ಹಿಂದಿನ ದಿನಗಳಲ್ಲಿ ಬೆಳೆಗೆದ್ದು ನಿತ್ಯಕರ್ಮಗಳನ್ನು ಮುಗಿಸಿದರೆ, ಇಂದು ಕೈಯಲ್ಲಿ ಮೊಬೈಲ್ ಸ್ಟೇಟಸ್ ನೋಡಿಯೇ ಮುಂದಿನ ಕರ್ಮಗಳು ಪ್ರಾರಂಭವಾಗುತ್ತವೆ. ಅದರಲ್ಲೂ ತನ್ನ ವೈರಿ ಎನಿಸಿಕೊಂಡವರದ್ದು ಮೊದಲು ನೋಡುವುದು. ಜೊತೆಗೆ ತಾವು ಇಟ್ಟ ಸ್ಟೇಟಸ್ ನ್ನು ಎಷ್ಟು ಜನ ನೋಡಿದರು, ಯಾರು ನೋಡಬೇಕಾಗಿತ್ತೊ ಅವರು ನೋಡಿದರಂತೂ ಇನ್ನೂ ಖುಷಿ. ಲೇಖಕರಾದ ಬಸವರಾಜ ಹೊನಗೌಡರ ಅವರು ‘ಮೊಬೈಲ್ ಸ್ಟೇಟಸ್’ ಕುರಿತು ಅಂಕಣದಲ್ಲಿ ತಪ್ಪದೆ ಮುಂದೆ ಓದಿ…
ಮತ್ತೊಬ್ಬರ ಹೊಟ್ಟೆ ಉರಿಸಲು, ನಮ್ಮ ಶ್ರೀಮಂತಿಕೆ ತೋರಿಸಿಕೊಳ್ಳಲು, ನಮ್ಮ ಹುಟ್ಟು ಹಬ್ಬವನ್ನು ಮತ್ತೊಬ್ಬರಿಗೆ ನೆನಪಿಸಲು, ಬಿಡುಗಡೆಯಾದ ದಿನವೇ ಫಸ್ಟ್ ಶೋ ಚಲನಚಿತ್ರ ನೋಡಿದ್ದನ್ನು ತೋರಿಸಲು, ಕ್ರಿಕೆಟ್ ಮ್ಯಾಚ್ ನ್ನು ಸ್ಟೇಡಿಯಂದಲ್ಲಿ ನೋಡಿದ್ದನ್ನು ಹೇಳಲು, ಇಂತಹ ಸ್ಥಳಗಳಿಗೆ ನಾನು ಪ್ರವಾಸ ಮಾಡಿದೆನೆಂದು ತೋರಿಸಲು, ಇಂತಹವರ ಮದುವೆಗೆ, ಪಾರ್ಟಿಗೆ ಹೋದೆ ಹೀಗೆ ಇನ್ನೂ ಸಾಕಷ್ಟು ವಿಷಯಗಳನ್ನು ಮತ್ತೊಬ್ಬರಿಗೆ ತೋರಿಸುವ ಸುಲಭ ಸಾಧನವೆಂದರೆ ಅದು ಮೊಬೈಲ್ ಸ್ಟೇಟಸ್. ಹಿಂದಿನ ದಿನಗಳಲ್ಲಿ ಬೆಳೆಗೆದ್ದು ನಿತ್ಯಕರ್ಮಗಳನ್ನು ಮುಗಿಸಿದರೆ, ಇಂದು ಕೈಯಲ್ಲಿ ಮೊಬೈಲ್ ಸ್ಟೇಟಸ್ ನೋಡಿಯೇ ಮುಂದಿನ ಕರ್ಮಗಳು ಪ್ರಾರಂಭವಾಗುತ್ತವೆ. ಅದರಲ್ಲೂ ತನ್ನ ವೈರಿ ಎನಿಸಿಕೊಂಡವರದ್ದು ಮೊದಲು ನೋಡುವುದು. ಜೊತೆಗೆ ತಾವು ಇಟ್ಟ ಸ್ಟೇಟಸ್ ನ್ನು ಎಷ್ಟು ಜನ ನೋಡಿದರು, ಯಾರು ನೋಡಬೇಕಾಗಿತ್ತೊ ಅವರು ನೋಡಿದರಂತೂ ಇನ್ನೂ ಖುಷಿ.
ನಮ್ಮ ಅಕ್ಕನಿಗೆ ಮತ್ತೊಬ್ಬರಿಗೆ ಹೊಟ್ಟೆ ಉರಿಸುವ ಚಟ. ಅವಳು ತನ್ನ ಗೆಳತಿಯರಿಗೆ ಸಂಕಟವಾಗಲೆಂದೆ ತನ್ನ ಸ್ಟೇಟಸ್ ಇಡುತ್ತಾಳೆ. ಅವಳ ಮನೆಯಲ್ಲಿ ಅವಳದ್ದೇ ಯಜಮಾನಿಕೆ. ಹೀಗಾಗಿ ಬಾವ ಇವಳು ಹೇಳಿದಂತೆ ಕುಣಿಯುತ್ತಾನೆ. ಆನ್ಲೈನ್ ದಲ್ಲಿ ಅದು-ಇದು ಅಂತ ಖರೀದಿ ಮಾಡಿ ಅದನ್ನೇ ಸ್ಟೇಟಸ್ ಇಟ್ಟು ಬಿಡೋದು. ನಿತ್ಯ ಕರ್ಮಗಳು ತಪ್ಪಿದರೆ ತಪ್ಪಬಹುದು ಆದರೆ ಸ್ಟೇಟಸ್ ತಪ್ಪಲು ಸಾಧ್ಯವಿಲ್ಲ. ಆನ್ಲೈನ್ ನಿಂದ ವಸ್ತುಗಳು ಬಂದ ತಕ್ಷಣವೇ ನಾಲ್ಕಾರು ಬೇರೆ ಬೇರೆ ಸೈಡ್ ದಿಂದ ಪೋಟೋ ಹೊಡೆದು ಹಾಕಿದರಾಯಿತು. ಇಂತಹ ವಸ್ತುಗಳಲ್ಲಿ ಹೆಚ್ಚಿನವು ಬಟ್ಟೆಗಳೇ ಆಗಿರುತ್ತವೆ. ನಮ್ಮ ತಾಯಿ ಇವಳ ಬಟ್ಟೆ ನೋಡಿ “ಬಲ್ಲದ ಬಂಗಾರ ಮಾಡಿತು, ಅಲ್ಲದ ಅರಿವಿ ಮಾಡಿತೆಂದು” ಬೈತಿದ್ದಳು. “ಬಂಗಾರ ತೊಗಂಡ್ರ ಆಸ್ತಿ ಆದೋತ. ಹರದ ಹೋಗು ಅರಿವಿ ತೊಗಂಡ ಏನ ಮಾಡತಿ” ಎಷ್ಟ ಸಲ ಬುದ್ದಿ ಹೇಳಿದರೂ “ಎವ್ವ ನಿಂಗೇನು ಗೊತ್ತಾಗುದಿಲ್ಲ ಸುಮ್ಮನೀರ..” ಎಂದು ಬಾಯಿ ಮುಚ್ಚಿಸುತ್ತಾಳೆ. ಅವಳಿಗೆ ಸೀರೆ, ಡ್ರೇಸ್ ಗಳು ತನಗಿಂತ ತನ್ನ ಸ್ಟೇಟಸ್ ಗೆ ಬೇಕಾಗುತ್ತಿದ್ದದ್ದು ಅವ್ವಗ ಗೊತ್ತಿರಲಿಲ್ಲ. ಸ್ಟೇಟಸ್ ನೋಡಿ ಗೆಳತಿಯರು ಚೆಂದ ಇವೆಯೆಂಬ ಇಮೋಜಿಗಳನ್ನು ಕಳುಹಿಸಿದ್ದನ್ನು ನೋಡಿದ ಅಕ್ಕ ತನ್ನ ಜನ್ಮ ಸಾರ್ಥಕವಾದ ಭಾವದಲ್ಲಿರುತ್ತಾಳೆ ನಾಳೆಯವರೆಗೆ. ಬೆಳೆಗೆದ್ದು ಮತ್ತದೆ ಆಲೋಚನೆ. ಸ್ಟೇಟಸ್ ಹಾಕಲು ಏನೂ ಸಿಗದಿದ್ದರೆ ಹಳೆಯದೊಂದು ಫೋಟೊ ಹಾಕುತ್ತಾಳೆ.
ಹಳೆಯದಿರಲಿ, ಹೊಸದಿರಲಿ, ಸೀರೆಯಿರಲಿ, ಡ್ರೇಸ್ ಇರಲಿ ಒಟ್ಟಿನಲ್ಲಿ ಸ್ಟೇಟಸ್ ಇರಲೇಬೇಕು. ಇದು ನಮ್ಮಕ್ಕನೊಬ್ಬಳ ಕಥೆಯೆಲ್ಲ ಹೆಚ್ಚಿನ ಅಕ್ಕಂದಿರ, ತಂಗೀಯರ ಕತೆಯೂ ಇದುವೆ ಆಗಿರುತ್ತದೆ.

ಫೋಟೋ ಕೃಪೆ : ಅಂತರ್ಜಾಲ
ನನ್ನ ಗೆಳೆಯನ ಪಕ್ಕದ ಮನೆ ಚಂದ್ರಶೇಖರ ಶೆಟ್ಟರ ಊರ್ಫ್ ಚಂದ್ರು ಪ್ರತಿದಿನ ಅವನ ಮೊಬೈಲ್ ನಲ್ಲಿ ಹತ್ತಾರು ಸ್ಟೇಟಸ್ ಗಳು ಇರಲೇಬೇಕು. ಮೊದಲೇ ಶೆಟ್ರ ಹುಡುಗ, ಕೇಳಬೇಕೆ!! ವ್ಯಾಪಾರ ಬುದ್ದಿ ರಕ್ತದಲ್ಲಿ ಬಂದಿರುವುದನ್ನು ಸಾಬೀತು ಮಾಡಿದ್ದಾನೆ. ಅವನ ತಂದೆ ಕಿರಾಣಿ ಅಂಗಡಿಯಿಂದ ನಿವೃತ್ತಿ ಹೊಂದಿದ ನಂತರ ಅದರಲ್ಲಿ ದೊಡ್ಡದಾದ ಪ್ರೀಜ್ ತಂದಿಟ್ಟು ಹಾಲು, ಮೊಸರು, ತುಪ್ಪ, ಚೀಜ ಜೊತೆಗೆ ಐಸ್ ಕ್ರೀಮ್ ಇಟ್ಟು ಮಾರುತ್ತಾನೆ. ಪ್ರತಿದಿನ ಹೊಸ ಹೊಸ ಐಸ್ ಕ್ರೀಂಗಳನ್ನು ಸ್ಟೇಟಸ್ ದಲ್ಲಿ ಇಟ್ಟುಕೊಳ್ಳುತ್ತಾನೆ. ಅವನಿಟ್ಟ ಐಸ್ ಕ್ರೀಂ ಸ್ಟೇಟಸ್ ಮತ್ತು ಅಂಗಡಿಯಲ್ಲಿರುವ ಐಸ್ ಕ್ರೀಂಗಳಿಗೂ ಹೊಂದಾಣಿಕೆ ಇರುವುದಿಲ್ಲ. ಗೂಗಲ್ ನಲ್ಲಿ ಚೆಂದದ ಚಿತ್ರಗಳನ್ನು ಸ್ಟೇಟಸ್ ಇಡುತ್ತಾನೆ. ಅವನ ಸ್ಟೇಟಸ್ ನೋಡಿದರೆ ಬಾಯಿಯಲ್ಲಿ ನೀರು ಬರುತ್ತವೆ.
ಮೊನ್ನೆ ನಮ್ಮ ಶಾಂತವ್ವ ಚಿಕ್ಕಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಇಡಲು ಕಲಿತ್ತಿದ್ದಾಳೆ. ಇದರಿಂದ ಚಿಕ್ಕಪ್ಪಾ ಬಸಪ್ಪನಿಗೆ ಲಾಭ ಹಾಗೂ ನಷ್ಟ ಎರಡೂ ಆಗಿದೆ ಎಂದು ಹೇಳುತ್ತಿರುತ್ತಾನೆ. ಲಾಭವೆಂದರೆ ಹೊಸ ರುಚಿಯನ್ನು ಯೂಟ್ಯೂಬ್ ದಲ್ಲಿ ಕಲಿತು ಮಾಡುತ್ತಾಳೆ. ಅದು ರುಚಿಯಾದರೆ ಚಿಕ್ಕಪ್ಪನಿಗೆ ಖುಷಿ. ಇಲ್ಲದಿದ್ದರೆ ಚಿಕ್ಕಪ್ಪ ಬುಸುಗುಡುತ್ತಾನೆ. ಶಾಂತಾ ಚಿಕ್ಕಮ್ಮ ಶಾಂತವಾಗಿಯೇ “ಹೊಸಾದ ಏನಾದರೂ ಕಲಿಬೇಕಾದ್ರ ಸ್ವಲ್ಪ ಹೆಚ್ಚಾ ಕಡಿಮೆ ಆಗುವುದು ಸಹಜ” ಎಂಬ ಉತ್ತರ ಸಿದ್ದವಾಗಿಯೇ ತನ್ನ ಬತ್ತಳಿಕೆಯಲ್ಲಿಟ್ಟು ಕೊಂಡಿರುತ್ತಾಳೆ. ಪ್ರತಿದಿನ ಒಂದೊಂದು ಹೊಸರುಚಿಯ ಅಡುಗೆಯನ್ನು ಚೆಂದದ ಪಾತ್ರೆಯಲ್ಲಿಟ್ಟು ಅದಕ್ಕೊಂದಿಷ್ಟು ಅಲಂಕಾರ ಮಾಡಿ ಸ್ಟೇಟಸ್ ಇಟ್ಟರೇ ನೋಡಿದವರ ಬಾಯಿಯಲ್ಲಿ ನೀರು ಬರುವುದು ಗ್ಯಾರಂಟಿ. ಉಪ್ಪು ಖಾರ ಹೆಚ್ಚು ಕಡಿಮೆಯಾದರೂ ಅದೆಲ್ಲಿ ಕಾಣುವುದಿದೆ. ಹತ್ತಾರು ಕಾಮೆಂಟ್ ಗಳು ಬಂದು ಬಿಟ್ಟರೆ ಅವಳಿಗೆ ಪರಮಾನಂದವಾಗುತ್ತದೆ.
ನಮ್ಮ ಮಾವನೊಬ್ಬನ ಬಗ್ಗೆ ಹೇಳದಿದ್ದರೆ ಸ್ಟೇಟಸ್ ಕತೆ ಅಪೂರ್ಣವಾದಂತಯೇ ಸರಿ. ಅವನು ಪ್ರತಿದಿನ ಸ್ಟೇಟಸ್ ಇಡಲೇಬೇಕು. ಅವನು ರಾಘವೇಂದ್ರರ ಪರಮ ಭಕ್ತ. ತಪ್ಪಿಯೂ ರಾಯರನ್ನು ಬಿಟ್ಟರೆ ಬೇರೆ ಯಾವ ದೇವರನ್ನು ಸ್ಟೇಟಸ್ ನಲ್ಲಿ ಹಾಕುವುದು ಅಪರಾಧವೆಂದು ತಿಳಿದವನು. ವರ್ಷಕ್ಕೊಮ್ಮೆ ರಾಯರ ಮಠಕ್ಕೆ ಹೋದಾಗ ಒಂದೇರಡು ತನ್ನ ಸ್ವಂತದ
ಫೋಟೋ ಬಿಟ್ಟರೆ ವರ್ಷಪೂರ್ತಿ ರಾಘವೇಂದ್ರ ಸ್ವಾಮಿಗಳ ಸ್ಟೇಟಸ್ ಹಾಕಿ ನಮ್ಮ ಮನೆತನದಲ್ಲಿಯೇ ಭಕ್ತಿಯ ಸಾಗರವೆಂದು ಹೆಸರುವಾಸಿ.
***
ಮೊಬೈಲ್ ಬರುವಕ್ಕಿಂತ ಮುಂಚೆ ತಮ್ಮ ಆತ್ಮೀಯರ ಜನ್ಮದಿನಾಂಕಗಳು, ಮದುವೆ ವಾರ್ಷಿಕೋತ್ಸವಗಳು ನೆನಪಿಟ್ಟುಕೊಂಡು ಶುಭಾಶಯ ಹೇಳುವ ಪದ್ದತಿಯಿತ್ತು. ಇಂದು ಯಾರಿಗೂ ಮತ್ತೊಬ್ಬರ ಜನ್ಮದಿನಾಂಕಗಳು ಹೋಗಲಿ, ಒಮ್ಮೊಮ್ಮೆ ತಮ್ಮ ಜನ್ಮದಿನಾಂಕಗಳು ನೆನಪಿರುವುದಿಲ್ಲ. ಬ್ಯಾಂಕಿನವರು, ವಿಮಾಕಂಪನಿಯವರು ಮೆಸೇಜ್ ಕಳುಹಿಸಿದಾಗ, ಇಲ್ಲವೇ ಫೇಸ್‌ಬುಕ್ ವೇ ತಮ್ಮ ಹುಟ್ಟು ಹಬ್ಬದ ನೆನಪನ್ನು ಮಾಡಿದಾಗಲೇ ನೆನಪಾಗುವವರು ಇದ್ದಾರೆ. ಇಂದಿನ ಹುಟ್ಟುಹಬ್ಬ ಆಚರಿಸಿಕೊಳ್ಳುವದೆಂದರೆ ವಾಟ್ ಅಪ್ ಸ್ಟೇಟಸ್ ಹಾಕಿಕೊಳ್ಳುವುದಾಗಿದೆ. ನನ್ನ ಅಳಿಯ ಮೊನ್ನೆ ಅವನ ಹುಟ್ಟುಹಬ್ಬದ ದಿನ ತನ್ನ ಚೆಂದದ ಫೋಟೋಗಳನ್ನು ಜೋಡಿಸಿ ಅದಕ್ಕೊಂದು ಬರ್ತಡೇ ಹಾಡು ಸೆಟ್ ಮಾಡಿ ಸ್ಟೇಟಸ್ ಇಟ್ಟ.
ಚಾಲು ಆಯಿತು ಅವನಿಗೆ ಶುಭಾಶಯಗಳನ್ನು ಹೇಳಲು. “ಜನ್ಮದಿನದ ಶುಭಾಶಯಗಳು ಮನ್ವೀತ” ಎಂದು ಶುಭ ಹಾರೈಸಿದ್ದನ್ನು ತನ್ನ ಸ್ಟೇಟಸ್ ಇಟ್ಟುಕೊಂಡು Thank you dost, Thank you bro, Thank you mam, Thank you uncle, Thank you aunty, ಹೀಗೆ ಮುಂಜಾನೆಯಿಂದ ಸಂಜೆಯವರೆಗೆ ಸ್ಟೇಟಸ್ ಹಾಕಿದ, ಸಾಸಿವೆ ಕಾಳಿನಂತೆ ನೂರಾರು ಫೋಟೋಗಳನ್ನು ನೋಡಿ ಖುಷಿ ಪಟ್ಟ. ಇಲ್ಲಿಗೆ ನಿಲ್ಲಲಿಲ್ಲ, ತನ್ನ ಹುಟ್ಟುಹಬ್ಬಕ್ಕೆ ಎಷ್ಟು ಜನ ಅವರ ಮೊಬೈಲ್ ನಲ್ಲಿ ಸ್ಟೇಟಸ್ ಇಟ್ಟಿದ್ದಾರೆ ಎಂದು ಹುಡುಕಿದನು. ಹಾಕಿದವರಿಗೆ ಅಲ್ಲಿಯೂ ಧನ್ಯವಾದ ಹೇಳಿದನು. ಇನ್ನು ಸಾಸಿವೆ ಕಾಳಿನಂತಿಟ್ಟ ಸ್ಟೇಟಸ್ ನ್ನು ಎಷ್ಟು ಜನ ನೋಡಿದರು ಎಂಬುದನ್ನು ಆಗಾಗ ಚೆಕ್ಕ್ ಮಾಡುತ್ತಿದ್ದನು. ಈ ತರಹ ಹುಟ್ಟು ಹಬ್ಬ ಆಚರಿಸುತ್ತಾ ಸೆಲೆಬ್ರಿಟಿಯಂತೆ ವರ್ತಿಸುತ್ತಿದ್ದನು.

ಫೋಟೋ ಕೃಪೆ : ಅಂತರ್ಜಾಲ
ಮೊನ್ನೆ ಮೊನ್ನೆ ಬೆಳಗಾವಿಯಲ್ಲಿ ನಮ್ಮ ಸಹೋದ್ಯೋಗಿಗಳೊಬ್ಬರು ಚೆಂದದ ಮನೆ ಕಟ್ಟಿದರು. ನಮಗೆಲ್ಲಾ ಆಮಂತ್ರಣ ಪತ್ರಿಕೆ ಕೊಟ್ಟರು. ಇಬ್ಬರೂ ದಂಪತಿಗಳು ಉದ್ಯೋಗದಲ್ಲಿದ್ದರಿಂದ ರಜೆ ಸಿಗಲಿಲ್ಲ ಹೀಗಾಗಿ ಎಲ್ಲರಿಗೂ ವಾಟ್ಸಪ್ ದಲ್ಲಿಯೇ ಆಮಂತ್ರಣ ಪತ್ರಿಕೆ ಕಳುಹಿಸಿ ಅದರಲ್ಲಿಯೇ ಮನೆಯವರೆಗೂ ಬಂದು ಕರೆಯಲು ಆಗದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು. ಒಂದು ಮೆಸೇಜ್ ಒಂದು ಆಮಂತ್ರಣ ಎಲ್ಲರಿಗೂ ಫಾರ್ವಡ್ ಮಾಡಿ ವೇಳೆ, ಹಣ ಎಲ್ಲವನ್ನೂ ಉಳಿಸಿದರು. ಜೊತೆಗೆ ಸ್ಟೇಟಸ್ ನಲ್ಲಿಯೂ ಹಾಕಿ “ಒಂದು ವೇಳೆ ಆಮಂತ್ರಣ ಪತ್ರಿಕೆ ಮುಟ್ಟದವರು ಇದೇ ಆಮಂತ್ರಣ ಪತ್ರಿಕೆಯೆಂದು ತಿಳಿದು ಮನೆ ವಾಸ್ತು ಶಾಂತಿಗೆ ಬರಬೇಕು” ಎಂದು ಬರೆದುಕೊಂಡು ಒಂದು ಆಮಂತ್ರಣ ಪತ್ರಿಕೆಯನ್ನು ಹಾಕಿದ್ದರು. ಮನೆಯ ಪ್ರವೇಶ ದಿನ ಕ್ಯೂಆರ್ ಕೋಡ್ ಹಾಕಿ ಇದನ್ನೆ ಸ್ಕಾನ್ ಮಾಡಿದರೆ ನಮ್ಮ ಮನೆ ಹಾದಿ ಸಿಗುತ್ತದೆಂದು ಹಾಕಿದ್ದರು.
ನನ್ನ ಗೆಳೆಯನ ಹೆಂಡತಿ ಮನೆಯಲ್ಲಿ ಸೀರೆ ಹಾಗೂ ಆಭರಣಗಳನ್ನು ಹೋಲ್ ಸೇಲನಲ್ಲಿ ಖರೀದಿಸಿ ರೀಟೇಲ್ ದಲ್ಲಿ ಮಾರುತ್ತಾಳೆ. ಅವಳ ಮೊಬೈಲ್ ಸ್ಟೇಟಸ್ ಯಾವಾಗ ನೋಡಿದರೂ ಸೀರೆ ಇಲ್ಲವೇ ಆಭರಣಗಳ ಚಿತ್ರಗಳಿಂದಲೇ ಚಿತ್ತಾರಗೊಂಡಿರುತ್ತದೆ. ಸೀರೆ ಚಿತ್ರ ಹಾಕಿ ಇದು ರೇಷ್ಮೆ ಸೀರೆ ಇದರ ಬೇಲೆ ಇಷ್ಟು, ಕಾಂಚಿಪುರಂ ಸೀರೆ ಅದರ ಬೆಲೆ, ಬನಾರಸ್ ಸೀರೆ ಅದರ ಬೆಲೆ ಹೀಗೆ ಹತ್ತಾರು ಫೋಟೋಗಳನ್ನು ಅಂದವಾಗಿ ಸ್ಟೇಟಸ್ ಗೆ ಹಾಕಿ ನೋಡಿದವರಿಗೆ ಕಣ್ಮನ ಸೆಳೆಯುವಂತೆ ಮಾಡುತ್ತಾರೆ. ಜೊತೆಗೆ ನಾಲ್ಕಾರು ಆಭರಣಗಳ ಫೋಟೋಗಳನ್ನು ಹಾಗೂ ಅವುಗಳ ಬೆಲೆಗಳನ್ನು ಸ್ಟೇಟಸ್ ಗೆ ಹಾಕಿದರೆ ಸಾಕು ನೋಡಿದವರಿಗೆ ಖರೀದಿಸುವ ಇಲ್ಲವೇ ಕೊನೆಗೆ ಕಣ್ಣಿನಿಂದ ನೋಡಿ, ಕೈಯಿಂದ ಮುಟ್ಟಿ ಬರುವ ಆಸೆಯಂತೂ ಆಗಿಯೇ ಆಗುತ್ತದೆ. ಹೀಗೆ ಸ್ಟೇಟಸ್ ಮೂಲಕವೇ ವ್ಯಾಪಾರ ಮಾಡುವ ಕಲೆ ಎಷ್ಟೋ ಜನ ಕರಗತ ಮಾಡಿಕೊಂಡಿದ್ದಾರೆ. ಸ್ಟೇಟಸ್ ಒಂದು ಒಳ್ಳೆಯ ಜಾಹೀರಾತು ಸಾಧನವಾಗಿ ಉಪಯೋಗಿಸಲ್ಪಡುತ್ತದೆ.
ಮೊನ್ನೆ ನಮ್ಮ ಗೆಳೆಯನ ಪಕ್ಕದ ಮನೆಯವರು ಹೊಸ ಇನೋವಾ ಕಾರು ತಂದು ಅದರ ಫೋಟೋಗಳನ್ನು ಸ್ಟೇಟಸ್ ನಲ್ಲಿ ಹಾಕಿದ್ದಾರೆ. ಕಾರ ಪೂಜೆ ಮಾಡುವ ಫೋಟೋಗಳ ಜೊತೆಗೆ ಸ್ಟೈಲಾಗಿ ಕಾರಿನ ಪಕ್ಕ ನಿಂತಿದ್ದ ಫೋಟೋಗಳನ್ನು ನೋಡಿದ ನನ್ನ ಗೆಳೆಯನ ಹೆಂಡತಿ ಗಂಡನಿಗೆ ಹೊಸ ಕಾರು ಬೇಕೆಬೇಕೆಂದು ಹಠಕ್ಕೆ ಬಿದ್ದಿದ್ದಾಳೆ. ಗೆಳೆಯನ ಬಳಿ ಈಗಾಗಲೇ ಐಟೆನ್ ಕಾರಯಿದೆ. ಮೊದಲು ಇದೇ ಕಾರದ ಪೋಟೋಗಳನ್ನು ಇವಳು ಇಟ್ಟು ಡೌಲು ಮಾಡಿದ್ದಳು. ಅಲ್ಲದೇ ತನ್ನದೇ ಕಾಸ್ಟಲೀ ಕಾರೆಂದು ಎಲ್ಲರಿಗೂ ಹೇಳಿಕೊಂಡು ಜಂಬಕೊಚ್ಚಿಕೊಂಡವಳಿಗೆ ಪಕ್ಕದ ಮನೆಯ ಇನ್ನೋವಾ ಕಾರನಿಂದ ಅವಳ ಗರ್ವಭಂಗವಾಗಿದೆ. ಅಲ್ಲದೇ ಇವಳನ್ನು ಕಾರಿನ ಪೂಜೆಗೆ ಆಮಂತ್ರಣ ಮಾಡದೇ ಇರುವುದು ಮತ್ತಷ್ಟು ಹೊಟ್ಟೆಕಿಚ್ಚಿಗೆ ಕಾರಣವಾಗಿದೆ. ಐಟೆನ್ ಕಾರಿನ ಇಎಮ್ ಐ ಹೇಗೆ ಮುಗಿಸುವುದೆಂದು ನನ್ನ ಗೆಳೆಯ ಒದ್ದಾಡುತ್ತಿದ್ದರೆ ಇವಳು ಅದನ್ನು ಮಾರಿ ಹೊಸ ಕಾರು ಖರೀದಿ ಮಾಡುವ ಹಠ ಹಿಡದಿದ್ದಾಳೆ. ಇದರಿಂದ ಇವನು ಬಾರ್ ನಲ್ಲಿ ಮತ್ತೇರಡು ಪೆಗ್ ಹೆಚ್ಚು ಹಾಕುತ್ತಿದ್ದಾನೆ.
ನಮ್ಮ ಉತ್ತರ ಕರ್ನಾಟಕದಲ್ಲಿ ಮದುವೆಯಾದರೆ ತಲೆಗೊಂದು ರುಮಾಲು ಸುತ್ತುವ ಹೊಸ ಪದ್ದತಿ ಜಾರಿಗೆ ಬಂದಿದೆ. ಮೊದಲಿನಿಂದ ರುಮಾಲು ಸುತ್ತಿಕೊಳ್ಳುತ್ತಿದ್ದವರು ಅವರ ಸ್ವಂತ ಖರ್ಚಿನಲ್ಲಿ ಖರೀದಿಸುತ್ತಿದ್ದರು. ಇಂದು ಮದುವೆ ಮನೆಯವರೇ ರುಮಾಲುಗಳನ್ನು ಖರೀದಿಸಿ, ಅವುಗಳನ್ನು ಎಲ್ಲರಿಗೂ ಸುತ್ತಲೂ ಒಂದು ಆಳ ಮನುಷ್ಯನನ್ನು ಹಣಕೊಟ್ಟು ಇಡುವ ಪರಿಸ್ಥಿತಿ ಬಂದಿದೆ. ರುಮಾಲು ಸುತ್ತಿಕೊಂಡ ಹೆಚ್ಚಿನ ಜನರು ಸ್ಟೇಟಸ್ ಇಡುವ ಉದ್ದೇಶದಿಂದಲೇ ಸುತ್ತಿಕೊಂಡಿರುತ್ತಾರೆ. ಮದುವೆ ಮನೆಯವರಿಗೂ ತಮ್ಮ ಹವಾ ಎಲ್ಲಾ ಕಡೆ ಹಬ್ಬಲೆಂದೇ ಖರ್ಚು ಮಾಡಿರುತ್ತಾರೆ. ವಧುವರರ ಫೋಟೋ ಸ್ಟೇಟಸ್ ಗೆ ಹಾಕಿ ಖುಷಿ ಪಡುವ ಕಯಾಲಿ ಹೆಚ್ಚಾಗುತ್ತಿದೆ.
ಯಾರನ್ನಾದರೂ ಟೀಕೆ ಮಾಡಬೇಕಾದರೆ, ಹೀಯಾಳಿಸಬೇಕಾದರೆ, ಕಾಲಳೆಯಬೇಕಾದರೆ ಅವರ ಮನಸ್ಸಿಗೆ ನಾಟುವಂತೆ ಸ್ಟೇಟಸ್ ಗಳನ್ನು ಗೂಗಲ್ ದಲ್ಲಿ ಹುಡುಕಿ ಇಟ್ಟಿರುತ್ತಾರೆ. ಯಾರ ಸಲುವಾಗಿ ಇಟ್ಟಿರುತ್ತಾರೊ ಅವರು ನೋಡಿ ಬಿಟ್ಟರೆ ಒಂದು ವಿಚಿತ್ರ ಖುಷಿ ಮನದಲ್ಲಿ ಮೂಡಬಹುದು. ಇದು ಒಂದೇ ದಿನಕ್ಕೆ ನಿಲ್ಲುವುದಿಲ್ಲ. ಪ್ರತಿದಿನ ಗೂಗಲ್ ದಲ್ಲಿ ಹುಡುಕಿ ಸ್ಟೇಟಸ್ ಇಡುತ್ತಾ, ಎಷ್ಟು ಜನ ನೋಡಿದರೆಂದು ಮೇಲಿಂದ ಮೇಲೆ ಚೆಕ್ ಮಾಡುತ್ತಾ, ಯಾರ ನೋಡಬೇಕಾಗಿತ್ತೊ ಅವರು ನೋಡಿದನ್ನು ಖಾತ್ರಿ ಮಾಡಿಕೊಳ್ಳುತ್ತಾ ಜೀವನದಲ್ಲಿ ಖುಷಿಯಿಂದ ಇರುತ್ತಾರೆ.

ಫೋಟೋ ಕೃಪೆ : ಅಂತರ್ಜಾಲ
ಸಾಹಿತಿಗಳಂತೂ ತಮ್ಮ ಲೇಖನಗಳನ್ನು, ಕವನಗಳನ್ನು, ಸ್ಟೇಟಸ್ ಇಡುವುದು ಕಾಮನ್ ಜೊತೆಗೆ ಕವಿಗೋಷ್ಠಿಯಲ್ಲಿ ಭಾಗವಹಿಸಿದ, ಕವಿತೆ ಓದುತ್ತಿರುವ ವಿಡಿಯೋ, ಇತರ ಕವಿಗಳ ಜೊತೆಗೆ ತೆಗೆಸಿಕೊಂಡ ಫೋಟೋಗಳನ್ನು ಸ್ಟೇಟಸ್ ನಲ್ಲಿ ನೋಡಬಹುದು. ಕವಿಗೋಷ್ಠಿ ಮುಗಿದ ನಾಲ್ಕಾರು ದಿನಗಳಾದರೂ ಫೋಟೋಗಳನ್ನು ಹಾಕುವುದನ್ನು ಮರೆಯುವುದಿಲ್ಲ. ಪುಸ್ತಕ ಬಿಡುಗಡೆ ಸಮಾರಂಭ, ತನ್ಮ ಪುಸ್ತಕಗಳನ್ನು ಮತ್ತೊಬ್ಬರಿಗೆ ಹಂಚಿದ ಫೋಟೋಗಳನ್ನು ಕವಿ ತನ್ನ ಸ್ಟೇಟಸ್ ನಲ್ಲಿ ಹಾಕಿಕೊಂಡಿರುತ್ತಾನೆ. ಸ್ಟೇಟಸ್ ನೋಡುವವರು ತನ್ನನ್ನು ಸಾಹಿತಿಯೆಂದು ಗುರುತಿಸಬೇಕೆಂಬ ಸಣ್ಣದಾದ ಆಸೆಯೊಂದು ಮೊಳಕೆಯೊಡದಿರುತ್ತದೆ.
ನಮ್ಮ ಹಳ್ಳಿಯಲ್ಲಿರುವ ಅಬ್ದುಲ್ ಎಮ್ಮೆ ವ್ಯಾಪಾರಿ. ಬೇರೆ ಊರುಗಳಿಂದ ಎಮ್ಮೆ ತಂದು, ಅವುಗಳ ಕೂದಲುಗಳನ್ನು ಬೋಳಿಸಿ, ಎಣ್ಣೆ ಹಚ್ಚಿಬಿಟ್ಟರೆ ಸಾಕು ಎಮ್ಮೆ ಮಿರಿಮಿರಿ ಮಿಂಚುತ್ತದೆ. ಇತ್ತಿತ್ತಲಾಗಿ ಅವನು ಎಮ್ಮೆಯ ಸ್ಟೇಟಸ್ ನ್ನು ಇಟ್ಟು ಹೊಸದಾಗಿ ಬಂದ ಎಮ್ಮೆ. ಇಷ್ಟು ಲೀಟರ್ ಹಾಲು ಕೊಡುತ್ತದೆ. ಎಂದು ಪ್ರತಿಯೊಂದು ಎಮ್ಮೆಯ ಫೋಟೋ ಅದರ ಕೆಳಗೆ ಎಷ್ಟು ಲೀಟರ ಹಾಲು ಕೊಡುತ್ತದೆ ಎಂದು ತಪ್ಪಾದ ಕನ್ನಡ ಅಕ್ಷರಗಳು ಇಂಗ್ಲೀಷ್ ಅಂಕಿಗಳನ್ನು ಬರೆದಿರುತ್ತಾನೆ. ಎಮ್ಮೆ ಕೊಂಡುಕೊಳ್ಳುವ ಎಷ್ಟೋ ರೈತರು ಅವನ ಸ್ಟೇಟಸ್ ನ್ನು ಚೆಕ್ ಮಾಡುತ್ತಿರುತ್ತಾರೆ. ಅಬ್ದುಲ್ ನ ಉದ್ಯೋಗಕ್ಕೆ ಮೊಬೈಲ್ ಸ್ಟೇಟಸ್ ಒಂದಿಷ್ಟು ಕಾರಣವಾಗಿದೆ.
“ಭಾವಪೂರ್ಣ ಶೃದ್ಧಾಂಜಲಿ” ಯನ್ನು ಹೆಚ್ಚಿನ ಸ್ಟೇಟಸ್ ನಲ್ಲಿ ನೋಡಿರುತ್ತೇವೆ. ಗಣ್ಯವ್ಯಕ್ತಿಗಳು ಮರಣ ಹೊಂದಿದಾಗ ಸಾಮೂಹಿಕವಾಗಿ ಎಲ್ಲರೂ ಸ್ಟೇಟಸ್ ಇಡುತ್ತಾರೆ. ಆದರೆ ಸಂಬಂಧಿಕರು, ಗಲ್ಲಿಯಲ್ಲಿ ನೆರೆಹೊರೆಯವರು ತೀರಿಕೊಂಡಾಗ, ಸಂಬಂಧಿಕರು ಮರಣ ಹೊಂದಿದರೆ ವೈಯಕ್ತಿಕವಾಗಿ ಸ್ಟೇಟಸ್ ಇಡುವುದು ಕಾಮನ್. ಇಲ್ಲಿಯೂ ಸಾಕಷ್ಟು ಲೆಕ್ಕಾಚಾರಗಳು ಇದ್ದೇ ಇರುತ್ತವೆ. ಹೆಂಡತಿ ಮನೆಯವರ ಸಂಬಂಧಿಕರಾದರೆ ಕಡ್ಡಾಯವಾಗಿ ಸ್ಟೇಟಸ್ ಇಡಲೇಬೇಕು. ಇಲ್ಲದಿದ್ದರೆ ಹೆಂಡತಿ ಸಿಟ್ಟಾಗುತ್ತಾಳೆ.
ಇಂದು ಮೊಬೈಲ್ ಸ್ಟೇಟಸ್ ಅನ್ನುವುದು ನಮ್ಮ ಮುಖ ಕನ್ನಡಿಯಂತೆ ಬಳಸುತ್ತೇವೆ. ನಾವು ಮಾತನಾಡಲೇಬೇಕಾದದ್ದನ್ನು ಅದು ಹೇಳುತ್ತದೆ. ಒಂದು ದೇಶದ ಪ್ರತಿನಿಧಿಯಾಗಿ ಬೇರೆ ದೇಶಕ್ಕೆ ಹೋಗುವ ರಾಯಬಾರಿಗಳಂತೆ ಸ್ಟೇಟಸ್ ವು ಸಹ. ನಮ್ಮ ಸಂತೋಷ, ಶ್ರೀಮಂತಿಕೆ, ನಮ್ಮ ಶಕ್ತಿ, ಮತ್ತೊಬ್ಬರನ್ನು ಕಾಲಳೆಯುವುದು ಮುಂತಾದವುಗಳನ್ನು ಈ ಸ್ಟೇಟಸ್ ತೋರಿಸುತ್ತದೆ. ನಮ ಸೋಲು, ಬಡತನ ಮುಂತಾದವುಗಳನ್ನು ಎಂದೂ ತೋರಿಸುವುದೇ ಇಲ್ಲ. ಇನ್ನೊಂದಿಷ್ಟು ಜನರಿರುತ್ತಾರೆ ಅವರ ಕೈಯಲ್ಲಿ ಒಳ್ಳೆಯ ಮೊಬೈಲ್ ಇದ್ದರೂ, ಮತ್ತೊಬ್ಬರ ಸ್ಟೇಟಸ್ ನೋಡುತ್ತಾರೆ ಆದರೆ ಎಂದಿಗೂ ಅವರು ತಮ್ಮ ಒಂದೇ ಒಂದು ಸ್ಟೇಟಸ್ ನ್ನು ಇಡುವುದಿಲ್ಲ. ಮತ್ತೊಂದಿಷ್ಟು ಜನರು ತಾವು ಯಾರದೂ ಸ್ಟೇಟಸ್ ನೋಡುವುದಿಲ್ಲ ಹಾಗೆಯೇ ತಾವೂ ಸಹ ಯಾವುದು ಸ್ಟೇಟಸ್ ಹಾಕುವುದಿಲ್ಲ. ಆದರೆ ನಮ್ಮಂತವರಿಗೆ ಮೊಬೈಲ್ ಇರುವುದೇ ಸ್ಟೇಟಸ್ ಹಾಕಲೆಂಬ ಮಂತ್ರ ಕರಗತವಾಗಿದೆ. ನಾವು ದಿನಕ್ಕೆ ಕಡಿಮೆ ಎಂದರೂ ಒಂದಾದರೂ ಸ್ಟೇಟಸ್ ಇಡಲೇಬೇಕು. ಇಟ್ಟರೆ ಮಾತ್ರ ಅಂದು ಮಾಡಿದ ಊಟ ಡೈಜೆಸ್ಟ್ ಆಗುವುದು.
‘ಬದುಕಿಗೊಂದು ಭರವಸೆ’ ಅಂಕಣದ ಹಿಂದಿನ ಸಂಚಿಕೆಗಳು :
- ಬಸವರಾಜ ಹೊನಗೌಡರ – ಚಿಕ್ಕೋಡಿ ಜಿ. ಬೆಳಗಾವಿ.
