‘ಅವಳ ಕಣ್ಣೀರು’ ಸಣ್ಣಕತೆ – ಪ್ರೊ. ರೂಪೇಶ್ ಪುತ್ತೂರು



ರಾಮೇಗೌಡ್ರು ಅನಾಥನಾದ ಶ್ಯಾಮನನ್ನು ಎಂ ಎ ಓದುವವರೆಗೂ ಅವನಿಗೆ ಸಹಾಯ ಮಾಡಿದರು. ಮುಂದೆ ಶ್ಯಾಮ ಬೆಂಗಳೂರಿನ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಂಡ, ಅವನನ್ನು ಪ್ರೀತಿಸುತ್ತಿದ್ದ ರಾಮೇಗೌಡ್ರ ಮಗಳು, ಹಠಬಿಡದೆ ಅವನನ್ನು ಮದುವೆಯಾದಳು. ಬೆಂಗಳೂರು ಬಂದು ಸುಂದರ ಬದುಕು ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ ಕೊರೋನಾ ಒಕ್ಕರಿಸಿತು. ಶ್ಯಾಮನ ಕೆಲಸ ಹೋಯಿತು. ಹೊಟ್ಟೆಪಾಡಿಗಾಗಿ ತಳ್ಳೋ ಗಾಢಿಯಲ್ಲಿ ತರಕಾರಿ ವ್ಯಾಪಾರ ಶುರುಮಾಡಿದ. ಇದ್ದಕ್ಕಿದ್ದಂತೆ ಒಂದು ದಿನ ಶ್ಯಾಮ ನಾಪತ್ತೆಯಾದ, ಮುಂದೇನಾಯಿತು ಓದಿ…

“ಇಲ್ಲ ಇವರು ನನ್ನ ಬಿಟ್ಟು ಈ ಕೆಲಸ ಮಾಡಲ್ಲ. ಇದ್ದರೆ ಜೊತೆಗೆ, ಇಲ್ಲದಿದ್ದರೂ ಜೊತೆಗೆ ಎಂಬುದು ನಮ್ಮ ಜೀವನದ ಮೂಲ ಮಂತ್ರವಾಗಿತ್ತಲ್ಲವೇ?” ಸುಮಿತ್ರಾನ ಮನಸ್ಸು ಮಾತನಾಡುತ್ತಿತ್ತು.ಅಕ್ಕ ಪಕ್ಕ ನಿಂತವರು “… ಅಯ್ಯೋ ಈ ಹೆಣ್ಣು ಅಳ್ತಾನೇ ಇಲ್ವಲ್ಲಾ…. ಕಣ್ಣಿಂದ ಒಂಚೂರು ನೀರೂ ಬರ್ತಾ ಇಲ್ವಲ್ಲಾ. ಅತ್ತರೆ ಮನಸ್ಸು ಹಗುರ ಆಗೋದು” ಎಂದು ಪಿಸುಗುಟ್ಟುತ್ತಿದ್ದರು.” ಸುಮಿತ್ರಾ ಒಂದ್ಸಲ ಅತ್ತು ಬಿಡು, ನೋಡು ಅವರಿಲ್ಲ… ನೋಡು…” ಎಂದು ಶ್ಯಾಮನ ಕಟ್ಟಿಟ್ಟ ಮೃತದೇಹ ತೋರಿದರೂ ಅವಳು ಆ ಕಡೆ ನೋಡದೆ, ಮಾತನಾಡಿದವರ ಕಡೆ ತಿರುಗಿ ಯೋಚಿಸ ತೊಡಗಿದಳು…

” ಯಜಮಾನ್ರೇ ನಿಮ್ಮ ಋಣ ನಾನೆಂದೂ ಮರೆಯಲ್ಲ…. ಇಂದು MA ಮಾಡುವ ತನಕ , #ಅನಾಥನಾದ ನನ್ನ, ಮಗನೆಂಬ ರೀತಿಯಲ್ಲಿ ಪಾಲಿಸಿ, ಪೋಷಿಸಿ. ವಿದ್ಯಾಭ್ಯಾಸ ಕೊಟ್ರಿ” ವಿನಮ್ರತೆಯಿಂದ ಹೇಳುವ ಶ್ಯಾಮ.

” ಏಯ್… ಅದೇನು ಮಹಾ… ಬಾಯಾರಿದವನಿಗೆ ನೀರುಣಿಸುವುದು, ಹಸಿದವನಿಗೆ ಆಹಾರ ಕೊಡುವುದು ತಪ್ಪೂ ಅಲ್ಲ, ಸಹಾಯವೂ ಅಲ್ಲ, ದಾನವೂ ಅಲ್ಲ, ಅದೊಂದು ರೀತಿ ನಮ್ಮೊಳಗೆ ಹಂಚುವಿಕೆ. ನಿನಗೆ ಕಲಿಯುವ ಉತ್ಸಾಹವಿತ್ತು, ನನಗೆ ನೀನು ಕಲಿಯಬೇಕೆಂಬ ಹಂಬಲವಿತ್ತು. ಅಷ್ಟೇ ಕಣೋ… ಅದರಲ್ಲೇನೂ ಋಣವಿಲ್ಲ ಕಣ್ಲಾ. ಇನ್ಮ್ಯಾಗೆ ನೀನು ನನ್ನ ಮುಂದೆ ಕುರ್ಚಿ ಮ್ಯಾಗೆ ಕೂರ್ಬಹುದು….” ಎಂದ್ರು ರಾಮೇಗೌಡ್ರು.

ನಗುತ್ತಾ ವಂದಿಸುತ್ತಾ ಶ್ಯಾಮ, ಎಂದಿನಂತೆ ರಾಮೇಗೌಡರ ಮನೆಯ ಹಿಂಭಾಗದಲ್ಲಿ ಊಟಕ್ಕೆ ಹೋಗುವಾಗ , “…. ”ನನ್ನ ಮದುವೆಯಾಗಿ ಅಪ್ಪನ ಋಣ ತಿರಿಸ್ಕೋ…ಯಾವಾಗ ತೀರಿಸ್ಕೋತಿಯಾ?” ಎಂದಳು ಸುಮಿತ್ರಾ. ಬೆಂಗಳೂರು ಪಟ್ಟಣದಲ್ಲಿ ಒಂದು ಖಾಸಗೀ ವಿದ್ಯಾ ಸಂಸ್ಥೆಯಲ್ಲಿ ಕೆಲಸ ಪಡೆದ ಶ್ಯಾಮನನ್ನು ತನ್ನ ಮದುವೆಯಾಗಲು ತುಂಬಾ ಸತಾಯಿಸಿದಳು ಸುಮಿತ್ರಾ. ಕೊನೆಗೆ ರಾಮೇಗೌಡರಿಗೆ ತಿಳಿಯದಂತೆ ಕದ್ದು ಮುಚ್ಚಿ ಅವನ ಮಗಳಾದ ಸುಮಿತ್ರಾಳನ್ನು ಮದುವೆಯಾಗಿ ಬೆಂಗಳೂರಿಗೆ ಕರೆ ತಂದ ಶ್ಯಾಮ.

ಫೋಟೋ ಕೃಪೆ : campusvarta

” ನನಗೊಂದು ಸರ್ಕಾರಿ ಕೆಲಸ ಸಿಕ್ಕಿ ನಂತರ ನಿನ್ನ ಮದುವೆಯಾಗೋಣ ಅಂದಿದ್ದೆ. ಆದ್ರೆ ಕೈಗೆ ಸಿಗೋ ಈ ಖಾಸಗಿ ಕೆಲಸದ ಸಂಬಳ ಹಾಗೂ ಕೈ ಹಿಡಿಯಲು ಹಟ ಹಿಡಿದ ನೀನು…. ನನ್ನ ಇಲ್ಲಿಗೇ ತಂದು ನಿಲ್ಸಿತು ಕಣೇ” ಎಂದು ಸುರುವಾದ ಮೊದಲ ದಿನ.”

ಅವಳು ಶುಭ್ರ ವಸ್ತ್ರದಲ್ಲಿ ಸುರುಳಿಸಿ ಕೊನೆಯದಾಗಿ ಮಲಗಿದ ಶ್ಯಾಮನ ದೇಹದ ಕಡೆ ನೋಡದೆ ತನ್ನ ಗತಕಾಲದ ನೆನಪಿನ ಎಸಳು ಒಂದೊಂದಾಗಿ ಕೀಳುತ್ತಿದ್ದಳು.

”ಈ ದರಿದ್ರ ಕೊರೋನಾ ಎಲ್ಲಿಂದ ಬಂತೋ ಯಾರು ಈ ಧರೆಗಿಳಿಸಿದರೋ…. ಇವರಿಲ್ಲದೆ ಈ ಎರಡು ಹೆಣ್ಣು ಮಕ್ಕಳನ್ನು ನಾನು ಸಾಕಬಲ್ಲೆನೇ?… ಒಡಲಲ್ಲಿ ಜೀವ ಇರುವವರೆಗೂ ಮಕ್ಕಳಿಗಾಗಿ ಜೀವಿಸಬೇಕು. ಅಜ್ಜನಾದ ಸುದ್ದಿ ತಿಳಿದು ತಿರುಗಿ ನೋಡದ ಅಪ್ಪ , ಇವರ ಶವ ನೋಡಲು ಬರುವರೇ? ನನ್ನ ಭ್ರಮೆ ಅಷ್ಟೇ…. ಶ್ಯಾಮನಿಗೆ ಉಪಕಾರ ಮಾಡಿದ ನನ್ನ ತಂದೆಗೇ ಎದುರು ನಿಲ್ಲುವಂತೆ, ಊರಲ್ಲಿ ಅಪ್ಪ ತಲೆತಗ್ಗಿಸುವಂತೆ ಮಾಡಿದ್ದು ನಾನೇ. ಅದಕ್ಕೇ ಇಂದು ಈ ಸ್ಥಿತಿಗೆ ಬಂದೆ!!!!.

ಕಾಲೇಜಿನವರು ಸಂಬಳ ಕೊಡಲ್ಲವಂತೆ, ಅವರಲ್ಲಿ ದುಡ್ಡಿಲ್ವಂತೆ ಏನ್ಮಾಡೋದು? ಎಂದು ೨೦೨೦ ಮಾರ್ಚಿನಲ್ಲಿ ಶ್ಯಾಮ ಹೇಳಿದಾಗ, ಎರಡ್ಮೂರು ತಿಂಗಳು ಮನೆಯ ಬಾಡಿಗೆ, ಆಹಾರ, ಮಕ್ಕಳ ಶಾಲಾ ಫೀಜು…ಎಲ್ಲಾ ಖರ್ಚು ಆದಾಗ , ಒಡವೆ ಮಾರಿ ಬಂದ ದುಡ್ಡಲ್ಲಿ ಕಾಲ ಕಳೆದು, ನಂತರ ಪುನಃ ಆಕಾಶ ಮೌನವಾಯಿತು ಮನೆಯ ಖಜಾನೆ.



“ನಲ್ವತ್ತು ವರುಷ ಹಳೆಯ ಕಾಲೇಜಿನಲ್ಲಿ ಕೋಟಿ-ಲಕ್ಷಗಟ್ಟಲೆ corpus fund (ಮುಡಿಪಾಗಿ ಶೇಖರಿಸಿದ ಮೂಲಧನ-ಮುಶೇಮೂ) ಇದೆ ಅದರಿಂದ ನಮಗೆ ಯಾಕೆ ಈ ಕಷ್ಟಕಾಲದಲ್ಲಿ ಸಂಬಳ ಕೊಡಲ್ಲ” ಎಂದು ಕೆಲ ಉಪನ್ಯಾಸಕರನ್ನು ಸೇರಿಸಿ, ಆಡಳಿತ ಮಂಡಳಿಯನ್ನು ಎದುರು ಹಾಕಿ ಕೊಂಡ ಶ್ಯಾಮ. ಕುಹಕಿಗಳು-ಶ್ರೀಮಂತರು – ರಾಜಕಾರಣಿಗಳು ಮೇಯ್ದು ತಿನ್ನುವ ಶಿಕ್ಷಣ ಸಂಸ್ಥೆ, ಕೆಲ ದಿನಗಳಲ್ಲಿ ಶ್ಯಾಮನ ಜೊತೆಯಾಗಿದ್ದ ಉಪನ್ಯಾಸಕರನ್ನು ಆ ಹೋರಾಟದಿಂದ ಹಿಂದೆ ಸರಿಸಿದರು.

ಶ್ಯಾಮ ಕದಲಲಿಲ್ಲ, ಉಪನ್ಯಾಸಕ ಸಂಘದ ಅಧ್ಯಕ್ಷರನ್ನು , ಕಾರ್ಯದರ್ಶಿ , ಸದಸ್ಯರನ್ನು ಭೇಟಿಯಾದ, ಶಿಕ್ಷಕ ಕ್ಷೇತ್ರದ ಚುನಾಯಿತನನ್ನೂ ಕೇಳಿದ ”ನೋಡು… ನೀನು ಅನುದಾನರಹಿತ ಉಪನ್ಯಾಸಕ ಸಂಘವನ್ನು ಮಾಡಿ ಹೋರಾಟ ಮಾಡು.”

“ಈ ಕರ್ನಾಟಕದಲ್ಲಿ ನೀವು ಪಡೆದ ಗರಿಷ್ಟ ಓಟು ಅನುದಾನರಹಿತರದ್ದು. ನಾನೂ ಅನುದಾನರಹಿತನಾಗಿ ನಿಮಗೆ ಓಟು ಹಾಕಿದ್ದ. ದಯವಿಟ್ಟು ಆಲಿಸಿ” ಎಂದಾಗ ಕೊನೆಗೆ ಅವರು ಹೇಳಿದ್ದೂ, ಆಡಳಿತ ಮಂಡಳಿ ಹೇಳಿದ್ದು ಒಂದೇ ” corpus fund ಇರುವುದು ಕಾಲೇಜಿನ ಉದ್ದಾರಕ್ಕೆ ನಿಮ್ಮ ಸಂಬಳಕ್ಕಲ್ಲ” ನಂತರದ ದಿನ ಸುಮಿತ್ರಾನ ಉಳಿದ ಆಭರಣ, ತನ್ನ ಹೀರೋ ಹೋಂಡಾ ದ್ವಿಚಕ್ರ ಮಾರಿ, ಒಂದು ದೂಡುಗಾಡಿಯಲ್ಲಿ ತರಕಾರಿ ಹಣ್ಣು, ಹಂಪಲು ಮಾರಲು ಹೊರಟ. ನವೆಂಬರ್  ನಲ್ಲಿ ಕಾಲೇಜು ಪುನಃ ತೆರೆಯಿತು. ಆನ್ ಲೈನ್ ಪಾಠ ಮಾಡಲು ಇಂಟರ್ನೆಟ್, ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಎಲ್ಲೆಲ್ಲೋ ಸಾಲ ಮಾಡಿ ಖರೀದಿಸಿದ. ಹೆಚ್ಚಿನ ಪೋಷಕರು ಶಾಲಾ ಫೀಜು ಕೊಟ್ಟರೂ, ಆ ತಿಂಗಳಿನಿಂದ ೨೦೨೧ ಫೆಬ್ರುವರಿವರೆಗೂ ಅರ್ಧ ಸಂಬಳ ಸಿಗುತ್ತಿತ್ತು.

ಮಾರ್ಚಿನಿಂದ ಪುನಃ ಲಾಕ್ ಡೌನಿನಿಂದ ಸಂಬಳ ಸ್ಥಗಿತವಾಗಿತ್ತು. ದೂಡುಗಾಡಿ ಪುನಃ ರಸ್ತೆಗಿಳಿಯಿತು. ಪೋಲಿಸರ ಪೆಟ್ಟು ತಿಂದು , ತರಕಾರಿ- ಹಣ್ಣು ಹಂಪಲು- ದೂಡುಗಾಡಿ ರಸ್ತೆಯಲ್ಲೇ ಬಿಟ್ಟು ಓಡಿ ಬಂದ. ಬಾಸುಂಡೆಯಿಂದ ವಿಪರೀತ ಜ್ವರವೂ ಅವನ ಪಾಲಾಯಿತು. ಯಾವುದೇ ಚಿಕಿತ್ಸೆ ಇಲ್ಲದೆ ಹತ್ತು ದಿನ ಹಾಸಿಗೆ ಹಿಡಿದ. ನಂತರ ರಸ್ತೆಯಲ್ಲಿ ಅಂಗಾಂಗಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೂಡುಗಾಡಿ ಹೆಕ್ಕಿಕೊಂಡು ಬಂದು, ತಾನೇ ಎಲ್ಲಾ ಜೋಡಿಸಿದ.

ಫೋಟೋ ಕೃಪೆ : haryana.punjabkesari

ಕೆಲದಿನಗಳಲ್ಲಿ ಮಾನವ ಹಕ್ಕು ಹೋರಾಟಗಾರರ ಜೊತೆ ಸೇರಿ ಕಾಲೇಜು ಆಡಳಿತ ಮಂಡಳಿಯೊಂದಿಗೆ ಜೋರಾಗಿ ಮಾತಾಯಿತು. ರಾತ್ರಿ, ಬೇರೆ ಕೆಲವು ಸಂಸ್ಥೆಗಳ ಆಡಳಿತ ಮಂಡಳಿಯ ಪುಡಾರಿಗಳು ಮನೆಗೆ ಬಂದು ಶ್ಯಾಮನನ್ನು ಗದರಿಸಿದವರಲ್ಲಿ “ಜೀವ ಇರುವ ನಾವು ದುಡಿಯುವುದರಿಂದ ತಾನೇ ನಿರ್ಜೀವವಾದ ಕಾಲೇಜು ಕಟ್ಟಡವೂ ಜೀವಿಸುವುದು? ಎಂದೂ ಕಾಲೇಜಿಗೆ ಕ್ಷುತಿ ಬಾರದ ಹಾಗೆ ದುಡಿದ ನಮಗೆ, ಕಷ್ಟಕಾಲದಲ್ಲಿ ಒಂದಿಷ್ಟು ನೆರವು ಕೊಡಬಹುದಲ್ಲವೆ? ಇಷ್ಟು ವರುಷ ನೀವು ತಿಂದಿದ್ದೀರಿ ಎಂದು ನಾವು ಯಾರೂ ಹೇಳುತ್ತಿಲ್ಲವಲ್ಲ. ನಮಗೆ ಆಡಳಿತ ಮಂಡಳಿ ಅಲ್ಲದೆ ಬೇರೆ ಯಾರಲ್ಲಿ ಕೇಳಲಿ? ಸರ್ಕಾರ ಅನುದಾನರಹಿತ ಶಿಕ್ಷಕರಿಗೆ ಕೊಡಬೇಕಾದ ದುಡ್ಡು ನೀವೇ ಪಡೆದುಕೊಳ್ಳಿ, ಸೇರುವ ವಿದ್ಯಾರ್ಥಿಗಳ ಫೀಸು ಕಡೆಮೆ ಮಾಡಿ….” ಎಂದ ಶ್ಯಾಮ.

“ಜಾಸ್ತಿ ಹೀರೋ ಆಗಬೇಡ….” ಎಂದವರಲ್ಲೊಬ್ಬ.

” ಏನಾದರೂ ಹೇಳಿ ನಾ ಹೋರಾಟ ಬಿಡಲ್ಲ” ಶ್ಯಾಮ ತನ್ನ ಕೊನೆಯ ಮಾತು ನುಡಿದ.

“ಒಂದು ಶಿಕ್ಷಣ ಆಡಳಿತ ಮಂಡಳಿಗೆ ಎದುರು ನಿಂತರೆ ಹಲವಾರು ಬೇರೆ ಆಡಳಿತ ಮಂಡಳಿಗಳು ದಾಳಿ ಮಾಡುವುದು ಯಾಕೆ? ಈ ಶಿಕ್ಷಣ ಕ್ಷೇತ್ರದ ಚುನಾಯಿತರು, ಉಪನ್ಯಾಸಕ ಸಂಘದವರು ಯಾಕೆ ನಿಮ್ಮಂತವರಿಗಾದ ದುಃಖವನ್ನು ಯಾವುದೇ ಸುದ್ದಿಗೋಷ್ಠಿಯಲ್ಲಿ ಹೇಳುತ್ತಿಲ್ಲ? ನಿಮ್ಮಂತವರ ಜೊತೆ ಸೇರುತ್ತಿಲ್ಲ?” ಊಟ ಮಾಡುತ್ತಾ ಕೇಳಿದ ಸುಮಿತ್ರಾ ಪ್ರಶ್ನೆಗೆ “ಅವರಿಗೇನೂ ಲಾಭವಿಲ್ಲವಲ್ಲ ಅದಿಕ್ಕೆ ಕಣೇ, ಮತ್ತು ನನಗೇಕೋ ಆಡಳಿತ‌ಮಂಡಳಿ ಏನೋ ಭಯ ಪಡುತ್ತಿದೆ ಎಂದೆನಿಸುತ್ತಿದೆ. ಸರ್ಕಾರ ಅಥವಾ ನ್ಯಾಯಾಲಯ ಏನಾದರೂ corpus fundನ ಲೆಕ್ಕ ಕೇಳಿದರೆ ?…. ಇವರಿಗೇನಾದರೂ ಸಂಕಟ ಬರಬಹುದೇ? ಅದಕ್ಕೆಂದೇ ಇದ್ದ ಬಿದ್ದ ಎಲ್ಲಾ ಆಡಳಿತ ಮಂಡಳಿ ಒಗ್ಗಟ್ಟಾಗಿದೆ ಅಂತ ಕಾಣುತ್ತೆ” ಎಂದು ಮಲಗಲು ಅನುವಾದನು. ಎಂದಿನಂತೆ , ಬೆಳಿಗ್ಗೆ ತಿಂಡಿ ತಿಂದು, ಸುಮಿತ್ರಾ ಕೊಟ್ಟ ಬುತ್ತಿ ಎತ್ತಿಕೊಂಡು ದೂಡು ಗಾಡಿಯೊಂದಿಗೆ ಹೋದ ಶ್ಯಾಮ, ರಾತ್ರಿಯಾದರೂ ಬರಲಿಲ್ಲ.

ಫೋಟೋ ಕೃಪೆ : indiatimes

ಮರು ದಿನ ರೈಲ್ವೆ ಹಳಿಯಿಂದ , ಶ್ಯಾಮನ ದೇಹ ಹೆಕ್ಕಿ , ಮರಣಾನಂತರ ಪರೀಕ್ಷೆಯಾಗಿ, ಶ್ವೇತ ವಸ್ತ್ರದಲ್ಲಿ ಸುತ್ತಿ ಮನೆಯ ಮುಂದೆ ಜಗುಲಿಯಲ್ಲಿ ತಂದಿಟ್ಟಿದ್ದಾರೆ. ಶ್ಯಾಮನ ದೇಹ ನೆರೆಹೊರೆಯವರು ಹೊತ್ತುಕೊಂಡು ಸ್ಮಶಾನಕ್ಕೆ ಹೋದರು. ಸುಮಿತ್ರಾ ಹೋಗದೆ ಅಲ್ಲೇ ಕುಳಿತಳು. ಮಾರನೇ ದಿನ ಪಕ್ಕದ ಅಂಗಡಿಯ ಶೆಟ್ಟಿ , ಚಿತಾಭಸ್ಮ ತಂದು ಮನೆಯ ಮುಂದಿಟ್ಟು ಹೋದ. ಶೆಟ್ಟಿ ಅಂಗಡಿಯವನು ಶ್ಯಾಮನಲ್ಲಿ ” ಯಾವಾಗಲಾದರೂ ದುಡ್ಡು ಕೊಡಿ, ಹಸಿವಿಂದಿರಬೇಡಿ” ಎಂದು ಅಕ್ಕಿ, ಸಕ್ಕರೆ ಉಪ್ಪು… ಎಲ್ಲಾ ಕೊಡುತ್ತಿದ್ದ. ಅದೇ ರೀತಿ, ಮನೆ ಮಾಲೀಕ ಹಾಜಿ ಹುಸೈನರೂ ಕೆಲ ತಿಂಗಳ ಬಾಡಿಗೆ ಕೇಳಲೇ ಇಲ್ಲ, ” ನಿಮಗೆ ಎಂದು ಸೌಕರ್ಯವಾಗುತ್ತೋ ಅಂದು ಕೊಡಿ” ಎಂದು ಹೇಳುತ್ತಿದ್ದರು.

ಅಂದು ಮಕ್ಕಳನ್ನು ಮನೆಯೊಳಗೆ ಬೀಗ ಹಾಕಿ, ದೂಡುಗಾಡಿಯಲ್ಲಿ ತರಕಾರಿ ಮಾರಿ, ಮರಳಿ ಬಂದಾಗ ಸುಜಾತಳ ಕಾಲಿನಡಿಯಲ್ಲಿ ಬಾಸುಂಡೆ ಬಂದಿತ್ತು. ಅದಕ್ಕೆ ಕೊಬ್ಬರಿ ಎಣ್ಣೆ ಹಾಕುತ್ತಿದ್ದಂತೆ. ಅವಳ ಮುಂದೆ ಅಂಗಡಿಯ ಶೆಟ್ಟಿ ಅವನ ಹಿಂದೆ ಅಪ್ಪ ರಾಮೇಗೌಡರು!!!

ಸಿಟ್ಟಿನಿಂದ ಸಿಡಿಮಿಡಿಗೊಂಡ ಸುಜಾತ ” ಯಾಕ್ ಬಂದ್ರಿ ಅಪ್ಪಾ?? ನನ್ನ – ಮಕ್ಕಳ ಬೂದಿ ಇದೆಯೆಂದು ನೋಡೋಕಾ? ಒಳ್ಳೆಯ ಅಪ್ಪ ನೀನು…..” ಎಂದು ಬಾಯಿಗೆ ಬಂದಂತೆ ಬೈಯುತ್ತಿದ್ದಂತೆ ರಾಮೇ ಗೌಡರು ಅಲ್ಲಿಂದ ಹಿಂದಕ್ಕೆ ಹೆಜ್ಜೆ ಇಡುತ್ತಾ ಹೋದರು.

” ಅಕ್ಕಾ…. ನೋಡಿ…. ಸುಮ್ನಿರಿ…. ಇಲ್ಲಿ ಕೇಳಿ” ಎಂದು ಮಧ್ಯಕ್ಕೆ ಬಾಯಿ ಹಾಕುತ್ತಿದ್ದ ಶೆಟ್ಟಿ ” ಯಜಮಾನ್ರೇ … ಅಲ್ಲಿ ನಿಲ್ಲಿ….” ಎಂದು ಶೆಟ್ಟಿ ರಾಮೇಗೌಡರ ಹಿಂದೆ ಓಡಿದ. ಬೆಳಿಗ್ಗೆ ಮಕ್ಕಳಿಗೆ ತಿಂಡಿ ಉಣಿಸುತ್ತಿದ್ದಂತೆ ಮನೆಯ ಮುಂದೆ ಹಾಜಿ ಹುಸೈನ್ ಹಾಗೂ ಅಂಗಡಿಯ ಶೆಟ್ಟಿ “ಹೋ…. ಮನೆ ಬಾಡಿಗೆ ಹಾಗೂ ಅಂಗಡಿಯ ಸಾಲ ಕೇಳಲು ಬಂದಿರ್ಬೇಕು. ಇಷ್ಟೇ ಮನುಷ್ಯನ ಬಣ್ಣ. ಅವರಿದ್ದಾಗ ಕೊಂಡೋಗಿ ಅನ್ನುತ್ತಿದ್ದ ಶೆಟ್ಟಿ, ಬಾಡಿಗೆ ಆಮೇಲೆ ಕೊಡಿ ಎನ್ನುತ್ತಿದ್ದ ಹುಸೈನ್. ಇಂದು ನಾನು ಅಸಹಾಯಕಳಾದಾಗ….. ಉಫ್… ಏನ್ಮಾಡೋದು?”ಎಂದು ಮನದಲ್ಲಿ ಮರುಗುತ್ತಾ ಬಂದಾಗ…
” ಬೇಟಿ…. ನಿನ್ನ ತಂದೆ, ನಿನ್ನ ಮೊದಲ ಹಾಗೂ ಎರಡನೇ ಮಗುವನ್ನು ನೋಡಲು ಆಸ್ಪತ್ರೆಗೆ ಬಂದಿದ್ದರು. ನೀನು ಡೆಲಿವರಿ ರೂಂನಲ್ಲಿದ್ದೆ. ನಿನ್ನ ಹೆರಿಗೆಯ ಎಲ್ಲಾ ದುಡ್ಡು ಕಟ್ಟಿದ್ದು ಅವ್ರೇ. ಈ ಕೊರೋನಾ ಸಮಯದಲ್ಲಿ ಮನೆ ಬಾಡಿಗೆ ಅಂಚೆ ಮೂಲಕ ಕಳುಹಿಸಿದ್ದು, ಎಲ್ಲಾ ನಿನ್ನ ತಂದೆಯೇ. ಶ್ಯಾಮನಲ್ಲಿ- ಇದೆಲ್ಲಾ ಹೇಳಬಾರದು, ಹೇಳಿದರೆ ಅವಳು ನಿನ್ನ ಪ್ರೀತಿಸುವುದು ಕಡಿಮೆಯಾಗಬಹುದು. ನನ್ನ ದ್ವೇಷಿಸಿದರೆ ಅವಳು ನಿನಗೆ ಒಳ್ಳೆಯ ಪತ್ನಿಯಾಗುವಳು ಎಂದಿದ್ದರು, ನಿಮ್ಮ ತಂದೆ” ಎಂಬ ಹುಸೈನ್ ಮಾತಿಗೆ ಶೆಟ್ಟಿ ಧ್ವನಿಗೂಡಿಸಿದ ” ಅಕ್ಕಾ…. ನಿಮಗೆ ಏನೇ ಆಹಾರ ಬೇಕಿದ್ದರೂ ಕೊಡಬೇಕೆಂದು ನಿಮ್ಮ ತಂದೆ ಅಂದೇ ಮುಂಗಡವಾಗಿ ಹಣ ಕೊಟ್ಟಿದ್ದರು. ಎಂದಾದರೂ ನೀವು ಮರಳಿಸಿದಾಗ , ಅದನ್ನು ನಾನು ಅವರಿಗೆ ಮರಳಿ ಕೊಡಬಹುದು ಎಂದಿದ್ದರು. ಮೊನ್ನೆ ಶ್ಯಾಮನ ಕೊನೆಯ ಎಲ್ಲಾ ಕ್ರಿಯಾ ಕಾರ್ಯಗಳನ್ನು ಮುಂದೆ ನಿಂತು ನಡೆಸಿದ್ದು ನಿಮ್ಮ ಅಪ್ಪಾಜಿಯೇ ಆಗಿದ್ದರು” ಎಂದಾಗ …

ದೂರದಲ್ಲಿ ರಾಮೇಗೌಡರು ಒಂದು ಕೈ ಚೀಲ ಹಿಡಿದು ಅಳುನಗುವಿನೊಳಗೆ ಸಿಗುಡಿದ ಮುಖ ಮಾಡಿ ಮಗಳನ್ನು ಅಸಹಾಯಕತೆಯಿಂದ ನೋಡುತ್ತಿದ್ದರು. ಮಗಳು ತುಂಬಾ ಕಾಲ ನನ್ನ ಮರೆತು ಸುಖವಾಗಿರಬೇಕೆಂಬ ಆಸೆಯ ರಾಮೇಗೌಡರು ಸೋತಿದ್ದರು. ಸುಮಿತ್ರಾ ಅಳತೊಡಗಿದ್ದು ನಿಲ್ಲಲೇ ಇಲ್ಲ. ಅವಳ ಕಣ್ಣೀರು ಸ್ವಾತಂತ್ರ್ಯ ಪಡೆದು ಜಯಿಸಿತ್ತು.

ನಿಮ್ಮವ ನಲ್ಲ
ರೂಪು


  • ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW