‘ಬರೆಯುತ್ತೇನೆ ಗೆಳೆಯ’ ಕವನ – ಪ್ರೊ ಶ್ರೀಶೈಲ ಮದಾಣಿ

ಏನೆಂದು ಬರೆಯಲಿ ಗೆಳೆಯ? ಆದರೂ ಬರೆಯುತ್ತೇನೆ ಗೆಳೆಯ…ಶರಣಬಸವ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿರುವ ಪ್ರೊ ಶ್ರೀಶೈಲ ಮದಾಣಿ ಅವರ ಲೇಖನಿಯಲ್ಲಿ ಮೂಡಿ ಬಂದ ಕವನವನ್ನು ತಪ್ಪದೆ ಮುಂದೆ ಓದಿ…

ದೇಶವೂ ಅಮೃತ ಮಹೋತ್ಸವ
ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ
ಏನೆಂದು ಬರೆಯಲಿ ಗೆಳೆಯ…

ದೇಶಕ್ಕಾಗಿ ಪ್ರಾಣತ್ಯಾಗ
ಮಾಡಿದ ಮಹಾನ
ವೀರಾಧಿವೀರರ ಬಗ್ಗೆ
ಬರೆಯಲೇ,

ದೇಶದ ಸಂಪತ್ತು
ಕೊಳ್ಳೇಹೊಡೆದು ಅಟ್ಟಹಾಸದಿ
ಮೆರೆಯುತ್ತಿರುವ ಕ್ಷುದ್ರಶಕ್ತಿಗಳ
ಬಗ್ಗೆ ಬರೆಯಲಿ.

ಇದ್ದ ಸರಕಾರಿ ನೌಕರಿ ಬಿಟ್ಟು
ದೇಶದ ಸ್ವಾತಂತ್ರ್ಯ
ಸಂಗ್ರಾಮದಲ್ಲಿ ಧುಮುಕಿದ
ನೇತಾಜಿ ಸುಭಾಷ್ ರ
ಬಗ್ಗೆ ಬರೆಯಲೇ… ಅಥವಾ…

ಸರಕಾರಿ ನೌಕರಿಯಲ್ಲಿದ್ದು
ಭ್ರಷ್ಟಾಚಾರದಲ್ಲಿ ತೊಡಗಿ
ಜೈಲು ಸೇರಿದ ಇಂದಿನ ಭ್ರಷ್ಟ
ಅಧಿಕಾರಿಗಳ ಬಗ್ಗೆ ಬರೆಯಲೇ.

ಒಪ್ಪತ್ತಿನ ಕೂಳಿಗಾಗಿ ಇಪ್ಪತ್ತು
ಮನೆ ತಿರುಗಿ ಕಸ ಮುಸುರಿ
ಬಳೆಯುವ ಎನ್ನ ಸಹೋದರಿಯರ
ಬಗ್ಗೆ ಬರೆಯಲೇ,

ಹಣದ ಆಸೆ ತೋರಿಸಿ
ಅಧಿಕಾರ ದುರ್ಬಳಕೆ ಮಾಡಿಕೊಂಡು

ಹೆಣ್ಣಿನ ಮಾನವನ್ನು ಹರಾಜಿಗೆ
ಇಟ್ಟು ಸೋಕ್ಕಿಂದ
ಮೆರೆಯುತ್ತಿರುವ ಕುರಿತು
ಬರೆಯಲೇ

ಕಳ್ಳದಾರಿಯಲ್ಲಿ ಸರಕಾರಿ
ನೌಕರಿ ಕೊಡಿಸುವುದಾಗಿ ಹೇಳಿ
ಜೈಲಿಗೆ ಕಳುಹಿಸುತ್ತಿರುವರ
ಬಗ್ಗೆ ಬರೆಯಲೇ,

ಧರ್ಮದ ಅಮಲಿನಲ್ಲಿ
ಸಾಮಾಜಿಕ ಸಾಮರಸ್ಯ
ಕೆಡಿಸುತ್ತಿರುವ ನೀಚ ಬುದ್ಧಿಯ
ದುಷ್ಟಶಕ್ತಿಗಳನ್ನು ಕುರಿತು
ಬರೆಯಲೇ.

ಏನೆಂದು ಬರೆಯಲಿ ಗೆಳೆಯ?
ಆದರೂ ಬರೆಯುತ್ತೇನೆ ಗೆಳೆಯ

ವಾಸ್ತವಕ್ಕೆ ಭೂತಗನ್ನಡಿ ಹಿಡಿದು
ಸೂಕ್ಷ್ಮತಿಸೂಕ್ಷ್ಮ ವಿಷಯಗಳನ್ನು
ಹೊರಗೆಳೆದು

ನನ್ನವರ ನೋವುಗಳು
ನಲಿವಾಗಲು

ಖಡ್ಗಕಿಂತ ಲೇಖನಿಯೇ
ಶ್ರೇಷ್ಟವೆಂದು ಸಾಬೀತು
ಪಡಿಸಲು ಬರೆಯುತ್ತೇನೆ
ಗೆಳೆಯ!

ಬರೆಯುತ್ತೇನೆ ಗೆಳೆಯ!!
ಬರೆಯುತ್ತೇನೆ ಗೆಳೆಯ!!!.


  • ಪ್ರೊ ಶ್ರೀಶೈಲ ಮದಾಣಿ – ಸಹಾಯಕ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ಶರಣಬಸವ ವಿಶ್ವವಿದ್ಯಾಲಯ ಕಲಬುರಗಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading