‘ವೈದ್ಯ ಅರಿತ ಬದುಕಿನ ಸತ್ಯಗಳು’ ಪುಸ್ತಕ ಪರಿಚಯ

ಡಾ. ಟಿ ವಿ ಚಂದ್ರಶೇಖರ್ ಅವರ ‘ವೈದ್ಯ ಅರಿತ ಬದುಕಿನ ಸತ್ಯಗಳು’ ಪುಸ್ತಕದ ಕುರಿತು ವಿಜಯಲಕ್ಷ್ಮೀ ನಾಗೇಶ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಕೃತಿ  : ವೈದ್ಯ ಅರಿತ ಬದುಕಿನ ಸತ್ಯಗಳು 
ಲೇಖಕರು  : ಡಾ. ಟಿ ವಿ ಚಂದ್ರಶೇಖರ್
ಪ್ರಕಾಶಕರು : ಪಂಚಮಿ ಮೀಡಿಯಾ ಪಬ್ಲಿಕೇಶನ್ಸ್
ಪುಟಗಳು: 120
ಬೆಲೆ : 130.00

“ಹಣಕ್ಕೆ ಆನೆಯಷ್ಟು ದೈತ್ಯ ಶಕ್ತಿ ಇರಬಹುದು ಆದರೆ ಗುಣಕ್ಕೆ ಲೋಕವೇ ಮತ್ಸರ ಪಡುವಷ್ಟು ಶಕ್ತಿಯಿದೆ. ಹಾಗಾಗಿ ಹಣದ ಸಂಪಾದನೆಗಿಂತಲೂ ಗುಣದ ಸಂಪಾದನೆ ದೊಡ್ಡದು ಎಂಬ ಅರಿವಿರಲಿ ” ಎನ್ನುವ ಅತ್ಯುತ್ತಮ ನೀತಿಯುಕ್ತ ವಾಕ್ಯವನ್ನು ಮೊದಲುಗೊಂಡು ನೂರಾರು ಹಿತ ನುಡಿಗಳ ರಸದೌತಣವನ್ನೇ ಓದುಗರಿಗೆ ಉಣಬಡಿಸಿರುವ ಡಾ. ಟಿ ವಿ ಚಂದ್ರಶೇಖರ್ ಅವರು ಮೂಲತಃ ಬೆಂಗಳೂರಿನವರೇ ಆಗಿದ್ದು , ಪ್ರತಿಷ್ಠಿತ ವೈದ್ಯಕೀಯ ಪದವಿಗಳಾದ FFARCSI fellowship in Anaesthesia Royal college of Surgeons and Physicians , Dublin Republic of lrland ಹಾಗೂ DA – (Conjoint Board London) ಗಳನ್ನು ಪಡೆದು ಬ್ರಿಟನ್ ಮತ್ತು ಸೌದಿ ಅರೇಬಿಯಾದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ತಾಯ್ನಾಡಿಗೆ ತೆರಳಿ ಇಲ್ಲಿಯೂ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವ ಖ್ಯಾತ ವೈದ್ಯರಾದ ಇವರು ನನ್ನ ಮುಖಪುಸ್ತಕದ ಸ್ನೇಹಿತರಾಗಿರುವುದು ನನಗೆ ಹೆಮ್ಮೆಯ ವಿಚಾರವೇ ಸರಿ.

ಕೆಲವು ದಿನಗಳ ಹಿಂದೆಯಷ್ಟೇ ಇವರ ಈ ಚೊಚ್ಚಲ ಕೃತಿಯು ನನ್ನ ಕೈ ಸೇರಿದ್ದು ಸಂಪೂರ್ಣವಾಗಿ ಓದಿದ ಮೇಲೆ ನನಗನ್ನಿಸಿದ್ದು ಈ ಪುಸ್ತಕವನ್ನು ಓದಿದ ಪ್ರತಿಯೊಬ್ಬರೂ ಸಹ ತಮ್ಮ ಹಿಂದಿನ ಬದುಕಿನ ಅವಲೋಕನವನ್ನು ಒಮ್ಮೆಯಾದರೂ ಮಾಡಿಕೊಳ್ಳದೇ ಇರಲಾರರೆಂದು. ಬದುಕನ್ನು ಪ್ರೀತಿಸುವವರಿಗೆ ಲೋಕವೆಲ್ಲಾ ನಂಟು ಪ್ರೀತಿಸದಿದ್ದವರಿಗೆ ಜೀವನವೇ ಕಗ್ಗಂಟು ಎನ್ನುವಂತೆ ಭರವಸೆ , ಧೈರ್ಯ , ಆತ್ಮವಿಶ್ವಾಸ ಇಲ್ಲದಿರೇ ಬದುಕೇ ನೀರಸ. ಅಂತಹ ಭರವಸೆ ಧೈರ್ಯ ಆತ್ಮವಿಶ್ವಾಸವನ್ನು ಹೊಂದಲು ಪ್ರೇರಣೆಯನ್ನು ನೀಡುವ ತಾತ್ವಿಕ ಮತ್ತು ನೈತಿಕ ಸಾರವು ಈ ಕೃತಿಯಲ್ಲಿನ ಬರಹಗಳಲ್ಲಿ ಅಡಕವಾಗಿದೆ ಎಂದು ಹೇಳ ಬಯಸುತ್ತೇನೆ.

ದಿನನಿತ್ಯವೂ ಬದುಕಿನಲ್ಲಿ ಒಂದಲ್ಲ ಒಂದು ಬಗೆಯ ಅನುಭವಗಳನ್ನು ಹೊಂದುತ್ತಾ ಹೋಗುವ ಮನುಜ ಅದರೊಳು ಕಂಡುಬರುವ ಸರಿ ತಪ್ಪುಗಳನ್ನು ಒಮ್ಮೆಯಾದರೂ ಸ್ವವಿಮರ್ಶೆ ಮಾಡಿ ತಿದ್ದುಕೊಂಡು ಹೋದಾಗ ಬದುಕಿನ ಪಯಣ ಸುಗಮವಾಗಿ ಸಾಗುತ್ತದೆ ಎಂದು ಇಲ್ಲಿನ ನುಡಿಗಳು ಹೇಳುವ ಪರಿ ಸುಂದರ.

ವೈದ್ಯ ಅರಿತ ಬದುಕಿನ ಸತ್ಯಗಳು ಪುಸ್ತಕ ಲೇಖಕರು ಡಾ. ಟಿ ವಿ ಚಂದ್ರಶೇಖರ್

” ಸಾಹಿತಿಗಳಿಗೆ ಓದುಗರಿದ್ದಷ್ಟೂ ಅವರ ಬರವಣಿಗೆ ನಿರಂತರ, ಮತದಾರರ ಬೆಂಬಲವಿದ್ದಷ್ಟೂ ಅಧಿಕಾರ ಅಂತೆಯೇ ಗುರುಗಳಿಗೆ ಶಿಷ್ಯಂದಿರ ಪ್ರೀತಿ ಗೌರವ ಇದ್ದಷ್ಟೂ ಅವರ ಜ್ಞಾನ ಕಾಶಿ” ಎಂದು ತಿಳಿಸಿರುವ ಈ ಕೃತಿಯಲ್ಲಿ ಯಶಸ್ಸು, ಪ್ರತಿಷ್ಠೆ, ಕೋಪ ತಾಪ ಆಸೆ ನಿರಾಶೆ, ದುರಾಸೆ ಪ್ರಾಮಾಣಿಕತೆ ಶ್ರಮ ಈ ಎಲ್ಲಾ ಅಂಶಗಳು ಜೀವನದಲ್ಲಿ ಹೇಗೆ ಪ್ರಭಾವವನ್ನು ಬೀರುತ್ತವೆ ಎಂಬುವುದು ಅರ್ಥಪೂರ್ಣವಾಗಿ ಬಿಂಬಿತವಾಗಿದೆ.

ಒಟ್ಟಾರೆ ಹೇಳುವುದಾದರೆ ನಿರಾಶೆ ಹೊಂದಿದವರಿಗೆ ಆಶಾಭಾವನೆಯನ್ನು ತುಂಬುವ , ವೈಫಲ್ಯದ ಕಹಿಯನ್ನು ಉಂಡವರಿಗೆ ಭರವಸೆಯನ್ನು ತುಂಬುವ , ಅಹಂ ನಿಂದ ಮೆರೆದಾಗ ಆಗುವ ಪರಿಣಾಮದ ಬಗ್ಗೆ ತಿಳಿಸಿರುವ ಈ ಪುಸ್ತಕವನ್ನು ಪ್ರಿಯ ಓದುಗರು ಓದಲೇಬೇಕು ಎಂಬ ನನ್ನ ಆಶಯದ ನುಡಿಗಳನ್ನು ಹೇಳುತ್ತಾ ನನ್ನ ಅನಿಸಿಕೆಯ ಬರಹವನ್ನು ಮುಕ್ತಾಯಗೊಳಿಸುವೆ.


  • ವಿಜಯಲಕ್ಷ್ಮೀ ನಾಗೇಶ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW