ಬಂದಿತಯ್ಯ ಮುದಿತನ !! – ಡಾ. ಎನ್.ಬಿ.ಶ್ರೀಧರ

ಹುಟ್ಟಿದ ಯಾವುದೇ ಜೀವಿ ಸಾಯಲೇಬೇಕು. ಇದು ಯಾವ ಪ್ರಾಣಿಗಳಿಗೂ ಸಹ ತಪ್ಪಿದ್ದಲ್ಲ. ಸಾವಿನಲ್ಲಿ ಅನೇಕ ಬಗೆ. ನೈಸರ್ಗಿಕ ಸಾವು ಮತ್ತು ರೋಗದ ಮೂಲಕ ಬರುವ ಸಾವು. ಮುದಿತನ ಬಂದಾಗ ಅದಕ್ಕೆ ತಕ್ಕಂತೆ ವಿವಿಧ ಕಾಯಿಲೆಗಳು ಆವರಿಸುತ್ತವೆ. ಡಾ. ಎನ್.ಬಿ.ಶ್ರೀಧರ ಅವರು ಬರೆದಿರುವ ಮುದಿತನ ಕುರಿತಾದ ಲೇಖನವನ್ನು ತಪ್ಪದೆ ಮುಂದೆ ಓದಿ..

ಜಾತಸ್ಯ ಮರಣಂ ಧ್ರುವಂ, ಹುಟ್ಟಿದ ಯಾವುದೇ ಜೀವಿ ಸಾಯಲೇಬೇಕು. ಇದು ಯಾವ ಪ್ರಾಣಿಗಳಿಗೂ ಸಹ ತಪ್ಪಿದ್ದಲ್ಲ. ಸಾವಿನಲ್ಲಿ ಅನೇಕ ಬಗೆ. ನೈಸರ್ಗಿಕ ಸಾವು ಮತ್ತು ರೋಗದ ಮೂಲಕ ಬರುವ ಸಾವು. ಮುದಿತನ ಬಂದಾಗ ಅದಕ್ಕೆ ತಕ್ಕಂತೆ ವಿವಿಧ ಕಾಯಿಲೆಗಳು ಆವರಿಸುತ್ತವೆ. ಭಾರತದಲ್ಲಿನ ಕಾಡು ಪ್ರಾಣಿಗಳು ನೋವಿನ ಆಘಾತ (೪೨.೩೧ %), ಶ್ವಾಸಕೋಶದ ತೊಂದರೆ (೧೫.೩೮%), ನೀರಿನಲ್ಲಿ ಮುಳುಗುವುದು (೧೩.೪೬%), ವಿಷಮತೆಯಿಂದ (೧೨.೫೬%) ಮತ್ತು ಉಪವಾಸ ಬಿದ್ದು (೧೦%) ಸಾಯುತ್ತವೆ.

 

ಬಹುತೇಕ ಪ್ರಾಣಿಗಳಿಗೆ ತಮ್ಮ ಆಯಸ್ಸು ಎಷ್ಟು ಎಂದು ತಿಳಿದಿರುವುದಿಲ್ಲ. ಯಾವುದೇ ಪ್ರಾಣಿ ಬದುಕಲು ಬೇಸರವಾಗಿ ಜಿಗಪ್ಸೆಯಿಂದ ಅಥವಾ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿಲ್ಲ. ಆಯಸ್ಸು ಇದ್ದಷ್ಟು ದಿನ ಸಹಜವಾಗಿ ಬಾಳುತ್ತವೆ. ವಯಸ್ಸಾದ ಸಸ್ಯಾಹಾರಿ ಪ್ರಾಣಿಗಳು ಇನ್ನೊಂದು ಪ್ರಾಣಿಗೆ ಆಹಾರವಾಗಿ ಹೋಗುತ್ತವೆ. ವಯಸ್ಸಾದ ಹಾಗೆ ಪ್ರಾಣಿಗಳಿಗೂ ಮನುಷ್ಯನ ಹಾಗೆ ನೆನಪಿನ ಶಕ್ತಿ ಕಡಿಮೆಯಾಗುತ್ತದೆ.ಅವು ಕಡಿಮೆ ತಿನ್ನುತ್ತವೆ, ಜಾಸ್ತಿ ನಿದ್ದೆ ಮಾಡುತ್ತವೆ ಮತ್ತು ಅವುಗಳ ವ್ಯಗ್ರತೆ ಕಡಿಮೆಯಾಗುತ್ತದೆ. ಅವು ಇತರ ಪ್ರಾಣಿಗಳಿಗೆ ಬಹಳ ಹೆದರುತ್ತವೆ ಮತ್ತು ಸದಾ ಅನಿಶ್ಚಿತತೆಯಿಂದ ಬಳಲುತ್ತವೆ. ಅನೇಕ ಪ್ರಾಣಿಗಳು ವಯಸ್ಸಾದಂತೆ ಶಕ್ತಿಗುಂದಿ ತಮ್ಮನ್ನು ತಾವು ಕಾಪಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಂಡು ಮತ್ತೊಂದು ಮಾಂಸಾಹಾರಿ ಪ್ರಾಣಿಯ ಆಹಾರವಾಗುತ್ತವೆ. ಪ್ರಾಣಿ ಪ್ರಪಂಚದಲ್ಲಿ ಮುದಿಯಾದವುಗಳಿಗೆ ಯಾವುದೇ ರಕ್ಷಣೆ ಅಥವಾ ಇತರ ಪ್ರಾಣಿಗಳಿಂದ ರಕ್ಷಣೆ ಇಲ್ಲ. ಮುದಿಯಾದ ಸಸ್ಯಾಹಾರಿ ಪ್ರಾಣಿಗಳು ಹುಲ್ಲು ತಿಂದಾದರೂ ಬದುಕಿಕೊಳ್ಳುತ್ತವೆ ಮತ್ತು ತಮ್ಮ ಹಿಂದಿನ ಅನುಭವದಿಂದ ಮರೆಯಲ್ಲಿ, ಗುಹೆಗಳಲ್ಲಿ ಅಡಗಿ ತಮ್ಮನ್ನು ತಾವು ರಕ್ಷಿಸಿಕೊಂಡು ಪೂರ್ಣ ಆಯಸ್ಸನ್ನು ಪೂರೈಸಿ ನೈಸರ್ಗಿಕವಾಗಿ ಮರಣವನ್ನಪ್ಪುತ್ತವೆ.

 

 ಫೋಟೋ ಕೃಪೆ : google

ಆದರೆ ಮಾಂಸಾಹಾರಿ ಪ್ರಾಣಿಗಳ ಮುದಿತನ ಅತ್ಯಂತ ಕಠೋರ. ಅವುಗಳಿಗೆ ವಯಸ್ಸಾಗುತ್ತಿದ್ದಂತೆ ಅವುಗಳ ಬೇಟೆಯಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಕಣ್ಣು ಮಂಜಾಗಿ ಬೇಟೆಯ ಚಲನೆಯನ್ನು ಗಮನಿಸಲು ಹಾಗೂ ಅದರ ವೇಗವನ್ನು ಸರಿದೂಗಲು ಸಾಧ್ಯವಾಗುವುದಿಲ್ಲ. ಕ್ರಮೇಣ ಹುಲಿಯಂತ ಪ್ರಾಣಿಗಳು ಜಿಂಕೆಯಂತ ಕಾಡುಕೋಣದಂತ ದೊಡ್ಡ ಪ್ರಾಣಿಗಳನ್ನು ಬೇಟೇಯಾಡುವುದನ್ನು ಬಿಟ್ಟು ಸಣ್ಣ ಪ್ರಾಣಿಗಳು, ಹಕ್ಕಿಗಳು, ಅವುಗಳಾಂತೆ ಮುದಿಯಾದ ಇತರ ಪ್ರಾಣಿಗಳನ್ನು ಬೇಟೆಯಾಡುತ್ತ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಅವುಗಳ ಪಂಜಾದಲ್ಲಿನ ಉಗುರು ಹರಿತ ಕಡಿಮೆಯಾಗಿ ಹಲ್ಲು ಬಿದ್ದು ಹಲ್ಲಿನ ಹರಿತ ಮತ್ತು ದವಡೆಯ ಶಕ್ತಿ ಕಡಿಮೆಯಾಗುತ್ತದೆ. ಬೇಟೆಯಾಡಲು ಸಾಧ್ಯವಿಲ್ಲದ ಮುದಿ ಮಾಂಸಾಹಾರಿ ಪ್ರಾಣಿಗಳು ಪ್ರಕೃತಿಯಲ್ಲಿರಲು ನಾಲಾಯಕ್ ಅಗಿ ಹಸಿವೆಯಿಂದಲೇ ಸತ್ತು ಹೋಗುತ್ತವೆ. ಅದಕ್ಕೆ ಕೆಲವೊಂದು ಮುದಿ ಹುಲಿ, ಚಿರತೆಗಳು ನಾಡನ್ನು ಸೇರಿ ಅವುಗಳಿಗೆ ನಾಡಿನಲ್ಲಿ ಸುಲಭವಾಗಿ ದೊರೆಯುವ ದನ, ಕೋಳಿ ಕುರಿಗಳನ್ನು ತಿನ್ನಲು ಬರಬಹುದು. ನಂತರ ಮನುಷ್ಯರ ಕೈಗೆ ಸಿಕ್ಕಿ ಗುಂಡೇಟಿಗೆ ಅಥವಾ ಮೃಗಾಲಯದಲ್ಲಿ ಸಾಯಬಹುದು.
ಹುಲಿಗಳು ಸಾವು ಹತ್ತಿರ ಬರುತ್ತಿದ್ದಂತೆ ಅವುಗಳ ವ್ಯಾಪ್ತಿ ಪ್ರದೇಶವನ್ನು ಕಾಪಾಡಿಕೊಳ್ಳುವ ವ್ಯಗ್ರ ಸ್ವಭಾವವನ್ನು ಕಳೆದುಕೊಂಡು ಗುಹೆ ಅಥವಾ ಪೊದೆಯನ್ನು ಸೇರುತ್ತವೆ. ಕೆಲವೊಮ್ಮೆ ಯುವ ಹುಲಿಗಳು ಮುದಿ ಹುಲಿಯ ಮೇಲೆ ಎಗರಿ ಅದನ್ನು ಸೋಲಿಸಿ ಅಥವಾ ಸಾಯಿಸಿ ಅದರ ವಲಯವನ್ನು ಆಕ್ರಮಿಸಿಕೊಳ್ಳುತ್ತವೆ.

ಮಹಾಭಾರತದಲ್ಲಿ ಋಷಿಯೊಬ್ಬರಿಂದ ಮಿಲನ ಸಮಯದಲ್ಲಿ ಸಾಯಬೇಕೆಂಬ ಶಾಪಗ್ರಸ್ಥ ಪಾಂಡುರಾಜ ಮಾದ್ರಿಯೊಡನೆ ಮಿಲನಕ್ರಿಯೆಯಲ್ಲಿ ತೊಡಗಿದಾಗ ಸಾವಪ್ಪುತ್ತಾನೆ. ಇದೇ ರೀತಿ ಅನೇಕ ಮೃಗಗಳು ಸಹ ಮಿಲನ ಕ್ರಿಯೆಯ ನಂತರ ಸಾವನ್ನಪ್ಪುತ್ತವೆ. ಗಂಡು ಮಸ್ಕ್ ಆಕ್ಸೆನ್ನುಗಳು (ಕಸ್ತೂರಿಮೃಗದಂತಿರುವುದು) ಮಿಲನ ಕ್ರಿಯೆಯ ನಂತರ ಚರ್ಮ ಮತ್ತು ಜೀರ್ಣಾಂಗದ ಕೊಲ್ಯಾಜನ್ ಕೋಶಗಳನ್ನು ಕಳೆದುಕೊಳ್ಳುತ್ತವೆ. ಅತ್ಯಂತ ಜಾಸ್ತಿ ಪ್ರಮಾಣದಲ್ಲಿ ಆಂತರಿಕ ರಕ್ತಸ್ರಾವವಾಗಿ ಸಾವನ್ನಪ್ಪುತ್ತವೆ.

ಫೋಟೋ ಕೃಪೆ : google

ವಯಸ್ಸಾದ ಜೇಡ ಯುವ ಜೇಡಗಳಿಗೆ ಆಹಾರವಾಗಲು ನೇಯ್ದ ಬಲೆಯಲ್ಲಿಯೇ ಉಪವಾಸ ಮಾಡಿ ಪ್ರಾಣತ್ಯಾಗ ಮಾಡಿ ಮರಣವನ್ನಪ್ಪುತ್ತದೆ. ಮಹಾಭಾರತದ ಮಹಾಪರಾಕ್ರಮಿ ಮಹಾರಥಿಕ ಭೀಷ್ಮ ಪಿತಾಮಹ ಶಿಖಂಡಿಯ ಮೂಲಕ ರಚಿಸಿದ ವ್ಯೂಹಕ್ಕೆ ಬಲಿಯಾಗಿ ಅರ್ಜುನ ಬಾಣಗಳಿಂದ ನಿರ್ಮಿಸಿದ ಶರಶಯ್ಯೆಯಲ್ಲಿ ೫೮ ದಿನಗಳನ್ನು ಕಳೆದು ಇಚ್ಚಾ ಮರಣದ ವರದಂತೆ ಉತ್ತರಾಯಣದಲ್ಲಿ ದೇಹತ್ಯಾಗ ಮಾಡುತ್ತಾನೆ. ಮುದಿ ಜೇಡಗಳೂ ಸಹ ಕೈಲಾಗದಾಗ ಸ್ಥಿತಿಯಲ್ಲಿದ್ದಾಗ ಸಣ್ಣ ಜೇಡದ ಮರಿಗಳಿಗೆ ಅವುಗಳ ತಾಯಿ ಜೇಡ ನೆಣೆದ ಬಲೆಯಲ್ಲಿ ಯಾವುದೇ ಕೀಟಗಳೂ ಬೀಳದಿದ್ದಾಗ ಮತ್ತು ಯುವಜೇಡಗಳು ಉಪವಾಸ ಬಿದ್ದು ಸಾಯುವುದನ್ನು ತಪ್ಪಿಸಲು ತಮ್ಮ ದೇಹವನ್ನು ಆಹಾರದ ರೂಪದಲ್ಲಿ ಅವುಗಳಿಗೆ ಅರ್ಪಿಸಿ ಆಹಾರವಾಗುತ್ತವೆ. ಕೆಲವೊಮ್ಮೆ ಅನೇಕ ಸಲ ಮರಿ ಹಾಕಿದ ತಾಯಿ ಜೇಡ ಸಹ ಸಣ್ಣ ಮರಿಗಳಿಗೆ ಬೇಟೆಯಾಡಿ ಆಹಾರ ಒದಗಿಸಲು ವಿಫಲವಾದಾಗ ಅವುಗಳ ಶರೀರದ ಮೇಲೆ ಒಂದು ರೀತಿಯ ರಾಸಾಯನಿಕಗಳನ್ನು ಚಿಮುಕಿಸಿಕೊಂಡು ನಿಶ್ಛಲಗೊಂಡು ಅವುಗಳ ಹಸಿದ ಮರಿಗಳಿಗೆ ತಾವೇ ಆಹಾರವಾಗುತ್ತವೆ.

 

ಕೆಲವು ಇರುವೆಗಳು ಮತ್ತು ಗೆದ್ದಲುಗಳು ಸ್ವಯಂಹತ್ಯೆ ಮಾಡಿಕೊಳ್ಳಬಹುದು. ಇದು ಅವುಗಳ ಗೂಡಿನಲ್ಲಿ ಅವುಗಳ ಸಂಖ್ಯೆ ಜಾಸ್ತಿಯಾಗಿ ಸ್ಥಳ ಕಡಿಮೆಯಾದಾಗ ಮತ್ತು ಆಹಾರದ ದಾಸ್ತಾನು ಕಡಿಮೆಯಾದಾಗ ತಮ್ಮ ಜೀವವನ್ನು ತಾವೇ ಕೊನೆಗೊಳ್ಳಿಸಿಕೊಳ್ಳುತ್ತವೆ. ಅವು ಆಹಾರ ತಿನ್ನದೇ ಉಪವಾಸ ಬಿದ್ದು ಸತ್ತುಹೋಗಿ ಗೂಡಿನ ಕೀಟ ಸಂಖ್ಯೆ ಕಡಿಮೆ ಮಾಡಿಕೊಳ್ಳುತ್ತವೆ. ಮುದಿಯಾದ ಮತ್ತು ನಿಶ್ಯಕ್ತ ಜೀವಿಗಳು ತಾವು ಗೂಡಿನಲ್ಲಿರಲು ಲಾಯಕ್ ಇಲ್ಲ ಸ್ವಯಂ ನಿರ್ಧರಿಸಿ ಅವುಗಳ ಜೀವವನ್ನು ಕೊನೆಗೊಳ್ಳಿಸಿಕೊಳ್ಳುತ್ತವೆ. ಇದೂ ಸಹ ಮಹಾಭಾರತದಲ್ಲಿ ಕೌರವರ ಮೇಲೆ ಸೇಡುತೀರಿಸಿಕೊಳ್ಳಲು ಶಕುನಿಯು ಸಹೋದರರು ಅವರ ಕಾಳು ಅನ್ನವನ್ನು ಒಟ್ಟು ಗೂಡಿಸಿ ಆತನಿಗೆ ನೀಡಿದ ಕಥೆಯನ್ನು ನೆನಪಿಗೆ ತರುತ್ತದೆ.

ದಕ್ಷಿಣ ಅಮೇರಿಕಾದ ಕಾಡಿನಲ್ಲಿರುವ ಅತ್ಯಂತ ವಿಷಕಾರಿ ಕಪ್ಪು ಹೆಣ್ಣು ಜೇಡಗಳು ಸಹ ಮಿಲನದ ನಂತರ ಗಂಡು ಜೇಡಗಳನ್ನು ತಿಂದು ಬಿಸಾಡುವುದರಿಂದ ಅವುಗಳು “ವಿಧವೆ ” ಪಟ್ಟವನ್ನು ಸ್ವಯಂ ತಂದುಕೊಳ್ಳುತ್ತವೆ. ಬಹುತೇಕ ಗಂಡು ಜೇಡಗಳ ಜೀವನ ಮಿಲನದ ಮುಗಿದು ಬಿಡುತ್ತದೆ. ಗಂಡು ಜೇಡಗಳಿಗೆ ಇದು ಗೊತ್ತಿದ್ದರೂ ಸಹ ಅವು ಅವುಗಳ ಜೀವಕ್ಕಿಂತ ಸಂತಾನೋತ್ಪತ್ತಿ ಮುಂದುವರೆಸಲು ಮಿಲನವನ್ನು ಇಷ್ಟಪಡುತ್ತವೆ. ಅವೆಷ್ಟೇ ಪ್ರಯತ್ನಿಸಿದರೂ ಸಹ ಬಲಶಾಲಿ ಹೆಣ್ಣು ಜೇಡದ ಆಹಾರವಾಗುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ.
ಜೇನುಗಳಲ್ಲಿಯೂ ಸಹ ಗಂಡು ಹುಳಗಳು ಅಲ್ಪಾಯುಷಿಗಳು. ೭-೮ ಸಲದ ಮಿಲನ ಪ್ರಕ್ರಿಯೆಯನಂತರ ಅವುಗಳ ಉದರ ಒಡೆದು ಅವು ಅಸು ನೀಗುತ್ತವೆ. ಇಲ್ಲದಿದ್ದರೆ ನಿರ್ದ್ಯಾಕ್ಷಿಣ್ಯವಾಗಿ ಅವುಗಳನ್ನು ಕೆಲಸಗಾರ ಮತ್ತು ಸೈನಿಕ ನೊಣಗಳು ಗೂಡಿನಿಂದ ಹೊರದಬ್ಬಿದ ಮೇಲೆ ಅವು ಆಹಾರವಿಲ್ಲದೇ ಸತ್ತುಹೋಗುತ್ತವೆ ಅಥವಾ ಕಣಜದಂತ ಇತರ ಕೀಟಗಳ ಆಹಾರವಾಗುತ್ತವೆ.

ಫೋಟೋ ಕೃಪೆ : google

 

ಸಾವು ಹತ್ತಿರ ಬಂದ ಅಥವಾ ಕೊನೆಯುಸಿರು ಎಳೆಯುತ್ತಿರುವ ಡಾಲ್ಫಿನ್ನುಗಳು ಆದಷ್ಟು ನೀರಿನ ತೀರವನ್ನು ಬಯಸುತ್ತವೆ. ಅವುಗಳು ಸಾಯುತ್ತವೆ ಎಂದು ತಿಳಿದಾಗ ೨೦-೩೦ ಡಾಲ್ಫಿನ್ನುಗಳು ಅದನ್ನು ಸುತ್ತುವರೆದು ತೀರದೆಡೆ ದಬ್ಬುತ್ತವೆ. ಅದಲ್ಲದೇ ಸತ್ತ ಡಾಲ್ಫಿನ್ ಶವ ತೇಲತೊಡಗಿದೊಡನೆ ಅದನ್ನು ಕುಕ್ಕಲು ಬರುವ ಕಡಲು ಹಕ್ಕಿಗಳನ್ನು ಓಡಿಸುವ ಪ್ರಯತ್ನ ಮಾಡುತ್ತವೆ. ಈ ರೀತಿಯ ನಡುವಳಿಕೆ ಮುದಿ ಡಾಲ್ಫಿನ್ನುಗಳಿಗಿಂತ ಮರಿ ಡಾಲ್ಫಿನ್ನುಗಳು ಸತ್ತಾಗ ಜಾಸ್ತಿ ಕಾಣುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ.

ಚಿಂಪಾಂಜಿಗಳು ವಯಸ್ಸಾದಾಗ ಮನುಷ್ಯರಂತೆ ನಿಸ್ಸಹಾಯಕವಾಗುತ್ತವೆ. ಅವುಗಳ ಕಣ್ಣು ಕಾಣಿಸುವುದಿಲ್ಲ ಮತ್ತು ಕಿವಿ ಕೇಳಿಸುವುದಿಲ್ಲ. ನಡೆದಾಡುವ ಸಾಮರ್ಥ್ಯ ಕ್ಷೀಣವಾಗುತ್ತದೆ. ಅವುಗಳ ಬಾಹ್ಯ ಸ್ಪಂಧನೆ ಕಡಿಮೆಯಾಗುತ್ತದೆ. ಕ್ರಮೇಣ ಆಹಾರ ಮತ್ತು ನೀರಿನ ಸೇವನೆ ಕಡಿಮೆಯಾಗುತ್ತದೆ. ಉಳಿದ ಚಿಂಪಾಂಜಿಗಳು ಅದನ್ನು ಮೇಲಿಂದ ಮೇಲೆ ಸ್ಪರ್ಷಿಸುತ್ತಾ ಅದು ಬದುಕಿದೆಯೇ ಇಲ್ಲವೇ ಎಂದು ಖಚಿತಪಡಿಸಿಕೊಳ್ಳುತ್ತವೆ. ಸಾವು ಖಚಿತವಾದಮೇಲೆ ಅವು ಶವವನ್ನು ಅದರ ಪಾಡಿಗೆ ಬಿಟ್ಟು ದೂರ ಹೋಗುತ್ತವೆ.

ವಯಸ್ಸಾದ ಹಾಗೆ ಮನುಷ್ಯನಲ್ಲಿ ಮರೆವು ಜಾಸ್ತಿಯಾಗುತ್ತದೆ. ಅಂತೆಯೇ ನಾಯಿಯಂತ ಸಾಕುಪ್ರಾಣಿಗಳೂ ಸಹ ವಯಸ್ಸಾದಂತೆ ಮರೆವನ್ನು ಅನುಭವಿಸುತ್ತವೆ. ಕಾಡುಪ್ರಾಣಿಗಳಲ್ಲಿಯೂ ಸಹ ನೆನಪಿನ ಶಕ್ತಿ ಕಡಿಮೆಯಾಗಬಹುದು. ಆದರೆ ಈ ಕುರಿತು ಅಧ್ಯಯನದ ಅವಶ್ಯಕತೆ ಇದೆ. ಮಾಂಸಾಹಾರಿ ಮುದಿ ಪ್ರಾಣಿಗಳಿಗೆ ಬೇಟೆಯಾಡುವ ಕೌಶಲ್ಯ ಮರೆತುಹೋಗಬಹುದು. ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರದ ಮತ್ತು ನೀರಿನ ಆಕರ ಮರೆತುಹೋಗಬಹುದು. ಕಾರಣ ಮುದಿಪ್ರಾಣಿಗಳು ಮಂದೆಯಲ್ಲಿಯೇ ಇರಬಯಸುತ್ತವೆ. ಆದರೆ ಹಿಂಸ್ರಕ ಪ್ರಾಣಿಗಳು ಬೇಟೆಗಾಗಿ ಬೆನ್ನು ಹತ್ತಿದಾಗ ಸುಲಭವಾಗಿ ಇವು ಬಲಿಯಾಗುವ ಸಾಧ್ಯತೆ ಜಾಸ್ತಿ.

ಮುದಿತನ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಅನಿವಾರ್ಯ. ಈಸಬೇಕು, ಇದ್ದು ಜೈಸಬೇಕು.


  • ಡಾ. ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW