರು ಹಾಗೂ ಚೆನ್ನಕೇಶವ ಅವರು ಪ್ರಕಟಿಸಿದರು. ನಂತರದ ದಿನಗಳಲ್ಲಿ ಲಲಿತಮ್ಮ ಅವರು ಹಾಗೂ ಚೆನ್ನಕೇಶವ ಅವರ ಸಹಕಾರದೊಂದಿಗೆ, ಷಟ್ಪದಿಗಳ ಬಳಿಕ ಅಂಶಗಣಾಧಾರಿತ ಸಾಂಗತ್ಯ, ಚಿತ್ರ ತ್ರಿಪದಿ, ವಿಚಿತ್ರ ತ್ರಿಪದಿ, ಛಂದೋವತಂಸ ಹಾಗೂ ಏಳೆ ಪದ್ಯಗಳವರೆಗೆ ಸತತ ೧೯ ವಾರಗಳ ಕಾಲ ಜೊತೆ ಜೊತೆಯಲ್ಲಿ ಕಲಿಕೆಯನ್ನು ಮಾಡಿ, ಹೊಸ ಸದಸ್ಯರಿಗೆ ಅನುಕೂಲವಾಗಲೆಂದು ಪುನರ್ಮನನವನ್ನು ಪ್ರಾರಂಭಿಸಲಾಯಿತು. ಬಳಿಕ ಕಾರಣಾಂತರದಿಂದ, ಚೆನ್ನಕೇಶವರವರೇ ಪುನರ್ಮನನವನ್ನು ಮುಂದುವರೆಸಿದರು.

    ಈ ನಡುವೆ ವಾರದ ಪ್ರತಿದಿನವೂ ಒಂದೊಂದು ಚಟುವಟಿಕೆಗಳನ್ನು ಬಳಗದ ಇತರ ನಿರ್ವಾಹಕರು ನಿರ್ವಹಿಸುತ್ತಿದ್ದಾರೆ. ಕೆಲಸದ ಒತ್ತಡದಿಂದ ಹೆಚ್ಚು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಯ ದೊರೆತಾಗ ಬೇರೆ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದೇನೆ. ಈಗ ಮತ್ತೆ ಕಾರಣಾಂತರದಿಂದ ಮುಕ್ತಕ ಅಭಿಯಾನವನ್ನು ಮುಂದುವರೆಸಿಕೊಂಡು ಹೋಗುವ ಹೊಣೆ ಹೊತ್ತಿದ್ದೇನೆ. ಛಂದಸ್ಸಿನ ಕಲಿಕೆಯ ಪ್ರಾರಂಭದಲ್ಲಿ ನಿಯಮವನ್ನು ಪಾಲಿಸದೇ ಬರೆಯುತ್ತಿದ್ದ ಕೆಲವರಾದರೂ ಇತ್ತೀಚಿನ ದಿನಗಳಲ್ಲಿ ನಿಯಮ ಬದ್ಧವಾಗಿ ಛಂದೋಬದ್ಧ ಕವನಗಳನ್ನು ರಚಿಸುತ್ತಿರುವುದನ್ನು ಕಂಡಾಗ, “ಬನ್ನಿ ಛಂದಸ್ಸು ಕಲಿಯೋಣ” ಅಭಿಯಾನದ ಬಗ್ಗೆ ಸಾರ್ಥಕ ಭಾವ ಮೂಡುತ್ತದೆ. ಕನ್ನಡಮ್ಮನ ತೇರು ಬಳಗ ಇನ್ನೂ ಹೆಚ್ಚು ಹೆಚ್ಚು ಪ್ರವರ್ಧಮಾನವಾಗಿ ಬೆಳೆಯಲಿ.

  • ವಿಜಯ ಲಕ್ಷ್ಮಿ. ಎಸ್


  • ಆಕೃತಿಕನ್ನಡ

4 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW