ಲೇಖಕ ಕೆ. ಸತ್ಯನಾರಾಯಣ ಅವರು ‘ಸುಮ್ಮನೆ ಓದೋಣ’ ಪುಸ್ತಕದಲ್ಲಿ ಓದುಗರನ್ನು ಕೇಂದ್ರವನ್ನಾಗಿ ಇಟ್ಟುಕೊಂಡಂತಹ ಕೃತಿ. ಐಬಿಎಚ್ ಪ್ರಕಾಶನದ ಅಡಿಯಲ್ಲಿ ಪ್ರಕಟಗೊಂಡ ಪುಸ್ತಕದ ಕುರಿತು ಪುಸ್ತಕ ವಿಮರ್ಶಕ ರಘುನಾಥ್ ಕೃಷ್ಣಮಾಚಾರ್ ಅವರು ಬರೆದ ಒಂದು ಪರಿಚಯವನ್ನು ತಪ್ಪದೆ ಓದಿ…
ಪುಸ್ತಕ : ಸುಮ್ಮನೆ ಓದೋಣ
ಲೇಖಕರು : ಕೆ ಸತ್ಯನಾರಾಯಣ
ಪ್ರಕಾಶನ : ಐಬಿಎಚ್ ಪ್ರಕಾಶನ
ಬೆಲೆ : ೧೩೦ /
ಓದುಗರನ್ನು ಕೇಂದ್ರವನ್ನಾಗಿ ಇಟ್ಟುಕೊಂಡ ಈ ಕೃತಿ, ಓದು ಎಂದರೆ ಏನು? ಓದುಗ ಎಂದರೆ ಯಾರು? ಓದುಗರ ಬಗೆಗಳು ಮತ್ತು ಬರಹಗಾರರು ಮತ್ತು ಓದುಗರ ನಡುವೆ ಇರುವ ಮತ್ತು ಇರಬೇಕಾದ ಸಾವಯವ ಸಂಬಂಧ, ಆದರ್ಶ ಸಮೀಕ್ಷೆಯ ಸ್ವರೂಪ, ಕಿರುಪತ್ರಿಕೆಗಳು, ಮತ್ತು ದಿನಪತ್ರಿಕೆಗಳು ವಹಿಸಬೇಕಾದ ಪಾತ್ರ, ಓದುಗರ ಸಮೀಕ್ಷೆ, ಇತ್ಯಾದಿ ವಿಷಯಗಳ ಕುರಿತು ಬರೆದ ಲೇಖನಗಳ ಸಂಕಲನ. ಲೇಖಕರ ಪ್ರಕಾರ ಓದು ಎಂದರೆ ಪ್ರಾರ್ಥನೆ, ಅದು ಸಂಭವಿಸಲು ಏಕಾಂತ ಬೇಕು. ಆಗಮಾತ್ರ ಒಬ್ಬ ನಿಜವಾದ ಓದುಗ,ತಾನು ಓದುವ ಮೂಲಕ ತಾನು ಪುನರ್ಜನ್ಮ ಪಡೆಯುವುದಲ್ಲದೆ ಲೇಖಕನಿಗೆ ಕೂಡ ಪುನರ್ ಜನ್ಮನೀಡುತ್ತಾನೆ. ಅನ್ ಟು ದಿಸ್ ಲಾಸ್ಟ್ ಓದಿನ ಮೂಲಕ ಗಾಂಧಿ ಪುನರ್ ಜನ್ಮ ಪಡೆದರು.
ಗಾಂಧಿಯವರು ಹೆಚ್ಚು ಓದದಿದ್ದರೂ ಅವರು ಓದಿದಷ್ಟರ ಜತೆಗೆ ಮಹತ್ವದ ಅನುಸಂಧಾನ ಮಾಡಿದರು. ಆ ಓದಿನ ಮೂಲಕವೆ ಎಲ್ಲಾ ಧರ್ಮಗಳ ಮೂಲ ಒಂದೇ ಎಂದು ಕಂಡುಕೊಂಡರು. ಕುವೆಂಪು ಅವರ ಓದು ಒಂದು ಬಗೆಯ ಧ್ಯಾನ ಸ್ವರೂಪದ್ದು. ಅವರಿಗೆ ಪುಸ್ತಕಗಳಿಗೆ , ಗ್ರಂಥಾಲಯಗಳಿಗೆ ಒಂದು ಅವಿನಾಭಾವ ಸಂಬಂಧ. ಅವರಿಗೆ ಯಾರೂ ಮಾದರಿಯಾಗಲಿ ಪ್ರೇರಣೆಯಾಗಲಿ ಇರಲಿಲ್ಲ. ಅವರ ಕನ್ನಡದ ಓದಿಗಿಂತ ಇಂಗ್ಲಿಷ್ ಓದು ವ್ಯಾಪಕವಾಗಿತ್ತು. ನಿಜವಾದ ಲೇಖಕ ಪ್ರತಿ ಬರಹದಲ್ಲಿ ಓದುಗರ ಅಪೇಕ್ಷಿತ ಬರಹವನ್ನು ಬಿಟ್ಟು, ಹೊಸ ರೀತಿಯ ಬರಹದ ಮೂಲಕ ಅವರನ್ನು ಕಳೆದುಕೊಳ್ಳುತ್ತಾನೆ. ಲೋಹಿಯಾ ಅವರ ಓದು ವ್ಯಾಪಕವಾಗಿತ್ತು ಅಂತೆಯೇ ಅವರ ಸಮೀಕ್ಷೆ ಕೂಡ. ಅವರು ವಿಶ್ವೇಶ್ವರಯ್ಯನವರು ಆಧುನಿಕ ದೃಷ್ಟಿ, ತಂತ್ರಜ್ಞಾನದ ಮೂಲಕ ಹೊಸ ಯುಗದ ಸೃಷ್ಟಿಗೆ ಭಾರತದಲ್ಲಿ ಕಾರಣರಾದರು ಎಂದು ಅವರ ಸ್ಥಾನ ನಿರ್ದೇಶನ ಮಾಡಿದ್ದಾರೆ. ಆದರೆ ಅಂದಿನ ದಿನಗಳಲ್ಲಿ ಅವರು ಅನುಸರಿಸಿದ ಯೋಗ್ಯತೆಯ ಮಾನದಂಡದ ಆಧಾರದ ಮೇಲೆ ಉದ್ಯೋಗ ಎಂಬ ನೀತಿ ಎಷ್ಟು ಅಪಾಯಕಾರಿಯಾಗಿತ್ತು ಎಂದು ಹೇಳಲು ಅವರು ಹಿಂಜರಿಯುವುದಿಲ್ಲ. ಕಿರಂ ಕಾವ್ಯದ ಓದಿನ ವೈಶಿಷ್ಟ್ಯ ಕುರಿತು ಬರೆದ ಲೇಖನದಲ್ಲಿ ಅವರಿಗೆ ಯಾವುದೇ ಕವಿಯ ಓದಿನ ತೀವ್ರತೆಗೆ ಒಬ್ಬ ಲೇಖಕನ ಪೂರ್ವ ಪಕ್ಷದ ಅಗತ್ಯವಿತ್ತು ಎಂದು ಸೂಚಿಸಿದ್ದಾರೆ. ಅದಕ್ಕೆ ನಿದರ್ಶನವಾಗಿ ಕುಮಾರವ್ಯಾಸನ ದ್ರೌಪದಿಯ ಪಾತ್ರದ ವಿಶ್ಲೇಷಣೆಗೆ ಹಿನ್ನೆಲೆಯಲ್ಲಿ ಡಿ.ಎಚ್.ಲಾರೆನ್ಸ್ ಇದ್ದ, ಅವನಿಗಿಂತ ಕುಮಾರವ್ಯಾಸನ ಗ್ರಹಿಕೆ ಮುಖ್ಯ ಎಂದು ಸ್ಥಾಪಿಸಲು ಅವನ ಪದ್ಯದ ಉದಾಹರಣೆ ಕೊಟ್ಟಿದ್ದಾರೆ. ಇದರ ಹಿಂದೆ ಅವರಿಗೆ ಪ್ರಿಯವಾದ ಅಡಿಗರ ಕಾವ್ಯದ ಫರಂಗಿ ರೋಗದಿಂದ ಬಿಡುಗಡೆ ಹೊಂದಿ ಪೂರ್ವ ಮೀಮಾಂಸೆಯ ಕಡೆಗೆ ತಿರುಗಬೇಕು ಎನ್ನುವ ಹಿನ್ನೆಲೆ ಇದ್ದುದನ್ನು ಗುರುತಿಸಲು ಮರೆತಿದ್ದಾರೆ. ಇದೆ ಕಿರಂ ನಮ್ಮ ತರಗತಿಯಲ್ಲಿ ಡಿ.ಎಚ್. ಲಾರೆನ್ಸ್ ನ ” ಕಥೆಗಾರನನ್ನು ನಂಬಬೇಡ, ಕತೆಯನ್ನು ನಂಬು ” ಎಂಬ ಹೇಳಿಕೆಯನ್ನು ಅವರದ್ದೇ ಎನ್ನುವ ಹಾಗೆ ಹೇಳುತ್ತಿದ್ದ ನೆನಪು ಮರುಕಳಿಸಿತು. ಇವರೊಂದಿಗೆ ವಿವಿಧ ವರ್ಗಗಳ ಸಾಮಾನ್ಯ ಓದುಗರ ಸಮೀಕ್ಷೆಯನ್ನು ದಾಖಲು ಮಾಡಿದ ಲೇಖನ ಇದೆ.
ಅದರ ಮೂಲಕ ಪ್ರತಿ ಓದುಗ ಕೂಡಾ ವಿಶಿಷ್ಟ ಎಂದು ಬರೆದಿದ್ದಾರೆ ಕ್ಲಾಸಿಕ್ ಗಳನ್ನು ಓದಲು ಬೇಕಾದ ಮನಸ್ಥಿತಿಯ ಕುರಿತು ಬರೆದ ಲೇಖನ ಪೂರ್ವಗ್ರಹಿಕೆಗಳಿಂದ ಮುಕ್ತವಾದ ಬೆರಗು ತುಂಬಿದ ಮುಗ್ಧ ಸ್ಥಿತಿ ಆವಶ್ಯಕವಾಗಿ ಬೇಕು ಎಂದು ಒಬ್ಬರ ಲೇಖನದಿಂದ ಆಧರಿಸಿ ಪ್ರತಿಪಾದಿಸಿದ್ದಾರೆ. ಈಚಿನ ಮಾಧ್ಯಮಗಳ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಓದುಗರ ಸಂಖ್ಯೆ ಕಡಿಮೆ ಆಗಿದೆಯೇ ಎಂಬ ಸಮೀಕ್ಷೆ ಯಲ್ಲಿ ಭಾಗವಹಿಸಿ ಅವುಗಳನ್ನು ಯಶಸ್ವಿಯಾಗಿ ಬಳಸಿ ಜನರನ್ನು ತಲುಪುತ್ತಿರುವ ಜೋಗಿ ಮುಂತಾದ ಲೇಖಕರ ಉದಾಹರಣೆ ಕೊಟ್ಟು ಅದು ಕೇವಲ ಮಾಹಿತಿಯಾಗಿ ಬಿಡುವ ಅಪಾಯವನ್ನು ಕುರಿತು ಎಚ್ಚರಿಕೆ ನೀಡಿದ್ದಾರೆ. ಕಿರುಪತ್ರಿಕೆಗಳು ಸಾಹಿತ್ಯ ಸಂವೇದನೆ ರೂಪಿಸುವಲ್ಲಿ ವಹಿಸಿಕೊಂಡ ಪಾತ್ರವನ್ನು ಗುರುತಿಸಿ ಕೆಲವರ ಮುಖವಾಣಿಯಾಗಿಬಿಟ್ಟ ಅವುಗಳ ಮಿತಿಯನ್ನು ಸೂಚಿಸಿ ದ್ದಾರೆ.
ಲೇಖಕ ಮತ್ತು ಓದುಗರ ನಡುವೆ ಇರುವ ಸಾವಯವ ಸಂಬಂಧಕ್ಕೆ ನಿದರ್ಶನವಾಗಿ ಕಾರಂತ ಮತ್ತು ಭೈರಪ್ಪನವರ ಓದುಗರ ವಲಯವನ್ನು ನೀಡಿದ್ದಾರೆ. ಲೇಖಕನ ಸಂವೇದನಾ ಸಾಮರ್ಥ್ಯವನ್ನು ಗ್ರಹಿಕೆಗೆ ಅವರ ಎಲ್ಲಾ ಪುಸ್ತಕಗಳ ಓದು ಅನಾವಶ್ಯಕ ಎಂದಿದ್ದಾರೆ. ನನ್ನ ಮೇಷ್ಟ್ರು ಕಾರಂತರ ಕಾದಂಬರಿಗಳ ಲಯ ಕುರಿತು ಬರೆಯಲು ತಾನು ಅವರ ಎಲ್ಲಾ ಕಾದಂಬರಿಗಳನ್ನು ಓದಿದ್ದನ್ನು ನನ್ನ ಮುಂದೆ ಹೇಳಿದ ನೆನಪು ಮರುಕಳಿಸಿತು . ಓದುಗರ ಮಟ್ಟಿಗೆ ಲೇಖಕರ ಮೇಲಿನ ನಿಲುವನ್ನು ಒಪ್ಪಬಹುದಾದರೂ , ವಿಮರ್ಶಕರಿಗೆ ಅವರ ಪ್ರಕಾರ ಕುರಿತು ಬರೆವಾಗ ಅವರ ಆ ಪ್ರಕಾರದ ಎಲ್ಲಾ ಕೃತಿಗಳ ಓದು ಅವಶ್ಯಕ ಎಂದು ಇಲ್ಲಿ ಸೂಚಿಸಬಹುದು. ‘ಓದು ಬರಹದ ಶತ್ರು ‘ಎಂಬ ತಿ.ನಂ.ಶ್ರೀ ಅವರ ಹೇಳಿಕೆಯ ಮಿತಿಯನ್ನು ಸೂಚಿಸುತ್ತ, ಲೇಖಕರ ವಿಸ್ತಾರವಾದ ಓದು ಅವರ ಬರಹಕ್ಕೆ ಬೇಕಾದ ಪುಷ್ಟಿಯನ್ನು ಒದಗಿಸುತ್ತದೆ ಎಂದು ಸರಿಯಾದ ಅಭಿಪ್ರಾಯಕ್ಕೆ ಬಂದಿದ್ದಾರೆ .
ಬಹುಶಃ ಕನ್ನಡದಲ್ಲಿ ಓದುಗರ ಬಹುಮುಖಿ ಆಯಾಮಗಳ ಕೇಂದ್ರಿತ ಮೊದಲ ಪುಸ್ತಕ ಇದು ,ಎಂಬ ಶ್ರೇಯಾಂಕ ಇದಕ್ಕೆ ಸಲ್ಲಬೇಕು. ಲೇಖಕರ ಓದುಗರ ನಡುವೆ ಸಂಬಂಧ ಕುರಿತು ಆಸಕ್ತಿ ಹೊಂದಿದವರು ಇದನ್ನು ಓದಿ ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.