‘ಎಲ್ಲವನ್ನೂ ಬದುಕಬೇಕಾದ ಗತಿಗೆ ಮಾರಿಕೊಂಡಿದ್ದೇನೆ ನನ್ನೇ ನಾನು’….ಕವಿಯತ್ರಿ ಗೀತಾ ಜಿ ಹೆಗಡೆ ಕಲ್ಮನೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಓದಿ…
ಏಕೆ ನನ್ನ ನೋಡಿ
ಈ ಕುಹಕ?
ಇದು ನಾನಲ್ಲ
ಇಲ್ಲಿ ನೀವುಗಳೇ ಎಲ್ಲ
ನಿಮ್ಮಿಷ್ಟದ ಕೈಗೊಂಬೆ
ನಾನು
ದಿಗಂಬರಳಾದ ಹೆಣ್ಣು.
ಸುರುಳಿ ಸುತ್ತಿಕೊಂಡ
ಗುಂಗುರು ಕೂದಲು
ಗಾಳಿಗೆ ತೊನೆದಾಡಲು ಬಿಟ್ಟಿದ್ದೆ
ಹುಬ್ಬು ಬಾಗಿ
ಕಾಮನ ಬಿಲ್ಲನ್ನೆ ನಾಚಿಸುತ್ತಿದೆಯಲ್ಲೆ
ಎಂದನ್ನುವ ಗೆಳತಿಯರ ಕಚಗುಳಿ
ನಾಚಿ ನೀರಾದ ನನ್ನ ವದನ
ಗೆಜ್ಜೆ ಕಟ್ಟಿದ ಕಾಲ
ಬೆರಳ ಉಂಗುಷ್ಟದವರೆಗೂ
ವೈಯ್ಯಾರದ ಬೆಡಗಿ
ತುಟಿ ನಗು ತುಂಬಿದ
ಕನಸುಗಣ್ಣಿನ ಹೆಣ್ಣು
ನಾನು ಹೀಗಿದ್ದೆ ಅಂದು.
ಈಗ ಎಲ್ಲವನ್ನೂ
ಬದುಕಬೇಕಾದ ಗತಿಗೆ
ಮಾರಿಕೊಂಡಿದ್ದೇನೆ
ನನ್ನೇ ನಾನು.
ನೋಡಿ ಮುಖ ಮ್ಲಾನ
ನೀಲ ಲೆನ್ಸ ಕಣ್ಣಿಗೆ
ಕಾಂತಿ ಮೌನ
ದಾಳಿಂಬೆ ತುಟಿಗಳೆರಡೂ
ತೊಡೆದ ಕಡು ಬಣ್ಣ
ನಿಗುರಿ ನಿಂತ
ಕೈಚಳಕದ ಹುಬ್ಬು
ಆಗಲೆ ಕಳೆದು ಹೋದ ನಾನು
ನೋಡಿ ಪೇಲವ ಮುಖ ಮಾಡಿದೆ
ಹೀಗಾಗದೆ ಗತಿ ಇಲ್ಲ
ಕೊಟ್ಟಿದ್ದೇನೆ ದೇಹವನ್ನು
ಹರಾಜಿಗಿಟ್ಟ
ನಾಲ್ಕು ಕಾಲಿನ ಮಂಚದಂತೆ
ಮೈ ಚಳಿ ಬಿಟ್ಟು.
- ಗೀತಾ ಜಿ ಹೆಗಡೆ ಕಲ್ಮನೆ