ಕಾಲೇಜು ದಿನಗಳಿಂದಲೇ ಸಂಗೀತದ ಹುಚ್ಚು ಹಿಡಿಸಿಕೊಂಡು ಹಲವಾರು ಪ್ರಯೋಗಗಳನ್ನು ಮಾಡುತ್ತ ‘ಧ್ವನಿ’ ಎನ್ನುವ ಬ್ಯಾಂಡ್ ಕಟ್ಟಿಕೊಂಡ ಹುಡುಗರಿವರು. ಇಪ್ಪತ್ತೈದಕ್ಕೂ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿದ್ದಾರೆ. ಧ್ವನಿ ಹುಡುಗರ ಕುರಿತು ರಂಗಭೂಮಿ ನಿರ್ದೇಶಕ ಕಿರಣ ಭಟ್ ಹೊನ್ನಾವರ ಅವರು ತಮ್ಮ ಮನದಾಳದ ಮಾತುಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಈ ‘ಬ್ಯಾಂಡ್’ ನ ಹುಡುಗರ ಜೊತೆ ಸ್ವಲ್ಪ ಹೊತ್ತು ಕೂತರೆ ಸಾಕು, ವಯಸ್ಸು ಮೂವತ್ತು ವರ್ಷಕ್ಕೂ ಹಿಂದೆ ಹೊರಟು ಹೋಗ್ತದೆ. ಸೋತ ಕಾಲುಗಳು ಅಲ್ಲಾಡೋಕೆ ಶುರುವಾಗ್ತವೆ. ತಲೆ ಕುಣಿಯೋದಕ್ಕೆ ಶುರುವಾಗ್ತದೆ. ಈ ಹುಡುಗರ ಎನರ್ಜಿಯೇ ಅಂಥದ್ದು. ಚಕ ಚಕ ಕುಣಿಯೋ ಲೈಟುಗಳ ನಡುವೆ. ತಾಂತ್ರಿಕವಾಗಿ ಒಪ್ಪಗೊಳಿಸಿಕೊಂಡ ಧ್ವನಿಯ ಸೆಟಿಂಗ್ ಗಳೊಂದಿಗೆ ಹಾಡು, ವಾದ್ಯ ಸಂಗೀತ ಮೇಳೈಸಿ ಹೊಸ ಲೋಕವೊಂದನ್ನ ತೆರೆಸಿ ಬಿಡುತ್ತವೆ. ಅದರಲ್ಲೂ ಕ್ಲಾಸಿಕಲ್ ಮೂಲದಿಂದೆತ್ತಿಕೊಂಡ ಹಾಡುಗಳಿದ್ದರಂತೂ ನನ್ನಂಥವರು ಪರವಶರಾಗಿ ಬಿಡುತ್ತೇವೆ.

ಬ್ಯಾಂಡ್ ನ ಹುಡುಗರ ಜೊತೆಗೆ ಒಂದಿಷ್ಟು ಸಮಯ ಕಳೆಯುವ ಅವಕಾಶ ಇತ್ತೀಚೆಗೆ ನನಗೆ ದೊರಕಿತು. #ಧ್ವನಿ ಬ್ಯಾಂಡ್ ನ ಹುಡುಗರೊಂದಿಗೆ. ಸೊಸೆ ‘ನಮ್ರತಾ’ ತಮ್ಮ ‘ಪ್ರಶಾಂತ ಭಟ್’ ಈ ಮೇಳದ ಮುಖ್ಯ ಗಾಯಕರಲ್ಲೊಬ್ಬ. ಹಾಗಾಗಿ ‘ಬ್ಯಾಂಡ್ ಕ್ರೇಝಿ’ ಯುವಕ ಯುವತಿಯರ ನಡುವೆ ನಾನೂ ನುಸುಳಿಕೊಂಡೆ.
ಕಾಲೇಜು ದಿನಗಳಿಂದಲೇ ಸಂಗೀತದ ಹುಚ್ಚು ಹಿಡಿಸಿಕೊಂಡು ಹಲವಾರು ಪ್ರಯೋಗಗಳನ್ನು ಮಾಡುತ್ತ ತಮ್ಮದೇ ಬ್ಯಾಂಡ್ ಕಟ್ಟಿಕೊಂಡ ಹುಡುಗರಿವರು. ಎರಡು ವರ್ಷಗಳಿಂದ Classical progressive Rock ಮತ್ತು ಸಿನಿಮಾ ಸಂಗೀತದ ಬ್ಯಾಂಡ್ ನಲ್ಲಿ ಒಳ್ಳೆಯ ಹೆಸರು ಮಾಡಿದವರು. ಹಲವಾರು ಬಹುಮಾನಗಳನ್ನು ಪಡೆದವರು. IISC Bangalore, IIT Kharagpur, RV institute, DD ಚಂದನ, SV Institute Tirupati, Bangalore Golf club ಹೀಗೆ ಇಪ್ಪತ್ತೈದಕ್ಕೂ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿದವರು. ಹಾಡುಗಾರರಾದ ಶ್ರೀರಾಮ್ ಶಂಕರ್, ಪ್ರಶಾಂತ ಭಟ್ ಯಮನ್ ರಾಗವನ್ನ ಪ್ರಯೋಗಾತ್ಮಕವಾಗಿ ವಿಸ್ತರಿಸಿದ ರೀತಿ, ಅದನ್ನ ಕರ್ನಾಟಕಿ ಶೈಲಿಯಲ್ಲಿ, ಮೆಟಲ್ ನೊಂದಿಗೆ ಪ್ರಸ್ತುತಪಡಿಸಿದ ರೀತಿ ನಿಜಕ್ಕೂ ಅನನ್ಯ. ಅವರೇ ಸ್ವತ: ಕಂಪೋಸ್ ಮಾಡಿಕೊಂಡು ಬ್ಯಾಂಡ್ ಗೆ ಅಳವಡಿಸಿಕೊಂಡ ‘ಸೂಜುಗದ ಸೂಜು ಮಲ್ಲಿಗೆ’ ಯ ಪ್ರೆಸೆಂಟೇಶನ್ ಅಪರೂಪದ್ದು. ವಿಶಿಷ್ಟವಾದ ಹಿನ್ನೆಲೆಯೊಂದಿಗೆ ಡ್ರಮ್ಸ್ ಸೋಲೋ ನುಡಿಸಿದ ಹುಡುಗ ಪವನ್ ನ ಕೈಚಳಕದ ವೀಡಿಯೋ ಹಾಕಿದ್ದೇನೆ ನೀವೂ ನೋಡಿ. Bass Guitar ನ ಪುನೀತ್ ವಿಜಯಕುಮಾರ್’ Lead ಮತ್ತು Rhythm Guitarist ಗಳಾದ ಗಿರೀಶ್ ಕುಮಾರ್ ಮತ್ತು ನಚಿಕೇತ್ ಆರಾಧ್ಯ ರು ಸಂಗೀತವನ್ನು ಒಪ್ಪಗೊಳಿಸಿದ ವೀಡಿಯೋ ನೂ ಇದೆ. Keys ನಲ್ಲಿ ಭರತ್ ಪಂಚಾಕ್ಷರಿ ಕಮಾಲ್ ಮಾಡುತ್ತಾರೆ. ಒಟ್ಟಂದದಲ್ಲಿ ಚಿಕ್ಕ ಸುಂದರ ಕಾರ್ಯಕ್ರಮವಿದು.
ಒಂದಿಷ್ಟು ಹಾಡುಗಳಿಗೆ ತಲೆದೂಗಿ, ಕೂತಲ್ಲೇ ಕಾಲ್ಕುಣಿಸಿ, ಹರೆಯದ ಹುಡುಗರ ಸಂಗ ಗಳಿಸಿ ಹೊರಬರುವಾಗ ಒಂದಿಷ್ಟು ‘ ಎನರ್ಜಿ’ ಹೊತ್ತು ಹೊರಬಂದೆ.
- ಕಿರಣ ಭಟ್ ಹೊನ್ನಾವರ
