ಆ್ಯನಾಗೆ ಚರ್ಮದ ಕ್ಯಾನ್ಸರ್ ಕಾಯಿಲೆ ಇದ್ದದ್ದು ಗೊತ್ತಿದ್ದರೂ ಫೆಡರ್ ಆಕೆಯನ್ನು ಮದುವೆಯಾದ. ಅವನದು ನಿಷ್ಕಲ್ಮಷ ಪ್ರೀತಿಯಾಗಿತ್ತು. ಆ್ಯನಾ ಚಿಕಿತ್ಸೆಗಾಗಿ ಫೆಡರ್ ಭಾರತಕ್ಕೆ ಕರೆದುಕೊಂಡು ಬಂದಿದ್ದ. ಮುಂದೇನಾಯಿತು ತಪ್ಪದೆ ಮುಂದೆ ಓದಿ ಅರುಣ ಪ್ರಸಾದ್ ಅವರ ಪ್ರಣಯ ಪಕ್ಷಿ ಕತೆ…
ಆ್ಯನಾಗೆ ಚರ್ಮದ ಕ್ಯಾನ್ಸರ್ ಕಾಯಿಲೆ. ಇದು ಗೊತ್ತಾದ ಮೇಲೆ ಆ್ಯನಾಳನ್ನು ಮದುವೆ ಆದಪೆಡರ್. 2017 ರಲ್ಲಿ ನಮ್ಮ ಊರಿನಲ್ಲಿದ್ದ ಆಯುರ್ವೇದ ವೈದ್ಯರಾದ ನರಸೀಪುರ ಸಣ್ಣಯ್ಯ ಹೆಗ್ಗಡೆಯವರಿಂದ ಚಿಕಿತ್ಸೆ ಪಡೆಯಲು ಯೂರೋಪಿನ ಬೆಲಾರಸ್ ದೇಶದ ಈ ಮೂವರು ನನ್ನ ಸಹಾಯ ಕೇಳಿ ಬಂದಿದ್ದರು.
ಇವರಿಬ್ಬರ ಗೆಳೆಯ ನಿಕೋಲ ಹಿಂದೂ ಧರ್ಮದ ಶಿವನ ಆರಾಧಕ ಅನೇಕ ಭಾರಿ ಭಾರತ ಯಾತ್ರೆ ಮಾಡಿದ್ದರು. ಹಿಮಾಲಯ ಇವರಿಗೆ ಬಾರೀ ಆಕರ್ಷಣೆ, ಶಿವನ ಜಟೆ ಇವರು ಬಿಟ್ಟಿದ್ದರು.
ಬೆಲಾರಸಿನ ಆಡಳಿತದ ಬಗ್ಗೆ, ರಷ್ಯಾ ದೇಶದ ಬಾರ್ಡರ್ ಇವರದ್ದು. ಆದ್ದರಿಂದ ಇವರ ಭಾಷೆ ಬೆಲಾರಸ್ ರಷ್ಯಾ ಎಂಬ ಭಾಷೆ. ಆದರೆ ಇವರೆಲ್ಲ ಅಮೇರಿಕಾದಲ್ಲಿ ಉದ್ಯೋಗ ಮಾಡುತ್ತಿದ್ದರಿಂದ ಇಂಗ್ಲೀಷ್ ಭಾಷೆ ಬಲ್ಲವರು.
ಹೀಗಿರುವಾಗಲೇ ಆ್ಯನಾಗೆ ಚರ್ಮದ ಕ್ಯಾನ್ಸರ್ ಕಾಯಿಲೆ ಬಂದಿದ್ದು, ಅಮೆರಿಕಾ ವೈದ್ಯರು ಧೃಡೀಕರಿಸುತ್ತಾರೆ ಮತ್ತು ಅಪರೂಪದ ತೀವ್ರ ಸ್ವರೂಪದ ಕಾಯಿಲೆ ಅಂತಿಮ ಹಂತ ತಲುಪಿರುವುದರಿಂದ ಹೆಚ್ಚು ದಿನ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದರಿಂದ ಭಾರತೀಯ ಆಯುರ್ವೇದ ಔಷಧಿ ಪಡೆಯಲು ಕೊನೆಯ ಆಸೆಯಿಂದ ಬಂದಿದ್ದರು. ಇದಕ್ಕಾಗಿ 6 ತಿಂಗಳು ಭಾರತದಲ್ಲಿ ಇರುವುದು, ಚಿಕಿತ್ಸೆ ಪಡೆಯುವ ಜೊತೆಗೆ ಭಾರತ ದೇಶದ ಮುಖ್ಯ ಸ್ಥಳಗಳ ಪ್ರವಾಸದ ಗುರಿ ಕೂಡ ಇವರದ್ದು.
ಇವರು ಮೂವರೂ ಗೆಳೆಯರು ಅನೇಕ ಬಾರಿ ನಮ್ಮ ಲಾಡ್ಜ್ ನಲ್ಲಿ ತಂಗುತ್ತಿದ್ದರು. ಈ ರೀತಿ ಆತ್ಮೀಯರಾದಾಗ ಗೊತ್ತಾಗಿದ್ದು ಆ್ಯನಾ ಮತ್ತು ಪೆಡರ್ ಇಬ್ಬರು ಪ್ರೇಮಿಸಿದ್ದರು ಆ ಸಂದರ್ಭದಲ್ಲೇ ಆ್ಯನಾಗೆ ಕ್ಯಾನ್ಸರ್ ಬಂದು ಅವರ ಕನಸಿನ ಸೌಧ ಕುಸಿದಿದೆ ಆದರೆ ಪೆಡರ್ ಆ್ಯನಾಳಿಗಾಗಿ ತನ್ನ ಉದ್ಯೋಗ ತೊರೆದು ತನ್ನ ಉಳಿತಾಯದ ಹಣವನ್ನ ಆ್ಯನಾಳ ಆಯುರ್ವೇದ ಚಿಕಿತ್ಸೆಗಾಗಿ ಭಾರತ ಪ್ರವಾಸಕ್ಕೆ ವಿನಿಯೋಗಿಸಲು ತೀರ್ಮಾನಿಸುತ್ತಾರೆ.
ಆ್ಯನಾಳ ಕೊನೆಯ ದಿನಗಳಲ್ಲಿ ಅವಳನ್ನು ಸಂತೋಷವಾಗಿಡಲು ಬೆಲಾರಸಿನಲ್ಲಿ ವಿವಾಹವೂ ಆಗುತ್ತಾರೆ. ನಂತರ ನನ್ನಲ್ಲಿಗೆ ಬರುತ್ತಾರೆ. ಇವರ ಈ ಕಥೆ ಕೇಳಿ ನನ್ನ ಹೃದಯ ಹಿಂಡುತ್ತದೆ. ಪ್ರತಿ ತಿಂಗಳು ವೈದ್ಯರನ್ನು ನೋಡಲು ಬಂದಾಗ ನನ್ನ ಅತಿಥಿಗಳಾಗುತ್ತಿದ್ದರು. ನಾನು ಇವರಿಗೆ ಉಚಿತವಾಗಿ ವಸತಿ ವ್ಯವಸ್ಥೆ ಮಾಡುತ್ತಿದ್ದೆ. ಪ್ರತಿ ಬಾರಿ ಬಂದಾಗ ಅವರಿಬ್ಬರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರವಾಸದ ತಮ್ಮ ಅನುಭವ ಹೇಳುತ್ತಿದ್ದರು.
ಕೆಲ ತಿಂಗಳು ಉತ್ತರ ಗೋವಾದ ರಷ್ಯನ್ ಗೆಳೆಯರ ಕಾಲೋನಿಗಳಲ್ಲಿ ಕಾಲ ಕಳೆದ ಬಗ್ಗೆ ಅಲ್ಲಿ ಆ್ಯನಾ ರಷ್ಯನ್ ಮಕ್ಕಳಿಗೆ ಹಾಡು ನೃತ್ಯ ಕಲಿಸಿದ ಬಗ್ಗೆ ಸಂತೋಷ ವ್ಯಕ್ತ ಪಡಿಸುತ್ತಿದ್ದಳು. ಅವಳ ನಗು ಮುಖದ ಹಿಂದೆ ಎಂತಹ ನೋವಿತ್ತೊ? ಸಾವಿನ ಭಯವಿತ್ತಾ ಗೊತ್ತಿಲ್ಲ. ನಾನು ಆ್ಯನಾಳಿಗೆ ಜೀವನೋತ್ಸವ ಉಂಟಾಗುವಂತೆ ಮಾತಾಡುತ್ತಿದ್ದೆ.
ನನ್ನ ಮನೆಯಲ್ಲಿ ಆ್ಯನಾ ಮತ್ತು ಅವಳ ಪತಿ ಪೆಡರ್ ಹಾಗೂ ಇವರಿಬ್ಬರ ಗೆಳೆಯ ನಿಕೋಲ್ ಗಾಗಿ ಡಿನ್ನರ್ ವ್ಯವಸ್ಥೆ ಮಾಡಿದ್ದೆ. ನಿಕೋಲ್ ತನ್ನ ದೇಶದ ಸಂಗೀತ ವಾದ್ಯದ ಜೊತೆ ಹಾಡಿ ಎಲ್ಲರನ್ನೂ ರಂಜಿಸಿದ್ದ.
ವಿಪರೀತ ಚಳಿಯ ಒಂದು ದಿನ ನಡಗುತ್ತಿದ್ದ ಆ್ಯನಾಗೆ ನನ್ನ ಪತ್ನಿ ಹೊಸ ಶಾಲು ಹೊದಿಸಿ ಬೆಚ್ಚಗೆ ಮಾಡಿದಾಗ ಆ್ಯನಾ ತನ್ನ ದುಃಖ ತಡೆಯದೆ ಕಣ್ಣೀರಿಟ್ಟಾಗ ನಮ್ಮ ಕಣ್ಣುಗಳು ಒದ್ದೆ ಆಗಿತ್ತು. ಆರು ತಿಂಗಳ ನಂತರ ಬೆಲಾರಸಿಗೆ ತಲುಪಿದ ಆ್ಯನಾ ಪೋನ್ ಮಾಡಿ ನನ್ನ ಸಹಾಯಕ್ಕೆ ಇನ್ನೊಮ್ಮೆ ಕೃತಜ್ಞತೆ ತಿಳಿಸಿ, ನನಗಾಗಿ ಅವರ ದೇಶದ ದುಬಾರಿ ಚಾಕಲೇಟ್ ಗಳನ್ನು ಕಳಿಸುತ್ತಿರುವುದಾಗಿ ಸ್ವೀಕರಿಸಲು ವಿನಂತಿಸಿದ್ದಳು.
ಬಹುಶಃ ಕೋರಿಯರ್ ವೆಚ್ಚ 15 ಸಾವಿರ ಇರಬೇಕು, ಚಾಕಲೇಟ್ ಬೆಲೆ 10 ಸಾವಿರ. ಒಟ್ಟು 25 ಸಾವಿರ ಖರ್ಚು ಮಾಡಿ ಕಳಿಸಿದ ಚಾಕಲೇಟ್ ನನಗೆ ತಲುಪಿದಾಗ ಆ ಬಾಕ್ಸ್ ದಾರಿಯಲ್ಲಿ ಇಲಿಗಳ ದಾಳಿಗೆ ಒಳಗಾಗಿತ್ತು. ಆದ್ದರಿಂದ ಇಡೀ ಚಾಕಲೇಟ್ ಬಾಕ್ಸ್ ತಿನ್ನದೇ ವಿಲೇವಾರಿ ಮಾಡಿದೆ.
ಆ್ಯನಾಗೆ ಪೋನಿನಲ್ಲಿ ಚಾಕಲೇಟ್ ತಲುಪಿದ ಬಗ್ಗೆ ತಿಳಿಸಿದೆ. ಆದರೆ ಚಾಕಲೇಟ್ ತಿನ್ನಲಾಗಲಿಲ್ಲ ಅಂತ ಹೇಳಲಿಲ್ಲ ಹೇಳಿದ್ದರೆ ಆ್ಯನಾಗೆ ನಿರಾಸೆ ಆದೀತೆಂಬ ಭಯ ನನಗೆ.
ನಂತರ ಆ್ಯನಾಳಿಂದ ಯಾವುದೇ ಸುದ್ದಿ ಬರಲೇ ಇಲ್ಲ. ಆ್ಯನಾ -ಪೆಡರ್ – ನಿಕೋಲರ ಜೊತೆಯ ಅವತ್ತಿನ ಡಿನ್ನರ್ ನ ವಿಡಿಯೋ ಮತ್ತು ಪೋಟೊ ಚಿಕ್ಕ ವಯಸ್ಸಲ್ಲೇ ಇಹ ಲೋಕ ತ್ಯಜಿಸಿದ ಆ್ಯನಾಳ ನೆನಪು ನನ್ನ ಜೀವಮಾನ ಪೂರ್ತಿ ಉಳಿದಿದೆ, ಆ್ಯನಾಳ ಕಾಯಿಲೆ ಅವಳ ಆಯಸ್ಸು ಕ್ಷೀಣವಾದರೂ ಆ್ಯನಾಳ ಮದುವೆ ಮಾಡಿಕೊಂಡು ತನ್ನ ದುಡಿಮೆಯ ಉಳಿತಾಯದ ಹಣದಲ್ಲಿ ಭಾರತ ಪ್ರವಾಸ ಮಾಡಿಸಿ ಅವಳ ಇಚ್ಚೆಯಂತೆ ಆಯುರ್ವೇದ ಚಿಕಿತ್ಸೆ ಕೊಡಿಸಿದ ಆ್ಯನಾಳ ಪತಿ ಪೆಡರ್ ನಿಜಕ್ಕೂ ದೊಡ್ಡ ಮನುಷ್ಯ. ಇವರಿಬ್ಬರಿಗೆ ಸಹಾಯ ಮಾಡಿ ನನಗೆ ಪರಿಚಯಿಸಿದ ನಿಕೋಲ್ ನ ಗೆಳೆತನ ಕೂಡ.
- ಅರುಣ ಪ್ರಸಾದ್