“ಪಿಳಲಿ ಮರ” ವನ್ನು ಕತ್ತರಿಸುವಾಗ ಮರದಿಂದ ರಕ್ತ ಸುರಿಯಿತಂತೆ ಅಷ್ಟೇ ಅಲ್ಲದೆ ಅದನ್ನು ಕತ್ತರಿಸಿದ ವ್ಯಕ್ತಿ ಅಂದಿನ ದಿನ ಸಾಯಂಕಾಲ ಅಸುನೀಗಿದ ಎಂದು ಊರ ಹಿರಿಯರೊಬ್ಬರು ತಿಳಿಸಿದರು. ಪಿಳಲಿ ಮರ ಕುರಿತು ಇನ್ನಷ್ಟು ಕುತೂಹಲಕಾರಿ ವಿಷಯವನ್ನು ಡಾ. ಪ್ರಕಾಶ ಬಾರ್ಕಿ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ ತಪ್ಪದೆ ಓದಿ…
ಮುಖ್ಯ ರಸ್ತೆಯಿಂದ… ದೂರಕ್ಕೆ ದೃಷ್ಟಿ ಕೀಲಿಸಿದಾಗ ಸುಮಾರು 30 ರಿಂದ 40 ಮರಗಳು ಒತ್ತಾಗಿ ಬೆಳೆದು ನಿಂತಂತೆ ಭಾಸವಾಗುತ್ತಿರುವ ಪ್ರದೇಶವಿತ್ತು, ಚಿಕ್ಕ ಕಾಡು ರೀತಿಯದು.
ಮೊದಲೇ ನಿರ್ಧರಿಸಿಂತೆ ಬೈಕ್ಗಳನ್ನು ಮುಖ್ಯ ರಸ್ತೆಯಿಂದ ಆ ಕಾಡಿನೆಡೆಗೆ ಓಡಿಸತೊಡಗಿದೆವು. ಮುಖ್ಯ ರಸ್ತೆಯಿಂದ ಸುಮಾರು 600 ರಿಂದ 800 ಮೀಟರ್ ಉದ್ದದ, ಟಾರು ಕಾಣದ ಕಚ್ಚಾ ರಸ್ತೆ. ಜಿಟಿಜಿಟಿ ಮಳೆಯಿದ್ದರಂತೂ ಥೇಟು ಕೆಸರು ಹೊಂಡ. ನಡೆಯುವುದೂ ಕಷ್ಟ. ಸುತ್ತಲೂ ಪಚ್ಚೆಪೈರು ಹೊಲ. ಎರಡು ಹೊಲಗಳ ನಡುವಿನ ಕಾಲುದಾರಿಯಿದು.
ನಾವು ಕಾಡು ಎಂದು ಭಾವಿಸಿಕೊಂಡ ಪ್ರದೇಶ ಸನಿಹವಾದಂತೆಲ್ಲ ಅರ್ಥವಾಗಿದ್ದು ಅದು ಕಾಡಲ್ಲ, ಕೇವಲ ಒಂದೇ ಮರ. ಸುಮಾರು ಒಂದೂವರೆ ಎಕರೆ ಅಗಲವಾದ ಪ್ರದೇಶದಲ್ಲಿ ಕೇವಲ ಒಂದೇ ಒಂದು ಮರ ಆವರಿಸಿಕೊಂಡಿದೆ. ಇದು ಆಲದ ಮರದ ಪ್ರಭೇದವಾದ ಪಿಕಳಿ ಮರ (Ficus microcarpa). ಕನ್ನಡದಲ್ಲಿ ಪಿಕಳಿ ಮರ,ಕಿರುಗೋಳಿ, ಪೀಲದಮರ,ಪಿಲಾಲ ಎನ್ನುವರು. ಆಡುಭಾಷೆಯಲ್ಲಿ ಪಿಳಲಿ ಮರ ಎಂದು ಕರೆಯಲಾಗುತ್ತಿದೆ.
ಪಿಳಲಿ ಮರದ ಕಾಂಡ 60 ಅಡಿ ಉದ್ದವಿದ್ದು ಅದರಿಂದ ಟಿಸಿಲೊಡೆದ ರೆಂಬೆ ಕೊಂಬೆಗಳು ಅಪಾರ, ಅವುಗಳ ಪುನಃ ಟಿಸಿಲೊಡೆದು ಭೂಮಿಯತ್ತ ಬಾಗಿ.. ಹುದುಗಿ, ಮರದಂತೆ ಮತ್ತೇ ಟಿಸಿಲೊಡೆದು ಹರಡುತ್ತಿವೆ. ಹೀಗೆ ಯಾರ ಹಂಗಿಲ್ಲದೇ ಬೆಳೆಯುತ್ತಾ ಮರವು ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೆ ಇದೆ. ಸುಮಾರು 160 ವರ್ಷದಿಂದ ಮರವು ಹೀಗೆ ವಿಸ್ತಾರಗೊಳ್ಳುತ್ತಾ ಸುಮಾರು ಒಂದೂವರೆ ಎಕರೆ ಪ್ರದೇಶ ಕಬಳಿಸಿದೆ. ಕಾಡಿನಂತೆ ಭಾಸವಾಗುತ್ತೆ. ನಿಸರ್ಗದ ವೈಚಿತ್ರ್ಯ, ನಿಗೂಢತೆ ಮೇಳೈಸಿಕೊಂಡು ಬೆಳೆಯುವುದನ್ನು ಸದಾ ಜಾರಿಯಲ್ಲಿಟ್ಟಿದೆ.
ಇಲ್ಲಿರುವುದು ಒಂದೇ ಮರ, ಅದರ ಕೆಳಗೆ “ಚೌಡಮ್ಮ ದೇವಿ”ಯನ್ನು ಪ್ರತಿಷ್ಠಾಪಿಸಲಾಗಿದೆ. “ಪಿಳಲಿ ಮರದ ಚೌಡಮ್ಮ” ಎಂದು ಕರೆಯಲಾಗುತ್ತಿದೆ. ಮರದ ಕೊಂಬೆಗಳು ಆಕ್ಟೋಪಸ್’ನಂತೆ ಬಾಹುಗಳನ್ನು ಚಾಚಿಕೊಂಡಿವೆ, ಮುಖ್ಯ ಮರವನ್ನು ಗುರುತಿಸುವುದು ಕಷ್ಟಸಾಧ್ಯ. 2019, ಜನವರಿಯಲ್ಲಿ ಮುಖ್ಯ ಮರ ಬೆಂಕಿ ದುರಂತಕ್ಕೆ ಸಿಲುಕಿ ಸುಟ್ಟುಹೋಗಿದೆ. ಆದರೆ ಅವುಗಳ ಕೊಂಬೆಗಳು ಸದಾ ಬೆಳೆಯುತ್ತಲೆ ಇವೆ. ಇದು ನಿಸರ್ಗದ ಅಚ್ಚರಿಯ ತಾಣ.
ಈ ಪಿಳಲಿ ಮರ “ದೈವೀ ಮರ” ವೆಂಬ ನಂಬಿಕೆಯಿದೆ. ಕಾಡಿನಂತೆ ಹರಡಿಕೊಂಡ ಮರದ ಒಳಭಾಗವನ್ನು ನಾವು ಸುಲಭವಾಗಿ ತೂರಿಕೊಂಡು ನಡೆದೆವು. ಮುಖ್ಯ ಮರ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಒಣಗಿ ನಿಂತಿದೆ, ಅದರ ಕೆಳಗೆ ಚೌಡೇಶ್ವರಿ ದೇವಿ ಪ್ರತಿಷ್ಠಾಪನೆಗೊಂಡು, ಪೂಜೆಗೊಂಡ ಜೋಪಡಿಯಿದೆ. ಎದುರಿಗೆ ನಾಗರ ಕಟ್ಟೆಯಿದೆ. ಸುತ್ತಲೂ ಹರಡಿಕೊಂಡು ನೆಲ ಕಚ್ಚಿ ಬೆಳೆದ ಟೊಂಗೆಗಳು ಮರದಂತೆ ಸೆಟೆದು ನಿಂತಿವೆ, ಅವುಗಳಿಂದ ಮತ್ತೆ ಚಾಚಿಕೊಂಡು ಜೋತುಬಿದ್ದ ರಂಬೆ-ಕೊಂಬೆಗಳು ನೆಲದೆಡೆ ಇಳಿದಿವೆ.
ಮರದ ಒಳಭಾಗ ತಂಪು ತಂಪಾಗಿದ್ದು, ಇಕ್ಕಟ್ಟಾಗಿ ಬೆಳೆದು ಹರಡಿಕೊಂಡಿದ್ದರಿಂದ, ಸೂರ್ಯ ರಶ್ಮಿ ಇವುಗಳ ಸಂಧಿನಿಂದ ಒಳನುಗ್ಗಿ ನೆಲ ಸ್ಪರ್ಶಿಸಲು ಹರಸಾಹಸ ಪಡುವಂತಿದೆ. ಸುತ್ತಲೂ ಹಸಿರು ಚಪ್ಪರ ಹಾಕಿದಂತೆ ನೆರಳು ಗಾಢವಾಗಿ ಮೈಚಾಚಿದೆ. ಮರಗಳನ್ನು, ಕೊಂಬೆಗಳನ್ನು ಅಲ್ಲಲ್ಲಿ ದಾರದಿಂದ ಸುತ್ತಿ, ಹಸಿರು ಬಳೆ ತೊಡಿಸಿ, ಕುಂಕುಮವಿಟ್ಟು ಪೂಜಿಸಲಾಗಿದೆ. ಇದು “ದೇವರ ಮರ”, ಚೌಡೇಶ್ವರಿ ದೇವಿಯ ಮನೆ ಎಂದು, ಪಿಳಲಿ ಮರ ದೈವದ ಸಾಕ್ಷಾತ್ ಪ್ರತಿರೂಪವೆಂದು ಪೂಜಿಸುತ್ತಾ ಬರಲಾಗಿದೆ.
ಇಲ್ಲಿ ಒಳ ಬರುವಾಗ ಪಾದರಕ್ಷೆ ಸಹ ಧರಿಸುವಂತಿಲ್ಲ, ಇಲ್ಲಿ ಬಂದು ಮರದ ಎಲೆ ಕೀಳುವಂತಿಲ್ಲ, ಮರದ ಯಾವುದೇ ಭಾಗವನ್ನು ಚಿವುಟುವಂತಿಲ್ಲ. ಮರಕ್ಕೆ ಚೂರು ಘಾಸಿ ಮಾಡಿದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಇಲ್ಲಿಗೆ ಬರುವ ಅನೇಕ ಭಕ್ತರು, ಸುತ್ತಲಿನ ಹೊಲಗಳ ಹಿರಿಯರು ತಿಳಿಸುತ್ತಾರೆ. ಈ ಮರದ ಕಾಂಡ, ಬೇರು, ಎಲೆಗಳನ್ನು ಕತ್ತರಿಸಿದರೆ ಬಿಳಿ ಹಾಲಿನಂತೆ ಸ್ರವಿಸುವ ದ್ರವ ಕ್ರಮೇಣ ರಕ್ತದಂತೆ ಕೆಂಪಗಾಗುತ್ತೆ. ಈ ರಸ ರಕ್ತದಂತೆ ಭಾಸವಾಗುವುದರಿಂದ ಜನ ಮರದ ಎಲೆ ಸಹ ಮುಟ್ಟಲೂ ಭಯ ಬೀಳುತ್ತಾರೆ.
ಹುಣ್ಣಿಮೆ, ಅಮಾವಾಸ್ಯೆಯಂದು ಸುಮಾರು ಜನ ತೀವ್ರ ಶ್ರದ್ಧೆ, ನಂಬಿಕೆಯಿಂದ ಬಂದು ಪೂಜಿಸಿ, ವರ ಬೇಡುತ್ತಾರೆ. ಹಲವರು ಕಂಕಣ ಭಾಗ್ಯ, ಸಂತಾನ ಭಾಗ್ಯಗಳನ್ನು ಮರದ ದೈವಿಕತೆಯಿಂದ ವರ ಪಡೆದಿದ್ದಾರೆಂದು ಅವರುಗಳು ಹೆಸರುಳ್ಳ ಬೋರ್ಡ್’ಗಳನ್ನು ಸಹ ಲಗತ್ತಿಸಲಾಗಿದೆ. ಮರಗಳ್ಳರ ಕಾಟವಿಲ್ಲದೆ, ಕುಡುಕರು, ಕೆಡುಕರು ಸಹ ಇಣುಕಿ ಹಾಕದೇ…. ಅನೈತಿಕ ಚಟುವಟಿಕೆಗಳಿಂದ ಮಾರುದ್ದ ದೂರ ಸರಿದು “ದೈವಿಕ ಶಕ್ತಿಯ ತಾಣ”ವಾಗಿ ಮರ ಬೆಳೆಯುತ್ತಾ, ಭೂ ಕಬಳಿಸುತ್ತಿದೆ.
ಇದು ಬೃಹದಾಕಾರವಾಗಿ ಹರಡಿಕೊಂಡ “ಪಿಳಲಿ ಮರ”. ಇದರೊಳಗಡೆ ಸಲೀಸಾಗಿ ನಡೆದಾಡಬಹುದು, ವಿಶ್ರಮಿಸಲು ಕಲ್ಲಿನ ಬೆಂಚುಗಳನ್ನು ಹಾಕಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಸಹ ಮಾಡಲಾಗಿದೆ. ಮರದ ರಕ್ಷಣೆಗಾಗಿ ಊರಿನ ಜನರಿಂದ 14 ಜನರ ಸಮಿತಿ ಸಹ ರಚನೆಯಾಗಿದೆ. ಹುಣ್ಣಿಮೆ, ಅಮಾವಾಸ್ಯೆಯಂದು ಬರುವ ಭಕ್ತಾದಿಗಳಿಗೆ “ಅನ್ನ ಸಂತರ್ಪಣೆ” ಏರ್ಪಡಿಸಲಾಗುತ್ತದೆಯಂತೆ. ಕೋವಿಡ್ ಮಾರಿಯ ಅಬ್ಬರದ ನಂತರ ನಿಲ್ಲಿಸಲಾಗಿದೆ.
ಊರಿನವನೊಬ್ಬರು ಈ “ಪಿಳಲಿ ಮರ” ವನ್ನು ಕತ್ತರಿಸಿ ನೆಲಸಮ ಮಾಡಲು ಹೋದಾಗ “ಮರದಿಂದ ರಕ್ತ ಸುರಿಯಿತು, ಅಂದಿನ ದಿನದ ಸಾಯಂಕಾಲವೇ ಆ ಮರ ಕತ್ತರಿಸಿದ ವ್ಯಕ್ತಿ ಅಸುನೀಗಿದ” ಎಂದು ಊರ ಹಿರಿಯರೊಬ್ಬರು ತಿಳಿಸಿದರು. ಇಂತಹ ಹಲವು ನಿದರ್ಶನಗಳುಳ್ಳ ಘಟನೆಗಳನ್ನು ಅವರು ಉದಾಹರಿಸಿದರು.
ಒಟ್ಟಾರೆ ಗಾಢ ನಂಬಿಕೆ, ದೈವಿಕ ಭಾವನೆ ಆಳವಾಗಿ ನೆಲೆಗೊಂಡ ವಿಸ್ಮಯದ ಮರವಿದು. ನಾವುಗಳು ಇಲ್ಲಿ ಓಡಾಡಿ, ದಣಿವಾರಿಸಿಕೊಂಡು, ನಿಸರ್ಗದ ಅಚ್ಚರಿಯಿಂದ ಹೊರನಡೆದೆವು. ಈ ಮರವಿರುವುದು ಹಾವೇರಿ ಜಿಲ್ಲೆಯ, ಹಿರೇಕೆರೂರು ತಾಲೂಕಿನ ಹಳೇ ವೀರಾಪುರ ಗ್ರಾಮದ ಹೊರಭಾಗದಲ್ಲಿ. ಹಳೇ ವೀರಾಪುರ ಮಲೆನಾಡು ಸೆರಗಿನಂಚಿನ ಸುಂದರ ಗ್ರಾಮ. ಒಂದೆಡೆ ವಿಶಾಲ ಬಯಲು ಕಂಡರೂ, ಇನ್ನೊಂದೆಡೆಗೆ ಗುಡ್ಡಗಳ ಸಾಲು.(ಹಳೇ ವೀರಾಪುರ ಗ್ರಾಮವು.. ಮಾಸೂರು ಕೋಡಮಗ್ಗಿ ನಡುವೆ ಇದೆ). ಇಲ್ಲಿಗೆ ಬರಲು ಬಸ್ ಸೌಲಭ್ಯವಿದೆ.
ದಯಾನಂದ ದಿಡಗೂರ, ಫಕ್ಕಿರೇಶ ಬಾರ್ಕಿ ಅವರೊಂದಿಗೆ ಲೇಖಕರು ಪ್ರಸನ್ನ ಬಾರ್ಕಿ
ಹಾವೇರಿ ಜಿಲ್ಲೆಗೆ ಸೇರಿದ ನಿಸರ್ಗದ ವೈಚಿತ್ರ್ಯಕ್ಕೆ ಸಾಕ್ಷಿಯಾದ “ಪಿಳಲಿ” ಮರ. ಸರ್ಕಾರ ಮತ್ತು ಜಿಲ್ಲಾಡಳಿತದ ಕಣ್ಣಿಗೆ ಬಿದ್ದಂತಿಲ್ಲ. ನಿಖರವಾದ ಫಲಕಗಳು, ಮರದ ವಿವರಣೆಯಿರುವ ಯಾವ ಫಲಕಗಳೂ ಇಲ್ಲ. ಮೂಲಭೂತವಾಗಿ ರಸ್ತೆ ಸಹ ಇಲ್ಲ. ಸುತ್ತಮುತ್ತಲಿನ ಹೊಲಗಳ ಹಿರಿಯರು, ಊರಿನವರಿಂದ ಸಂರಕ್ಷಿಸಲ್ಪಟ್ಟಿದೆ.
ಒಮ್ಮೆ ಈ ಅಚ್ಚರಿಯ ಕೇಂದ್ರಬಿಂದು “ಪಿಳಲಿ ಮರ”ಕ್ಕೆ ಭೇಟಿ ಕೊಡಿ. ಹಾವೇರಿ ಜಿಲ್ಲೆಯ ಪ್ರವಾಸಿ ತಾಣವೆಂದು ಗುರುತಿಸಲ್ಪಡದ, ಆದರೆ ಗುರುತಿಸಬೇಕಾದ ಸ್ಥಳವಿದು.
- ಡಾ. ಪ್ರಕಾಶ ಬಾರ್ಕಿ – ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು, ಕಾಗಿನೆಲೆ.