‘ಲೇಪಾಕ್ಷಿ ದೇಗುಲ ಮೆಟ್ಟಿಲ ಮೇಲೆ ಕುಳಿತಾಗ ಅಜಾಂತ ಗುಹೆಗಳಿಗೂ ಹೀಗೆ ಪ್ರವಾಸ ಹೋಗಿ ಬರೋಣವೆಂದು ಹೇಳಿದಿರಿ. ಆದರೆ ಯಾಕೆ ಹೇಳದೆ ನಡೆದು ಬಿಟ್ಟಿರೀ ವರ್ಮಾ ಅವರೆ!’ – ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಡಿ ಮಹೇಂದ್ರ ಅವರು ಬರೆದ ಭಾವುಕ ಬರಹವನ್ನು ತಪ್ಪದೆ ಮುಂದೆ ಓದಿ…
ಸರಿಯಾಗಿ ಮೂರು ತಿಂಗಳ ಹಿಂದೆ ಲೇಪಾಕ್ಷಿಯ ಒಂದು ದಿನ ಪ್ರವಾಸಕ್ಕೆ “ನೀವೂ ಬರಲೇಬೇಕು, ನೀವು ಬಹಳ ಬುಸಿ ಇರುತ್ತೀರಿ, ನಿಮ್ಮ ಫ್ರೀ ಟೈಂನಲ್ಲೆ ಫೀಕ್ಸ್ ಮಾಡೋಣ” ಅನ್ನೊ ನಿಮ್ಮ ಸೌಜನ್ಯ ನುಡಿ ನನ್ನ ಮನ ಕಲಕಿಬಿಟ್ಟಿತು.. ನೀವು ಹೇಳಿದ ಹಾಗೆ ಅಂದು (05-11-22) ಲೇಪಾಕ್ಷಿಗೆ ಹೋರಟು ಬಂದೆ. ಪ್ರವಾಸಕ್ಕೆ ಬಂದವರೆಲ್ಲರೂ ಹಿರಿಯ ಕಲಾವಿದರೇ ಆಗಿದ್ದರೂ ನಾನೊಬ್ಬನೆ ಅಲ್ಲಿ ಸಣ್ಣವನು…! ಹಾಗಂತ ನನ್ನ ಪಕ್ಕದಲ್ಲೆ ಕುಳಿತು ದಾರಿಯುದ್ದಕ್ಕೂ ಕಲೆ, ನಿಮ್ಮ ಬದುಕು ಸಾಗಿ ಬಂದ ಹಾದಿಯದೆ ಮಾತು, ಪಯಣದ ಹಾದಿಯಲ್ಲಿ ಓಡುವ ಟೆಂಪೋ ಕಿಟಕಿಯಲಿ ಚಿಕ್ಕಬಳ್ಳಾಪುರ ದಾಟುವಾಗಲು ಬದಿಯ ಬಂಡೆಗಳ ಮೇಲೆ ಹಿಂದೆಂದೋ ನೀವು ಚಿತ್ರಿಸಿದ ಹನುಮಂತನ ಚಿತ್ರಗಳ ತೋರಿಸಿದಿರಿ, ಇಂದಿಗೂ ಆ ಬಂಡೆಗಳ ಮೇಲೆ ವಿರಾಜಮಾನವಾಗಿ ಚಿತ್ರ ರಾರಾಜಿಸುತ್ತಿದೆ.
ಅಂದು ಸಣ್ಣ ನೀರಿನ ಬಾಟಲಿ ಕೊಂಡಾಗಲೂ ನೀವೆ ಹಣ ಪಾವತಿಸಿದಿರಿ. ಎಲ್ಲ ಖರ್ಚುಗಳನ್ನು ನೀವೇ ಭರಿಸಿದಿರಿ.. ನಮ್ಮೇಲ್ಲರ ಋಣದ ಭಾರ ಹೆಚ್ಚಿಸಿದಿರಿ… ಅಂದಿನ ನಿಮ್ಮ ಆತ್ಮೀಯ ಭಾವ, ಎಲ್ಲರೊಂದಿಗೆ ಮಕ್ಕಳಾಗಿ ಬೇರೆತ ಆ ಘಳಿಗೆಗಳೇ.. ಹೆಗಲ ಮೇಲೆ ಕೈಹಾಕಿ, ಕೈ ಹಿಡಿದು ನೀವು ಲೇಪಾಕ್ಷಿಯ ಮೆಟ್ಟಿಲೇರುವಾಗಲೂ ಆಯಾಸಗೊಂಡವರಂತೆ ಕಂಡಿರಿ. ಮರುಕ್ಷಣವೇ ಮಕ್ಕಳಾಂತೆ ನಿಮ್ಮ ನಲೀವು ನಿಮ್ಮೋಳಗೆ ಆಯಾಸಭಾವ ಮರೆಯಾಗಿಸಿಬಿಟ್ಟಿತು. ಸುಳಿವೇ ಕೊಡಲೇಯಿಲ್ಲ! ಅಂದಿನ ಎಲ್ಲರೊಂದಿಗೆ ಬೆರೆವ ಬಗೆ, ಸಲಿಗೆ.. ಪ್ರೀತಿ ನಡೆ ನೀವು ಬಹುಕಾಲ ಇನ್ನಿರಲಾರಿರಿ ಅಂತ ಸೂಕ್ಷ್ಮವಾಗಿ ಹೇಳಿಬಿಟ್ಟವೆ!… ತಿಳಿಯಲೇ ಇಲ್ಲವಲ್ಲ!!…
ನಾನು ಹುಟ್ಟಿ ಬೆಳೆದ ಬಾಲ್ಯದ ದಿನಗಳಲ್ಲಿ ಹನುಮಂತನಗರದ ಆಂಜನೇಯ ಗುಡ್ಡದಲ್ಲಿ ನಿಮ್ಮದೆ ಚಿತ್ರಗಳ ನೋಡುತ್ತಲೆ… ನನ್ನೊಳಗಿನ ಕಲಾವಿದ ಜಾಗೃತನಾಗಿದ್ದು. ಅಲ್ಲಿ ಪ್ರತಿ ಚಿತ್ರದ ಮುಂದೆ ನಿಂತಾಗಲೂ ‘ಆ ಅಜ್ಞಾತ’ ಕಲಾವಿದನ ಕೃತಿ ನೋಡುವಾಗಲೂ ಯಕ್ಷನೋರ್ವನೇ ಭುವಿಗೆ ಬಂದು ಚಿತ್ರಿಸಿ ಹೋದನೆಂಬ ಅವರಿವರ ಹೇಳಿಕೆಯನ್ನೆ ನಿಮ್ಮನ್ನು ಪ್ರತ್ಯೇಕ್ಷ ನೋಡುವತನಕ ನಂಬಿ ಬಿಟ್ಟಿದ್ದೆ..! ಒಂದು ಬಂಡೆಯಲ್ಲಿ ಎದೆಯೇರಿಸಿದ ಬಿಲ್ಲು ಬಾಣದೊಂದಿಗೆ ರಾಮ! ಮಗದೊಂದು ಬಂಡೆ ಒಂದು ಬದಿಗೆ ತಾಟಕಿ… ಇನ್ನೊಂದು ಬದಿಗೆ ಜಿಗಿವ ಬಂಗಾರದ ಜಿಂಕೆ! ಗುಹೆಯಂತ ಸಣ್ಣ ಬಂಡೆ ಸೀಳುಗಳ ತುದಿಗೆ ರಾಮನಿಗೆ ಕಾದ ಶಬರಿ, ಸೂರ್ಯನ ನುಂಗ ಹೊರಟ ಹನುಮಂತ, ಮುಖ, ರಾಮನ ಪಟ್ಟಾಭಿಷೇಕ!! ಎಲ್ಲ ಚಿತ್ರಗಳು ನನ್ನ ಬಾಲ್ಯ ನೆನಪಿನ ಸ್ಮೃತಿಯಲ್ಲಿ ಅಳಿಸಲಾಗದ ಅಚ್ಚರಿ ಛಾಪುಗಳು.
ಅಂದ ಹಾಗೆ ನೀವು ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಗೆ ಬಿಡಿಸಿ ಕೊಟ್ಟ ಭುವನೇಶ್ವರಿ ಚಿತ್ರಕ್ಕೆ ಆಗೀನ ಅಧ್ಯಕ್ಷರು ಸಹಿ ಮಾಡುವ ಅವಕಾಶ ನೀಡಲಿಲ್ಲ ಅಂದಾಗ ನನಗೂ ಕನವಿಸಿಯಾಯಿತು. ನೀವು ಮೌನವಾಗಿ ಪ್ರತಿಭಟಿಸಿದಿರಿ. ನಾನು ನಿಮ್ಮನ್ನು ಒತ್ತಾಯಿಸಿ, ಒಪ್ಪಿಸಿ ಕಸಾಪಗೆ ಕಾಗದ ಬರೆದೆ ಬಿಟ್ಟೆ. ವರ್ಷವಾದರೂ ಉತ್ತರ ಬರಲಿಲ್ಲ. ನಿಮ್ಮ ಸಮಾಧಾನಕ್ಕೆ ಒಂದು ಪರಿಶೀಲನ ಸಮಿತಿ ಮಾಡಿ ಕಸಾಪ ಕೈ ತೊಳೆದುಕೊಂಡಿತು. ನಿಮಗೆ ನ್ಯಾಯ ಸಿಗಲಿಲ್ಲ!! ನೀವು ಅದಕ್ಕೆ ನೊಂದುಕೊಳ್ಳಲೆ ಇಲ್ಲ!!! ನಿಮ್ಮ ಸಹನೆ ನಿಜಕ್ಕೂ ಅಚ್ಚರಿಯೇ ಸರಿ. ನೀವು ಈಗಿಲ್ಲ. ನಿಮಗೆ ಕಸಾಪ ಇನ್ನು ನ್ಯಾಯ ಕೊಟ್ಟಿಲ್ಲ . ಅದಕ್ಕಾಗಿ ನೀವೂ ಕಾಯಲಿಲ್ಲ.. ಯಾರನ್ನೂ ದೂಷಿಸಲಿಲ್ಲ!.. ಈ ಗುಣವೆ ಸುವರ್ಣ.
ರಾಜ್ಯ ಸರ್ಕಾರ ಭುವನೇಶ್ವರಿ ಚಿತ್ರ ರಚಿಸಬೇಕೆಂದಾಗಲೂ ನೀವು ಹೊಸಬರಿಗೆ ಅವಕಾಶ ನೀಡಿ, ಅದೇಷ್ಟೋ ಯುವ ಕಲಾವಿದರು ಇದ್ದಾರೆ, ಅವರಿಗೆ ಅವಕಾಶ ನೀಡಿ, ಎಂದೆನ್ನುತ್ತಲೆ ಸರ್ಕಾರದ ಕೋರಿಕೆಯನ್ನು ನಲ್ಮೆಯಿಂದ ತಿರಸ್ಕರಿಸಿದಿರಿ. ಹಾಗೆಂದು ಆಯ್ಕೆಗೊಂಡ ಬೇರೆ ಕಲಾವಿದ ಚಿತ್ರಿಸುವಾಗಲೂ ಚಿತ್ರ ರಚನೆ ಪ್ರತಿ ಹಂತದಲ್ಲೂ ತಪ್ಪದೆ ವಿಚಾರಿಸಿ ಮಾರ್ಗದರ್ಶನ ನೀಡುತ್ತಲೆ ಇದ್ದೀರಿ. ಇಂದಿನ ಸರ್ಕಾರದ ಅಧಿಕೃತ ಭವನೇಶ್ವರಿ ಚಿತ್ರದಲ್ಲೂ ನಿಮ್ಮದೇ ಸಲಹೆ ಆಧಾರಿಸಿದ ಆಭರಣಗಳಲ್ಲಿ ಅವುಗಳನ್ನುಅಳವಡಿಸಿದ್ದು ನೀವು ಅದನ್ನು ಮೆಚ್ಚಿ, ಭುಜ ತಟ್ಟಿದಿರಿ.. ಇನ್ನಷ್ಟು ಸೇರ್ಪಡೆಗಳನ್ನು ಶಿಲ್ಪ ರಚಿಸುವಾಗಲೂ ಅಳವಡಿಸುವಂತೆ ಕೋರಿದಿರಿ. ಎಂಥ ಉದಾತ್ತ ಭಾವ ನಿಮ್ಮದು.
ನಿಮ್ಮ ಪ್ರತಿ ಭೇಟಿಯಲ್ಲೂ ಒಂದು ಆತ್ಮೀಯಭಾವ ಮಾತುಕತೆಗಳು ಕಲೆಯ ಬಿಟ್ಟು ಇನ್ನಾವ ಹಾದಿಯೂ ಹಿಡಿಯಲಿಲ್ಲ. ಇದು ನಿಮ್ಮ ಕಲೆಯ ಕುರಿತ ಒಲವು ಅಲ್ಲದೆ ಇನ್ನೇನು.
ಲೇಪಾಕ್ಷಿ ದೇಗುಲ ಮೆಟ್ಟಿಲ ಮೇಲೆ ಕುಳಿತಾಗ ಅಜಾಂತ ಗುಹೆಗಳಿಗೂ ಹೀಗೆ ಪ್ರವಾಸ ಹೋಗಿ ಬರೋಣವೆಂದು ಹೇಳಿದಿರಿ. ಪ್ರವಾಸದ ಯೋಜನೆ ಮಾಡುವ ಮುನ್ನವೇ ನಿರ್ಗಮಿಸಿದರಲ್ಲ ಗುರುಗಳೆ…. ಬಹುಶಃ ಕರ್ನಾಟಕ ಯೋಗಿ ತಪಸ್ವಿ ಕಲಾವಿದನ ಕಳೆದುಕೊಂಡು ಕಲಾಕ್ಷೇತ್ರ ತಬ್ಬಲಿಯಾಗಿದೆ. ನಿಮ್ಮ ಕೋರಿಕೆಯಂತೆ ಐತಿಹಾಸಿಕ ತಾಣಗಳ ದೃಶ್ಯಗಳನ್ನು ಕಲೆಯಲ್ಲಿ ಸೆರೆ ಹಿಡಿಯಬೇಕೆಂಬ ನಿಮ್ಮ ಕಲ್ಪನೆ, ಯೋಜನೆ ಸಾಕಾರಗೊಳಿಸಬೇಕು. ನಿಮಗೆ ನೀಡಬಹುದಾದ ನಿಜ ಶ್ರದ್ದಾಂಜಲಿ ಅದು. ಮತ್ತೆ ಹುಟ್ಟಿ ಬನ್ನಿ… ಆಂಜನೇಯನ ಗುಡ್ಡದ ಬಂಡೆಗಳು ಈಗ ಚಿತ್ರಗಳಿಲ್ಲದೆ ಬರಿದಾಗಿವೆ…
- ಡಿ ಮಹೇಂದ್ರ – ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರು, ಬೆಂಗಳೂರು.