ಸೌಮ್ಯ ಜಂಬೆ ಅವರ ಲೇಖನಿಯಲ್ಲಿ ಅರಳಿದ ‘ಗಾಳಿಗೆಲ್ಲೆಯೆಲ್ಲಿ?’ ಕವನವನ್ನು ತಪ್ಪದೆ ಓದಿ…
ಗಾಳಿಗೆ ಗಂಧವಾಗುವುದಷ್ಟೇ ಗೊತ್ತು.
ಒಮ್ಮೆ ಮಲ್ಲಿಗೆ , ಮತ್ತೊಮ್ಮೆ ಜಾಜಿ
ಸಂಪಿಗೆ ಸೇವಂತಿಗೆಯ
ಮೇಲೊಮ್ಮೆ ಹಾದು ..
ಬಾಗಿದ್ದ ಪುಟ್ಟ ಹಸಿರಿನ ತಲೆ ಸವರಿ
ಮರದ ಮೈದಡವಿ
ಗುದ್ದು ಕೊಟ್ಟು
ದೇಗುಲದ ಗಂಟೆಯನ್ನೊಮ್ಮೆ
ನಿನಾದವಾಗಿಸಿ
ಬಿದ್ದು ಹಕ್ಕಿ ಪುಕ್ಕವನ್ನೊಮ್ಮೆ
ಕೊಡವಿ ವಿಮಾನವಾಗಿಸಿ
ಮರದ ಹೂಗಳನೆಲ್ಲಾ ಹದವಾಗಿ ಉದುರಿಸಿ
ಹರಿವ ನೀರಿಗೂ
ಚಳಿ ಬರಿಸಿ
ಗುಡ್ಡ ಹತ್ತಿ , ಕಣಿವೆ ಇಳಿದು
ಕಿಟಕಿಯ ಹಾದು ಮನೆಯಂಗಳವ ಸುಳಿದು
ದಣಿವೆಂಬುದೇನೆಂದು ಅರಿಯದೇ ತಿಂಗಳಿನ ತೇರನೇರಿ ಹೋಯ್ತು..
ಅಂತೆಯೇ ನಮ್ಮ ಮನವೂ ತಾನೇ ..!!
- ಸೌಮ್ಯ ಜಂಬೆ, ಮೈಸೂರು