‘ಕಾಡುವ ಹಡಗು’ ಪುಸ್ತಕ ಪರಿಚಯ – ಧಾರಿಣಿ ಮಾಯಾ

ವಾಸುದೇವ ನಾಡಿಗ್ ರವರ “ಬಂದರಿಗೆ ಬಂದ ಹಡಗು” ಕವನ ಸಂಕಲನದ ಕುರಿತು ಧಾರಿಣಿ ಮಾಯಾ ಅವರು ಬರೆದಿರುವ ಕೃತಿ ಪರಿಚಯ ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…

ಕವನ ಸಂಕಲನ: ಬಂದರಿಗೆ ಬಂದ ಹಡಗು
ಲೇಖಕರು: ವಾಸುದೇವ ನಾಡಿಗ್
ಪ್ರಕಾಶನ : ಗೋಮಿನಿ ಪ್ರಕಾಶನ
ಪುಟಗಳು: 89
ಬೆಲೆ: 120
ಖರೀದಿಗಾಗಿ : 9986692342

ಈ ಪುಸ್ತಕ ನನ್ನ ಕೈಗೆ ಬಂದು ಸುಮಾರು ಒಂದು ವರ್ಷದ ಮೇಲಾಗಿರಬಹುದು. ಆದರೆ ಓದಲು ಸಾಧ್ಯವಾಗಿದ್ದು ಇತ್ತೀಚೆಗಷ್ಟೇ ಕೇರಳಕ್ಕೆ ಹೋದಾಗ ಒಂದಿಷ್ಟು ವಿಶ್ರಾಮದ ಸಮಯದಲ್ಲಿ.
ವಾಸುದೇವ ನಾಡಿಗ್ ರವರ “ಬಂದರಿಗೆ ಬಂದ ಹಡಗು” ಕವನ ಸಂಕಲನದ ಓದೇ ಒಂದು ಅನನ್ಯ ಅನುಭವ.

ಒಟ್ಟು 51 ಕವಿತೆಗಳ ಈ ಕವನ ಸಂಕಲದಲ್ಲಿ ನೌಕೆ, ಸೇತುವೆ, ಮೋಡ, ಕವಿತೆ, ಮಳೆ, ಮೌನ, ಕಡಲು, ಕಾಗದದ ದೋಣಿ-ಹೀಗೆ ವಿಪುಲವಾಗಿ ಕಾಣಬರುವ ರೂಪಕಗಳಿಂದ ಕೂಡಿದ ಒಂದು ವಿಶಿಷ್ಟ ಕೃತಿಯಾಗಿದೆ. ಇಲ್ಲಿನ ಯಾವುದೇ ಕವಿತೆಯ ಭಾವಾಂಕುರವು ಅಷ್ಟು ಸುಲಭಕ್ಕೆ ದಕ್ಕುವುದಿಲ್ಲ. ಮನಸ್ಸು, ಹೃದಯ, ಬುದ್ಧಿ-ಎಲ್ಲವನ್ನೂ ಒಗ್ಗೂಡಿಸಿ ಓದುವಂತ ಸಾಲುಗಳು ಪ್ರತೀ ಪುಟದಲ್ಲೂ ಅಚ್ಚೊತ್ತಿವೆ. ಪದಗಳು ಪದಗಳೇ ಅಲ್ಲ. ಅಲ್ಲಿ ಭಾವತೀವ್ರತೆ, ಬದುಕಿನ ಸೌಂದರ್ಯ, ಜ್ಞಾನ, ವಿಷಾದ, ಬುದ್ಧಿ ಮಾತು, ಛಾಟಿ ಏಟು, ಮೊನಚು, ಎಲ್ಲವೂ ಭರಪೂರವಾಗಿವೆ. ಈ ಛಾಟಿ ಏಟಿನಿಂದ ಎಚ್ಚೆತ್ತು ನಮ್ಮ ಬದುಕನ್ನು ಅವಗಾಹನೆ ಮಾಡಿಕೊಳ್ಳಬೇಕಷ್ಟೇ.

ಈ ಕವಿತೆಗಳನ್ನು ಓದಿ ಮುಗಿಸಿದರೂ, ಅದರ ಪಸೆ ಆರದು. ಈ ಕವನ ಸಂಕಲನ ಕಾಡುತ್ತದೆ, ಭಾವಗಳು ಎದೆಗೆ ಇರಿಯುತ್ತವೆ. ಒಂದೊಂದೂ ಕವಿತೆಗಳನ್ನೂ ಅರ್ಥೈಸಿಕೊಳ್ಳಬೇಕಾದರೆ ದೌಡಿನ ಓದು ಸುತಾರಾಂ ಸಾಧ್ಯವಾಗದು. ಹೃದಕ್ಕೂ-ಬುದ್ಧಿಗೂ ದಕ್ಕಿಸಿಕೊಳ್ಳಬೇಕು, ಪಚನವಾಗಬೇಕು, ಆ ಸಾಲುಗಳ ಜೊತೆ ನಾವೂ ಮೆಲ್ಲನೆ ಝೇಂಕರಿಸುತ್ತಾ ಭಾವಗಳೊಡನೆ ತೊಯ್ಯಬೇಕು. ಆಗ ಮಾತ್ರ ಈ ಕವಿಯನ್ನು , ಕವಿಯಲ್ಲಡಗಿರುವ ಕವಿತೆಯ ಪಸೆಯನ್ನು ಅರ್ಥೈಸಿಕೊಳ್ಳಲು ಸಾಧ್ಯ.

ಕವಿ, ತಮ್ಮಲ್ಲಿರುವ ತುಡಿತವನ್ನು ಓದುಗರಿಗೂ ಉಣಬಡಿಸಿದ್ದಾರೆ. ಕವಿತೆಯನ್ನೇ ಉಸಿರಾಗಿಸಿಕೊಂಡು, ಕವಿತೆಯ ಆತ್ಮವನ್ನೇ ಹೊದ್ದಿರುವ ನಾಡಿಗರು, ತಾವೇ ಒಂದು ಕವಿತೆಯಾಗಿದ್ದಾರೆ. ಹಾಗಾಗಿ ನಾಡಿಗರು ‘ನಡೆದಾಡುವ ಕವಿತೆ’ ಎಂದರೆ ಅತಿಶಯೋಕ್ತಿಯಲ್ಲ.

ಇಲ್ಲಿನ ಸಂಕಲನದಿಂದ ಒಂದೆರಡನ್ನು ಉದಾಹರಿಸುವುದಾದರೆ-

“ಹೊತ್ತ ಹೆಗಲು”

ಚಿತ್ರದ ಭಾರ ಹೊತ್ತ ಮೊಳೆಯನು
ಯಾರೂ ಗಮನಿಸಲಿಲ್ಲ
-ಎನ್ನುವಾಗ ಆ ಪುಟ್ಟ ಮೊಳೆಯ ಮಹತ್ವ ಅರಿವಾಗಿ ನಮ್ಮೆದೆಯ ಭಾರವೂ ಹೆಚ್ಚುವುದು.

* * *

ಕವಿತೆ ಎಂದರೆ ಏನು ಎಂಬುದನ್ನು ವಿಶದವಾಗಿ ಬಹಳಷ್ಟು ಕಡೆ ಹರವಿದ್ದಾರೆ.

“ಕವಿತೆ ಎಂದರೆ ಘನತೆ”

ಪದಗಳೇನು ಬೇಕಾಬಿಟ್ಟಿ ದೊರಕಲಿಕ್ಕೆ
ಬಿಕರಿಗಿಟ್ಟ ಹಳೆವಸ್ತ್ರಗಳಲ್ಲ

-ಎನ್ನುವಾಗ ಕವಿತೆ ಎಂದರೆ ಗಂಭೀರತೆ ಎನ್ನುತ್ತ, ಕವಿತೆಯಲ್ಲಡಗಿರುವ ಭಾವತೀವ್ರತೆ, ಬಿಚ್ಚಿಡಬೇದಾದ ಕಟು ವಾಸ್ತವ, ವಿಷಾದಗಳೆಲ್ಲವೂ ಪುಂಖಾನುಪುಂಖವಾಗಿ ಝೇಂಕರಿಸಿವೆ.

* * *
“ಎಷ್ಟೊಂದು ಚಿತ್ರಗಳು”-

ಇಕ್ಕಟ್ಟಿನ ತಿರುವುಗಳಲಿ ಒಬ್ಬ ಕವಿ ಕಾದಿದ್ದಾನಂತೆ ಶಿಲೆಯ ಮಥನದ ಮಧ್ಯೆ ಸತ್ಯ ಮಿಂಚಬೇಕಷ್ಟೆ,

-ಕವಿ ಹಾಗೂ ಕವಿತೆ ಕತ್ತಲ ಗರ್ಭದಲ್ಲಿ ಹೂತಿವೆ. ಅದನ್ನು ಅಗೆದು ಮೊಗೆದು ಹೊರತರಬೇಕಿದೆ. ಕವಿತೆಯನ್ನೇ ಉಸಿರಾಗಿಸಿಕೊಂಡ ಕವಿಯೊಬ್ಬನೇ ಹೀಗೆ ಅನುರಣಿಸಲು ಸಾಧ್ಯ.

ಒಂದಷ್ಟು ಕಾಡುವ ಸಾಲುಗಳು

ಚಾಪ್ಲಿನ್ನಿನ ವ್ಯತಿರಿಕ್ತ ಬದುಕಿನ ಬಗ್ಗೆ-

“ಮಹಾತ್ಮ ಎಷ್ಟು ಖುಷಿ ಕೊಡ್ತಾನೆ ಸದಾ ನಗುತ್ತಾನೆ
ನಗಿಸುತ್ತಾನೆ ಜಗದ ನಗೆಯನೆಲ್ಲ ಹರಾಜಿನಲಿ
ಕೊಂಡುಕೊಂಡಿದ್ದಾನೆ ಸಿರಿವಂತ!”

* * *

ಅದು ಹಾಗೇನೆ ಒಂದರ ಬೀಳು
ಮತ್ತೊಂದರ ಏಳು

“ಬಂದರಿಗೆ ಬಂದ ಹಡಗು” ಕವನ ಸಂಕಲನ ವಾಸುದೇವ ನಾಡಿಗ್

ಹೇಳಿ ನೀವು ಯಾವತ್ತಾದರೂ ಮೌನವನು ಮಾತನಾಡಿಸಿದ್ದೀರ?

* * *

ಜಗತ್ತನ್ನು ನೋಡುವುದ ಕಲಿತಾಗೆಲ್ಲ
ಹೊರಗಿನ ಗದ್ದಲಕಿಂತ ಒಳಗಿನ ಮೌನ
ಹೆಚ್ಚು ಕೇಳಿಸುತ್ತದೆ.

* * *

ಎದೆಯ ಕವಾಟದಲಿ ಸಿಕ್ಕಿಬೀಳುವ ಮಾತುಗಳು
ಸಂತೆ ಕಪಾಟಿನ ಪದಗಳ ಕೂಡಾ ಅನುಸಂಧಾನ

* * *

ಕವಿತೆ ಎಂದರೆ ಕಾದಪದಗಳು ಹೆಣೆದ ಆತ್ಮದ ಬಟ್ಟೆ

* * *

ಬೆಟ್ಟಕ್ಕೆ ಚಳಿಯಾದರೆ ಇಳೆಯನೇ ಎಳೆದುಕೊಳ್ಳಬೇಕು

* * *

ನಂಬಿ ಬೆಟ್ಟಕೆ ಗುದ್ದಿಕೊಂಡ ಹಣೇಬರಹ ಸೀಳಿದೆ

* * *

ಕನಸುಗಳನು ಒಳಕೋಣೆಯಲಿ ನೇತುಹಾಕಿದ್ದೇನೆ. ಬೇಗ ಒಣಗದಿರಲಿ ಎಂದು ಪುಟ ತಿರುಗಿಸಿದರೂ ಹಿಂತಿರುಗಿ ಮತ್ತೆ ಮತ್ತೆ ಓದಿಸಿಕೊಳ್ಳುವ ಇಂಥಾ ಸಾಲುಗಳು ಬಹುವಾಗಿ ಕಾಡುತ್ತವೆ. ಕೊನೆಯದಾಗಿ ರೂಮಿಯ ಇಡಿಯನ್ನೇ ಚಿಕ್ಕದಾಗಿ ಬಿಚ್ಚಿಟ್ಟಿರುವ ರೀತಿ ಅನನ್ಯ. ವಿಪುಲವಾಗಿ ಅಚ್ಚೊತ್ತಿರುವ ವಿಷಾದ ನೇರವಾಗಿ ಎದೆಗೆ ನಾಟುತ್ತದೆ. ಅಲ್ಲಲ್ಲಿ ಕವಿಸಿರುವ ವ್ಯತಿರಿಕ್ತತೆ ಬೆರಗು ಮೂಡಿಸುತ್ತದೆ. ಈ ಸಂಕಲನದಲ್ಲಿ ರೂಪಕ, ಉಪಮೆಗಳಿಂದ ಕವಿ ಓದುಗರನ್ನು ಆರ್ದ್ರಗೊಳಿಸಿದ್ದಾರೆ. ಇಲ್ಲಿನ ಸಾಲುಗಳಲ್ಲಿ ತಿಳಿ ಪಾಠವೂ, ವಿಷಾದವೂ ನಮ್ಮ ಬುದ್ಧಿ-ಹೃದಯವನ್ನು ಮೀಟುತ್ತದೆ.

ವಾಸುದೇವ ನಾಡಿಗರ ಚೊಚ್ಚಲ ಕಥಾಸಂಕಲನವಾದ “ಒಂದು ಡೈರಿಯ ಪರಿಮಳ”ವು, ‘ಬಂದರಿಗೆ ಬಂದ ಹಡಗಿನ’ ಮುಂದುವರಿದ ಭಾಗ ಅನಿಸಿದರೆ, ಅದು ಅಚ್ಚರಿಯೇನಲ್ಲ. ಈ ಎರಡೂ ಕೃತಿಯಲ್ಲೂ ಸಾಮ್ಯತೆಯಿದೆ. ಓದುಗರಲ್ಲಿ ಅದೇ ವಿಷಾದ, ನಿಟ್ಟುಸಿರು, ಒಂದಿಷ್ಟು ಕಪಾಳಮೋಕ್ಷ, ಎಚ್ಚರಿಕೆಯ ಗಂಟೆ ಮೊಳಗಿಸುತ್ತದೆ.

ಈ ಒಲವಿನ ಕವಿಯ ಕಾವ್ಯಪ್ರಭೆ ಹೀಗೇ ನಿರಂತರವಾಗಿ ಸೃಜಿಸುತ್ತಿರಲಿ. ಶುಭಾಷಯಗಳೊಂದಿಗೆ,


  • ಧಾರಿಣಿ ಮಾಯಾ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW