ಅಂಬೇಡ್ಕರ್ ಜಗದಗಲ..ಮುಗಿಲಗಲ…

‘ಆಗಿನ್ನೂ ನಮಗೆ ಅಂಬೇಡ್ಕರ್ ಅಷ್ಟಾಗಿ ಪರಿಚಯವಾಗಿರಲಿಲ್ಲ, ಆದರೆ ಇಂದು ನಮ್ಮ ಮನಸ್ಸಿನಲ್ಲಿ ಮೊಳಕೆ ಒಡೆದ ಅಂಬೇಡ್ಕರ್ ಇಂದು ಜಗದಗಲ ಮುಗಿಲಗಲ ಬೆಳೆದು ನಿಂತಿದ್ದಾರೆ’. – ಇಂದೂಧರ ಹೊನ್ನಾಪುರ, ತಪ್ಪದೆ ಮುಂದೆ ಓದಿ…

ಪುಸ್ತಕ : ಜೈ ಭೀಮ್
ಸಂಪಾದಕರು : ಅರುಣ್ ಜೋಳದಕೂಡ್ಲಿಗಿ
ಪ್ರಕಾಶಕರು : ಕೌದಿ ಪ್ರಕಾಶನ
ಬೆಲೆ :೨೫೦/
ಖರೀಸಿಗಾಗಿ : 9008660371

ಅದು ಎಪ್ಪತ್ತರ ದಶಕದ ಆರಂಭದ ಕಾಲ, ಮೈಸೂರಿನಲ್ಲಿ ಓದುತ್ತಿದ್ದ ನಾವು, ಕೆಲವು ಗೆಳೆಯರು ಸಮಾಜವಾದಿ ಯುವಜನ ಸಭಾದೊಂದಿಗೆ ಗುರುತಿಸಿಕೊಂಡು ಕೆಲಸ ಮಾಡುತ್ತಿದ್ದೆವು. ಜಾತಿ, ಸಂಪ್ರದಾಯ, ಮೂಢನಂಬಿಕೆ ವಿರುದ್ಧದ ಹೋರಾಟದ ಜತೆಗೆ ಕಾಂಗ್ರೆಸ್ ವಿರುದ್ಧದ ಹೋರಾಟ ನಮ್ಮ ಅಂದಿನ ಆದ್ಯತೆಗಳು, ನಮಗಿಂತ ಹಿರಿಯರಾಗಿದ್ದ ಎಂ.ಡಿ.ನಂಜುಂಡಸ್ವಾಮಿ, ಯು.ಆರ್. ಅನಂತಮೂರ್ತಿ, ಕೆ. ರಾಮದಾಸ್, ದೇವನೂರ ಮಹಾದೇವ, ಟಿ. ಎನ್. ನಾಗರಾಜ, ಪ.ಮಲ್ಲೇಶ್ ಆಗ ನಮ್ಮ ಹೀರೋಗಳು.

ಆಗಿನ್ನೂ ನಮಗೆ ಅಂಬೇಡ್ಕರ್ ಅಷ್ಟಾಗಿ ಪರಿಚಯವಾಗಿರಲಿಲ್ಲ. ಕುವೆಂಪು, ರಾಮಮನೋಹರ ಲೋಹಿಯಾ, ಗೋಪಾಲಗೌಡ ಅವರುಗಳು ನಮ್ಮ ಆದರ್ಶ. ಮಹಾತ್ಮ ಗಾಂಧಿ ಬಗೆಗೆ ಒಲವಿದ್ದರೂ ಪೂರ್ತಿ ಆವರಿಸಿಕೊಂಡ್ಡದ್ದು ಲೋಹಿಯಾ. ಗಂಗೋತ್ರಿಯಲ್ಲಿದ್ದ ಗೌತಮ ಹಾಸ್ಟೆಲ್‌ನಲ್ಲಿದ್ದ ನನಗೆ ಬಸವರಾಜ ಕೆಸ್ತೂರು ಅವರು ಬರೆದಿದ್ದ ‘ಮಹಾಪುರುಷ’ ಎಂಬ ಅಂಬೇಡ್ಕರ್ ಕುರಿತ ಪುಸ್ತಕ ಸಿಕ್ಕಿದ್ದು ಆಗಲೇ. ಕಾದಂಬರಿ ರೂಪದ ಅಂಬೇಡ್ಕರ್ ಜೀವನ ಚರಿತ್ರೆ ನನ್ನನ್ನೂ ಬಹುವಾಗಿ ಆಕರ್ಷಿಸಿತು. ನನ್ನಂತೆ ನನ್ನ ಜತೆ ಇದ್ದ ಗೋವಿಂದಯ್ಯ, ಶಿವಾಜಿಗಣೇಶನ್, ರಾಮದೇವ ರಾಕೆ, ದೇವನೂರ ಶಿವಮಲ್ಲು ಎಲ್ಲರನ್ನೂ ಅಂಬೇಡ್ಕರ್ ಸೆಳೆದರು.

ಹೀಗೆ ನಮ್ಮನ್ನು ಆವರಿಸಿಕೊಂಡ ಅಂಬೇಡ್ಕರ್ ನಮ್ಮನ್ನು ಸಮಾಜವಾದದಿಂದ ಅಂಬೇಡ್ಕರ್‌ ವಾದಕ್ಕೆ ತಂದು ನಿಲ್ಲಿಸಿದರು. ವೈಚಾರಿಕ ಚಿಂತನೆ ಮತ್ತು ಹೋರಾಟದ ವೇದಿಕೆಯಾಗಿದ್ದ ಮೈಸೂರಿನಲ್ಲಿ ಆಗ ನಡೆದ ಜಾತಿವಿನಾಶ ಸಮ್ಮೇಳನ, ಬರಹಗಾರರ ಒಕ್ಕೂಟದ ಸಭೆ, ಬೂಸಾ ಚಳವಳಿ ಎಲ್ಲವೂ ನಮ್ಮನ್ನು ಸೈದ್ಧಾಂತಿಕವಾಗಿ ಗಟ್ಟಿಗೊಳಿಸುವುದರೊಂದಿಗೆ ಅಂಬೇಡ್ಕರ್ ಸಿದ್ಧಾಂತದತ್ತ ನಮ್ಮನ್ನು ಸೆಳೆದವು. ಬ್ರಾಹ್ಮಣ-ಶೂದ್ರ ಚಳವಳಿಯ ನೆಲೆಯಾಗಿದ್ದ ನಮ್ಮ ಚಿಂತನಾ ಲಹರಿ ವಿಸ್ತರಿಸುತ್ತಾ ದಲಿತ-ಶೂದ್ರ-ಬ್ರಾಹ್ಮಣ ಸಂಬಂಧಗಳು, ಭೂಮಾಲೀಕರು ಮತ್ತು ದುಡಿಯುವ ವರ್ಗದ ನಡುವಿನ ಸಂಘರ್ಷ ಮುಂತಾಗಿ ಹೊಸ ಹೊಸ ಚಿಂತನೆಗಳತ್ತ ಹೊರಳತೊಡಗಿತು.

ಆಗಾಗಲೇ ಮಹಾರಾಷ್ಟ್ರದಲ್ಲಿ ಆರಂಭವಾಗಿದ್ದ ದಲಿತ ಪ್ಯಾಂಥರ್‍ಸ ಚಳವಳಿ ನಮ್ಮನ್ನು ತೀವ್ರವಾಗಿ ಆಕರ್ಷಿಸಿತು. ದೇವನೂರ ಮಹಾದೇವ ಅವರು ಅನುವಾದಿಸಿ ಪ್ರಕಟಿಸಿದ ‘ಪ್ಯಾಂಥರ್‍ಸ್ ಪ್ರಣಾಳಿಕೆ’ ನಮಗೆ ಕೈದೀವಿಗೆಯಾಯಿತು. ಎರಡನೆಯವರಾಗಿ ಮನಸ್ಸಿಗಿಳಿದಿದ್ದ ಅಂಬೇಡ್ಕರ್ ಆನಂತರ ನಮ್ಮೆಲ್ಲರ ಆದರ್ಶವಾಗಿ ಮುನ್ನಡೆಸತೊಡಗಿದರು. ನಂತರ ನಾವೆಲ್ಲ ಕೂಡಿ ಆರಂಭಿಸಿದ ‘ಶೋಷಿತ’ ಪತ್ರಿಕೆ, ನಂತರದ ‘ಪಂಚಮ’ ದಲಿತ ಚಳವಳಿಯ ರೂಪ ಪಡೆದು ಮುನ್ನಡೆದದ್ದು ಈಗ ಕಣ್ಣೆದುರಿನ ಇತಿಹಾಸ.

ಬೀಜ ರೂಪದಲ್ಲಿ ಅದು ನಮ್ಮ ಮನಸ್ಸಿನಲ್ಲಿ ಮೊಳಕೆ ಒಡೆದ ಅಂಬೇಡ್ಕರ್ ಇಂದು ಜಗದಗಲ ಮುಗಿಲಗಲ ಬೆಳೆದು ನಿಂತಿದ್ದಾರೆ. ಅಂಬೇಡ್ಕರ್ ಹೆಸರಿಲ್ಲದ ಸಮಾಜೋರಾಜಕೀಯ ಚಿಂತನೆ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಂದು ಆವರಿಸಿಕೊಂಡಿದ್ದಾರೆ. ಶೋಷಿತರು-ಶೋಷಕರು, ಎಡಪಂಥೀಯರು, ಬಲಪಂಥೀಯರು ಎಲ್ಲರಿಗೂ ಇಂದು ಅಂಬೇಡ್ಕರ್ ಅನಿವಾರ್ಯವಾಗಿದ್ದಾರೆ. ಅಂಬೇಡ್ಕರ್ ಅವರನ್ನು ಜಾತಿ ನಾಯಕನೆಂದು ದೂರ ಇಟ್ಟಿದ್ದ ಎಡಪಂಥೀಯರಿಗೀಗ ಅಂಬೇಡ್ಕರ್ ಸಿದ್ಧಾಂತವೇ ದಾರಿದೀಪವಾಗಿದೆ. ಸುಳ್ಳು ದೇವರೆಂದು ಹೀಗಳೆಯುತ್ತಿದ್ದ ಬಲಪಂಥೀಯರು ಅಂಬೇಡ್ಕರ್ ಭಾವಚಿತ್ರ ಹಿಡಿದು ಮೆರವಣಿಗೆ ಹೊರಟಿದ್ದಾರೆ. ದಲಿತರು ದುರ್ಬಲ ವರ್ಗದವರ ಪಾಲಿಗಂತೂ ಅವರು ಆರಾಧ್ಯ ದೈವವಾಗಿದ್ದಾರೆ.
ಎಲ್ಲ ಪ್ರತಿರೋಧಗಳನ್ನು ಅರಗಿಸಿಕೊಂಡು ಬಿಡುವ ಜಾಯಮಾನದ ವೈದಿಕ ಮನಸ್ಸು ಅಂಬೇಡ್ಕರ್ ಅವರನ್ನೂ ನುಂಗಿಹಾಕಲು ಟೊಂಕಕಟ್ಟಿ ನಿಂತಿದೆ. ತಮಗೆ ಬೇಕಾದಂತೆ ಅಂಬೇಡ್ಕರ್ ಸಿದ್ಧಾಂತಗಳನ್ನು ತಿರುಚುತ್ತಾ ವಿಸ್ಮೃತಿಯನ್ನು ಸೃಷ್ಟಿಸಲು ಹೊರಟಿದೆ. ಅಂಬೇಡ್ಕರ್ ಅವರನ್ನು ಮುಸ್ಲಿಂ ವಿರೋಧಿಯಾಗಿ ಬಿಂಬಿಸಿ, ಸಮಾಜದಲ್ಲಿ ಕೋಮು ದ್ವೇಶವನ್ನು ವ್ಯಾಪಕಗೊಳಿಸಲು ಹವಣಿಸುತ್ತಿದೆ. ಅಮಾಯಕ ಅಂಬೇಡ್ಕರ್ ಅನುಯಾಯಿಗಳು ಈ ಪಿತೂರಿಯ ಅರಿವಿಲ್ಲದೆ ಕೋಮುವಾದಿಗಳ ಕಾಲಾಳುಗಳಾಗಿ ದುಡಿಯಲು ಸಿದ್ಧರಾಗುತ್ತಿದ್ದಾರೆ.
ಈ ಪಿತೂರಿಯ ಭಾಗವಾಗಿಯೇ ಅಂಬೇಡ್ಕರ್ ಅವರನ್ನು ವೈಚಾರಿಕ ಗುರುವಿನ, ದಾರ್ಶನಿಕನ ಸ್ಥಾನದಿಂದ ಇಳಿಸಿ ‘ಆರಾಧ್ಯದೈವ’ವನ್ನಾಗಿಸುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದೆ. ಅವರ ಶಿಲ್ಪಗಳಿಗೆ, ಕಟೌಟ್‌ಗಳಿಗೆ ಅಭಿಶೇಕ ಮಾಡಲಾಗುತ್ತಿದೆ. ಹಣ್ಣು, ಕಾಯಿ, ಧೂಪ, ದೀಪ ಇಟ್ಟು ಪೂಜಿಸುವ ಪರಿಪಾಠ ಆರಂಭವಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನೆಲ್ಲ ಸಭೆ, ಮೆರವಣಿಗೆಗಳಲ್ಲಿ ಹೆಗಡೇವಾರ್ ಚಿತ್ರದ ಜೊತೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಮೆರವಣಿಗೆ ಮಾಡುತ್ತಿದೆ. ಪರಸ್ಪರ ವೈರುಧ್ಯಗಳನ್ನು ಒಂದುಗೂಡಿಸಿ, ಸಮಾನತೆಯ ಸಿದ್ದಾಂತದ ಪ್ರವಾದಿಯೊಬ್ಬನನ್ನು ಇಲ್ಲವಾಗಿಸುವ ಐತಿಹಾಸಿಕ ಸಂಚು ನಮ್ಮೆಲ್ಲರ ಕಣ್ಣೆದುರೇ ನಡೆಯುತ್ತಿದೆ.

ವೈಚಾರಿಕತೆಗಿಂತ ಭಾವನಾತ್ಮಕ ನೆಲೆಯಲ್ಲೇ ಎಲ್ಲವನ್ನೂ ನೋಡುವ-ಗ್ರಹಿಸುವ ಭಾರತೀಯ ಮನಸ್ಸು ಅಂಬೇಡ್ಕರ್ ಅವರನ್ನು ವೈಭವೀಕರಿಸಿ ಆರಾಧಿಸುವುದರಲ್ಲೇ ಕಳೆದು ಹೋಗುವ ಅಪಾಯವೇ ಹೆಚ್ಚಾಗಿದೆ. ಜಾತಿ ವಿನಾಶಕ್ಕೆ ಹೋರಾಡಿದ ಅಂಬೇಡ್ಕರ್‌ರನ್ನು ಜಾತಿ ಕೋಟೆಯೊಳಗೆ ಕೂಡಿ ಹಾಕುವ ಕೆಲಸ ದಲಿತ ಸಮುದಾಯಗಳೊಳಗೇ ಹೆಚ್ಚು ನಡೆಯುತ್ತಿದೆ. ಕೋಮು ಗಲಭೆಗಳಲ್ಲಿ ದಲಿತರು ಮತ್ತು ತಳಸಮುದಾಯಗಳ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. ಮತ್ತೂ ದುರಂತವೆಂದರೆ, ಬೌದ್ಧ ಧರ್ಮದಲ್ಲಿ ಗುರುತಿಸಿಕೊಂಡಿದ್ದ ದಲಿತರು ಮತ್ತೆ ಹಿಂದೂಗಳೆಂದು ಗುರುತಿಸಿಕೊಳ್ಳುವ ಆತ್ಮಹತ್ಯಾತ್ಮಕ ಪ್ರಮಾದಗಳೂ ಹೆಚ್ಚಾಗುತ್ತಿವೆ.

ಇದೆಲ್ಲದರಿಂದಾಗಿ, ತಳಸಮುದಾಯಗಳು ಒಗ್ಗೂಡುವ ಮೂಲಕ ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂಬ ಅಂಬೇಡ್ಕರ್ ವಿಚಾರಗಳೂ ಸಡಿಲಗೊಳ್ಳುತ್ತಲೇ ಇವೆ. ನಮ್ಮೆಲ್ಲರ ಕನಸು ಮತ್ತು ಆದರ್ಶವಾದ Spiritual & Intellectual ಅಂಬೇಡ್ಕರ್ ಅವರನ್ನು ಉಳಿಸಿಕೊಳ್ಳಬೇಕಾದ ಐತಿಹಾಸಿಕ ಅಗತ್ಯ ಇಡೀ ಸಮಾಜದ ಆದ್ಯತೆಯಾಗಬೇಕಾಗಿದೆ.

‘ಸಂವಾದ’ ಪತ್ರಿಕೆಯು ಆರಂಭದಿಂದಲೂ ಏಪ್ರಿಲ್ ವಿಶೇಷಾಂಕವನ್ನು ಅಂಬೇಡ್ಕರ್ ಅರಿವಿನ ಸಮಕಾಲೀನ ವಿಸ್ತರಣೆಯಾಗಿ ರೂಪಿಸುತ್ತಾ ಬರಲಾಗಿದೆ. ೨೦೨೦ ರ ಏಪ್ರಿಲ್ ಅಂಬೇಡ್ಕರ್ ವಿಶೇಷಾಂಕವನ್ನು ಸಂವಾದ ಪತ್ರಿಕಾ ಬಳಗದ ಯುವ ಚಿಂತಕ ಡಾ.ಅರುಣ್ ಜೋಳದಕೂಡ್ಲಿಗಿ ಅತಿಥಿ ಸಂಪಾದಕರಾಗಿ ಶ್ರಮವಹಿಸಿ ರೂಪಿಸಿದ್ದರು. ಹಿರಿಯರು ಮತ್ತು ಹೊಸ ತಲೆಮಾರು ಅಂಬೇಡ್ಕರ್ ಅವರನ್ನು ಕಟ್ಟಿಕೊಳ್ಳಬೇಕಾದ ವರ್ತಮಾನದ ಎಚ್ಚರದಲ್ಲಿ ಬರೆದಿದ್ದರು. ಇಂತಹ ಸಂಚಿಕೆಯನ್ನು ಕೊರೊನಾ ಲಾಕ್ಡೌನ್ ಕಾರಣ ಮುದ್ರಣ ಮಾಡಲಾಗಿರಲಿಲ್ಲ. ಪಿ.ಡಿ.ಎಫ್ ಡಿಜಿಟಲ್ ಪ್ರತಿಯನ್ನು ಹಂಚಿಕೆ ಮಾಡಲಾಗಿತ್ತು. ಓದಿದವರು ಸಂಚಿಕೆಯ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದರು. ಹೆಚ್ಚಾಗಿ ಯುವ ಬರಹಗಾರರ ಬರಹಗಳಿರುವುದು, ಹೊಸ ಆಲೋಚನೆಗೆ ತುಡಿದಿರುವುದು ಈ ಸಂಚಿಕೆಯ ವಿಶೇಷವಾಗಿತ್ತು. ಹಾಗಾಗಿ ಈ ವಿಶೇಷ ಸಂಚಿಕೆಯು ಈಗ ಪುಸ್ತಕ ರೂಪದಲ್ಲಿ ಮುದ್ರಣವಾಗುತ್ತಿರುವುದು ಖುಷಿಯ ಸಂಗತಿ. ವಿಶೇಷ ಸಂಚಿಕೆಗಾಗಿ ಬರೆದ/ಅನುವಾದಿಸಿದ ಎಲ್ಲಾ ಲೇಖಕ/ಲೇಖಕಿಯರಿಗೂ ಕೃತಜ್ಞತೆಗಳು. ಈಗ ಪುಸ್ತಕ ರೂಪದಲ್ಲಿ ಪ್ರಕಟಿಸುವ ‘ಕೌದಿ ಪ್ರಕಾಶನ’ ದ

ಡಾ.ಮಮತ ಕೆ.ಎನ್. ಅವರಿಗೆ ಕೃತಜ್ಞತೆಗಳು.


  • ಇಂದೂಧರ ಹೊನ್ನಾಪುರ, ಬೆಂಗಳೂರು. ಸಂಪಾದಕರು, ‘ಸಂವಾದ’ ಪತ್ರಿಕೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW