ಮನೆಯಲ್ಲಿಯೇ ಪರ್ಪಲ್ ಬೀನ್ಸ್ , ಅಲಸಂಡೆ, ಬುಷ್ ಬೀನ್ಸ್, ಕತ್ತಿ ಅವರೆಗಳು ಬೆಳೆದು ಅದನ್ನು ಅಡುಗೆ ಮಾಡಿದಾಗ ಕೈಯಲ್ಲಿನ ಗಮ ಹೋಗಿರುವುದಿಲ್ಲ, ಸುಚಿತ್ರಾ ಹೆಗಡೆ ಅವರು ಕೈತೋಟದ ಮೇಲಿನ ಪ್ರೀತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ನೋಡಿ ಕಣ್ತುಂಬಿಕೊಳ್ಳಿ…
ಮೈಸೂರಿನ ಸಾವಯವ ಕೃಷಿ ಮೇಳದಲ್ಲಿ ಬಗೆ ಬಗೆಯ ಬೀನ್ಸ್ ಬೀಜಗಳನ್ನು ಕೊಂಡು ಬಂದಿದ್ದೆ. ಅಕ್ಕರೆಯಿಂದ ಚಿಕ್ಕ ಚಿಕ್ಕ ಕುಂಡಗಳಲ್ಲಿ ನೆಟ್ಟು ಸಸಿ ಅರಳುವುದನ್ನು ನೋಡುತ್ತ ಖುಷಿಪಡುತ್ತಿದ್ದೆ.
ಪರ್ಪಲ್ ಬೀನ್ಸ್ , ಅಲಸಂಡೆ, ಬುಷ್ ಬೀನ್ಸ್, ಕತ್ತಿ ಅವರೆಗಳು ತಲೆ ಎತ್ತಿವೆಯಾದರೂ ನೆಲದಲ್ಲಿದ್ದ ಚಪ್ಪರದ ಅವರೆ ನಾನೇರುವೆತ್ತರಕೆ ನೀನೇರಬಲ್ಲೆಯಾ ಹಾಡುತ್ತ ತಾರಸಿಯತ್ತ ಇಣುಕಿತು. ನೋಡೇ ಬಿಡೋಣವೆಂದು ಒಂದು ಗಾಂವ್ಟಿ ಚಪ್ಪರವನ್ನು ಜಂಟಿ ಕಾರ್ಯಾಚರಣೆಯಲ್ಲಿ ನಿರ್ಮಿಸಲಾಯಿತು. ಕೆಲವೇ ದಿನಗಳಲ್ಲಿ ಚಪ್ಪರ್ ಫಾಡ್ಕೆ ಚಪ್ಪರದವರೆ!
ಈ ಕತ್ತಿ ಅವರೆ ಅಥವಾ ಎಮ್ಮೆ ಕೋಡು ಅವರೆ ನನ್ನ ಬಾಲ್ಯದ ಮಧುರ ನೆನಪುಗಳನ್ನು ಮರಳಿಸಿದೆ. ನನ್ನಮ್ಮ ಮನೆಯ ಪಕ್ಕದ ಗೇರು ಮರಕ್ಕೆ ಈ ಬಳ್ಳಿಯನ್ನು ಹಬ್ಬಿಸಿದ್ದಳು. ಎರಡು ದೊಡ್ಡ ಅವರೆ ಕಾಯಿಗಳನ್ನು ಹಿಡಿದು ಅಣ್ಣನೊಂದಿಗೆ ಕತ್ತಿ ವರಸೆ ಮಾಡುತ್ತಿದ್ದ ದೃಶ್ಯ ಕಣ್ಣ ಮುಂದಿದೆ. ಒಮ್ಮೆ ನೆಟ್ಟರೆ ಬೇಗ ಮಾಯದು. ಇದು ಎಳೆಯದಿರುವಾಗಲೇ ಇಡೀ ಅವರೆಕಾಯಿಯನ್ನು ಬಳಸಿ ಹುಳಿ, ಪಲ್ಯ ಮಾಡಬಹುದು. ಬೆಣ್ಣೆಯಂತೆ ಬೇಯುವ ಇದರ ರುಚಿ ಇನ್ನೂ ನಾಲಿಗೆಯಲ್ಲಿದೆ. ಪರ್ಪಲ್ ಬೀನ್ಸ್ ರುಚಿ ನೋಡುವಷ್ಟೇ ಆಗಿದ್ದರಿಂದ ಒಮ್ಮೆ ತುಸುವೇ ಪಲ್ಯ ಮಾಡಿ ಕ್ರಂಚೀ ಮತ್ತು ಟೇಸ್ಟೀ ಎಂದು ಖಾತ್ರಿ ಪಡಿಸಿಕೊಳ್ಳಲಾಗಿದೆ.
ನಾವು ತಿಂದು ಅಕ್ಕ ಪಕ್ಕದವರಿಗೂ ಕೊಡುವಷ್ಟು ಬಸಳೆ, ಕೆಸವು, ಹಸಿಮೆಣಸಿನ ಕಾಯಿ, ಅರಿಷಿಣ, ಪಪ್ಪಾಯ ಮಾತ್ರ ಈ ಮನೆಯಲ್ಲಿ ಬೆಳೆದಿದ್ದೆ. ಹೇರಳ ಹಲಸು ಮತ್ತು ಚಿಕ್ಕು ಮೊದಲೇ ಇಲ್ಲಿದೆ. ಈಗ ಚಪ್ಪರದವರೆ ಹಂಚುವ ದಿನ ದೂರವಿಲ್ಲ.
ಈ ಬಿಸಿಲಲ್ಲಿ, ಸೆಕೆಯಲ್ಲಿ ಬೇಯುವ ತಾರಸಿಯನ್ನು ತಂಪಾಗಿಸುವಷ್ಟು ಹಸಿರನ್ನು ಹೊದೆಸಿದ ಬಳ್ಳಿಯ ಮೇಲೆ ನೀರಿನ ಮಳೆಯಿಲ್ಲವಾದ್ದರಿಂದ ಪ್ರೀತಿಯ ಮಳೆ ಮಾತ್ರ ಸುರಿಯುತ್ತಿದೆ! ನಮ್ಮ ಸಂಜೆಯ ಚಾಯ್ ಕೆ ಸಾಥ್ ಮನ್ ಕಿ ಬಾತ್ ಕೂಡ ಇಲ್ಲೇ ನಡೆಯುತ್ತಿದೆ…
- ಸುಚಿತ್ರಾ ಹೆಗಡೆ