ಅವಳು ಮತ್ತು ನಾನು – ಡಾ. ಪ್ರಕಾಶ ಬಾರ್ಕಿ



ಇಲ್ಲಿ ಅವಳು ಎಂದರೆ ಪ್ರೇಯಸಿಯಲ್ಲ, ಹೆಂಡತಿಯಲ್ಲ. ಪ್ರೀತಿ ಕೊಡುವ ಮೂಕಜೀವಿ ನಾಯಿ. ಒಂದೇ ಒಂದು ಸಣ್ಣ ಬಿಸ್ಕೆಟ್ ತುಂಡು ಹಾಕಿದರೆ ತನ್ನ ಜೀವ ಇರುವವರೆಗೂ ಮಾಲೀಕನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತದೆ. ಅದರ ನಿಸ್ವಾರ್ಥ ಪ್ರೀತಿಯ ಬಗ್ಗೆ ಡಾ. ಪ್ರಕಾಶ ಬಾರ್ಕಿಯವರು ಮನಮಿಡಿಯುವಂತೆ ಬರೆದಿದ್ದಾರೆ. ನಿಮ್ಮಲ್ಲೂ ‘ಅವಳು’ ಅಥವಾ ‘ಅವನು’ ಇರಬಹುದಾ? ನೋಡಿ…

ಅವಳು ಅಷ್ಟೇನು ಸುಂದರಿಯಲ್ಲ, ಮೈ ಮೇಲೆ ಒಂದಿಷ್ಟು ಕೊಳಕು ಮಣ್ಣು, ಕೊರಳಲ್ಲಿ ಸೆಣಬಿನ ಹುರಿ ಸುತ್ತಿಕೊಂಡು ಕುಂಟುತ್ತಾ ನನ್ನೆಡೆಗೆ ಸಂಶಯದಿಂದಲೇ ಧಾವಿಸಿದ್ದಳು. ಇವಳದು ಆವಾಗ ಒಂದೂವರೆ ತಿಂಗಳ ವಯಸ್ಸು, ಮೈ ಗಲೀಜು, ಕೊರಳಲ್ಲಿದ್ದ ದಾರ, ಕುಂಟುವ ನಡಿಗೆ.. ಇವಳಲ್ಲಿನ ಅಂತರ್ಗತ ಅವ್ಯಕ್ತ ಭಯ.. ಇವೆಲ್ಲ ನೋಡಿದರೆ, ಓಣಿಯ ಹುಡುಗರ ಉಡಾಳ‌ ಕೃತ್ಯವಿದು.

ಭಯದ ನೋಟದಲ್ಲೇ ಹಿಂಜರಿಯುತ್ತಿದ್ದವಳಿಗೆ, ಕೊರಳಲ್ಲಿನ ಹಗ್ಗ ತುಂಡರಿಸಿ, ಮೈ ನೇವರಿಸಿ, ಹಾಲು ಅನ್ನ ಕೊಟ್ಟಿದ್ದೆ. ಪಾಪಾ…!!. ಆದ್ಯಾವಾಗ ಅನ್ನ ಕಂಡಿದ್ದಳೋ.. ಹಸಿದ ಹೊಟ್ಟೆ ತುಂಬಿಸಲು ಗಬಗಬನೆ ಮುಕ್ಕಿ, ನನ್ನಡೆಗೊಂದು ಸಂತಸದ ನೋಟ ಬೀರಿ ಮುನ್ನಡೆದಿದ್ದಳು.

ಮಾರನೆಯ ದಿನ ಅವಳ ನೋವು ನೋಡಲಾಗದೆ, ಅನ್ನ ಹಾಲಿನ ಜೊತೆ “ನೋವು ನಿವಾರಕ” ಮಾತ್ರೆಯ ಪುಡಿ ಕಲಿಸಿ ಕೊಟ್ಟಿದ್ದೆ. ಮಾತ್ರೆ ಕಹಿ ಇದ್ದರೂ ಸುಮ್ಮನೆ ಉಂಡು ಕೈ ನೆಕ್ಕಿ ಮುತ್ತಿಟ್ಟ ಸುಂದರಿಯಿವಳು. ಹೀಗೆ ಒಂದೆರಡು ದಿನದಲ್ಲಿ ನೋವು ಮಾಯವಾಗಿ, ಪುಟಿಪುಟಿದು ನನ್ನೆಡೆಗೆ ಜಿಂಕೆಯಂತೆ ಬಂದು, ಧನ್ಯತಾ ಭಾವದಿ ಬಳುಕಿದ್ದಳು.

ಅವಳ ಮತ್ತು ನನ್ನಯ ಕೊಂಡಿ ಬೆಸದುಕೊಂಡಿದ್ದು ಹೀಗೆ :

ಅವಳು ಯಾವತ್ತೂ ಹೊಸ್ತಿಲು ದಾಟಿ ಮನೆಯೊಳಗೆ ದಾಪುಗಾಲಿಟ್ಟಿಲ್ಲ. ಮಲಗುವುದು ಏನಿದ್ದರೂ ಹೊಸ್ತಿಲಿಗೆ ತಲೆಯಿಟ್ಟು, ಅದೇ ಅವಳ ದಿಂಬು. ಒಮ್ಮೇಯೂ ಮೆತ್ತನೆಯ ಹಾಸಿಗೆ ಬಯಸದ ನಿರ್ವ್ಯಾಮೋಹಿ.

ಇವಳಿಗೆ ನಾನಿರಬೇಕು, ನಾನಿದ್ದರೆ ನಮ್ಮ ಮನೆಯತ್ತ ಇಣುಕಿ ಸುಳಿದಾಡುವಳು. ನನಗೆ ರಜೆಯಿದ್ದರಂತೂ ಮನೆ ಮುಂಬಾಗಿಲು, ಹಿತ್ತಲಲ್ಲಿ ಶಬರಿಯಂತೆ ಕಾಯುತ್ತಲೆ ಇರುವ ಹರೆಯ ತುಂಬಿದ ಹೆಣ್ಣಿವಳು. ಇವಾಗ ಇವಳ ವಯಸ್ಸು ಎರಡು ವರುಷ. ಇವಳು ಕಾಯುವ ಕಾತುರಕ್ಕೆ ಕಾರಣ ಊಟವಲ್ಲ, ಕೇವಲ ಪ್ರೇಮಭರಿತ ಚಂದನೆಯ ಒಂದು ಸ್ಪರ್ಷ‌.

ಮೈ ನೇವರಿಸಿ, ಮೈ ಮೇಲಿನ “ಉಣ್ಣೆ” ತೆಗೆದು, ಗಾಯವಾದರೆ ಒಂದಿಷ್ಟು ಮುಲಾಮು ಹಾಕಿ, ಸ್ವಲ್ಪ ಸಮಯ ಕೊಟ್ಟರೇ ಸಾಕು, ಇವಳು ಸಂತೃಪ್ತ ಜೀವಿ‌. ನೋವು, ಗಾಯ, ಕೂದಲು ಉದುರಿದರೆ, ಆರೋಗ್ಯ ಏರುಪೇರಾದರೆ.. ನನ್ನ ಬಯಸಿ ಬರುವ ಮೂಖಜೀವಿ‌. ಔಷಧಿಗಳನ್ನು ಆಹಾರದಲ್ಲಿ ಕಲಿಸಿಕೊಟ್ಟು ಅವಳ ಪ್ರೀತಿಗೆ ಇನ್ನಷ್ಟು ಹತ್ತಿರವಾಗಿದಿನಿ.

ಹಗಲು ಸೂರ್ಯನ ಬೆಳಕಿಗೆ ಮೈಯೊಡ್ಡಿ.. ಓಣಿಯ ತುಂಬಾ ಪುಟು ಪುಟು ಓಡಾಡ್ತಾಳೆ. ಗೆಳೆಯ ಗೆಳತಿಯರ ಜೊತೆ ತುಂಬು ದಿನ ಕಳೆಯುವ ಇವಳು, ಮೈಗೆಲ್ಲ “ಉಣ್ಣೆ” “ತೊನಸಿ” ಅಂಟಿಸಿಕೊಂಡು, ಮೈ ಕೆರೆದುಕೊಂಡು..ನನ್ನಿಂದ ಬೈಸಿಕೊಂಡು ತಲೆ ಬಾಗುವ ಭಾವಜೀವಿ. ದಡಬಡಾಯಿಸಿ ಓಡುವ ಒಂದೇ ಒಂದು ಬೈಕಿನತ್ತ ಓಡಲ್ಲ. ಒಬ್ಬ ಅಪರಿಚಿತ ವ್ಯಕ್ತಿಗೂ ಗುರ್ರಾಯಿಸಿದವಳಲ್ಲ‌.

ಜನರೇ ತುಚ್ಚವಾಗಿ ಕಂಡು, ಕಲ್ಲೇಟು ಕೊಟ್ಟರೂ “ನೋವು” ಸಹಿಸಿಕೊಂಡ ಮುಗ್ಧಜೀವಿ.



ಕಳೆದ ವರುಷದ “ಲಾಕ್ಡೌನ್” ಕಠಿಣ ಪರಿಸ್ಥಿಯಲ್ಲಿ ಜೊತೆಯಲ್ಲೇ ಸಂಗಾತಿಯಂತಿದ್ದಳು. ಆದರೆ ನಡುವೆ ಅನಿವಾರ್ಯ ಕಾರಣದಿ, ಹದಿನೈದು ದಿನ ಬೇರೆ ಊರಿಗೆ ನಡೆದಿದ್ದೆ. ಇವಳು ಒಂದೇರಡು ದಿನ ಕಾದು ಕಾದು ಸುಸ್ತಾಗಿ, ಬವಳಿದ್ದಾಳೆ. ಕೊನೆಗೆ ನಮ್ಮ ಓಣಿಯೇ ಬಿಟ್ಟು ಬೇರೆ ಕಡೆ ತೆವಳಿದ್ದಳು ಹಠಮಾರಿ. ಪಾಪಾ!! ಕಾಯುವಿಕೆ ಬೇಜಾರಾಗಿರ್ಬೇಕು. ನಾನು ಊರಿಗೆ ಬಂದಾಗ.. ಅದೆಲ್ಲಿ ಅಡಗಿದ್ದಳೋ ಕರಡಿಯಂತೆ ಕಕ್ಕುಲತೆಯಿಂದ, ಉದಾಸೀನತೆ ತೋರದೆ ಮೈ ಅಮರಿಕೊಂಡ ಪ್ರೇಮಜೀವಿ.

ಪ್ರತಿದಿನ ನಾನು ಆಸ್ಪತ್ರೆಯಿಂದ ಮರಳಿ ಮನೆಗೆ ಬರುವಷ್ಟರಲ್ಲೇ ಗವ್ವೆನ್ನುವ ಕತ್ತಲು ನೆಲಕ್ಕಪ್ಪಳಿಸಿರುತ್ತೆ.. ಕೇವಲ ಗಾಡಿಯ ಶಬ್ಧವಾದರೆ ಸಾಕು, ಅದ್ಯಾವ ಮೂಲೆಯಲ್ಲಿದ್ದರೂ… ಧಾವಂತದಿಂದ ದೌಡಾಯಿಸಿ ಮೈ ಅಡರುವ ಅನನ್ಯ ಭಾವಜೀವಿ. ಇವಳ ಪ್ರೀತಿಯ ಮುಂದೇ ನನ್ನ ಚೂರು ಪ್ರೀತಿ ನಿವಾಳಿಸಿ ಎಸಿಬೇಕು ಬಿಡಿ. ಇವಳ ತಲೆ ನೇವರಿಸಿ ಮುದ್ದಿಸಿ, ಒಂದ್ಹಿಡಿ ಅನ್ನ ಹಾಕಿದರೂ ಸಾಕು, ಬಳುಕಿ ತಿಂದು ತೃಪ್ತಳಾಗಿ ಎಲ್ಲಾದರೂ ಮಲಗುವ ಅತೀ ನಂಬಿಕಸ್ಥೆ.

ಇವಾಗ ನೋಡಿ.. ನಾನು ಟೆರೆಸ್ ಏರಿ.. ಓಡುವ ಮೋಡದತ್ತ ಕಣ್ಣಿಟ್ಟಾಗ. ಅದ್ಯಾವ ಮಾಯೆಯಲ್ಲಿ ನೋಡಿದಳೋ. ಕುಪ್ಪಳಿಸುತ್ತಾ ಬಂದು ಮೈಗೆ ಏರಿ.. ಅಪ್ಪುಗೆಗೆ ಹಾತೊರೆಯುತ್ತಿದ್ದಾಳೆ.

ನಾನು ಕೂತರೆ.. ನನ್ನ ಪಕ್ಕವೆ ಪವಡಿಸಿದ್ದಾಳೆ. ಇವಳನ್ನು ನಾನು ಬಂಧಿಯಾಗಿಸಿಲ್ಲ, ಸಾಕಿಕೊಂಡಿಲ್ಲ. ಓಣಿಯಲ್ಲಿದ್ದು ಬೊಗಸೆಯಷ್ಟು ಪ್ರೀತಿ ಕೊಡುವ, ನಿಗರ್ವಿ. ಯಾವ ಜನುಮದ ಬಂಧವೋ….!!!!! ಇವಳಿಗೆ ಹೆಸರೂ ಸಹ ಇಟ್ಟಿಲ್ಲ. ಅವಳು ಕೃತಜ್ಞತೆಯ ಸಾಗರ.

(ನಿಮ್ಮಲ್ಲಿಯು ಇಂತವಳು ಅಥವಾ ಇಂತವನು ಇರಬಹುದು ನೋಡಿ… ಚೂರು ಪ್ರೀತಿ ನೀಡಿ ಸಾಕು. ನೀವೇ ಮೂಖವಿಸ್ಮೀತರಾಗಿ ಅವಕ್ಕಾಗುವಿರಿ.)


  • ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading