ಅಂಗೈಯಲ್ಲಿ ಪ್ರಪಂಚ (ಭಾಗ- ೬)

ನಿಮ್ಮ ಮಾತು ಹೇಗಿರಬೇಕು, ಯಾವ ಸಂದರ್ಭದಲ್ಲಿ ನಮ್ಮ ಮಾತು ಹೇಗಿರಬೇಕು. ನಮ್ಮ ಪ್ರತಿಕ್ರಿಯೆ ಹೇಗಿರಬೇಕು. ಯಾವ ಸಂದರ್ಭದಲ್ಲಿ ನೀಡಬೇಕು ಈ ವಿಷಯದ ಕುರಿತು ಲೇಖಕಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ ಇರುವುದು ಸಹಜ. ಅದು ಕ್ರಿಯೆಯ ಪರವಾಗಿಯೇ ಇರಬಹುದು ಅಥವಾ ಕ್ರಿಯೆಯ ವಿರುದ್ಧವಾಗಿಯೂ ಇರಬಹುದು. ಇದು ಅಲ್ಲಿನ ಕ್ರಿಯೆಯ ಮೇಲೆ ಅವಲಂಬಿತ ಎಂದರೆ ತಪ್ಪಲ್ಲ. ಉದಾಹರಣೆಗೆ, ಒಂದು ಮಗುವನ್ನು ನೋಡಿದಾಗ ಮುಖ ಗಂಟಿಕ್ಕಿಕೊಂಡಿದ್ದರೆ ಆ ಮಗು ಅವರ ಹತ್ತಿರ ಕೂಡ ಹೋಗಲು ಇಷ್ಟಪಡುವುದಿಲ್ಲ. ಅದೇ ನಗುಮೊಗದಿಂದ ಮಾತನಾಡಿಸಿದರೆ ಮಗು ಕೂಡ ಖುಷಿಯಿಂದ ನಗುತ್ತಾ ಮಾತನಾಡುತ್ತದೆ. ಚಿಕ್ಕ ಮಗುವಿಗೇ ಇದೆಲ್ಲಾ ಅರ್ಥವಾಗುವಾಗ ಇನ್ನು ದೊಡ್ಡವರಿಗೆ ಅರ್ಥವಾಗದಿರುತ್ತದೆಯೇ? ಆದರೂ ಕೆಲವರು ನೀಡಬೇಕಾದಾಗ ಪ್ರತಿಕ್ರಿಯೆ ನೀಡುವುದಿಲ್ಲ, ನೋಡಿದರೂ ನೋಡದ ಹಾಗೆ, ಕಂಡರೂ ಕಾಣದ ಹಾಗೆ, ಗೊತ್ತಿದ್ದರೂ ಗೊತ್ತಿಲ್ಲದ ಹಾಗೆ ನಡೆದುಕೊಳ್ಳುತ್ತಾರೆ. ಇದು ಕೆಲವು ವಿಷಯಗಳಲ್ಲಿ ಸರಿ ಎನಿಸಬಹುದು. ಏಕೆಂದರೆ, ಬೇಡದ ವಿಷಯಗಳಲ್ಲಿ ಮೂಗು ತೂರಿಸಿ ಅನ್ನಿಸಿಕೊಳ್ಳುವುದಕ್ಕಿಂತ ಸುಮ್ಮನಿರುವುದೇ ಲೇಸು ಅಂತಾರಲ್ಲ ಹಾಗೆ. ಇನ್ನು ಅನ್ಯರ ವಿಷಯದಲ್ಲಿ, ಸಂಬಂಧಪಡದ ವಿಷಯಗಳಲ್ಲಿ, ನಮಗೆ ತಿಳುವಳಿಕೆ ಇಲ್ಲದ ವಿಷಯಗಳಲ್ಲಿ ಪ್ರತಿಕ್ರಿಯೆ ನೀಡದಿರುವುದು ಒಳ್ಳೆಯದು. ಅನ್ಯರ ವಿಷಯದಲ್ಲಿ ಅಂದರೆ ಯಾರೋ ಇಬ್ಬರು ಮಾತನಾಡುತ್ತಿರುವಾಗ ಅಥವಾ ಏನಾದರೂ ಕೆಲಸ ಮಾಡುತ್ತಿರುವಾಗ ಮಧ್ಯದಲ್ಲಿ ಹೋಗಿ ಸಲಹೆ ನೀಡುವುದು, ವ್ಯಂಗ್ಯವಾಡುವುದು, ಅವರನ್ನು ಮಾನಸಿಕವಾಗಿ ಕುಗ್ಗಿಸುವುದು, ಇಲ್ಲದಿದ್ದರೆ ಇರುವ ಇಬ್ಬರಲ್ಲಿ ಒಬ್ಬರನ್ನು ಹೊಗಳಿ ಇನ್ನೊಬ್ಬರನ್ನು ನಿಕೃಷ್ಟವಾಗಿ ಕಾಣುವುದು, ಹೀಗೆ ಮಾಡುವುದರಿಂದ ಅಲ್ಲಿನ ವಾತಾವರಣವೇ ಹಾಳಾಗುತ್ತದೆ.

ಒಂದು ಮನೆಯೆಂದ ಮೇಲೆ ಅಲ್ಲಿ ಎಲ್ಲರೂ ಎಲ್ಲರ ಮಾತಿಗೆ ಮನ್ನಣೆ, ಗೌರವ, ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಯಾರನ್ನಾದರೂ ಕಡೆಗಣಿಸಿದರೆ ಅದು ಆ ವ್ಯಕ್ತಿಯ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದಿನಗಳೆದಂತೆ ಅದು ಮನೆಯವರ ಮೇಲೆ ದ್ವೇಷವಾಗಿ ಬೆಳೆಯುತ್ತಾ ಹೋಗಬಹುದು ಅಥವಾ ಆ ವ್ಯಕ್ತಿಯ ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದು. ಆ ವ್ಯಕ್ತಿಗೆ ನಾನು ಯಾರಿಗೂ ಬೇಡವಾದವನು, ನನ್ನನ್ನು ಯಾರೂ ಇಷ್ಟಪಡುವುದಿಲ್ಲ, ಅದಕ್ಕೇ ನನ್ನ ಜೊತೆ ಯಾರೂ ಮಾತನಾಡುವುದಿಲ್ಲ ಹೀಗೆ ನಕಾರಾತ್ಮಕ ಚಿಂತನೆಗಳು ಪ್ರಾರಂಭವಾಗಿ ಮುಂದೆ ಅದು ಖಿನ್ನತೆಗೆ ತಿರುಗಬಹುದು. ಹಾಗಾಗಿ ಮನೆಯಲ್ಲಿ ಯಾರಾದರೊಬ್ಬರ ಮನಸ್ಸಲ್ಲಿ ಇಂತಹ ಒಂದು ಭಾವನೆ ಬರಲು ಬಿಡದಂತೆ ಮನೆಯ ಹಿರಿಯರು ಎಲ್ಲರನ್ನೂ ಸಂಭಾಳಿಸಬೇಕು. ಒಂದು ವೇಳೆ ಅರಿಯದೇ ಮನೆಯ ಸದಸ್ಯರಲ್ಲಿ ಅಂತಹ ಭಾವನೆ ಮೂಡಿದರೆ ಅವರ ಜೊತೆ ಕುಳಿತು ಮಾತನಾಡಿ ಚಿಗುರುವ ಮೊದಲೇ ಅದನ್ನು ಬೇರು ಸಮೇತ ಕಿತ್ತು ಹಾಕಬೇಕು. ಅಲ್ಲದೇ ಆ ವ್ಯಕ್ತಿಗೆ ಇದು ನಿನ್ನ ಮನೆ, ನಾವೆಲ್ಲರೂ ನಿನ್ನವರು, ನಿನ್ನ ಕಷ್ಟ ಸುಖಗಳಲ್ಲಿ ಜೊತೆಗಿರುವವರು ಎಂಬ ಒಂದು ಭರವಸೆ, ಆಪ್ತ, ಸುರಕ್ಷಿತ ಭಾವ ಮೂಡಿಸಬೇಕು.

ಫೋಟೋ ಕೃಪೆ : ಅಂತರ್ಜಾಲ

ಒಂದು ಸಂಸ್ಥೆ, ಶಾಲಾ-ಕಾಲೇಜು ಇಂತಹ ಕಡೆಗಳಲ್ಲೂ ಸಹ ಸಲಹೆ, ಸೂಚನೆ, ಪ್ರತಿಕ್ರಿಯೆ ಎಲ್ಲಾ ಮುಖ್ಯವಾಗುತ್ತದೆ. ಶಿಕ್ಷಕರು ಪಾಠ ಮಾಡಿ ಪ್ರಶ್ನೆ ಕೇಳಿದಾಗ ಅಥವಾ ಅರ್ಥವಾಯ್ತಾ ಎಂದಾಗ ಮಕ್ಕಳು ಪ್ರತಿಕ್ರಿಯಿಸದಿದ್ದರೆ ಕಷ್ಟವಾಗುತ್ತದೆ ಅಥವಾ ಶಿಕ್ಷಕರನ್ನು ಮಗು ತನಗೆ ಹೊಟ್ಟೆ ನೋವೆಂದೋ, ವಾಶ್ ರೂಮ್ಗೆ ಹೋಗಬೇಕೆಂದೋ ಕೇಳಿದಾಗ ಶಿಕ್ಷಕರು ಗಮನ ಹರಿಸದಿದ್ದರೆ, ಪ್ರತಿಕ್ರಿಯಿಸದಿದ್ದರೆ ಮಗುವಿಗೆ ಕಷ್ಟವಾಗುತ್ತದೆ. ಹೀಗೆ ದಿನನಿತ್ಯದ ಬದುಕಿನಲ್ಲಿ ಎಲ್ಲೆಡೆಯೂ ಅಂದರೆ ಅವಶ್ಯಕತೆ ಇರುವ ಕಡೆ ಪ್ರತಿಕ್ರಿಯಿಸಬೇಕಾದ್ದು ನಮ್ಮ ಕರ್ತವ್ಯ, ಧರ್ಮ ಎಂದರೆ ತಪ್ಪಲ್ಲ.

ಒಂದು ಗುಂಪು ಇದ್ದರೆ ಅಲ್ಲಿ ಯಾರಾದರೂ ಏನಾದರೂ ಕೇಳಿದರೆ ಗೊತ್ತಿರುವವರು ನೋಡಿ ಉತ್ತರಿಸದಿದ್ದರೆ ಅದು ತಪ್ಪಾಗುತ್ತದೆ, ಕೇಳಿದವರಿಗೂ ಅವಮಾನವಾಗುತ್ತದೆ. ಅವರ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುತ್ತದೆ. ಅವಸರದಲ್ಲಿದ್ದರೆ ಕಡೇಪಕ್ಷ ಅದನ್ನಾದರೂ ತಿಳಿಸಿ ಆಮೇಲೆ ಪ್ರತಿಕ್ರಿಯಿಸುವೆ ಅಥವಾ ಈಗ ಬ್ಯುಸಿ ಎಂದಷ್ಟಾದರೂ ಹೇಳಿದರೆ, ಕೇಳಿದವರಿಗೂ ಒಂದು ಸಮಾಧಾನ. ನಂತರ ಅವರಿಗೆ ಬಿಡುವಾದಾಗ ಉತ್ತರಿಸಬಹುದು. ಏಕೆಂದರೆ, ಗುಂಪುಗಳನ್ನು ಮಾಡಿರುವುದು ಸಹಜವಾಗಿ ಕೆಲವು ವಿಚಾರಗಳನ್ನು ಹಂಚಿಕೊಳ್ಳಲು, ಇಲ್ಲ ಒಂದಷ್ಟು ಜನರು ಸೇರಿ ಯಾವುದಾದರೊಂದು ಕಾರ್ಯಕ್ರಮವನ್ನೋ, ಸಾಹಿತ್ಯ, ಸಂಗೀತ, ಕಲೆ ಈ ರೀತಿಯ ಬಳಗಗಳನ್ನು ಮುನ್ನಡೆಸಲು, ಪ್ರವಾಸ ಹೋಗುವ ಬಗ್ಗೆ ಯೋಜನೆ ರೂಪಿಸಲು, ರಕ್ತದಾನ, ಸಮಾಜಸೇವೆ ಹೀಗೆ ಸಮಾಜಮುಖಿ ಕಾರ್ಯಗಳನ್ನು ಮಾಡಲು, ಇನ್ನೂ ಮುಂತಾದ ಕಾರಣಗಳಿಗಾಗಿ. ಹಾಗಾಗಿ ಅಲ್ಲಿನ ಆಗು ಹೋಗುಗಳ ಬಗ್ಗೆ ಒಂದಿಷ್ಟು ಮಾತುಕತೆ, ಚರ್ಚೆ ಮಾಡಲೇಬೇಕಾಗುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಪ್ರತಿಕ್ರಿಯೆ ನೀಡುವಾಗ ಬೇರೆಯವರಿಗೆ ಬೇಸರವಾಗದಂತೆ ಜಾಗರೂಕತೆ ವಹಿಸಬೇಕು. ಒಂದು ವೇಳೆ ಅದು ಸರಿ ಇಲ್ಲದಿದ್ದರೆ ಅದನ್ನು ಹೇಳುವುದಕ್ಕೂ ಒಂದು ರೀತಿ ಇರುತ್ತದೆ. ಇನ್ನೊಂದು ವಿಷಯ, ಯಾವಾಗಲೂ ಬೇರೆಯವರಿಂದ ನಾವು ನಿರೀಕ್ಷಿಸಿದ ಪ್ರತಿಕ್ರಿಯೆಯೇ ಸಿಗುತ್ತದೆ ಎಂದಿಲ್ಲ. ಹಾಗಂತ ಆಗ ನಾವು ಸಿಟ್ಟು, ಬೇಸರ ಮಾಡಿಕೊಳ್ಳದೇ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕಾಗುತ್ತದೆ. ಏಕೆಂದರೆ, ನಮ್ಮ ಅನಿಸಿಕೆಯಂತೆಯೇ ಬೇರೆಯವರದು ಇರಬೇಕೆಂದಿಲ್ಲ. ಮೊದಲನೆಯದಾಗಿ ನಾವು, ನಮ್ಮಂತೆಯೇ ಇನ್ನೊಬ್ಬರು ಇರಬೇಕೆಂದು ನಿರೀಕ್ಷಿಸುವುದೇ ತಪ್ಪು. ಇನ್ನು ಈ ಪ್ರತಿಕ್ರಿಯೆ ಎನ್ನುವುದು ಮಾತಲ್ಲಿಯೇ ಅಲ್ಲದೇ ಇನ್ನೊಬ್ಬರ ಮುಖಭಾವದಿಂದ, ಆಂಗಿಕ ವರ್ತನೆಯಿಂದಲೂ ತಿಳಿಯುತ್ತದೆ. ಈ ರೀತಿಯ ಅನವಶ್ಯಕ ಪ್ರತಿಕ್ರಿಯೆ ನೀಡಿ ಅವರ ದುಃಖಕ್ಕೋ, ಬೇಸರಕ್ಕೋ ಕಾರಣವಾಗುವ ಬದಲು ನಮಗೆ ಇಷ್ಟವಾಗದಿದ್ದರೆ ಅವರಿಂದ ದೂರವಿದ್ದು ಬಿಡುವುದು ಒಳ್ಳೆಯದು. ಆ ಒಂದು ಕ್ಷಣ ಪ್ರತಿಕ್ರಿಯೆ ನೀಡದಿದ್ದರೆ ಮುಂದೆ ಆಗುವ ಅನೇಕ ಅನಾಹುತಗಳನ್ನು ತಪ್ಪಿಸಬಹುದು. ಪಟ್ಟಂತ/ತಕ್ಷಣಕ್ಕೆ ಪ್ರತಿಕ್ರಿಯೆ ನೀಡುವ ಬದಲು, ಏನು ಹೇಳಿದರೆ ಏನಾಗುತ್ತದೆ, ಯಾರಿಗೆ ಹೇಳುತ್ತಿದ್ದೇವೆ, ಸಮಯ, ಸಂದರ್ಭ ಎಲ್ಲವನ್ನೂ ಯೋಚಿಸಿ ಪ್ರತಿಕ್ರಿಯೆ ನೀಡುವುದು ಒಳ್ಳೆಯದು. ಅವಸರದಲ್ಲಿ ನೀಡುವ ಪ್ರತಿಕ್ರಿಯೆಯಿಂದ ಇರುವ ಕೆಲಸ ಕಳೆದುಕೊಳ್ಳುವ ಸಂದರ್ಭ ಉಂಟಾಗಬಹುದು. ಸ್ನೇಹ, ಸಂಬಂಧಗಳಲ್ಲಿ ಬಿರುಕು ಮೂಡಬಹುದು.

ಇನ್ನು ಕೆಲವರು, ಬೇರೆಯವರು ಪ್ರತಿಕ್ರಿಯೆ ನೀಡಲೆಂದೇ ಅವರು ಸುಮ್ಮನಿದ್ದರೂ ಸಹ ಮತ್ತೆ ಮತ್ತೆ ಅವರಿಗೆ ಇಷ್ಟವಾಗದಿದ್ದುದನ್ನೇ ಹೇಳೀ ಹೇಳೀ ಅವರನ್ನು ಟ್ರಿಗರ್(ರೊಚ್ಚಿಗೆಬ್ಬಿಸುವುದು) ಮಾಡುತ್ತಾರೆ. ಅಂತಹ ಸಮಯದಲ್ಲಿ ತಾಳ್ಮೆ ಬಹಳ ಮುಖ್ಯ. ಇನ್ನೊಂದು ರೀತಿಯ ಜನರಿರುತ್ತಾರೆ. ಬೇರೆಯವರ ಬಗ್ಗೆ ಅವರಿಗೆ ಅಸಮಾಧಾನವಿದ್ದರೆ ನೇರವಾಗಿ ತೋರಿಸಿಕೊಂಡು ಕೆಟ್ಟವರಾಗದೇ ಅವರನ್ನು ಹೊಗಳಿಕೊಂಡು, ಹಿಂದಿನಿಂದ ಅವರು ಮಾಡಿದ ಕೆಲಸಗಳಲ್ಲಿ ತಪ್ಪು ಹುಡುಕಿ ಬೇರೆಯವರನ್ನು ಅವರ ಮುಂದೆ ಮಾತನಾಡುವಂತೆ ಪ್ರಚೋದಿಸುತ್ತಾರೆ. ಯಾರು ಏನು ಹೇಳಿದರೂ ಕೇಳುವವರು ಸ್ಥಿತಪ್ರಜ್ಞರಾಗಿರುವುದು ಒಳ್ಳೆಯದು.

( ಸುತ್ತ ಮುತ್ತ   ಲೇಖನಗಳ ಸಂಕಲನದಿಂದ)

ಹಿಂದಿನ ಸಂಚಿಕೆಗಳು :


  •  ಮಂಗಳ ಎಂ ನಾಡಿಗ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW